
Article · July 2, 2026
ಮುದಿ ಹರಯ
- - ವೀಣಾ ಎಂ ಭಟ್
ಬಾರೆ ಸಖಿ ಸಾಗೋಣ ಚಿತ್ತ ಹರಿಸಿದ ಅತ್ತ
ಮತ್ತೆ ಬರುವುದೊ ಜನನ ಇದು ದೈವ ಚಿತ್ತ
ತೊಗಲು ತೂಗಿದರೇನು ಬಗಲಲ್ಲಿ ನೀನಿರಲು
ಹೆಗಲಿಗೆ ಹೆಗಲಾಗಿ ಕೊಡುವ ಜೀವ ಇರಲು ||
ಆಗಸವೆ ಸೂರೆಮಗೆ ಬಯಲೆ ಗುಡಿ ಎಮಗೆ
ಹಗಲು ಇರುಳಲಿ ಕಳ್ಳರ ಹಂಗಿಲ್ಲ ನಮಗೆ
ಮುಷ್ಟಿ ಅನ್ನವ ನೀಡೆ ಅಶನ ಉಂಟೆಮಗೆ
ಇಷ್ಟ ಇಲ್ಲದಿರೆ ಏಕಾದಶಿ ಉಪವಾಸವು ಎಮಗೆ ||
ಮುದಿತನಕೆ ಬಾಗುವುದು ಹರಯವು ಇಂದು
ಹದಿಹರೆಯ ಹೋಯಿತಲ್ಲ ಜಾರಿ ಮುಂದು
ಗೆಳೆತನಕೆ ಸರಿಸಾಟಿ ಯಾವುದಿದೆ ನಮ್ಮಲ್ಲಿ
ಸಿರಿತನಕೆ ಸಡ್ಡು ಹೊಡೆದ ಜನುಮ ನಮ್ಮದಿಲ್ಲಿ ||
ಉಡುಗುತಿದೆ ಧೈರ್ಯವು ನಡುಗುತಿವೆ ಕೈಕಾಲು
ಕೆಡುತಿದೆ ಮನಸಿನ ಸಮತೋಲನವು ಎಲ್ಲ
ಚೈತನ್ಯ ತುಂಬುವುದು ನಿನ್ನ ಒಲುಮೆಯಿಂದ
ಆಶ್ರಯದ ಆಶಯವು ಎನಗೆ ನಿನ್ನಿಂದ ||
Creative Writings
