
News · September 2, 2026
ಗಾನಪ್ರವೀಣ ಯೋಗೀಶ ಶರ್ಮಾ ಬಳ್ಳಪದವು ಅವರಿಗೆ ‘ಮಯಿಲ್ಪೀಲಿ ಪ್ರಶಸ್ತಿ 2026’
ಕರಾಡ ವಿಶ್ವದ ಅಭಿನಂದನೆಗಳು
ನಮ್ಮ ಸಮುದಾಯದ ಖ್ಯಾತ ಸಂಗೀತ ಕಲಾವಿದ, ವೀಣಾವಾದಿನೀ ಸಂಗೀತ ವಿದ್ಯಾಪೀಠದ ಸಂಸ್ಥಾಪಕ ಗಾನಪ್ರವೀಣ ಶ್ರೀ ಯೋಗೀಶ ಶರ್ಮಾ ಬಳ್ಳಪದವು ಅವರು ಕೇರಳದ ಕೊಟ್ಟಾಯಂ ನ ಚೋಳಿಯಕ್ಕಾಡ್ ಶ್ರೀಕೃಷ್ಣಸ್ವಾಮಿ ದೇವಸ್ವಂ ವತಿಯಿಂದ ನೀಡಲಾಗುವ 'ಮಯಿಲ್ಪೀಲಿ ಪ್ರಶಸ್ತಿ 2026' ಕ್ಕೆ ಭಾಜನರಾಗಿರುವುದು ಕರಾಡ ಸಮಾಜಕ್ಕೆ ಹೆಮ್ಮೆಯ ವಿಚಾರ.
ಸಂಗೀತ, ನೃತ್ಯ ಹಾಗೂ ವಾದ್ಯಕಲೆಗಳ ಕ್ಷೇತ್ರದಲ್ಲಿ ಶ್ರೇಷ್ಠ ಸಾಧನೆ ಹಾಗೂ ಕಲಾಸೇವೆಗೆ ಗೌರವ ಸಲ್ಲಿಸುವ ಉದ್ದೇಶದಿಂದ ಮಯಿಲ್ಪೀಲಿ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಈ ಗೌರವವು ಕಲೆಯ ಕ್ಷೇತ್ರದಲ್ಲಿ ಅಪಾರ ಸಮರ್ಪಣೆಯಿಂದ ಸೇವೆ ಸಲ್ಲಿಸುತ್ತಿರುವ ಕಲೋಪಾಸಕರನ್ನು ಗುರುತಿಸಿ ಸನ್ಮಾನಿಸುವ ವಿಶೇಷ ಪುರಸ್ಕಾರವಾಗಿದೆ.
2026ನೇ ಸಾಲಿನ ಈ ಪ್ರತಿಷ್ಠಿತ ಪ್ರಶಸ್ತಿಗೆ ಗಾನಪ್ರವೀಣ ಯೋಗೀಶ ಶರ್ಮಾ ಬಳ್ಳಪದವು ಅವರನ್ನು ಆಯ್ಕೆ ಮಾಡಿರುವುದು ಅವರ ಸಂಗೀತ ಸಾಧನೆ ಹಾಗೂ ಕಲಾಸೇವೆಗೆ ಸಂದಿರುವ ಗೌರವವಾಗಿದೆ. ಆಕಾಶವಾಣಿಯ ಗ್ರೇಡೆಡ್ ಕಲಾವಿದರಾಗಿರುವ ಶ್ರೀಯುತರಿಗೆ ಕೇರಳ ಸಂಗೀತ ನಾಟಕ ಅಕಾಡೆಮಿಯ ಎಂಡೋಮೆಂಟ್ ಅವಾರ್ಡ್ , ಕಾಂಚಿ ಕಾಮಕೋಟಿ ಪೀಠದ ಆಸ್ಥಾನ ವಿದ್ವಾನ್ ಗೌರವ, ಕಲಕ ಪ್ರಶಸ್ತಿ, ರಂಗ ಚಿನ್ನಾರಿ ಪ್ರಶಸ್ತಿ, ಸಂಗೀತ ಜ್ಯೋತಿಶ್ರೀ ಪುರಸ್ಕಾರ ಸೇರಿದಂತೆ ಅನೇಕ ಗೌರವಗಳು ಈಗಾಗಲೇ ಲಭಿಸಿವೆ.
ಸೆಪ್ಟೆಂಬರ್ 3, 2026ರಂದು ಚೋಳಿಯಕ್ಕಾಡ್ ಶ್ರೀಕೃಷ್ಣಸ್ವಾಮಿ ದೇವಸ್ಥಾನದಲ್ಲಿ ಮಯಿಲ್ಪೀಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ನಂತರ ಸಂಜೆ 7.30ಕ್ಕೆ ಯೋಗೀಶ ಶರ್ಮಾ ಅವರ ಗಾಯನದಲ್ಲಿ ವಿಶೇಷ ಸಂಗೀತ ಕಚೇರಿ ನಡೆಯಲಿದೆ.
ಕರಾಡ ವಿಶ್ವದ ವತಿಯಿಂದ ಯೋಗೀಶ ಶರ್ಮಾ ಬಳ್ಳಪದವು ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಶುಭಾಶಯಗಳು.
ಅವರ ಸಂಗೀತ ಸಾಧನೆಯ ಪಯಣ ಇನ್ನಷ್ಟು ಉನ್ನತ ಶಿಖರಗಳನ್ನು ತಲುಪಲಿ, ಕಲಾಸೇವೆಯ ಮೂಲಕ ಇನ್ನೂ ಅನೇಕ ಗೌರವಗಳು ಅವರ ಮುಡಿಗೇರಲಿ ಎಂದು ಹಾರೈಸುತ್ತೇವೆ.
