Karada Vishwa

Article · September 13, 2026

ಮಡದಿ

By ಪಲ್ಲವಿ.ಪ್ರಶಾಂತ.ಕಾನೇಟ್ಕರ್.(PPKanetkar)

ಪಲ್ಲವಿ ಕಾನೇಟ್ಕರ್

ಗಂಡ-ಹೆಂಡತಿಯರ ಸಂಬಂಧ ನೂರು ವರ್ಷಗಳಾದರೂ ಮೊದಲ ವರ್ಷದಂತೆಯೇ ಆಪ್ಯಾಯಮಾನವಾಗಿರಬೇಕಾದ್ದು ಮತ್ತು ಇರುವಂಥದ್ದು.ಆದರೂ ಸಂಸಾರದಲ್ಲಿ ಸಣ್ಣಪುಟ್ಟ ಕಲಹಗಳು ಅನಿವಾರ್ಯ. ಅಂತಹ ಸಂದರ್ಭದಲ್ಲಿ ಮೂಡಿದ ವಿಡಂಬನಾತ್ಮಕ ಕವಿತೆ ಇದು

ಮದುವೆಯಾದ ಮೊದಲ ವರ್ಷ
ಮಡದಿ ಕಣ್ಮಣಿ
ಬಾಳ ಪುಟವ ತಿದ್ದಿ ತೀಡಿ
ಬರೆವ ಲೇಖನಿ

ವರುಷವುರುಳಿ ಕಾಲ ಸವೆಯೆ
ಅವಳು ಹಳಬಳು
ಕಾಣುತಿಹವು ಚಂದ್ರವದನೆ
ಮೊಗದಿ ಕಲೆಗಳು

ಮೊದಲು ಅಡುಗೆಮನೆಯಲವಳು
ಸುಳಿಯೆ ಪರಿಮಳ
ಈಗ ಕೇಳುತಿಹುದು ಬರಿದೆ
ಪಾತ್ರೆ ಸಪ್ಪಳ

ಅಂದು ಅವಳೆ ಮಹಾಲಕ್ಷ್ಮಿ
ಮನೆಯ ದೇವತೆ
ಇಂದು ಏಕೊ ಕಾಣುತಿಹುದು
ಅವಳಲು ಕೊರತೆ

ಏನೆ ಇರಲಿ ಮೊದಲ ವರ್ಷ
ಮಡದಿ ಕಣ್ಮಣಿ
ವರ್ಷ ಕಳೆಯಲವಳು ಶಾಯಿ
ಮುಗಿದ ಲೇಖನಿ

Creative Writings
ಮಡದಿ