Karada Vishwa

Article · May 19, 2026

ಅವುಂಥಿ ಭಾಸ - ಏನಿದೆ ಅದರಲ್ಲಿ!?

- ಶಾರದಾ ಕಜೆಗದ್ದೆ, ಬಾಯಾರು

ಭಾರತ ದೇಶದಲ್ಲಿ ಭಾಷೆಗಳಿಗೇನೂ ಕಮ್ಮಿ ಇಲ್ಲ. ಅತಿಸುಂದರ ರಾಷ್ಟ್ರಭಾಷೆ ಹಿಂದಿ. ಹೆಚ್ಚಿನ ಎಲ್ಲಾ ರಾಜ್ಯಗಳಿಗೊಂದು ಅಧಿಕೃತ ಭಾಷೆ ಮತ್ತು ಆಡುಭಾಷೆಗಳೆಷ್ಟೋ. ಇನ್ನು ನಮ್ಮ ಕರ್ನಾಟಕ ಕೇರಳ ರಾಜ್ಯಗಳಲ್ಲಿ ಹತ್ತಾರು ಮಾತೃ ಭಾಷೆಗಳು. ಈ ಎಲ್ಲ ಭಾಷೆಗಳ ಲಿಪಿ ಬೇರೆಬೇರೆಯಾದರೂ ವರ್ಣಮಾಲೆ ಒಂದೇ ತೆರನಾದದ್ದು. ಉಚ್ಚಾರದ ಆಧಾರದಲ್ಲಿ ಒಂದಷ್ಟು ಅಕ್ಷರಗಳು ಹೆಚ್ಚುಕಮ್ಮಿ ಇರಬಹುದು. ಈ ಎಲ್ಲ ಭಾಷೆಗಳಿಗೂ ಮೂಲಮಾತೃಭಾಷೆ ದೇವಭಾಷೆ, ವೇದಭಾಷೆ ಎಂದೆನಿಸಿದ ಸಂಸ್ಕೃತ.

ಭಾರತೀಯ ಭಾಷೆಗಳ ವರ್ಣಮಾಲೆಯಲ್ಲಿರುವ ಅಕ್ಷರಗಳ ಜೋಡಣೆಯೂ ಉಚ್ಚಾರಣೆಯ ಅನುಕ್ರಮದಲ್ಲಿದೆ.  ಈ ಉಚ್ಚಾರಣಾ ಕ್ರಮವೂ ಸಹ ವೈಜ್ಞಾನಿಕವಾಗಿ, ಸುವ್ಯವಸ್ಥಿತವಾಗಿ ಹೆಣೆಯಲ್ಪಟ್ಟಿದೆ. ಉದಾಹರಣೆಗೆ ಅಮ್ಮ ಪದ. ಬಾಯಿ ತೆರೆದಾಗ ಉತ್ಪತ್ತಿಯಾಗುವ "ಅ" ಅಕ್ಷರದಿಂದ ಮೊದಲ್ಗೊಂಡು ಬಾಯಿ ಮುಚ್ಚಿದಾಗ ಬರುವ "ಮ" ಅಕ್ಷರದಿಂದ ಅಂತ್ಯವಾಗುವ, ನಾವೆಲ್ಲರೂ ಜೀವನಪರ್ಯಂತ ಹೇಳುವ ಪ್ರೀತಿಯ ಪದ "ಅಮ್ಮ". ಹಾಗೆ ವರ್ಣಮಾಲೆಯ ಅಕ್ಷರಗಳ ಉಚ್ಚಾರವು ನಾಭಿ,ಗಂಟಲು, ನಾಲಗೆ ಹೊರಳುವ ವಿವಿಧ ಭಂಗಿ, ಹಲ್ಲುಗಳು, ತುಟಿಗಳು, ಮೂಗಿನ ಕ್ರಿಯೆಗಳಾದ ಉಚ್ಛ್ವಾಸ ನಿಶ್ವಾಸಗಳನ್ನೊಳಗೊಂಡಿದೆ. ಸ್ವರಾಕ್ಷರಗಳ ಜೋಡಣೆ, ವರ್ಗೀಯ,ಅವರ್ಗೀಯ ಅಕ್ಷರಗಳ ವಿಂಗಡಣೆ ಎಲ್ಲವೂ ಅವುಗಳ ಉಚ್ಚಾರದ ಆಧಾರದಲ್ಲಿ  ಅತ್ಯಂತ ಯೋಜನಾಬದ್ಧವಾಗಿ  ಸ್ಫುಟವಾಗಿದೆ. ಹಾಗಾಗಿ ನಮ್ಮ ಭಾಷಾ ವರ್ಣಮಾಲೆಯ ಅಷ್ಟೂ ಅಕ್ಷರಗಳನ್ನು ಸರಿಯಾಗಿ ದಿನನಿತ್ಯ ಉಚ್ಚರಿಸಿದರೇ ಒಂದು ಒಳ್ಳೆ ಪ್ರಾಣಾಯಾಮವಾದಂತೆ.

ನಮ್ಮೆಲ್ಲಾ ಭಾಷೆಗಳ ಪ್ರಾಣ ಇರುವುದೇ ಅದರ ಪ್ರತಿ ಅಕ್ಷರಗಳ ಸ್ಪಷ್ಟ ಉಚ್ಚಾರದಲ್ಲಿ. ಅದರಲ್ಲೂ ನಮ್ಮ ಕನ್ನಡ ಅಲ್ಪ ಪ್ರಾಣ, ಮಹಾಪ್ರಾಣ, ಹೃಸ್ವ, ದೀರ್ಘ, ಒತ್ತಕ್ಷರಗಳ ಮಹಾಪೂರ.  ಒಂದಿನಿತು ವ್ಯತ್ಯಾಸವಾದರೂ ಆ ಪದದ ಅರ್ಥ ವ್ಯತ್ಯಯವಾಗಿ ಆಡಿದ ಮಾತು, ಹೇಳಿದ ವಿಷಯ ಯಾ  ಕೊಟ್ಟ ಸೂಚನೆ ಅಪಾರ್ಥವಾಗುವುದು.  ಸಣ್ಣ ಉದಾಹರಣೆ ದನ ಮತ್ತು ಧನ, ಮತ ಮತ್ತು ಮಠ, ಕಾಲು ಮತ್ತು ಕಾಳು ಹೀಗೇ ಅನೇಕಾನೇಕ. 

ಭಾಷಾ ಜ್ಞಾನದ ಅಗತ್ಯತೆ ತಿಳಿಯಬೇಕೆಂದರೆ ಆಯಾ ಭಾಷಾ ಕಥೆ, ಕವನ, ಕಾದಂಬರಿಗಳು, ದಾಸಸಾಹಿತ್ಯ ಹಾಗೂ ಎಲ್ಲ ವ್ಯಾವಹಾರಿಕ ವಿಚಾರಗಳನ್ನೊಳಗೊಂಡಂತೆ ಎಲ್ಲದರ ಭಾವಾರ್ಥವಿರುವುದು ಅದರ ಪದಪದಗಳಲ್ಲಿ. ಅವುಗಳನ್ನು ತಪ್ಪಾಗಿ ಓದಿದರೆ, ಹೇಳಿದರೆ ಕರ್ತೃವಿನ ಮೂಲ ಚಿಂತನೆ,  ಅಷ್ಟು ವರುಷಗಳ ಅವುಗಳ ಸಂಗ್ರಹ , ಉಳಿಕೆಗಳು ತಮ್ಮ ಉದ್ದೇಶವನ್ನು ಕಳಕೊಂಡಂತೆ. 

ಶ್ರೋತೃಗಳು ಸೇರುವ ಸಭೆಸಮಾರಂಭಗಳಂಥ  ಕಾರ್ಯಕ್ರಮಗಳಲ್ಲಿ ಭಾಷಣಕಾರನ ಉಚ್ಚಾರ ಸ್ಪಷ್ಟತೆಯ ಆವಶ್ಯಕತೆ ಅತ್ಯಂತ ಪ್ರಮುಖವಾಗಿರುತ್ತದೆ.  ಸಂಗೀತ, ಹರಿಕಥೆ, ಯಕ್ಷಗಾನ ಮುಂತಾದ ಮನರಂಜನಾ ಕಾರ್ಯಕ್ರಮಗಳಲ್ಲಿಯೂ  ಉಚ್ಚಾರ ಶುದ್ಧತೆ ಅತೀ ಅಗತ್ಯ. ಅಂತೆಯೇ ಭಜನೆ, ಸ್ತೋತ್ರ, ಭಗವದ್ಗೀತೆ, ಸಹಸ್ರನಾಮಗಳ ಪಾರಾಯಣದಲ್ಲೂ ಭಾಷಾ ಶುದ್ಧತೆಗೆ ಆದ್ಯತೆ ಇದೆ.

ಇಂತಹ ಸ್ಪಷ್ಟ, ಶುದ್ಧ ಉಚ್ಚಾರ ಬಾಲ್ಯದಿಂದಲೇ ಅಂದರೆ ತೊದಲು ನುಡಿಯುವ ದಿನದಿಂದ ಹಿಡಿದು ಅಕ್ಷರಾಭ್ಯಾಸದ ಸಮಯದಲ್ಲಿ ಕಲಿತರೆ, ಕಲಿಸಿದರೆ ಮಾತ್ರ ಸುಲಭಕ್ಕೆ ಕರಗತವಾಗುವಂಥದ್ದು. ಮೊದಲೈದು ವರುಷಗಳಲ್ಲಿ ಮಗುವು ಮಾತನಾಡಲು ಕಲಿಯುತ್ತದೆ. ಆ ಸಮಯದಲ್ಲೇ ಅದು ಅಕ್ಷರ ಅಕ್ಷರ, ಪದಪದಗಳನ್ನೂ ಸೂಕ್ಷ್ಮವಾಗಿ ಗ್ರಹಿಸಿ, ಮನದಲ್ಲಿ ಅಂತೇ ಸಂಗ್ರಹಿಸಿ, ಪುನಃ ಪುನಃ ಉಚ್ಚರಿಸಿ ಮನನ ಮಾಡಿಕೊಳ್ಳುತ್ತದೆ. ಅದಕ್ಕೆ ಪೂರಕವಾದದ್ದು ನಮ್ಮ ಮಾತೃಭಾಷೆಯಾದ ಸರಳ ಸುಂದರ ಅವುಂಥಿ ಭಾಸ. 

ನಮ್ಮ ಕರಾಡ ಭಾಷೆಯನ್ನು ಕೆಲವರು ಅವಗಣಿಸಿ, ಇನ್ನು ಕೆಲವರು ಅವಮಾನವೆಂದೆಣಿಸಿ, ಮತ್ತೆ ಕೆಲವರು ಅನ್ಯಭಾಷೆಯ ವ್ಯಾಮೋಹದಲ್ಲಿ  ಹಾಗೂ ಕಾರಣಾಂತರಗಳಿಂದ ತಮ್ಮ ಮಕ್ಕಳಿಗೆ ಕಲಿಸದೆಯೇ, ತಾವೂ ಮರೆತು, ಮಕ್ಕಳಿಂದಲೂ ಮರೆಯಿಸಿಬಿಟ್ಟಿದ್ದಾರೆ.  ಆದರೆ ಒಂದು ವಾಸ್ತವವೆಂದರೆ ನಮ್ಮ ಭಾಷೆಯಂಥದ್ದೇ ಮರಾಠಿ, ಕೊಂಕಣಿ, ಗೋವಾ ಕ್ರೈಸ್ತ ಭಾಷೆಯವರು ತಂತಮ್ಮ ಭಾಷೆಯನ್ನು ತಾವು ಬಳಸುತ್ತಾ  ತಮ್ಮ ಮುಂದಿನ ಪೀಳಿಗೆಗೆ ಬಹಳ ಆಸ್ಥೆಯಿಂದ ಹೇಳಿಕೊಟ್ಟು ಹೆಮ್ಮೆಯಿಂದ ದಿನನಿತ್ಯ ಮಾತನಾಡುತ್ತಿದ್ದಾರೆ.

ಒಂದು ಭಾಷೆ ಇಷ್ಟೊಂದು ಪ್ರಬುದ್ಧವಾಗಿ, ಅರ್ಥಗರ್ಭಿತವಾಗಿದ್ದು ಇಷ್ಟು ವರುಷಗಳ ಕಾಲ ಉಳಿದು ಬಂದು ಎಲ್ಲ ಭಾರತೀಯ ಭಾಷೆಗಳಿಗೆ ಸ್ಪಷ್ಟಶುದ್ಧ ಉಚ್ಚಾರವನ್ನು ನಮ್ಮ ಮಾತಿಗೆ ಕೊಟ್ಟಿರಬೇಕೆಂದರೆ ಖಂಡಿತವಾಗಿಯೂ ಅದು ಇಂದು ನಾವೆಲ್ಲರೂ ಭಾವಿಸಿದಷ್ಟು ಕೀಳುಮಟ್ಟದ್ದು ಆಗಿರಲಿಕ್ಕಿಲ್ಲ ಎಂಬುದು ಶತಸಿದ್ಧ. 

ತಾಯಿಯೇ ಪ್ರಥಮ ಗುರು. ಕರಾಡ ಭಾಷೆ ತಿಳಿದ ಒಬ್ಬ ತಾಯಿ ತನ್ನ ಮಗುವಿನ ಮೇಲಿನ ಪ್ರೀತಿಯಷ್ಟೇ ಅಕ್ಕರೆ,ಆಸ್ಥೆಯಿಂದ ತನ್ನ ಮಾತೃ ಭಾಷೆಯನ್ನು ಕಲಿಸುತ್ತಿದ್ದರೆ ಮತ್ತು ಬೆಳೆಯುತ್ತಿದ್ದ ನಾವು ಅನ್ಯದೇಶೀಯ ಭಾಷೆಗೆ ಕೊಡುವಷ್ಟೇ ಪ್ರೀತ್ಯಾದರದಿಂದ ಈ ನಮ್ಮ ಭಾಷೆಯನ್ನು ನಮ್ಮ ನಮ್ಮ ಮನೆಗಳಲ್ಲಿ ಮಾತನಾಡುತ್ತಿದ್ದರೆ ಇಂದಿನ  ಈ ಪರಿಸ್ಥಿತಿ ಅವುಂಥಿ ಭಾಷೆಗೂ, ನಮ್ಮ ಉಚ್ಚಾರ ಸ್ಪಷ್ಟತೆಗೂ ಬರುತ್ತಿರಲಿಲ್ಲ. ಹೌದು ಕರಾಡಸ್ಥರಿಗಿರುವಷ್ಟು ಭಾಷಾ ಶುದ್ಧತೆ ಕರ್ನಾಟಕ, ಕೇರಳದ ಅನ್ಯ ಭಾಷಿಕರಿಗೆ ಇಲ್ಲ. ಆದರೆ ಇಂದು ನಾವು ನಮ್ಮ ಭಾಷೆಯೊಂದಿಗೆ ಆ ಸ್ಪಷ್ಟ,ಶುದ್ಧ ಉಚ್ಚಾರ ಕೌಶಲ್ಯವನ್ನು ಕಳೆದುಕೊಂಡಾಗಿದೆ. 

ಭಾಷಾಶುದ್ಧತೆ ಏಕೆ ಬೇಕು ಎಂದು ಯೋಚಿಸುವುದಾದರೆ ಈ ಕೆಳಗಿನ ಎರಡು ಉದಾಹರಣೆಗಳನ್ನು ಗಮನಿಸಬಹುದು.

ನಾವೆಲ್ಲರೂ ಟಿವಿ, ಮೊಬೈಲ್ ಗಳಲ್ಲಿ ಪ್ರಸಾರವಾಗುವಂಥ ಕನ್ನಡ ವಾರ್ತೆ ಮತ್ತು ಇತರ ಮನರಂಜನಾ ಕಾರ್ಯಕ್ರಮಗಳ ನಿರೂಪಣೆಯನ್ನು ಕೇಳಿರುತ್ತೇವೆ. ಅದರಲ್ಲಿ ಕಂಡುಬರುವ ದೋಷಗಳು ಭಾಷಾಶುದ್ಧತೆ, ಉಚ್ಚಾರಣಾ ಸ್ಪಷ್ಟತೆಯ ಅಗತ್ಯವನ್ನು ಎತ್ತಿ ತೋರಿಸುತ್ತವೆ. ಉದಾಹರಿಸುವುದಾದರೆ ಅದಿಖಾರ, ಬಾರತ, ವಿಧ್ವಾಂಸ, ಕಂಡಿತ, ಬೇಧ, ವಿಶ್ವನಾತ.... ಹೀಗೆ ಹಲವಾರು ಪದಗಳ ತಪ್ಪು ಉಚ್ಚಾರದಿಂದ ಅವುಗಳು ತಮ್ಮ ಸ್ವ- ಅರ್ಥವನ್ನೇ ಕಳೆದುಕೊಂಡಿವೆ. 

ಇನ್ನು ಒಂದಷ್ಟು ವರುಷಗಳ ಸಮಯ ಗುರುಮುಖೇನ ಅಭ್ಯಸಿಸಿ ವೈದಿಕ ಕಾರ್ಯಕ್ರಮಗಳಲ್ಲಿ ಪಠಿಸುವಂಥ ವೇದಮಂತ್ರಗಳು ಹೃದಯ,ಮನಸ್ಸುಗಳಿಗೆ ನಮಗರಿವಿಲ್ಲದೇ ನೀಡುವ ಧನ್ಯತೆಯು ಅವುಗಳ ಸರಿಯಾದ ಸ್ವರೋಚ್ಚಾರ ಶುದ್ಧತೆ ಮತ್ತು ಸ್ಪಷ್ಟತೆಯಲ್ಲಿರುವುದು. 

ಹೀಗೆ ಸ್ಪಷ್ಟ, ಶುದ್ಧ ಭಾಷಾ ಉಚ್ಚಾರಕ್ಕೆ ತನ್ನದೇ ಆದ ಒಂದು ಆಕರ್ಷಣೀಯ ಶಕ್ತಿ ಇದೆ. ನಮ್ಮೆಲ್ಲಾ ಭಾರತೀಯ ಭಾಷೆಗಳ ಸೌಂದರ್ಯವಿರುವುದೇ ಅದರ ಉಚ್ಚಾರ ಸ್ಪಷ್ಟತೆ ಮತ್ತು ಶುದ್ಧತೆಯಲ್ಲಿ. ಇನ್ನು ಕನ್ನಡ, ಸಂಸ್ಕೃತಗಳ  ಜೀವನಾಡಿಯೇ ಅಲ್ಪಪ್ರಾಣ,  ಮಹಾಪ್ರಾಣಗಳು, ಅನುಸ್ವಾರ ವಿಸರ್ಗ, ಹೃಸ್ವ,ದೀರ್ಘಗಳಲ್ಲಿ. ಎಲ್ಲಾ ಭಾರತೀಯ ಭಾಷೆಗಳ ಸುಂದರತೆಯನ್ನು ಉಳಿಸಲು ಇನ್ನಾದರೂ ಕರಾಡಸ್ಥರಾದ ನಾವು ಅವುಂಥಿ ಭಾಷೆಯನ್ನು ಮಾತಮಾತನಾಡುತ್ತಾ ಉಳಿಸೋಣವಲ್ಲವೇ!? ಈ ದಿಕ್ಕಿನಲ್ಲಿ ಇಂದಿನ ಜನಾಂಗ ತನಗೆ ತಿಳಿದಿರುವಷ್ಟರ ಜೊತೆಗೆ ಹಿರಿಯರಿಂದ ಇನ್ನಷ್ಟು, ಮಗದಷ್ಟು ಕೇಳಿ ತಿಳಿದು ದಿನವೂ ನಮ್ಮವರ ಜೊತೆ ಮಾತನಾಡುತ್ತಾ ಅವುಂಥಿ ಭಾಷೆಯನ್ನು  ಇನ್ನು ಮುಂದಿನ ಪೀಳಿಗೆಗೆ ಸಾಧ್ಯವಾದಷ್ಟು ಉಳಿಸಿ, ಬೆಳೆಸಿ, ಹಸ್ತಾಂತರಿಸೋಣ. 


Creative WritingsLanguage
ಅವುಂಥಿ ಭಾಸ - ಏನಿದೆ ಅದರಲ್ಲಿ!?