
Article · September 6, 2026
ಹರೇ ಕೃಷ್ಣ
ಡಾ। ಪ್ರಫುಲ್ಲಾ. ಜಿ.ಭಟ್ಟ
ಕಂದನೆಲ್ಲಿಹನೇ ಸಖಿ ಕೃಷ್ಣನೆಲ್ಲಿಹನೇ ....
ಗುಮ್ಮನಿಹನೆಂದರೂ ಕೇಳನು ಹರಿ ಹೊರ ಬಾಗಿಲಿಂದೋಡಿಹನು
ಎಮ್ಮ ಮನೆಯಂಗಳದಿ ಕಾಣೆನು
ಇನ್ನೆಲ್ಲಿ ನವನೀತವ ಕದಿಯುತಿಹನೋ ....
ಸಖೀ ಕಂದನೆಲ್ಲಿಹನೇ .....
ಎನ್ನ ಹಳಿಯದಿರಾ ಸಖೀ
ಕಂದನು ಎನ್ನಮಾತನೆಲ್ಲಿ ಕೇಳ್ವನು
ಪುಂಡುತನದಲ್ಲೆ ಮುಳುಗಿ ಮಿಂದಿಹನು
ಅಂಬುಜಾಕ್ಷನ ಎಂತು ಪಿಡಿಯಲೇ ಸಖೀ.....
ಕಂದನೆಲ್ಲಿಹನೇ .....
ಮಣ್ಣು ತಿನ್ನಲು ತೆರೆದ ಬಾಯಲಿ
ಮಹಾಮಂಡಲವ ಕಂಡೆನು
ಗೋವರ್ಧನವನೆತ್ತಿ ಸಲಹಿದ
ಗೋವಿಂದನಾ ನಿಮ್ಮ ಬಿನ್ನಾಣವ ಬದಿಗೊತ್ತಿ
ಎತ್ತಿಮುದ್ದಾಡಿರೇ ....
ಸಖೀ.... ಕಂದನೆಲ್ಲಿಹನೇ ....
ಹಸುಳೆಯ ಕಾಣದೆ ಹಸಿವು ಇಂಗದು
ಎದೆಯ ಬೇಗುದಿ ಇಮ್ಮಡಿಯಾಗುದು
ಎಲ್ಲಿ ಬೀಳ್ವನೋ ಏನ ಕಡಿವನೋ
ಮನದ ದುಗುಡವ
ಹೇಗೆ ಸಹಿಸಲಿ ಸಖೀ....
ಕಂದನೆಲ್ಲಿಹನೇ .....
Creative Writings
