
Article · November 4, 2026
ಮನದ ಬದಲಾವಣೆಯೇ ಉದ್ಧಾರ
By ಗಾಯತ್ರಿ ಕೆ ನಾಗರಾಜ್, ಕೃಷ್ಣಗಾನಂ
ಗಾಯತ್ರಿ ಕೆ ಅಡ್ಕತೊಟ್ಟಿ
ಇಲ್ಲಿ ಆಗದು ಎಂದು ಊರು ಬಿಡುವೆ
ಅಲ್ಲಿ ಆಗದು ಎಂದು ಮತ್ತೆ ನಗರ ಸೇರುವೆ
ಜಾಗ ಬದಲಿಸಿದರೆ ಬದುಕು ಬದಲಾಗದು
ಮನಸು ಬದಲಾಗದಿದ್ದರೆ ಬೆಳಕು ಮೂಡದು.
ಬಾವಿ ಬಿಟ್ಟು ನದಿಗೋಡಿದರೆ ನೀರೇನು ಬರದು
ಕೊಡದ ತೂತು ಮುಚ್ಚದಿದ್ದರೆ ದಾಹ ಹಿಂಗದು
ಮಣ್ಣು ಬದಲಿಸಿದರೆ ಬೆಳೆಯು ಬರದು
ಬಿತ್ತುವ ಕೈ ಬದಲಾಗದಿದ್ದರೆ ಫಲವು ಇರದು.
ಕನ್ನಡಿ ಬದಲಿಸಿದರೆ ಮುಖ ಬದಲಾಗದು
ಅಂಗಿ ಬದಲಿಸಿದರೆ ಮನವು ತೊಳೆಯದು
ವಾದ್ಯ ಬದಲಿಸಿದರೆ ರಾಗವು ಬರದು
ಸಾಧನೆಯಿಲ್ಲದಿದ್ದರೆ ನಾದವೇಳದು.
ಕಷ್ಟವಿಲ್ಲದ ಜಾಗವು ಎಲ್ಲಿಯೂ ಇಲ್ಲ
ಕಷ್ಟವನ್ನೇ ಇಷ್ಟಪಡುವುದೇ ದೊಡ್ಡ ಬಲ
ಇಷ್ಟವಿದ್ದರೆ ಹೊರೆಯೂ ಹೂವಾಗುವುದು
ಕಷ್ಟವೆಂದರೆ ಹೂವೂ ಮುಳ್ಳಾಗುವುದು.
ಮನಸು ಬೆಳಗಿದರೆ ಮನೆಯೇ ಮಂದಿರ
ಮನಸು ಕೆಟ್ಟರೆ ಮಂದಿರವೇ ಬಂಧನ
ನೀನಿರುವ ಜಾಗವೇ ನಿನ್ನ ಪುಣ್ಯಕ್ಷೇತ್ರ
ನೀನು ಮಾಡುವ ಕೆಲಸವೇ ನಿನ್ನ ಮಂತ್ರ
ಬದಲಿಸು ಜಾಗವನ್ನಲ್ಲ ಸೋಮಾರಿತನವ
ಬದಲಿಸು ಸೋಲೊಪ್ಪುವ ನಿನ್ನೆಯ ಮನವ
ಮನಸು ಬದಲಾದರೆ ಇಲ್ಲೇ ಉದ್ಧಾರ
ಮನಸು ಬೆಳಗಿದರೆ ಇಲ್ಲೇ ಸ್ವರ್ಗದ ದ್ವಾರ.
