Karada Vishwa

Article · August 29, 2026

'ಉಂಡಲಿಕ'

By Shylaja Bhat

ಶೈಲಜಾ ಭಟ್

ಮೊಮ್ಮಕ್ಕಳಿಗೆ, ಅಜ್ಜಿ/ಅಮ್ಮಮ್ಮ ಮಾಡಿಕೊಡುವ ರುಚಿಯಾದ ತಿಂಡಿಗಳಲ್ಲಿ ಉಂಡಲಿಕ ಕೂಡ ಒಂದು. ಹಳ್ಳಿಗಳಲ್ಲಿ ಸಾಂಪ್ರದಾಯಿಕವಾಗಿ ಇಂದಿಗೂ ಈ ತಿಂಡಿಯನ್ನು ಮಾಡುತ್ತಿದ್ದರೂ ಪೇಟೆಯವರಿಗೆ ಇದು ಅಪರೂಪವೇ ಹೌದು. ಮಕ್ಕಳಿಗೆ ಅಮ್ಮಮ್ಮ ಮಾಡಿಕೊಟ್ಟ ಈ ರುಚಿಯಾದ ತಿಂಡಿಯ ಬಗ್ಗೆ ಒಂದು ಸಣ್ಣ ಲಘುಹಾಸ್ಯ ಲೇಖನ .

ಮೊಮ್ಮಕ್ಕಳೆಲ್ಲ ಬರುವಾಗ ಸ್ಪೆಷಲ್ ತಿಂಡಿ ಮಾಡದಿದ್ದರೆ ಹೇಗೆ? ಈ ಸಲ ಅಮ್ಮಮ್ಮನದ್ದು ಮಕ್ಕಳಿಗೆಲ್ಲ ಉಂಡಲಿಕ ಮಾಡಿಕೊಡುವ ಪ್ಲಾನ್. ಒಳಗೆ ಅಮ್ಮಮ್ಮ ಈ ವರ್ಷದ ಕೊನೆಯ 'ಸಲ್ಲ'ವನ್ನು(ಉಪ್ಪಿನಲ್ಲಿ ಹಾಕಿದ ಹಲಸಿನ ಸೋಳೆ) ಮಂಡೆಯಿಂದ(ದೊಡ್ಡ ಮಣ್ಣಿನ ಮಡಕೆ/ಹಂಡೆ) ತೆಗೆಯಲು, ಅಂಗಳದಲ್ಲಿ ಆಟ ಆಡುತ್ತಿದ್ದ ಮಕ್ಕಳೆಲ್ಲ ಒಬ್ಬೊಬ್ಬರಾಗಿ ಮನೆಯೊಳಗೆ ಮೂಗು ಮುಚ್ಚಿಕೊಂಡು ಬರಲು ಶುರು ಮಾಡಿದರು. ಅದೇನು ಅಂತದ್ದೊಂದು ಪರಿಮಳ(ವಾಸನೆ) ಅಂತ ಒಳಗೆ ಬಂದು ಎಲ್ಲರು ಇಣುಕಲು ಅಮ್ಮಮ್ಮನಿಗೆ ನಗು ತಡೆಯಲು ಆಗಲಿಲ್ಲ. ಆದರೂ ಅದನ್ನು ತೋರ್ಪಡಿಸದೆ ಅದೇನಿಲ್ಲ ನೀವೆಲ್ಲ ಹೊರಗೆ ಹೋಗಿ ಆಟವಾಡಿ ಎಂದು ಹೇಳಲು, ಮೊಮ್ಮಕ್ಕಳೆಲ್ಲ ಮುಖ ಮುಖ ನೋಡಿದರು. ಅವರಿಗೆಲ್ಲಾ ಈ ಪರಿಮಳ ಯಾವುದರದ್ದು ಎಂದು ತಿಳಿಯಲು ಪಿಸಿ ಪಿಸಿ ನಕ್ಕು ತಮ್ಮ ಆಟಕ್ಕೆ ಮರಳಿದರು.
ಅಮ್ಮಮ್ಮ ಎರಡು ಬಕೆಟ್ ತುಂಬಾ 'ಸಲ್ಲ'ವನ್ನು ತುಂಬಿ 'ಮಂಡೆ'ಯನ್ನು ಖಾಲಿ ಮಾಡಿದ ಖುಷಿಯಲ್ಲಿದ್ದರು. ಮನೆ ತುಂಬಾ ಇದರದ್ದೇ ಘಮ. ಇನ್ನು ಸಲ್ಲವನ್ನು ಎರಡು ಮೂರು ಬಾರಿ ತೊಳೆದು ಅದಕ್ಕೆ ಬೇರೆ ನೀರನ್ನು ಹಾಕಿಡಲು, ಮೈ ತುಂಬಾ ಸಲ್ಲವೆಂಬ ಸುಗಂಧ ದ್ರವ್ಯವನ್ನು ಸುರಿದಂತೆ ಭಾಸವಾಗುತ್ತಿತ್ತು. ಕೈಯನ್ನು ಮೂಸಿದ್ರಂತೂ ಎರಡು ದಿನ ಕಳೆದರೂ ಇದರ ಪರಿಮಳ ಹೋಗುವುದೋ ಇಲ್ಲವೋ ಎಂಬ ಅನುಮಾನ!!. ಆದರೂ ಏನು ಮಾಡುವುದು ಉಂಡಲಿಕ ತಿನ್ನಬೇಕಲ್ಲವೇ. ಇನ್ನು 4-5 ದಿನ ಆಗುವಷ್ಟರಲ್ಲಿ 'ಸಲ್ಲ' ಉಪ್ಪಿನ ಜೊತೆ, ಅತಿಯಾಗಿ ಇದ್ದ ಘಮವನ್ನು ನೀರಿಗೆ ಬಿಟ್ಟುಕೊಟ್ಟು ಮೆತ್ತಗೆ ಆಗಿತ್ತು. ನಂತರ ಅಮ್ಮಮ್ಮನ ಯೋಜನೆಯಂತೆ ನಾಲ್ಕು ಕೈ ಸೇರಿಸಿ ನೀರಿನಲ್ಲಿದ್ದ ಸಲ್ಲವನ್ನು ಪೀಳಿಯೂ (ಹಿಂಡಿ)ಆಯ್ತು.
ಇನ್ನು ತಿಂಗಳುಗಟ್ಟಲೆ ಯಾರು ಮುಟ್ಟದ ಕಡೆಯುವ ಕಲ್ಲು ಮೂಲೆಯಲ್ಲಿ ಧೂಳು ಹಿಡಿದು ಕುಳಿತಿತ್ತು. ಅದನ್ನು ಖತ್ತೆ (ತೆಂಗಿನಕಾಯಿಯ ಹೊರಗಿನ ಸಿಪ್ಪೆ)ಹಾಕಿ ತೊಳೆದು ಆಗುವಷ್ಟರಲ್ಲಿ ಅಮ್ಮಮ್ಮ ಅದಕ್ಕೆ ಸಲ್ಲವನ್ನು ತಂದು ಸುರಿಯಲಾರಂಭಿಸಿದರು. ಕಡೆಯುವ ಕಲ್ಲಿನ ಆ ಕಡೆ, ಈ ಕಡೆಯಿಂದ ಇಬ್ಬರೂ ಕುಳಿತು ಸಲ್ಲವನ್ನು ಕಡೆಯಲು(ರುಬ್ಬಲು) , ಮಾತಿನ ಭರಾಟೆಯಲ್ಲಿ ಸಲ್ಲ ಕಡೆದು ನುಣ್ಣಗೆ ಆದದ್ದೇ ಗೊತ್ತಾಗಲಿಲ್ಲ. ಇನ್ನು ಇದಕ್ಕೆ ಬೇಕಾದ ಅಕ್ಕಿ ಹಿಟ್ಟು, ಕಾಯಿತುರಿ, ಅರಶಿನ, ಉಪ್ಪು ಎಲ್ಲವನ್ನು ಹಾಕಿ ಅಮ್ಮಮ್ಮ ಹಿಟ್ಟು ರೆಡಿ ಮಾಡಿಟ್ಟರು.
ಹಿಟ್ಟನ್ನು ಸಣ್ಣ ಸಣ್ಣ ಉಂಡೆಗಳಾಗಿ ಮಾಡಲು ಅಮ್ಮಮ್ಮ ಮೊಮ್ಮಕ್ಕಳನ್ನೆಲ್ಲ ಕರೆದರು. ಎಲ್ಲರ ಕೈಗೂ ಒಂದು ಸಣ್ಣ ಬಾಡಿಸಿದ ಬಾಳೆ ಎಲೆ ತುಂಡನ್ನು ಕೊಟ್ಟು, ಅದನ್ನು ಕೈ ಮೇಲೆ ಇಟ್ಟು ಅದರ ಮೇಲೆ ಹಿಟ್ಟನ್ನು ಹಾಕಿ ಹೇಗೆ ಸಣ್ಣ ಉಂಡೆಗಳಾಗಿ ಮಾಡಬೇಕು ಅಂತಾನೂ ಹೇಳಿಕೊಟ್ಟರು. ಮೊದಲಿಗೆ ಮಕ್ಕಳೆಲ್ಲ ಭಾರಿ ಖುಷಿಯಿಂದ ತಮ್ಮ ಪುಟ್ಟ ಕೈಯಿಂದ ಹಿಟ್ಟನ್ನು ಉಂಡೆ ಮಾಡಲು ಶುರು ಮಾಡಿದ್ದೇ ಮಾಡಿದ್ದು, ಸ್ಟಲ್ಪ ಹೊತ್ತಿನಲ್ಲೇ ತಟ್ಟೆ, ಹಾಳೆ, ಮಾಂಡಿಗಳಲ್ಲೆಲ್ಲಾ ಬೇರೆ ಬೇರೆ ಗಾತ್ರದ ಉಂಡೆಗಳು ತುಂಬತೊಡಗಿತು. ಅಷ್ಟೇ ಅಲ್ಲ ಸ್ವಲ್ಪ ಹಿಟ್ಟು ನೆಲಕ್ಕೆ ಬಿದ್ದರೆ, ಇನ್ನು ಸ್ವಲ್ಪ ಹಿಟ್ಟು ಹೊಟ್ಟೆ ಒಳಗೂ ಹೋಗುತ್ತಿತ್ತು. ಅರ್ಧ ಗಂಟೆ ಕಳೆಯುವಷ್ಟರಲ್ಲಿ ಮಕ್ಕಳು ಕುಳಿತಲ್ಲೇ ಬಾಯಿ ಆಕಳಿಸಿ, ಮೈ ಮುರಿದು, ಮಡಚಿಟ್ಟ ಕಾಲು ಬಿಡಿಸತೊಡಗಿದರು, ಅಂತೂ ಇಂತೂ ಹಿಟ್ಟು ಉಂಡೆಮಾಡಿ ಮುಗಿಯುಷ್ಟರಲ್ಲಿ ಮಕ್ಕಳೆಲ್ಲ ಜಾಗ ಖಾಲಿ ಮಾಡಿ ಆಗಿತ್ತು. ಅಷ್ಟರಲ್ಲೇ ಬಾಣಲೆಯಲ್ಲಿ ಎಣ್ಣೆ ಬಿಸಿಯಾಗಲು ಹಿಟ್ಟಿನ ಉಂಡೆಗಳೆಲ್ಲ ಎಣ್ಣೆಗೆ ಬೀಳತೊಡಗಿತು. ಸ್ವಲ್ಪ ಹೊತ್ತಲ್ಲಿ ಬಿಸಿ ಬಿಸಿಯಾಗಿ ಕರಿದ ಉಂಡಲಿಕ ತಟ್ಟೆಗೆ ಬೀಳಲು ಮಕ್ಕಳೆಲ್ಲ ಅಲ್ಲಿಗೆ ಹಾಜರಾಗಿದ್ದರು. ಇನ್ನು ಅದು ತಣಿಯಲು ಪುರುಸೊತ್ತು ಇಲ್ಲ, ಪುಟ್ಟ ಕೈಗಳ ಜೊತೆ ದೊಡ್ಡ ಕೈಗಳು ನುಗ್ಗಿ ಮುಂದೆ ಬರತೊಡಗಿತು. ಇನ್ನು ಗಂಟೆಗಟ್ಟಲೆ ಕುಳಿತು ಉಂಡಲಿಕವನ್ನು ಕಾಯಿಸಿ ತೆಗೆಯಲು, ಒಲೆ ಮುಂದೆ ಕುಳಿತ ಅಮ್ಮಮ್ಮನಿಗೆ ಎಣ್ಣೆಯ ಘಾಟುವಿಗೆ ಹೊಟ್ಟೆ ತುಂಬಿದ ಅನುಭವವಾದರೂ ಅದನ್ನು ಹೇಳಿಕೊಳ್ಳದೆ ಮಕ್ಕಳಿಗೆಲ್ಲ ಕೈ ತುಂಬಾ ಉಂಡಲಿಕವನ್ನು ಕೊಟ್ಟು ಖುಷಿ ಪಟ್ಟರು . ಅಂತೂ 'ಸಲ್ಲ' ಮಂಡೆಯಿಂದ ತೆಗೆಯುವಾಗ ಇದ್ದ ಆ 'ಘಮ' ಹೋಗಿ, ತುಂಬಾ ರುಚಿಯಾದ ಹಾಗು ಸವಿಯಾದ ಉಂಡಲಿಕ ಎಲ್ಲರ ಬಾಯಲ್ಲೂ ಕುರು ಕುರು ಸದ್ದು ಮಾಡುತ್ತಿತ್ತು.
ಈ ಭಾಗ್ಯ ಎಲ್ಲರಿಗೆ ಇದೆಯೋ, ಇಲ್ಲವೋ ಗೊತ್ತಿಲ್ಲ. ನಾವಂತು ಅದೃಷ್ಟವಂತರು. ಅಮ್ಮಮ್ಮ ಮಾಡಿದ ಈ ಸಾಂಪ್ರದಾಯಿಕ ಉಂಡಲಿಕದ ರುಚಿ ಎಂದೂ ಮರೆಯಲಾಗದ್ದು.
ಥ್ಯಾಂಕ್ಯೂ ಅಮ್ಮಮ್ಮಾ....❤️


Creative WritingsFood