
Article · October 17, 2026
ಕನಸಿನ ರಹಸ್ಯವ ಬಲ್ಲವರಾರು!
ಸಂತೋಷ್ ಕುಮಾರ್ ನಡುಮನೆ
ಮನದ ಯೋಚನೆಯೇ ಕಲ್ಪನೆಯ ಕನಸೇ?
ನಾವಿದ್ದ ಕಡೆಯಲ್ಲಿ ಆಟವಿಹುದೇ?
ನೆನಪಿನಾಳದ ಮಂಥನಕೆ ಗೂಢ ಸಂಚೇ?
ಕನಸಿನ ಲೋಕವೇ ಒಂದು ವಿಸ್ಮಯವಲ್ಲವೇ!
ಎಣಿಕೆಗೆ ಸಿಗದಷ್ಟು ಬಿದ್ದ ಕನಸುಗಳು,
ಬೆರಳೆಣಿಕೆಯಷ್ಟು ಮಾತ್ರ ನನಸು!
ಗಗನಕೇರಿ ಧರೆಗಿಳಿಯುವಂಥ ತಪಸು,
ಕನಸಿನ ಕಡಲಿಗೆ ಕೊನೆಯೆಲ್ಲಿಹುದು!
ಮೆರೆಯುವ ನೃಪನಿಗೂ, ಭಿಕ್ಷುಕನಿಗೂ ಒಂದೇ,
ಸತ್ಯಮಿಥ್ಯಗಳ ಈ ಮಾಯೆಯ ಜಾಲ!
ಅದಕಿಲ್ಲ ಯಾವತ್ತೂ ಸಮಯದ ಕಟ್ಟುಪಾಡು,
ಕನಸಿನ ಲೋಕಕೆ ಬೇಧಭಾವವಿಲ್ಲವಲ್ಲ!
ವಿಜ್ಞಾನ ಹೇಳುವುದೂ ಮೆದುಳಿನ ರಾತ್ರಿಯಾಟವೆಂದು,
ನರಗಳ ಸಂಚಾರದಲಿ ಭಾವನೆಗಳ ಬೆಸುಗೆಯೆಂದು!
ಹಗಲಿನ ಚಿಂತನೆಯೇ ರಾತ್ರಿ ಮೂಡುವ ಹೊಳಹು,
ಬಗೆಹರಿಯದ ಒಗಟಿದು, ಅರಿಯುವವರಾರು!
ಪಂಡಿತರು ಸಾರುವರು ಇದು ಮಾಯೆಯೆಂದು,
ಜೀವದ ಅನುಭವದ ಒಡಲಿನ ಬೆಳಕೆಂದು!
ಅಧ್ಯಾತ್ಮದ ಹಾದಿಯಲಿ ಆತ್ಮದ ನೋಟವೆಂದು,
ಕನಸಿನ ಸತ್ಯವನು ಕಂಡವರಾರು!
ಈಗೀಗ ಹುಟ್ಟನ್ನಾದರೂ ಲೆಕ್ಕಿಸಬಹುದು,
ದಿನಾಂಕವ ನಿಗದಿಪಡಿಸಿಯೂ ಬಿಡಬಹುದು;
ಸಾವೆಲ್ಲಿಹುದು ಬಲ್ಲಿಹನು ಹಣೆಬರಹ ಬರೆದವನು?
ವಿಧಿಯ ಲೆಕ್ಕವನು ಮೀರಿದವರಾರು!
ಕಾಸಿದ್ದರಿಲ್ಲದಿದ್ದರೂ ಕನಸು ಬರುತಿಹುದು,
ಜಾತಕದ ಗಣಿತವಿಲ್ಲದ ಅಗಣಿತವಿದು!
ಬರಲೆಂದು ಮಲಗಿದರೆ ಬರಲೊಲ್ಲದ ಅತಿಥಿ,
ಕನಸಿನ ಆಗಮನಕೆ ಮುಹೂರ್ತವೆಲ್ಲಿಹುದು!
ಬೇಡವೆಂದರೂ ಒಮ್ಮೊಮ್ಮೆ ಬಂದೇ ಬಿಡುವುದು,
ಅದಕಿಲ್ಲ ಯಾವತ್ತೂ ಸಮಯದ ಅಭಾವವು!
ಮನವ ಕವಿಯುವಂಥ ಅಚ್ಚರಿಯ ಸಮ್ಮೋಹನ,
ಕನಸಿನ ಸೆಳೆತಕೆ ಮಿತಿಯೆಲ್ಲಿಹುದು!
ಬಾಲವೃದ್ಧರನ್ನರಸಿ ಎಲ್ಲಾ ತಾಸುಗಳಲ್ಲೂ ಬರುವ,
ಕಥೆ ಬರೆದವನ್ಯಾರೆಂದು ಬಲ್ಲವರಾರೋ?
ಪಾತ್ರಧಾರಿಗಳು ಮಾತ್ರ ನಾವಾಗಿಹೆವು,
ಕನಸಿನ ಸೂತ್ರಧಾರನ ಕಂಡವರಾರು!
ಸುರರಾಸುರರನು ಬಿಡದ ಸ್ವಂತಿಕೆಯ ಮಾಯೆ,
ಒಬ್ಬರಿಗಿಲ್ಲದ ರೂಪ ಮತ್ತೊಬ್ಬರಿಗುಂಟು!
ನಿದ್ರೆಯಲಿ ಮೈಮರೆತು ಮಲಗಿರುವಾಗ,
'ನಾಳೆ ಬಾ' ಎನ್ನುವುದಾಗದು ಆ ಕನಸಿಗೆ!
ಕನಸಿನ ಲೋಕಕೆ ಕಾಲದ ಹಂಗಿಲ್ಲವಲ್ಲ!
ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಬರುತಿಹುದು,
ಸಿಟ್ಟಿಲ್ಲದಿದ್ದರೂ ಹಿಟ್ಟಿದ್ದರೂ ತರುವುದತಿಥಿ!
ಜೀವದ ಹುಟ್ಟಿನಿಂದಲೇ ಕನಸಿನ ಹುಟ್ಟು,
ಕನಸಿಗೂ ಬದುಕಿಗೂ ನಂಟು ಬಿಡದ ಬಂಧ!
ಸೀತೆಯ ದುಃಖದಲಿ ತ್ರಿಜಟೆಯ ಕನಸು,
ರಾಮನ ವಿಜಯವನು ಸಾರಿದ ಮುನ್ಸೂಚನೆ!
ರಾವಣನ ಪತನವನು ಕಣ್ಣಾರೆ ಕಂಡಂತೆ,
ಕನಸಿನ ರಹಸ್ಯವ ಬಲ್ಲವರಾರು!
ತ್ರಿಶಲೆಯ ಕನಸಲಿ ಶುಭಸೂಚನೆ ಮೂಡಿ,
ಮಹಾವೀರನ ಜನನದ ಮಹಿಮೆಯ ಸಾರಿತು!
ಕನಸಿನ ಸಂಕೇತಕೆ ಹೊಸ ಅರ್ಥ ದೊರೆತು,
ಭವಿಷ್ಯದ ಹೊಳಹನು ಕಾಣುವವರಾರು!
ನಿರ್ಜೀವ ಶರೀರಕ್ಕಿಲ್ಲ ಕನಸಿನ ಬಂಧನ,
ಆತ್ಮ ಪರಮಾತ್ಮರ ಸಂಕೇತವಿದು ಕಾಣೆ!
ಮನೆಯಲ್ಲಿ ಇರುವೆವು, ಕದ ತೆಗೆದಾಗ ಸಮುದ್ರ,
ಕನಸಿನ ರಹಸ್ಯವ ಬಲ್ಲವರಾರು!
