Karada Vishwa

Article · October 27, 2026

ಹಿಡಿಗಾತ್ರ ಮೂರ್ತಿಗೆ ಅಡಿಗಡಿಗೆ ನಮನ.

By ಜಯಶ್ರೀ ಕೆ.ಆರ್ ಭಟ್. ಪಳ್ಳತಡ್ಕ .

ಜಯಶ್ರೀ ಐಲುಕುಂಜೆ

ಗುಡಿಯು ಗೋಪುರ ಕಟ್ಟಿ

ಭಕ್ತಿ ಶ್ರದ್ಧೆಗಳಿಂದ

ಅದರೊಳಗೆ ಹಿಡಿಯಗಲ ಮೂರ್ತಿ ಇರಿಸಿ/

ಅಡಿಯಿಂದ ಮುಡಿವರೆಗೆ

ದೇಹವನ್ನು ಬಾಗಿಸುತ

ಅಡಿಗಡಿಗೆ ಬೇಡುವೆವು ಬಾಗಿ ನಮಿಸಿ /


ನಡೆದಾಡುತಿಹ ದೇಹ

ಹಿಡಿಗಾತ್ರದಾ ಹೃದಯ

ಗಡಿಗೆ ಗಾತ್ರದ ಉದರ ಭರಣಕೆಂದು /

ಅಡಿಗಡಿಗೆ ದುಡಿಯುತ್ತ

ಕೂಡಿಡುವ ಧನ ರಾಶಿ

ಬಾಗುವುದು ಈ ದೇಹ ದುಡಿಮೆಗೆಂದು /


ಪೂರ್ತಿ ತಲೆ ಬೋಳಿಸುತ

ಮುಡಿಯ ಹರಕೆಗೆ ನೀಡಿ

ಬಲು ಸಂತಸವ ಪಟ್ಟು ಭಕ್ತಿಯಿಂದ /

ಹಿಡಿದು ಪಾದವ ಅವನ

ಇಡೀ ಜಗವನಾಳುವನ

ಕಡೆ ಉಸಿರು ಇರುವರೆಗೂ ರಕ್ಷಿಸೆಂದು /

ಕರೆದಾಗ ಬರುವವನು

ಕಾಣಿಸದೇ ಇರುವವನು

ಕರುಣೆ ತೋರುತ ಕೈಯ ಹಿಡಿಯುವವನು /

ಕರುಣಾಮಯೀ ಕೃಷ್ಣ

ಕರಮಗಿದು ಬೇಡಿಕೆಯು

ಕಣ್ಣೊರೆಸಿ ಕೈ ಹಿಡಿದು ರಕ್ಷಿಸೆಂದು /

Creative Writings