
Article · June 14, 2026
ಪಠ್ಯಪುಸ್ತಕದ ವ್ಯಥೆ
- ಸಂತೋಷ್ ಕುಮಾರ್ ಎನ್ ಎಸ್ , ನಡುಮನೆ ಸಾಲೆತಡ್ಕ
ನಾನು ಒಂದು ಪಠ್ಯಪುಸ್ತಕ. ಈಗ ಶಾಲೆಯ ಒಂದು ಮೂಲೆಯಲ್ಲಿ ಧೂಳು ತಿನ್ನುತ್ತಾ ಬಿದ್ದಿದ್ದೇನೆ. ಆದರೆ ನನ್ನ ಬದುಕು ಯಾವಾಗಲೂ ಹೀಗಿರಲಿಲ್ಲ.
ಒಂದು ಕಾಲ ಇತ್ತು...
ಜೂನ್ ತಿಂಗಳ ಮಳೆ ಶುರುವಾದರೆ, ನನ್ನ ಮಾಲೀಕ ನನ್ನನ್ನು ಹೊಸ ಪ್ಲಾಸ್ಟಿಕ್ ಕವರ್‌ನಲ್ಲಿ ಸುತ್ತಿ ಬೆಚ್ಚಗೆ ಮಲಗಿಸುತ್ತಿದ್ದ. ಮಳೆ ನೀರಿನ ಒಂದು ಹನಿಯೂ ನನ್ನ ಮೇಲೆ ಬೀಳದಂತೆ ನೋಡಿಕೊಳ್ಳುತ್ತಿದ್ದ. ನನ್ನ ಮಕ್ಕಳಾದ ನೋಟ್ಸ್ ಪುಸ್ತಕಗಳೂ ನನ್ನ ಪಕ್ಕದಲ್ಲೇ ಇರುತ್ತಿದ್ದವು. ನಾವೆಲ್ಲಾ ಒಂದೇ ಕುಟುಂಬ.
ಮನೆಯಲ್ಲಿ ಎಷ್ಟೇ ಪುಂಡು-ಪೋಕರಿ ಮಕ್ಕಳಿದ್ದರೂ, ನನ್ನ ವಿಷಯಕ್ಕೆ ಬಂದರೆ ಎಲ್ಲರೂ ಜಾಗರೂಕರಾಗಿದ್ದರು. "ಪುಸ್ತಕದ ಮೇಲೆ ಕಾಲಿಡಬೇಡ!" "ಹಾಳೆ ಮಡಚಬೇಡ!" "ಅದು ಸರಸ್ವತಿಯ ರೂಪ!" ಎಂದು ಹೇಳುತ್ತಿದ್ದರು. ಯಾರಾದರೂ ತಪ್ಪಾಗಿ ನನ್ನನ್ನು ಕಾಲಿನಿಂದ ಮುಟ್ಟಿದರೆ, ಕೈ ಮುಗಿದು ಕಣ್ಣಿಗೆ ಒತ್ತಿಕೊಂಡು ಕ್ಷಮೆ ಕೇಳುತ್ತಿದ್ದರು. ಆ ಗೌರವ ನೆನಪಾದರೂ ಇಂದಿಗೂ ನನ್ನ ಕಣ್ಣು ತೇವವಾಗುತ್ತದೆ.
ಶಾರದಾ ಪೂಜೆ ಬಂದರೆ ನಾನು ರಾಜನಾಗುತ್ತಿದ್ದೆ. ಅಯ್ಯೋ! ಏನು ಶೃಂಗಾರ! ನನ್ನ ಮೇಲೆ ಅರಿಶಿನ, ಕುಂಕುಮ, ಹೂವುಗಳು. ದೇವರ ಪಕ್ಕದಲ್ಲೇ ನನಗೆ ಸ್ಥಾನ. ಆ ದಿನ ಯಾರೂ ನನ್ನನ್ನು ಓದುವುದಿಲ್ಲ, ಏಕೆಂದರೆ ಆ ದಿನ ನಾನು ಜ್ಞಾನದ ದೇವತೆಯ ಪ್ರತಿನಿಧಿ.
ನನ್ನ ಮಕ್ಕಳಾದ ನೋಟ್ಸ್ ಪುಸ್ತಕಗಳನ್ನು ಹೆಣ್ಣುಮಕ್ಕಳು ಎದೆಗೆ ಹತ್ತಿರ ಹಿಡಿದು ಶಾಲೆಗೆ ತೆಗೆದುಕೊಂಡು ಹೋಗುತ್ತಿದ್ದರು. ಅವರನ್ನು ನೋಡಿದಾಗ ಅಪ್ಪನಾದ ನನಗೆ ಹೆಮ್ಮೆ ಮತ್ತು ಸಂತೋಷದಿಂದ ಕಣ್ಣೀರು ಬರುತ್ತಿತ್ತು. ಹುಡುಗರು ಕೂಡ ಕಡಿಮೆಯೇನೂ ಇರಲಿಲ್ಲ. ನನ್ನ ಮಕ್ಕಳನ್ನು ಬೆರಳಿನ ಮಧ್ಯೆ ಹಿಡಿದು ಬೀಸುತ್ತಾ, ಸ್ನೇಹಿತರ ಜೊತೆ ನಡೆಯುತ್ತಾ ಹೋಗುತ್ತಿದ್ದರು. ಕೆಲವೊಮ್ಮೆ ಅವರಿಗೆ ಬೈಯಬೇಕು ಅನಿಸುತ್ತಿತ್ತು, ಆದರೆ ಅವರ ಪ್ರೀತಿ ಕಂಡು ಮೌನವಾಗುತ್ತಿದ್ದೆ.
ಆದರೆ ಈಗ...
ನನ್ನ ಕುಟುಂಬವೇ ಚೂರುಚೂರಾಗಿದೆ. "ಕ್ಲಾಸ್ ನೋಟ್ಸ್", "ಮನೆ ನೋಟ್ಸ್", "ರಫ್ ನೋಟ್ಸ್", "ಅಸೈನ್‌ಮೆಂಟ್ ಬುಕ್", "ಪ್ರಿಂಟೌಟ್" ಎಂದು ನನ್ನ ಮಕ್ಕಳನ್ನು ತುಂಡು ತುಂಡಾಗಿ ಬೇರ್ಪಡಿಸಿದ್ದಾರೆ.
ನಾನು ಒಂಟಿಯಾಗಿದ್ದೇನೆ. ಶಿಕ್ಷಕರು ನನ್ನ ಹತ್ತು ಪುಟಗಳ ಪಾಠವನ್ನು ಓದಿ, ಅದನ್ನು ಮೂರು ಪ್ಯಾರಾಗಳಾಗಿ ಕತ್ತರಿಸಿ ಮಕ್ಕಳಿಗೆ ಕೊಡುತ್ತಾರೆ. "ಇದನ್ನ ಓದಿ, ಇದರಿಂದಲೇ ಪ್ರಶ್ನೆ ಬರುತ್ತದೆ" ಎಂದು ಹೇಳುತ್ತಾರೆ. ಮಕ್ಕಳು ಕೂಡ ನನ್ನನ್ನು ಮುಟ್ಟುವುದೇ ಇಲ್ಲ. ಆ ಮೂರು ಪ್ಯಾರಾಗಳನ್ನೇ ಕಂಠಪಾಠ ಮಾಡುತ್ತಾರೆ. ಪರೀಕ್ಷೆಯಲ್ಲಿ ಅದೇ ಪ್ರಶ್ನೆ ಬಂದರೆ ಚೆನ್ನಾಗಿ ಬರೆಯುತ್ತಾರೆ. ಆದರೆ ಸ್ವಲ್ಪ ಬೇರೆ ರೀತಿಯ ಪ್ರಶ್ನೆ ಬಂದರೆ ಮುಖ ನೋಡಿಕೊಳ್ಳುತ್ತಾರೆ. ಉತ್ತರ ಗೊತ್ತಾಗುವುದಿಲ್ಲ. ಆಗ "ಗೋವಿಂದಾ...!" ಎಂದು ತಲೆ ಕೆರೆದುಕೊಳ್ಳುತ್ತಾರೆ.
ಒಮ್ಮೆ ಪರೀಕ್ಷೆಯಲ್ಲಿ ನನ್ನ ಪಾಠದ ಮೂಲ ಅರ್ಥವನ್ನು ಕೇಳಿದ ಪ್ರಶ್ನೆ ಬಂತು. ಮಕ್ಕಳಲ್ಲಿ ಹಲವರು ಉತ್ತರ ಬರೆಯಲಿಲ್ಲ. ಏಕೆಂದರೆ ಅವರಿಗೆ ಮೂರು ಪ್ಯಾರಾಗಳು ಮಾತ್ರ ಗೊತ್ತು; ನನ್ನ ಉಳಿದ ಏಳು ಪುಟಗಳ ಜ್ಞಾನ ಗೊತ್ತಿರಲಿಲ್ಲ.
ಆ ದಿನ ನನಗೆ ತುಂಬಾ ಬೇಸರವಾಯಿತು. ನಾನು ಯೋಚಿಸಿದೆ: "ನನ್ನನ್ನು ಓದದೇ ಕೇವಲ ಸಾರಾಂಶವನ್ನು ಓದಿದರೆ ಅಂಕ ಸಿಗಬಹುದು, ಆದರೆ ಜ್ಞಾನ ಸಿಗುವುದಿಲ್ಲ. ಪ್ರಶ್ನೆ ಬದಲಾಗಬಹುದು, ಆದರೆ ವಿಷಯದ ಅರಿವು ಇದ್ದರೆ ಉತ್ತರ ಯಾವಾಗಲೂ ಸಿಗುತ್ತದೆ."
ಇಂದು ನನ್ನ ಅಳಲು ಒಂದೇ—ವಿದ್ಯಾರ್ಥಿಗಳು ನನ್ನನ್ನು ಮತ್ತೆ ತೆರೆದು ಓದಲಿ. ಶಿಕ್ಷಕರು ನನ್ನ ಸಂಪೂರ್ಣ ವಿಷಯವನ್ನು ತಿಳಿಸಲಿ. ಏಕೆಂದರೆ ಶಿಕ್ಷಣದ ಗುರಿ ಕೇವಲ ಅಂಕಗಳಲ್ಲ, ಜ್ಞಾನ ಮತ್ತು ಚಿಂತನಾ ಶಕ್ತಿಯಾಗಿದೆ.
ಹಿಂದೆ ಸರ್ಕಾರಕ್ಕೂ ಸ್ವಲ್ಪ ಬುದ್ಧಿ ಇತ್ತು. ಐದು-ಆರು ವರ್ಷಕ್ಕೊಮ್ಮೆ ಮಾತ್ರ ನನ್ನನ್ನು ಬದಲಿಸುತ್ತಿದ್ದರು. ಮೊದಲನೇ ಅಣ್ಣ ಓದಿದ ನಾನೇ, ಎರಡನೇ ತಮ್ಮನಿಗೂ, ಮೂರನೇ ತಂಗಿಗೂ ಜ್ಞಾನ ನೀಡುತ್ತಿದ್ದೆ. ನನ್ನ ಪುಟಗಳು ಹಳದಿಯಾಗುತ್ತಿದ್ದವು, ಆದರೆ ನನ್ನೊಳಗಿನ ಜ್ಞಾನ ಹೊಸದಾಗಿಯೇ ಇರುತ್ತಿತ್ತು.
ಇಂದು ವರ್ಷ ಮುಗಿಯುವ ಮೊದಲೇ ನನ್ನ ಹೊಸ ಆವೃತ್ತಿ ಬರುತ್ತದೆ. ನಾನು ಹಳೆಯವನಾಗಿ ಮೂಲೆ ಸೇರುತ್ತೇನೆ. ಶಾಲೆ-ಕಾಲೇಜುಗಳೂ ಬದಲಾಗಿವೆ. ನನ್ನನ್ನು ಗ್ರಂಥಾಲಯದ ಶೆಲ್ಫ್‌ನಲ್ಲಿ ಅಥವಾ ಬ್ಯಾಗಿನ ತಳದಲ್ಲಿ ಬಿಸಾಕಿದ್ದಾರೆ. ಇಂದು ಮಕ್ಕಳು ನನ್ನನ್ನು ನೋಡುತ್ತಲೇ ಇಲ್ಲ. ನನ್ನ ಪುಟಗಳ ಸುವಾಸನೆ ಗೊತ್ತಿಲ್ಲ. ನನ್ನ ಚಿತ್ರಗಳು ಗೊತ್ತಿಲ್ಲ. ನನ್ನ ಕಥೆಗಳು ಗೊತ್ತಿಲ್ಲ. ಮೊಬೈಲ್ ಪರದೆ ಅವರ ಗುರು. ಲ್ಯಾಪ್‌ಟಾಪ್ ಅವರ ತರಗತಿ. ಇಂಟರ್ನೆಟ್ ಅವರ ಪುಸ್ತಕ. ನಾನು ಕೇವಲ PDF ಆಗಿ ಉಳಿದಿದ್ದೇನೆ.
ಕೆಲವೊಮ್ಮೆ ಶಾಲೆಯ ಮೂಲೆಯಲ್ಲಿ ಬಿದ್ದಿರುವ ನಾನು, ಮೊಬೈಲ್‌ನಲ್ಲಿ ವಿಡಿಯೋ ನೋಡುತ್ತಿರುವ ಮಕ್ಕಳನ್ನು ನೋಡಿ ಯೋಚಿಸುತ್ತೇನೆ:
"ನಾನು ಅಂಕಗಳನ್ನು ಮಾತ್ರ ಕೊಡಲಿಲ್ಲ, ಚಿಂತನೆ ಕಲಿಸಿದ್ದೆ. ನಾನು ಉತ್ತರಗಳನ್ನು ಮಾತ್ರ ಕೊಡಲಿಲ್ಲ, ಪ್ರಶ್ನೆ ಕೇಳುವುದನ್ನೂ ಕಲಿಸಿದ್ದೆ."
ಆದರೆ ನನ್ನ ಧ್ವನಿ ಕೇಳುವವರು ಯಾರೂ ಇಲ್ಲ. ಧೂಳು ತುಂಬಿದ ನನ್ನ ಪುಟಗಳು ಇನ್ನೂ ಕಾಯುತ್ತಿವೆ...ಒಬ್ಬ ಮಗು ಬಂದು ನನ್ನನ್ನು ತೆರೆದು,"ಅಯ್ಯೋ! ಇದರಲ್ಲಿ ಇಷ್ಟು ವಿಷಯ ಇದೆಯಾ?" ಎಂದು ಅಚ್ಚರಿಪಡಲಿ ಎಂದು .....
ನಾನು ಕೇವಲ ಕಾಗದದ ಹಾಳೆಗಳ ಗುಚ್ಛವಲ್ಲ. ನನ್ನೊಳಗೆ ಇತಿಹಾಸ ಇದೆ, ವಿಜ್ಞಾನ ಇದೆ, ಸಾಹಿತ್ಯ ಇದೆ, ಜಗತ್ತಿನ ಅನುಭವ ಇದೆ. ನನ್ನನ್ನು ಓದಿದರೆ ಜಗತ್ತನ್ನು ಓದಿದಂತೆ, ನನ್ನನ್ನು ಅರ್ಥ ಮಾಡಿಕೊಂಡರೆ ಜೀವನವನ್ನು ಅರ್ಥ ಮಾಡಿಕೊಂಡಂತೆ. ಆದರೆ ನನ್ನನ್ನು ಮೂಲೆಗುಂಪು ಮಾಡಿದರೆ ಅದು ಕೇವಲ ಒಂದು ಪುಸ್ತಕವನ್ನು ಕಡೆಗಣಿಸಿದಂತಲ್ಲ; ಜ್ಞಾನದ ಸಂಪತ್ತನ್ನೇ ಮೂಲೆಗುಂಪು ಮಾಡಿದಂತಾಗುತ್ತದೆ. ಪುಸ್ತಕದ ಧೂಳು ತೊಳೆದರೆ ಜ್ಞಾನ ಬೆಳಗುತ್ತದೆ, ಪುಸ್ತಕವನ್ನು ಮರೆತರೆ ಚಿಂತನೆಯ ಬೆಳಕು ಮಂಕಾಗುತ್ತದೆ. ಆದ್ದರಿಂದ ನನ್ನನ್ನು ಮತ್ತೆ ಕೈಗೆತ್ತಿಕೊಳ್ಳಿ; ಏಕೆಂದರೆ ನಾನು ಕೇವಲ ಪುಸ್ತಕವಲ್ಲ, ತಲೆಮಾರುಗಳನ್ನು ಬೆಳಗಿಸಿದ ಜ್ಞಾನದ ದೀಪ...!
📚📚📚📚📚
Creative WritingsKids
