Karada Vishwa

Article · June 16, 2026

ಕ್ಷಮೆ

(ಕತೆ)✍🏻 ದಿವ್ಯಾ ಬಿ ಶಿರಂತಡ್ಕ

    ‌      
              ಸುಮತಿ ಟೀಚರ್ ಕುರ್ಚಿಯಲ್ಲಿ ಕುಳಿತುಕೊಂಡು ತಮ್ಮ ಕರವಸ್ತ್ರದಿಂದ ಮುಖ ಒರೆಸುತ್ತಿದ್ದರು. ಮೈ ಬಿಸಿಯೇರಿದ ಅನುಭವ. ಜ್ವರ ಬಂದಂತಹ ಭಾವ. ತಲೆ ಭಾರ. ಹಾಗೆಯೇ ಹೆಡ್ ಮಾಸ್ಟರಿಗೆ ತಿಳಿಸಿ ಮನೆಗೆ ಹೋಗೋಣವೇ ಎಂದೆನಿಸಲು ಶುರುವಾಯಿತು. ಆದರೆ ಅಂತೆ ಮಾಡಲು ಏನೋ ಅಳುಕು. ಯಾಕೋ ಮೈ ಕೈಯಲ್ಲಿ ಸಣ್ಣ ಕಂಪನ, ಹೆಚ್ಚಿದ ಎದೆಬಡಿತ. ದೀರ್ಘ ಶ್ವಾಸ ತೆಗೆದುಕೊಂಡು ಒಮ್ಮೆ ಶಾಲಾ ಶೌಚಾಲಯದತ್ತ ನಡೆದರು.

       ಮಧ್ಯಾಹ್ನ ನಂತರದ ಕಡೆಯ  ತರಗತಿ. ಒಂಭತ್ತನೇ ಕ್ಲಾಸಿಗೆ ಹೋದಾಗ ಹತ್ತನೆಯ ತರಗತಿಯತ್ತ ಒಮ್ಮೆ ಕಣ್ಣು ಹಾಯಿಸದೆ ಬಿಡಲಿಲ್ಲ. ಆ ಹುಡುಗಿ ಡೆಸ್ಕಿನಲ್ಲಿ ತನ್ನೆರಡು ಕೈಗಳ ಮೇಲೆ ತಲೆ ಇಟ್ಟು ಮಲಗಿದ್ದಳು. ಮತ್ತೆ ವಿಷಯ ಗಂಭೀರ ಗೊಳಿಸುವುದು ಬೇಡವಾಗಿ ಪಕ್ಕದ ಕ್ಲಾಸಿಗೆ ಹೋಗಿ  ನಿರುಸ್ಸಾಹದಿಂದಲೇ ತರಗತಿ ಮುಗಿಸಿ ಬಂದರು.

      ಶಾಲೆಯಿಂದ ಮನೆಗೆ ಮರಳಿದರೆ ಆಕೆ ಎಂದಿಗೂ ಅಪ್ಪಟ ಭಾರತೀಯ ಗೃಹಿಣಿಯೇ. ಸಿಂಕಿನಲ್ಲಿ ಕತ್ತೆತ್ತಿ ನೋಡುತ್ತಿರುವಂತೆ ಭಾಸವಾಗುತ್ತಿರುವ ಪಾತ್ರೆಗಳು, ಹೊರಗೆ ಒಣ ಹಾಕಿದ ಬಟ್ಟೆಗಳು, ಬೆಳಗ್ಗೆ ಗಡಿಬಿಡಿಯಲ್ಲಿ ಬಾಕಿಯಾದ ಹತ್ತು ಹಲವು ಮನೆ ಕೆಲಸಗಳೇ ಅವರನ್ನು ಸ್ವಾಗತಿಸುತ್ತಿತ್ತು.  'ತನ್ನ ಕೈಯಲ್ಲಿ ಆಗುವುದು ಇಷ್ಟೇ' ಎಂದು ಕೆಲವು ನಿರ್ದಿಷ್ಟ ಕೆಲಸಗಳಲ್ಲಿ ಸಹಾಯ ಮಾಡುತ್ತಿದ್ದ ಪತಿ ಕೂಡ ಬಯಸುತ್ತಿದ್ದು ಒಂದೇ ..ಪತ್ನಿ ಬಂದು ಚಹಾ ಮಾಡಿ ಕೈಗೆ ಕೊಡಲಿ ಎಂದೇ. 'ಏನೇ ಆಗಲಿ ನಿನ್ನ ಕೈ ಚಹಾ ರುಚಿಯೇ ಬೇರೆ!'  ಎಂದು ಹೊಗಳುತ್ತಿದ್ದ ಅವರು ತಮ್ಮ ಔದಾಸೀನ್ಯವನ್ನು ಹೀಗೆ ಮರೆಮಾಚುತ್ತಿದ್ದರೋ  ಏನೋ!  ಅಂತೂ ಸುಮತಿ ಟೀಚರು ತಮ್ಮ ಕೈಗುಣದ ಬಗ್ಗೆ ಹೆಮ್ಮೆ ಪಡುತ್ತಲೇ ಬಂದಿದ್ದರು. ಮನೆ ಹಾಗೂ ಉದ್ಯೋಗ ಎರಡನ್ನೂ  ಹೇಗೋ ಸರಿದೂಗಿಸಿಕೊಂಡು ಹೋಗುತ್ತಿದ್ದರು. ಮಗ ದೂರದ ಅಮೆರಿಕದಲ್ಲಿ ಉದ್ಯೋಗಿಯಾಗಿದ್ದರೆ ಮಗಳು ಮದುವೆಯಾಗಿ ಬೆಂಗಳೂರು ಸೇರಿದ್ದಳು. 

      ಮನೆ ತಲುಪಿದಾಗ ಸುಮತಿ ಟೀಚರಿಗೆ ತಲೆನೋವು ಹೆಚ್ಚಿದಂತೆ ಭಾಸವಾಯಿತು. ನೇರವಾಗಿ ಅಡುಗೆ ಕೋಣೆಗೆ ನುಗ್ಗದೆ ಹಾಗೆ ಕುರ್ಚಿಗೆ ಒರಗಿ ತಲೆಯನ್ನು ಕಣ್ಣು ಮುಚ್ಚಿ ಮೇಲೆತ್ತಿದರು. ವಿಚಾರಿಸಿದ ಪತಿ 'ತಲೆ ನೋವಿಗೆ ಒಳ್ಳೆಯ ಚಹಾ ಕುಡಿದರೆ ಸರಿ ಆಗ್ತದೆ' ಎಂದೆನ್ನುತ್ತಾ ಚಹಾ ತಯಾರಿಕೆಯ ಪೀಠಿಕೆ ಹಾಕಿದರು.  ಮನೆ ಕೆಲಸದ ನೌಕೆ ಎಂದಿನಂತೆ ಸಾಗದೆ  ಕುಂಟುತ್ತಾ ಸಾಗುತ್ತಿತ್ತು. ಇಂದಾದರೂ ಬೇಗ ಮಲಗಬೇಕು ಎಂದೆಣಿಸುತ್ತಾ  ತಟ್ಟೆ ತೊಳೆಯುತ್ತಿದ್ದಾಗ ಮೊಬೈಲ್ ರಿಂಗಣಿಸಿತು. ಫೋನ್ ಎತ್ತಿದವರೇ ಒಂದು ಕ್ಷಣ ದಂಗಾದರು. 

      ಮಧ್ಯಾಹ್ನ ಮೇಲಿನ ಮೊದಲ ತರಗತಿಯಲ್ಲಿ ನಡೆದ ಕಹಿ ಘಟನೆಗೆ ಈಗ ಸ್ಪಷ್ಟನೆ ಕೊಡುವ ಸಮಯ. ಹುಡುಗಿಯ ಅಮ್ಮ ತರಾಟೆಗೆ ತೆಗೆದುಕೊಳ್ಳುವ ಶೈಲಿಯಲ್ಲಿ ಮಾತನಾಡುತ್ತಿದ್ದರು. ತಮ್ಮ ಮಗಳಿಗೆ ಫಿಟ್ಸ್  ಕಾಯಿಲೆ ಇರುವುದಾಗಿಯೂ, ಏಟು ಬಿದ್ದಿದ್ದರಿಂದ ಇನ್ನೂ ಸರಿಯಾಗಿ ಚೇತರಿಸಿಕೊಳ್ಳದೆ ಅಸ್ವಸ್ಥಳಾಗಿಯೇ ಮುಂದುವರಿದಿದ್ದಾಳೆ ಎಂಬುವುದು ಅವರ ಕೋಪಕ್ಕೆ ಕಾರಣವಾಗಿತ್ತು. ಯಾವುದಕ್ಕೂ ನಾಳೆ ಶಾಲೆಗೆ ಬಂದು ಹೆಡ್ ಮಾಸ್ಟ್ರಲ್ಲಿ ಮಾತಾಡುವೆ ಎಂದು ಕಡೆಯದಾಗಿ ಹೇಳಿ ಫೋನ್ ಕುಕ್ಕಿದರು. ಸುಮತಿ ಟೀಚರ್ ಕಣ್ಣುಗಳಲ್ಲಿ ನೀರು ತುಂಬಿತು. 
ಇನ್ನೇನು ನಾಲ್ಕು ತಿಂಗಳಲ್ಲಿ ರಿಟೈರ್ ಆಗಲಿರುವ ತಮ್ಮ ಶಿಕ್ಷಕ ಜೀವನವೆಲ್ಲ  ಒಮ್ಮೆಲೇ ಧ್ವಂಸವಾದಂತೆ ಕಂಡಿತವರಿಗೆ.

    ಸುಮತಿ ಟೀಚರ್ ಶಾಂತ ಸ್ವಭಾವದವರು. ಮಕ್ಕಳಲ್ಲಿ ಎಂದಿಗೂ ತೀರಾ ಕೋಪಿಸಿಕೊಂಡವರಲ್ಲ . ಹಲವು ವಿದ್ಯಾರ್ಥಿಗಳು ಕಬ್ಬಿಣದ ಕಡಲೆ ಎಂದೇ ತಿಳಿದಿರುವ ಗಣಿತವನ್ನು ಬಹಳ ಸುಲಲಿತವಾಗಿ ಕಲಿಸುತ್ತಿದ್ದರು. ನಿನ್ನೆ ಮಧ್ಯಾಹ್ನ ನಡೆದದ್ದು ನಿಜಕ್ಕೂ ಕೈ ಮೀರಿದ ಪ್ರಸಂಗವೇ ಎನ್ನಬಹುದು.  ಗಂಭೀರವಾಗಿ ಎಂದೂ ಕೈಮಾಡದ ಅವರು ಪಕ್ಕದವಳಲ್ಲಿ ಪಿಸುಗುಟ್ಟುತ್ತಿದ್ದ ಆ ಹುಡುಗಿಯಲ್ಲಿ ಗಣಿತ ನೋಟ್ಸ್ ತೋರಿಸಲು ಹೇಳಿದ್ದರು. ತಾವು ಬೋರ್ಡಿನಲ್ಲಿ ಮಾಡಿದ ಲೆಕ್ಕಗಳನ್ನು ಇಲಿ ತಿಂದ ವಸ್ತ್ರಗಳಂತೆ ಅರ್ಧಂಬರ್ಧ ಮಾಡಿಯೂ ಅಪರಾಧಿ ಭಾವ ತೋರಿಸದ ಆಕೆಯಲ್ಲಿ ಇನ್ನಿಲ್ಲದಂತೆ ಕೋಪ ಬಂದು ಎರಡೇಟು ಹೊಡೆದದ್ದೆ ತಪ್ಪಾಯಿತೇ?!  ಆಕೆಯೂ ಅದನ್ನು ನಿರೀಕ್ಷಿಸಿರಲಿಲ್ಲ. ಒಮ್ಮಿಂದೊಮ್ಮೆಲೇ ಕಣ್ಣು ಕತ್ತಲೆ ಬಂದಂತಾಗಿ ನಿಶ್ಶಕ್ತಿಯಿಂದ ಕುಸಿದು ಕುಳಿತಳು. ಆಗ ನಿಜಕ್ಕೂ ಗಾಬರಿಯಾದರು ಸುಮತಿ ಟೀಚರ್. ಆಕೆಯನ್ನು ಆಧರಿಸಿ ಹಿಡಿದರು. ಮಕ್ಕಳಲ್ಲಿ ಕೇಳಿ ನೀರು ಚುಮುಕಿಸಿದರು. ಮಕ್ಕಳು ಗುಂಪುಗೂಡದಂತೆ ಗದರಿಸಿದರು. ಏನೋ ಅದೃಷ್ಟ ಚೆನ್ನಾಗಿತ್ತು.  ಐದು ನಿಮಿಷದಲ್ಲಿ ಆಕೆ ಸರಿಹೋದರೂ ತಗ್ಗಿಸಿದ ತಲೆ ಮೇಲೆ ಎತ್ತಲಿಲ್ಲ. ನಾಳೆ ಎಲ್ಲವೂ ಸರಿಯಾದೀತೆಂದು  ಸಮಾಧಾನ ತಂದುಕೊಂಡಿದ್ದ ಟೀಚರಿಗೆ ಈಗ ಆ 'ನಾಳೆ'  ಎಂಬುದೇ ದೊಡ್ಡ ಸಮಸ್ಯೆಯಾಗಿತ್ತು.

         ಮರುದಿನ ಶಾಲೆಗೆ ಹೋದಾಗ ಅವರಿಗಿಂತ ಮೊದಲೇ ಆ ಹುಡುಗಿಯ ಅಮ್ಮ ಮಗಳ ಜೊತೆ ಶಾಲಾ ಮುಖ್ಯ ಶಿಕ್ಷಕರ ಕೋಣೆಯಲ್ಲಿ ಸೇರಿದ್ದರು. ನಿಸ್ಸಂಶಯವಾಗಿ ಟೀಚರಿಗೆ ಕರೆ ಹೋಯಿತು. ವಿಷಯ ಎಷ್ಟೇ ಮನವವರಿಕೆ ಮಾಡಿದರೂ ಆ ತಾಯಿಯದ್ದು ಒಂದೇ ಪಟ್ಟು. ಶಿಕ್ಷಕಿ ಎಲ್ಲರ ಎದುರು ಕ್ಷಮೆ ಕೇಳಬೇಕೆಂದು! ಬೇರೆ ದಾರಿ ಕಾಣಲಿಲ್ಲ ಅವರಿಗೆ. ಎರಡು ಕರಗಳನ್ನೂ ಜೋಡಿಸಿದರು. ಕಣ್ಣಿಂದ ಬೀಳುವ ಹನಿಗಳಿಗೆ ತಡೆಯೊಡ್ಡಬೇಕೆಂದು ಪ್ರಯತ್ನಿಸಿದರೂ ಅವರು ಸಫಲರಾಗಲಿಲ್ಲ. ಅವರ ಸಹೋದ್ಯೋಗಿಗಳಿಗೂ ಕಣ್ಣು ತುಂಬಿ ಬಂತು.

           ಅಂತೂ ಶೈಕ್ಷಣಿಕ ವರ್ಷದ ಕೊನೆಯ ತಿಂಗಳು. ಕುಂಬಾರ ದೂರದಿಂದ ಮಡಕೆಯಲ್ಲಿ ಮಜ್ಜಿಗೆ ಹೊತ್ತು ತಂದು ಗಮ್ಯ ತಲುಪಿದಾಗ ಮಡಕೆಯನ್ನು ಹೊತ್ತು ಹಾಕಿ ಎಲ್ಲವೂ ವ್ಯರ್ಥವಾದಂತೆ ತನಗೂ ಆಗುವುದರಲ್ಲಿತ್ತು. ದೇವರು ದೊಡ್ಡವನು.' ಕ್ಷಮೆ'ಯಲ್ಲಿ ಎಲ್ಲವೂ ಸರಿಯಾಗಿತ್ತು. ಈ ವಿಚಾರವಾಗಿ ಅವರು ಎಷ್ಟೋ ಸಲ ಮನದಲ್ಲೇ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸಿದ್ದರು. ಇಲಾಖೆ ಪದ್ಧತಿಯಂತೆ ಬೀಳ್ಕೊಡುಗೆ ಸಮಾರಂಭವು ಶಾಲೆಯಲ್ಲಿ ಬಹು ವಿಜೃಂಭಣೆಯಿಂದಲೇ ನಡೆದಿತ್ತು. ಹಳೆ ವಿದ್ಯಾರ್ಥಿ ಸಂಘದಿಂದ ತಮ್ಮ ನೆಚ್ಚಿನ ಸುಮತಿ ಟೀಚರಿಗೆ ಪ್ರತ್ಯೇಕವಾಗಿ ಬಿಳ್ಕೊಡುಗೆ ಸಮಾರಂಭವು ಏರ್ಪಟ್ಟಿತ್ತು. ಹಲವು ಬ್ಯಾಚುಗಳ ವಿದ್ಯಾರ್ಥಿ ವಿದ್ಯಾರ್ಥಿನಿಯರು ಒಟ್ಟಿಗೆ ಸೇರಿ ಕಾರ್ಯಕ್ರಮವನ್ನು ಒಂದು ಸುಂದರ ಸಭಾಂಗಣದಲ್ಲಿ ಆಯೋಜಿಸಿದ್ದರು. ಬಹುಶಃ ಇದೇ ತನ್ನ ವೃತ್ತಿ ಜೀವನದ ಕೊನೆಯ ರಸ ನಿಮಿಷವಿರಬೇಕೆಂದು ಅನಿಸಿತವರಿಗೆ.  

       ಹೊಸ ರೇಷ್ಮೆ ಸೀರೆ...ಅದಕ್ಕೊಪ್ಪುವ ರವಿಕೆ, ತಲೆ‌ ತುಂಬಾ ಮಲ್ಲಿಗೆ ಹೂವು... ಎಂದಿನಂತೆ ಸರಳವಾಗಿ ಸಿಂಗರಿಸಿಕೊಂಡು ಪತಿಯ ಜೊತೆ ತಮ್ಮ ಶಿಷ್ಯನ ರಿಕ್ಷಾದಲ್ಲಿ ಕುಳಿತ ಅವರನ್ನು ಸಭಾಂಗಣದ ಬಾಗಿಲಿಗೆ ತಂದು ಆತ ಇಳಿಸಿದ. ಅವನ ತಲೆ ಮೇಲೆ ಕೈಯಿಟ್ಟರು ಆಶೀರ್ವದಿಸುವಂತೆ.
ಏನಾಶ್ಚರ್ಯ... ಚಿಕ್ಕ ಚೊಕ್ಕ ಸಮಾರಂಭ ಎಂದಿದ್ದರು. ಇಲ್ಲಿ ನೋಡಿದರೆ...ಹಳೆ ವಿದ್ಯಾರ್ಥಿನಿಯರು ಸಾಲಾಗಿ ಓಡಿ ಬಂದರು, ಬಣ್ಣ ಬಣ್ಣದ ಹಕ್ಕಿಗಳಂತೆ. ಹಿಂದೆಯೇ ಹಳೆ ವಿದ್ಯಾರ್ಥಿಗಳೂ..ಆರತಿ ಎತ್ತಿ ಕೈ ಹಿಡಿದು ಅವರು ಒಳಗೆ ಕರೆದುಕೊಂಡು ಹೋದಾಗ ಕಂಗಳಲ್ಲಿ ಹೊಳಪು...ಸಭಾಂಗಣ ತುಂಬಿತ್ತು. ಗುರುತು ಹಿಡಿಯಲೂ ಕಷ್ಟವಾಗುವ ಹಲವು ಮುಖಗಳು. ಅಬ್ಬಾ.. ಇಷ್ಟೆಲ್ಲಾ ಕಾರ್ಯಕ್ರಮ ಆಯೋಜಿಸಿದ್ದಾರೆಂದರೆ ನಿಜಕ್ಕೂ ಟೀಚರಿಗೆ ಅಚ್ಚರಿಯಾಯ್ತು. ಇಲಾಖಾ ಕಾರ್ಯಕ್ರಮಕ್ಕಿಂತ ಸಂಪೂರ್ಣ ಭಿನ್ನ. ಒಂದು ರೀತಿಯ 'ಗೆಟ್ ಟುಗೆದರ್' . ವೃತ್ತಿ ಜೀವನದ ಮೊದಲ ಬ್ಯಾಚ್ ವಿದ್ಯಾರ್ಥಿಗಳೂ ಅದರಲ್ಲಿದ್ದರು. ಕೆಲವರ ಪರಿಚಯ ಇದ್ದೇ ಇತ್ತು. ಪ್ರತಿಯೊಬ್ಬರಿಗೂ ತಮ್ಮ ಪ್ರೀತಿಯ  ಶಿಕ್ಷಕಿಗೆ ತಮ್ಮನ್ನು ಪರಿಚಯಿಸಿ ಮಾತನಾಡಿಸುವ ತವಕ. ಸಭಾ ಕಾರ್ಯಕ್ರಮವನ್ನು ಹಿರಿ ವಿದ್ಯಾರ್ಥಿಗಳು ಅಚ್ಚುಕಟ್ಟಾಗಿ ನಿರ್ವಹಿಸಿದರು. ಆ ದಿನದ ಅವರ ಪ್ರೀತಿ ಪೂರ್ವಕ ಕಾಣಿಕೆಗಳು, ಹಾರೈಕೆಗಳಿಂದ ಮನಸು ತುಂಬಿ ಬಂತು. 'ಒಮ್ಮೆ ಹತ್ತನೇ ತರಗತಿಯ ಗಣಿತ ಪಾಠ ಮಾಡಿ ಟೀಚರ್ ನಾವೆಲ್ಲ ಶಿಸ್ತಿನ ಮಕ್ಕಳಂತೆ ಇದೋ ಕೂತೇ ಬಿಟ್ಟೆವು' ಎಂದು ನಗುತ್ತಾ ಎಲ್ಲರೂ ಕೈ ಕಟ್ಟಿ ಕುಳಿತೇ ಬಿಟ್ಟರು. ಇದನ್ನೆಲ್ಲ ನಿರೀಕ್ಷಿಸದ ಟೀಚರ್ ಪೆಚ್ಚಾದರು. ನೋಡಿದರೆ ಇನ್ನೂರೈವತ್ತಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಒಂದೇ ತರಗತಿಯಲ್ಲಿ, ಏಕಕಾಲಕ್ಕೆ.  ಇಷ್ಟು ವರ್ಷ ಕಲಿಸಿದ ಗಣಿತ ಇದೇನೂ ಕಷ್ಟವಲ್ಲ ಎಂದುಕೊಂಡರು. ಕೂಡಲೇ ಅಲ್ಲೊಂದು ಕರಿಹಲಗೆ ಸಿದ್ಧವಾಯಿತು, ಜೊತೆಗೆ ಎರಡು ಚಾಕ್ ಪೀಸ್ ಹಾಗೂ ಒಂದು ಕೋಲನ್ನು ಅವರ ಕೈಗೆ ಕೊಡುತ್ತಾ ನಕ್ಕನು ಸುಮಾರು ನಲುವತೈದರ ಹರೆಯದ ಹಳೆ ವಿದ್ಯಾರ್ಥಿ ಪ್ರಕಾಶ್. ಈಗ ವಿಶ್ವ ವಿದ್ಯಾಲಯದಲ್ಲಿ ಗಣಿತ ಪ್ರೊಫೆಸರ್. ಗಣಿತದಲ್ಲಿ ಪಿಎಚ್ಡಿ ಮಾಡಿದ ಡಾ. ಪ್ರಕಾಶ್ ಎಂದು ತಿಳಿಯಿತು. 

        ಒಂದೈದು ನಿಮಿಷದ ಗಣಿತ ಪಾಠದ ಪ್ರಾತ್ಯಕ್ಷಿಕೆ ನಡೆಯಿತು. ಪ್ರಕಾಶ್ ಹಾಗೂ ಗೆಳೆಯರು ಸಮೀಪಿಸಿದರು. ಆತ ತನ್ನ ಎಡಗೈಯನ್ನು ಮುಂದೆ ಹಿಡಿದು, 'ಎರಡೇ ಎರಡು ಏಟು ಕೊಡಿ ಟೀಚರ್, ಬಾಲ್ಯದ ಆ ನೆನಪುಗಳು ಮತ್ತೆ ಕಣ್ಣ ಮುಂದೆ ಬರಬೇಕಿದೆ' ಎಂದ ಹಠ ಮಾಡಿದ ಪುಟ್ಟ ಮಗುವಿನಂತೆ. ಅವನ ಕೈಗಳಿಗೆ ನಡುಗುವ ಟೀಚರ್ ಕೈಗಳು ಎರಡೇಟು ಕೊಟ್ಟವು. ಸಾರ್ಥಕವಾಯಿತು ಎನ್ನುವಂತೆ ಪ್ರಕಾಶ್ ಸುಮತಿ ಟೀಚರ್ ಕಾಲಿಗೆ ಬಿದ್ದು ನಮಸ್ಕರಿಸಿ ಪ್ರೀತಿಯಿಂದ ತಬ್ಬಿಕೊಂಡ. ಆತನ ಕಣ್ಣಲ್ಲಿ ಆನಂದಬಾಷ್ಪ. 'ಅಂದು ನಿಮ್ಮ ಕೈಯಿಂದ ಬಿದ್ದ ಒಂದೊಂದು ಏಟುಗಳೂ ಕಲ್ಲನ್ನು ಶಿಲ್ಪ ಮಾಡಿದಂತೆ  ಗಣಿತದ ಬಗ್ಗೆ ನನ್ನಲ್ಲಿ ಆಸಕ್ತಿ ಹುಟ್ಟಿಸಿ, ಹಠಕ್ಕೆ ಬಿದ್ದವನಂತೆ ಅದರ ಎಲ್ಲಾ ಸೂತ್ರಗಳ ಬೆನ್ನು ಹತ್ತುತ್ತಿದ್ದೆ. ಅದರ ಪರಿಣಾಮವೇ ಇಂದಿನ ನಾನು'  ಎಂದಾಗ ಟೀಚರ ಕಣ್ಣೂ ಹನಿಗೂಡಿತು. ಅಂದು ನಿಮ್ಮನ್ನು ಗೋಳು ಹೊಯ್ದ ನಮ್ಮಲ್ಲಿ 'ಕ್ಷಮೆ' ಇರಲಿ ಎನ್ನುತ್ತಾ ಪ್ರಕಾಶ್ ಮತ್ತು ಗೆಳೆಯರು  ಕಾಲಿಗೆರಗಿದರು. ಸುಮತಿ ಟೀಚರ್ ತಮ್ಮ ಬಗೆಗೆ ಹೆಮ್ಮೆ ಪಡುತ್ತಾ ಶಿಷ್ಯ ವೃಂದವನ್ನು ಹರಸುತ್ತಲೇ ಇದ್ದರು. 



Creative Writings
ಕ್ಷಮೆ