Karada Vishwa

Article · October 21, 2026

ಮರು ಹುಟ್ಟಿದ ಹಕ್ಕಿ

By ಗಾಯತ್ರಿ ಕೆ ನಾಗರಾಜ್ ಅಡ್ಕತ್ತೊಟ್ಟಿ

ಗಾಯತ್ರಿ ಕೆ ಅಡ್ಕತೊಟ್ಟಿ

ಒಂದು ನ್ಯಾನೋ ಕಥೆ

ಆ ಹೆಣ್ಣು ಮಗಳು ಕನಸುಗಳ ಗೂಡು ಕಟ್ಟಿಕೊಂಡಿದ್ದಳು. ಅವಳಲ್ಲಿ ಸಂಸ್ಕಾರವಿತ್ತು, ಸಂಸ್ಕೃತಿಯಿತ್ತು, ಅದರಲ್ಲೂ ಸಾಹಿತ್ಯದ ಶಕ್ತಿ ಎದ್ದು ಕಾಣುತ್ತಿತ್ತು. ತನ್ನ ಪ್ರತಿಭೆಯನ್ನು ಜಗದಗಲ ತೋರಿಸಿ ತಂದೆ ತಾಯಿಯ ಹೆಸರು ಎತ್ತರಕ್ಕೆ ಏರಿಸಬೇಕು ಎಂಬ ಕಿಚ್ಚು ಅವಳಲ್ಲಿ ಇತ್ತು. ಅಂತಹ ಕನಸುಗಳನ್ನೇ ಕಣ್ಣಲ್ಲಿ ತುಂಬಿಕೊಂಡು ಅವಳು ಇನ್ನೊಂದು ಮನೆಗೆ ಕಾಲಿಟ್ಟಳು.
ಕಾಲಿಟ್ಟ ಮರುಕ್ಷಣವೇ ಕನಸಿನ ಗೂಡಿಗೆ ಬೆಂಕಿ ಬಿತ್ತು. ಇಡೀ ಮನೆಯ ಜವಾಬ್ದಾರಿ ಅವಳ ತಲೆ ಮೇಲೆ ಬಿತ್ತು. ಮನೆ ಅವಳಿಗೆ ಕಾರಾಗೃಹವಾಯಿತು. ಹೊರಗೆ ಕಾಲಿಡುವಂತಿರಲಿಲ್ಲ, ಬಳಗದವರ ಜೊತೆ ಮಾತಾಡುವಂತಿರಲಿಲ್ಲ, ಹತ್ತಾರು ಗೆಳೆಯ ಗೆಳತಿಯರಿದ್ದರೂ ಮಾತನಾಡಲು ಪುರುಸೊತ್ತಿರಲಿಲ್ಲ. ಸಾಹಿತ್ಯ ಚಟುವಟಿಕೆ ಎಂಬ ಅವಳ ಉಸಿರಿಗೇ ತಡೆಗೋಡೆ ಬಿತ್ತು. ಗಂಡನಿದ್ದ, ಆದರೆ ಅವನು ಗಂಡನಾಗಿರಲಿಲ್ಲ, ಕೆಲಸದ ಆಳಿನಂತೆ ದುಡಿಸಿಕೊಳ್ಳುತ್ತಿದ್ದ. ಕಲೆಗಾಗಲಿ, ಅಕ್ಷರಕ್ಕಾಗಲಿ ಪ್ರೋತ್ಸಾಹವಿರಲಿಲ್ಲ.
ಒಂದು ಕಾರ್ಯಕ್ಕೆ ಅನಿವಾರ್ಯವಾಗಿ ಹೊರಗೆ ಹೋದಾಗ ವರ್ಷಗಳ ನಂತರ ಹಳೆಯ ಗೆಳೆಯನ ಮುಖ ಕಂಡಳು. ಅದು ಅವನೇ ಸೂರ್ಯ.
ಅವಳ ಕಳೆಗುಂದಿದ ಮುಖ ನೋಡಿ ಅವನು ಕೂಲಂಕಷವಾಗಿ ವಿಚಾರಿಸಿದಾಗ, ತಡೆಹಿಡಿದಿದ್ದ ಅಣೆಕಟ್ಟು ಒಡೆದಂತೆ ಅವಳು ಅತ್ತುಬಿಟ್ಟಳು.
ಅವನು ಹೇಳಿದ – “ನಾನು ಒಂದು ಸಣ್ಣ ಕಂಪನಿಯ ಮಾಲೀಕ. ನನಗೆ ನಿನ್ನ ಪ್ರತಿಭೆ ಗೊತ್ತು. ನನ್ನ ಕಂಪನಿಯಲ್ಲಿ ಸಾಹಿತ್ಯ ಚಟುವಟಿಕೆಗೆ ಸಂಬಂಧಿಸಿದ ಹುದ್ದೆ ಇದೆ. ನೀನು ಹೊರಗೆ ಬಾ, ನಿನಗೆ ದಾರಿ ತೋರಿಸುತ್ತೇನೆ.”
ಆ ಮಾತು ಅವಳಿಗೆ ಮಂತ್ರವಾಯಿತು. ಆ ರಾತ್ರಿ ದೂರವಾಣಿಯಲ್ಲಿ ಅವನು ಧೈರ್ಯ ತುಂಬಿದ.
ಮರುದಿನ ಬೆಳಿಗ್ಗೆ ಅವಳು ಮನೆಯವರ ಮುಂದೆ ನಿಂತಳು. ವಿರೋಧ ವ್ಯಕ್ತವಾಯಿತು. “ಖಂಡಿತವಾಗಿಯೂ ಹೊರಗೆ ಹೋಗಲು ಬಿಡುವುದಿಲ್ಲ” ಎಂದರು ಮನೆಯವರು.
ಆ ಕ್ಷಣದವರೆಗೂ ಸಹಿಸಿಕೊಂಡಿದ್ದ ಹೆಣ್ಣು ಮಗಳು ಮೊದಲ ಬಾರಿಗೆ ದೃಢವಾಗಿ ನಿಂತಳು. ಅವಳು ಹೇಳಿದಳು –
”ಇಲ್ಲ. ನಾನು ಸುಮ್ಮನಿರುವುದಿಲ್ಲ. ಸ್ವತಂತ್ರವಾಗಿ ನಾನು ಕೆಲಸ ಮಾಡಿಯೇ ತೋರಿಸುತ್ತೇನೆ. ನನ್ನ ಕನಸನ್ನು ನಾನು ಸಾಯಲು ಬಿಡುವುದಿಲ್ಲ. ಇದು ನನ್ನ ಹಠ, ನನ್ನ ಪ್ರತಿಜ್ಞೆ.”
ಆ ಹಠದ ಮುಂದೆ ಯಾರ ಮಾತೂ ನಡೆಯಲಿಲ್ಲ. ಚುಚ್ಚು ನುಡಿಗಳು ಬಂದವು. ಕುಟುಂಬದವರಿಂದ, ಬಳಗದವರಿಂದ – “ಮನೆ ಬಿಟ್ಟು ಹೋದರೆ ಮರ್ಯಾದೆ ಹೋಯಿತು” ಎಂಬ ಮಾತುಗಳು. ಆದರೂ ಅವಳು ಹಿಂದೆ ತಿರುಗಿ ನೋಡಲಿಲ್ಲ.
ಆರಂಭ ಸುಲಭವಾಗಿರಲಿಲ್ಲ. ಮೊದಲಿಗೆ ಹಣ ಹೊಂದಿಸಲು ಆಗದ ಕಾರಣ ಅವಳು ಒಂದು ಹೆಣ್ಣು ಮಕ್ಕಳ ಹಾಸ್ಟೆಲ್ ನಲ್ಲಿ ನಿಂತು ಕೆಲಸ ಮಾಡಲು ಆರಂಭಿಸಿದಳು.ಗೆಳೆಯನ ಸಹಾಯದಿಂದ ಮತ್ತು ತನ್ನ ಒಲವು ನೀಡುವ ಒಂದಿಬ್ಬರು ಗೆಳೆಯರ ಸಹಾಯದಿಂದ ಅವಳು ಮೊದಲು ಒಂದು ಚಿಕ್ಕ ಬಾಡಿಗೆ ಮನೆಯೊಂದನ್ನು ನೋಡಿಕೊಂಡಳು.
ಬೆಳಿಗ್ಗೆ ಕಂಪನಿಯ ಕೆಲಸ. ರಾತ್ರಿ ತನ್ನ ಸಾಹಿತ್ಯ ಚಟುವಟಿಕೆ. ಲೇಖನಿ ಮತ್ತೆ ಓಡಿತು. ಅವಳು ಬರೆದ ಮೊದಲ ಲೇಖನಕ್ಕೇ ಸಂಭಾವನೆ ಬಂತು.
ಕಂಪನಿಗೆ ಸೇರಿದ ಆ ನಾಲ್ಕೈದು ತಿಂಗಳು ಅವಳಿಗೆ ತಪಸ್ಸಾಗಿತ್ತು. ಹಾಸ್ಟೆಲ್ ಊಟ, ಬಸ್ ನಲ್ಲಿ ಓಡಾಟ, ಎಲ್ಲರ ಚುಚ್ಚು ಮಾತುಗಳ ನಡುವೆಯೂ ಅವಳು ಕಲಿತದ್ದು ಒಂದೇ – ತನ್ನ ಕಾಲ ಮೇಲೆ ತಾನು ನಿಲ್ಲುವುದು.
ಒಂದು ವರ್ಷ ಕಳೆಯಿತು. ಅವಳ ಕೆಲಸವನ್ನು ಮೆಚ್ಚಿ ಕಂಪನಿಯಲ್ಲಿ ಅವಳ ಸಂಬಳ ಹೆಚ್ಚಾಯಿತು. ಅವಳ ಸಾಹಿತ್ಯ ಚಟುವಟಿಕೆಗೆ ಈಗ ಓದುಗರು ಬಂದರು.
ಮತ್ತು ಒಂದು ವರ್ಷದ ನಂತರ, ಅದೇ ಊರಿನಲ್ಲಿ, ಎಲ್ಲರೂ “ಆಗುವುದಿಲ್ಲ” ಎಂದಿದ್ದ ಜಾಗದಲ್ಲೇ, ಅವಳು ಒಂದು ಚಿಕ್ಕ ಮನೆಯೊಂದನ್ನು ಖರೀದಿಸಿದಳು. ಬಾಡಿಗೆ ಮನೆಯಲ್ಲ, ಸ್ವಂತದ ಮನೆ.
ಗೃಹಪ್ರವೇಶದ ದಿನ ಅವಳು ಯಾರನ್ನೂ ದೊಡ್ಡದಾಗಿ ಕರೆಯಲಿಲ್ಲ. ಆ ಹಳೆಯ ಗೆಳೆಯ, ಆ ಒಲವು ನೀಡಿದ ಒಂದಿಬ್ಬರು ಗೆಳೆಯರು, ಮತ್ತು ಅವಳ ತಂದೆ ತಾಯಿ ಮಾತ್ರ ಇದ್ದರು. ಮನೆಯ ಬಾಗಿಲಿಗೆ ಅವಳು ತಾನೇ ಬರೆದ ನಾಮಫಲಕ ತೂಗು ಹಾಕಿದಳು –
ಈ ಮನೆಯು ಒಂದು ಹೆಣ್ಣು ಮಗಳ ಸ್ವಾಭಿಮಾನ
“ ಸೂರ್ಯೋದಯ”
ಇಂದು ಅವಳು ಸ್ವತಂತ್ರ ಹಕ್ಕಿ. ದಿಗ್ಬಂಧನವನ್ನು ದಾಟಿ, ಚುಚ್ಚು ನುಡಿಗಳನ್ನು ಮೆಟ್ಟಿ, ಹಾಸ್ಟೆಲ್ ನಿಂದ ಸ್ವಂತ ಮನೆಯವರೆಗೆ ಬಂದವಳು. ಅವಳ ಬದುಕು ಈಗ ಆರಂಭವಾಗಿದೆ.
ಚಂದ್ರೋದಯದ ನಿರೀಕ್ಷೆಯಲ್ಲಿ ..


Creative Writings