
Article · October 26, 2026
ಬದಲಾಗದೆ....
By ಗಾಯತ್ರಿ ನಾಗರಾಜ ಅಡ್ಕತ್ತೊಟ್ಟಿ
ಗಾಯತ್ರಿ ಕೆ ಅಡ್ಕತೊಟ್ಟಿ
ಜೀವನದಲ್ಲಿ ಕಷ್ಟ ಸುಖ ದುಃಖ ನೋವು ಇತ್ಯಾದಿಗಳು ಸಹಜವೇ ... ಕೇವಲ ಸುಖವನ್ನೇ ಬಯಸುವುದು ಅಲ್ಲ ಸಂತೋಷವನ್ನು ಬಯಸುವುದಲ್ಲ ಇವೆರಡನ್ನು ಅರಿತುಕೊಂಡು ಬಾಳಲೇಬೇಕು ನೋವಿದ್ದರೆ ನಲಿವು. ಕಷ್ಟವಿದ್ದರೆ ಸುಖದ ಅರಿವು
ನೋವಿನ ಮೇಲೆ ನೋವು ಬಿತ್ತು,
ದುಃಖದ ಮೇಲೆ ದುಃಖ ಮೊಳೆಯಿತು
ಕಷ್ಟದ ಮೇಲೆ ಕಷ್ಟ ಬಂದು
ಬದುಕೇ ಒಂದು ಹೊರೆ ಆಯಿತು.
ನಾನು ಕಲ್ಲು ಆಗಬೇಕು ಅಂದುಕೊಂಡೆ
ಯಾರೂ ಒಡೆಯದ ಹಾಗೆ ಗಟ್ಟಿಯಾಗಿ
ಆದರೆ ಕಲ್ಲಿನ ಮೇಲೂ ಮಳೆ ಬಿತ್ತು
ಕಲ್ಲು ಕೂಡ ಕೊರೆದು ಹೋಯಿತು ಒಳಗೊಳಗೆ.
ನಾನು ಮಣ್ಣು ಆಗಬೇಕು ಅಂದುಕೊಂಡೆ
ಎಲ್ಲವನ್ನೂ ಮುಚ್ಚಿ ಬಿಡುವ ಹಾಗೆ ಮೃದುವಾಗಿ
ಆದರೆ ಮಣ್ಣಿನ ಮೇಲೆ ಹೆಜ್ಜೆಗಳು ಬಿದ್ದವು
ತುಳಿದು ತುಳಿದು ನಾನೇ ರಸ್ತೆ ಆದೆ.
ನಾನು ಸತ್ತ ಮರವಾದೆ
ನೆಲದ ಮೇಲೆ ನಿಂತೇ ಇದ್ದೇನೆ, ಬಿದ್ದಿಲ್ಲ
ಎಲೆ ಇಲ್ಲ, ಹೂ ಇಲ್ಲ, ನೆರಳೂ ಇಲ್ಲ,
ಬರೀ ಬೊಡ್ಡೆಯಾಗಿ, ಯಾರಿಗೂ ಬೇಡವಾಗಿ.
ನಾನು ಒಣಗಿದ ಮರವಾದೆ,
ಒಳಗೆಲ್ಲಾ ಟೊಳ್ಳು, ಹೊರಗೆ ಮಾತ್ರ ಖದರು,
ಗಾಳಿ ಬೀಸಿದರೆ ಸದ್ದು ಮಾಡುತ್ತೇನೆ,
ಉರಿಗೆ ಹಾಕಲು ಕೂಡ ಯಾರೂ ಬರುವುದಿಲ್ಲ.
ಬದುಕು ಚಕ್ರದ ಹಾಗೆ
ಕಲ್ಲು ಸದಾ ಕಲ್ಲಾಗಿರುವುದಿಲ್ಲ,
ಕಲ್ಲ ಒಡೆದು ಒಳಗಿಂದ ನೀರು ಚಿಮ್ಮುವುದು,
ಮಣ್ಣು ಸದಾ ತುಳಿಸಿಕೊಳ್ಳುವುದಿಲ್ಲ,
ಅದೇ ಮಣ್ಣಿನಿಂದ ಮೊಳಕೆ ಒಡೆಯುವುದು.
ಸತ್ತ ಮರವೂ ಸಾಯುವುದಿಲ್ಲ,
ಅದರ ಬೇರಿನಲ್ಲಿ ಜೀವ ಹಾಗೇ ಇರುವುದು,
ಒಣಗಿದ ಮರವೂ ಒಣಗಿರುವುದಿಲ್ಲ,
ಕಾಲ ಬಂದಾಗ ಚಿಗುರು ನಗುವುದು.
ಸುಖ ಕಳೆದ ಮೇಲೆ ದುಃಖ ಬರುವುದು ನಿಜ,
ದುಃಖ ಕಳೆದ ಮೇಲೆ ಸುಖವೂ ಬರುವುದು ನಿಜ,
ಇರುಳು ಕಳೆದರೆ ಹಗಲು ಬರುವ ಹಾಗೆ,
ಇದೇ ಬದುಕು, ಇದೇ ಚಕ್ರ.
ಆದ್ದರಿಂದ ಇಂದು ನಾನು ಅಳುವುದಿಲ್ಲ,
ನೋವಿನಲ್ಲೇ ಕೂತು ಸಾಯುವುದಿಲ್ಲ,
ಕಲ್ಲಾಗಿ, ಮಣ್ಣಾಗಿ, ಮರವಾಗಿ ನಿಂತಿದ್ದೇನೆ,
ಒಣಗಿದ ಕೊಂಬೆಯಲ್ಲೇ ಮತ್ತೆ ಅರಳುತ್ತೇನೆ
ಬದುಕಲೇಬೇಕು ಎಂದು...
