
Article · October 17, 2026
ಇರಬಹುದು ನಂದ ಕಂದ ....
By ಜಯಶ್ರೀ ಕೆ. ಆರ್ ಭಟ್. ಪಳ್ಳತಡ್ಕ .
ಜಯಶ್ರೀ ಐಲುಕುಂಜೆ
ಬಯಲಿನಾಚೆಗೆ ಬೆಳೆದ
ವೃಕ್ಷಗಳ ಸಾಲಿನಲಿ
ಇಹುದೊಂದು ಹಿರಿಯ ವೃಕ್ಷ /
ಗಾಳಿ ಬಂದರೆ ಜೋರು
ಉಳಿಯಬಹುದೇ ದೃಢದಿ?
ಸಂಶಯವು ಒಂದು ಪಕ್ಷ /
ದಣಿದವಗೆ ಇದು ಸೂರು,
ಆಳಕಿಳಿದಿಹ ಬೇರು
ನೆರಳಾದ ಹೆತ್ತ ಕರುಳು /
ಹಲ ಜೀವಕಾಶ್ರಯವು
ಅನುಭವದ ಸಾರವೂ
ವರುಷಗಳು ಐದುನೂರು /
ಕಾಲದಾ ಮಹಿಮೆಯಲಿ
ಹಿರಿ ವೃಕ್ಷ ವಿಹುದು ನಿಜ,
ಎಲ್ಲರಿಗೂ ಪ್ರೀತಿ ಸಹಜ/
ನೀಳವಾಗಿಹ ಬಿಳಲು
ಗಟ್ಟಿಯಾಗಿಹ ಒಡಲು
ಎಲ್ಲದಕು ಸಾಕ್ಷಿಯು ನಿಜ/
ಇನ್ನಷ್ಟು ದಿನ ಬಾಳಿ
ನೆರಳಾಗುವಂತಹಾ
ಭುಜಬಲವು ಇದರ ಒಳಗೆ/ '
ಬೇರೆ ಯಾವುದು ಇಲ್ಲ,
ಮೀರಿಸುವ ವೃಕ್ಷಗಳು
ಬೀಳದಿರಲಿ ಉರುಳಿ ಧರೆಗೆ /
ಅಗಲವಾಗಿಹ ಶಾಖೆ
ಹರಡಿ ದೂರದವರೆಗೆ
ವಿಸ್ತಾರ ಗಾತ್ರ ಸಾರ,.
ಆ ವಿರಾಟ್ ರೂಪವೇ
ಇದರಲಡಗಿರಬಹುದೆ?
ಆಗದಿದು ಧರಣಿ ಭಾರ/
ದೂರ ದೂರುಗಳಿಂದ
ಬರುವ ಜನರಿಗೆ ಎಲ್ಲ
ಇದು ಒಂದು ಭಕ್ತಿ ಕೇಂದ್ರ /
ದಿನಕಳೆದ ಹಾಗೆಯೇ
ನೋಡ ಬರುವರು ಮಂದಿ,
ಜನದಟ್ಟಣೆಯು ಸಾಂಧ್ರ /
ಬೀಸುವಾ ಗಾಳಿಯಲು ಕೇಳಿ
ಬರುತಿದೆ ಈಗ
ಇಂಪಾದ ಮುರಳಿ ನಾದ /
ಪೂಜ್ಯಭಾವವು ಮನದಿ ನುಸುಳಿ
ಮನ ಹಗುರಾಯ್ತು,
ಇರಬಹುದು ನಂದಕಂದ /
ಮುದಿತನದ ಜಾಡ್ಯತೆಯು
ವೃಕ್ಷದಲಿ ಕಾಣಿಸದು,
ಚಿಗುರಿಹುದು ಹೊಸತು, ಚಂದ /
ಕಾಲಕೂ, ದೇವರಾ
ಮಾಯಾ ಜಾಲಕೂ ಬೆಸೆದು,
ಬೆಸೆಯದಂತಿರುವ ಬಂಧ/
ಇರಬೇಕು ಹೀಗೆಯ ನೂರಾರು
ವರುಷಗಳು,
ಹರಸಲೀ ಆ ಮುಕುಂದ /
ದೇವನಾ ಸೃಷ್ಟಿಯಲಿ
ವೃಕ್ಷಗಳಿಗೂ ಹೀಗೆ
ಬೆಸೆದಿಹುದು ಒಂದು ಬಂಧ/
