Karada Vishwa

Article · March 19, 2026

ಸ್ವಾಗತ ಹೊಸವರುಷಕೆ

🖋️ಸೌಮ್ಯಾ ಭಟ್ ಅಂಗ್ರಾಜೆ

ಸ್ವಾಗತವ ಕೋರುವೆನು ಹೊಸವರುಷವೆ ನಿನಗೆ
ಸುಖಶಾಂತಿ ನೆಮ್ಮದಿಯ ಕರುಣಿಸು ಮನೆಮನೆಗೆ//

ಹೊಂಗನಸಿನ ಕಡಲುಕ್ಕಿದೆ ಕಣ್ಣೆದುರಲಿ ತೆರೆದು
ನನಸಾಗಲು ಸಲಹದನು ಮರೆಯಾಗಲು ಬಿಡದೆ//

ಎದೆಎದೆಗಳ ಬೆಸೆದುಬಿಡು ದ್ವೇಷವಿಷ ಸರಿಸಿ
ಒಂದಾಗಲಿ ಮನಸುಗಳು ಒಲವದೀಪ ಉರಿಸಿ//

ದಾಟಿ ಬಾ ಹೊಸ್ತಿಲನು ಮಂಗಳವನು ಹರಸಿ
ಹಳೆಬೇರಿನ ಜೊತೆಯಿರಿಸಿ ಚಿಗುರುಗಳ ಬೆಳೆಸು//

ಹಸಿರಿನ ಹೂಹಾದಿಯಲಿ ಕಾದಿದೆ ಬುವಿರಂಗ
ಪರಾಭವವೆ ಏರು ನೀ ವಿಜಯದ ಉತ್ತುಂಗ//

ಬಾಗಿಲನು ತೆರೆದಿಹೆವು ಶ್ರೀಕಾರವ ಹಾಡಿ
ನಿರ್ದಯಿಯಾಗದಿರು ನೀ  ಕತ್ತಲಿಗೆ ದೂಡಿ//

ಭರವಸೆಗಳುದಯಿಸಿವೆ ಯುಗದಾದಿಗೆ ರಾಶಿ
ಮಧುವನವ ಸೃಷ್ಟಿಸಲಿ ನೆಲವಾಗುತ ಕಾಶಿ//


Creative Writings
ಸ್ವಾಗತ ಹೊಸವರುಷಕೆ