Karada Vishwa

Article · June 30, 2026

ಹೈ, ಹಲೋ ಇಲ್ಲಿ ನೋಡಿ...

✍️ಶಾರದಾ ಕಜೆಗದ್ದೆ , ಬಾಯಾರು.

ಹೌದು... ಹಾಗೆ ಸುಮ್ನೇ ನಿಮ್ಮ ಸುತ್ತ ಮುತ್ತ ಕಣ್ಣು ಹಾಯಿಸಿ.. ಕಾಣಿಸ್ತಾ ಇಲ್ಲ ಅಲ್ವಾ ನಾನು.. ನಾನು ರಸ್ತೆ ಬದಿಯಲ್ಲಿ ಒಂದಷ್ಟು ವರುಷಗಳ ಕಾಲ ನನ್ನಷ್ಟಕ್ಕೆ ಸುಮ್ಮನೆ ನಮ್ಮವರ ಜೊತೆ ಬಾಳುತ್ತಿದ್ದೆ. ಹಕ್ಕಿಪಿಕ್ಕಿಗಳಿಗೆ ವಸತಿ, ಆಹಾರ ನೀಡುತ್ತಿದ್ದೆ, ನಿಮಗೆ ಒಳ್ಳೆ ಗಾಳಿ, ನೆರಳೀಯುತ್ತಿದ್ದೇ. ಆದರೆ ನೀವೇನು ಮಾಡಿದ್ರಿ. ನಮ್ಮವರೆಲ್ಲರನ್ನು ಸಾಲುಸಾಲು ಬುಡಸಮೇತ ಕಡಿದು ಧರೆಗುರುಳಿಸಿ, ನಿಮ್ಮ ಹವಾನಿಯಂತ್ರಿತ ಕಾರು, ಬಸ್ಸು,ಸರಕು ವಾಹನಗಳು ಅಡೆತಡೆಯಿಲ್ಲದೆ ಅತಿವೇಗದಲ್ಲಿ ಸಂಚರಿಸಲು ಅನುವು ಮಾಡಿಕೊಂಡಿರಿ ಅಲ್ಲವೇ?

ಆಯ್ತು ಅದು ಬಿಡೋಣ, ನಾವು ಬಂಧುಬಳಗವೆಲ್ಲ ಜೊತೆಜೊತೆಯಾಗಿ ಶಾಂತಿಯುತವಾಗಿ ಒಂದೇ ಕಡೆ ನಮ್ಮಷ್ಟಕ್ಕೆ ನಾವೇ ಹುಲುಸಾಗಿ ಬೆಳೆದು (ಕಾಡು)ನಿಂತು ಕಾಲಕಾಲಕ್ಕೆ ನಿಮಗೆ ಮಳೆಯನ್ನು ತರಿಸಿ ಇಡೀ ನಿಮ್ಮ ಜನ್ಮಾಂತರಕ್ಕೆ ಬೇಕಾದ ಸ್ವಚ್ಛ ಗಾಳಿ, ಮಳೆ, ಆಹಾರಗಳನ್ನು ಒದಗಿಸುತ್ತಿದ್ದೇವಲ್ಲ!. ಅಲ್ಲದೆ ನಿಮ್ಮ ವಾತಾವರಣವನ್ನೇ ಹವಾನಿಯಂತ್ರಿತವಾಗಿ ಇಡುತಿದ್ದೆವಲ್ಲ!!.ನಮ್ಮನ್ಯಾಕೆ ಧರಾಶಾಯಿಗಿಸಿ ಇನ್ನಿಲ್ಲವಾಗಿಸಿದಿರಿ?? ಎಷ್ಟೊಂದು ಪ್ರಾಣಿಪಕ್ಷಿ ಜೀವಜಂತುಗಳು ನಮ್ಮ ಜೊತೆ ಬಾಳಿ ಬದುಕುತ್ತಿದ್ದವು?? ಅವೆಷ್ಟೋ ಝರಿತೊರೆಗಳಿಗೆ ನಮ್ಮ ಮಧ್ಯದಿಂದ ಉಗಮವಾಗಿದ್ದುವು?? ಮತ್ತು ನಮ್ಮಿಂದಾಗಿ ಈ ಮಣ್ಣು ಫಲವತ್ತಾಗಿ ಸಮೃದ್ಧವಾಗಿರುತ್ತಿತ್ತು. ಇದ್ಯಾವುದನ್ನೂ ಲೆಕ್ಕಿಸದೇ ನಮ್ಮನ್ನು ಮೆಲ್ಲಮೆಲ್ಲನೆ ನೆಲಸಮವಾಗಿಸುವ ನಿಮ್ಮ ಹುನ್ನಾರಕ್ಕೆ ಏನನ್ನಬೇಕೊ ತಿಳಿಯದು.

ಸರಿ ಇದನ್ನೂ ಮರೆಯೋಣ. ನೀವೇ ನಿಮ್ಮ ಆಹಾರಕ್ಕಾಗಿ ಪೋಷಿಸುತ್ತಿದ್ದ ಗದ್ದೆಗಳತ್ತ ಯಾಕೆ ಬೆನ್ನುತಿರುಗಿಸಿ ಕಾಂಕ್ರೀಟು ಕಾಡುಗಳತ್ತ ಮುಖಮಾಡಿದಿರಿ?

ನಮ್ಮನ್ನು ಇಲ್ಲವಾಗಿಸಿ ಸಾಧಿಸಿದ್ದಾದರೂ ಏನನ್ನು? ನಾವಿಲ್ಲವೆಂದರೆ ಶುದ್ಧ ಗಾಳಿ ಇಲ್ಲ, ಸ್ವಚ್ಛ ನೀರಿಲ್ಲ, ಉಣಲು ಆರೋಗ್ಯಪೂರ್ಣ ಆಹಾರವಿಲ್ಲ , ಹವಾನಿಯಂತ್ರಿತ ವಾತಾವರಣವಿಲ್ಲ, ಕಣ್ಮನಸೆಳೆಯುವ ಹಸಿರಿಲ್ಲ, ಒಟ್ಟಿನಲ್ಲಿ ಹೇಳುವುದಾದರೆ ನೀವು ಬದುಕುಳಿಯಲು ಬೇಕಾದ ಉಚಿತವಾಗಿ ಸಿಗುವ ಪರಿಪೂರ್ಣ ಪರಿಸರವೇ ಇಲ್ಲ. ನಮ್ಮ ಬುಡಕ್ಕಿಟ್ಟ ಕೊಡಲಿ ನಿಮ್ಮ ಜೀವಕ್ಕಿಟ್ಟ ಕೊಳ್ಳಿಯಾದೀತು, ಹುಷಾರು!!ಈಗಾಗಲೇ ತಾಪದ ಬಿಸಿ ತಟ್ಟಲು ಶುರುವಾಗಿರುವ ಅನುಭವ ಆಗುತ್ತಲಿದೆ ಅನ್ನುವುದು ನಿಮ್ಮ AC ಮನೆ, ಕಾರು, ಆಫೀಸ್, ಶಾಲೆ, ಮಾಲ್ ಎಲ್ಲವೂ ಪ್ರಚುರ ಪಡಿಸುತ್ತಿದೆ. ಪಂಚಭೂತಗಳಿಗೂ ಬೆಲೆಕಟ್ಟಿ ಕೊಂಡುಕೊಂಡು ಬಾಳಿಬದುಕಲು ಅಲ್ಲವೇ 3ನೇ ವಯಸ್ಸಿನಿಂದಲೇ ನಿಮ್ಮದೇ ಆ ಪುಟ್ಟ ಕಂದಮ್ಮನನ್ನು ಲಕ್ಷಲಕ್ಷ ಸಂಪಾದನೆಗಾಗಿ ಅಣಿ ಮಾಡಿಸುತ್ತಿರುವುದು. ಎಂಥ ವಿಪರ್ಯಾಸ ಅಲ್ಲವೇ!!.

ಅದೇನೋ ಬದಲಾವಣೆ ಜಗದ ನಿಯಮ, ನಿಮ್ಮದು ಭಾರೀ ವೇಗದ ಯುಗ, ಎಲ್ಲವೂ ನಿಮ್ಮ ಕಪಿಮುಷ್ಟಿಯಲ್ಲೇ ಇದೆ, ಎಲ್ಲವನ್ನೂ ನೀವೇ ಬೇಕಾದಂತೆ ನಿಯಂತ್ರಿಸುತ್ತೀರಿ, ಮತ್ತದೇನೋ ಹೊಸ z-gen, ಇನ್ನೇನೋ ಕೃತಕ ಬುದ್ಧಿಮತ್ತೆ.. ಇಡೀ ಭೂಮಿಯನ್ನೇ AI ತಂತ್ರಜ್ಞಾನದ ಮುಖಾಂತರ ಸುಂದರವಾಗಿ ಉಸಿರಾಡುವಂತೆ ಮಾಡುವ ಯೋಚನೆ ಯೋಜನೆ ನಿಮ್ಮದಲ್ಲವೇ. ನೋಡೋಣ .. ನಾನೂ ನಿಮ್ಮ ಜೊತೆ ಬದಲಾವಣೆಯ ಹೊಸ ಹೆಜ್ಜೆಯನ್ನು ಇಂದಿನಿಂದಲೇ ಇಡುತ್ತೇನೆ.. ಸಾಧ್ಯ ಆದ್ರೆ ಜೊತೆಗೂಡಿ .. ಒಂದು ಕೈ ನೋಡೋಣ..

ಹಂ ನಾನಾರೆಂದು ತಿಳಿಯಿತೇ. ನಿಮ್ಮ ಕೈಯಲ್ಲಿರೋ ಮೊಬೈಲ್ ಹೇಳುತ್ತೆ ಓದಿ. ನೀವು ಮರೆತ ನಿಮ್ಮೆಲ್ಲರ ಉಸಿರು, ಈ ಭೂದೇವಿಯ ಹಸಿರು, ಜೀವಸಂಕುಲದ ಜೀವಾಳ. ಮರ, ಕಾಡು, ಪ್ರಕೃತಿ ನನ್ನ ಹೆಸರು.

ನಿಮ್ಮ ಹೊಸ ಕೃತಕ ಬುದ್ಧಿಮತ್ತೆಯಿಂದಲೋ , ಯಂತ್ರತಂತ್ರಮಂತ್ರದಿಂದಲೋ ಅಥವಾ ವಿಜ್ಞಾನ ಯಾ ಸ್ವಜ್ಞಾನದಿಂದಲೋ ಸಾಧ್ಯ ಆದ್ರೆ ಒಂದು ಹನಿ ನೀರು, ಒಂದು ಚಿಟಿಕೆ ಮಣ್ಣು, ಒಂದುಸಿರು ಗಾಳಿ ಉತ್ಪಾದನೆ ಮಾಡಿ ನೋಡೋಣ!!??

Creative Writings