
News · May 21, 2025
ಕರಾಡ ವ್ಯಕ್ತಿತ್ವ ವಿಕಸನ ಸನಿವಾಸ ಶಿಬಿರ - 2025
ಮಕ್ಕಳನ್ನು ಮೊಬೈಲ್ ಟಿವಿ ಲೋಕದಿಂದ ಕ್ಷಣ ಹೊತ್ತು ದೂರ ಮಾಡಿ ಪಾಲಕರೂ ಇದರೊಂದಿಗೆ ಸೇರಿಕೊಂಡು ಅಡ್ಕತೊಟ್ಟಿಯ ಹಚ್ಚಹಸುರಿನ ಸುಂದರ, ಪ್ರಶಾಂತವಾದ ಪರಿಸರದಲ್ಲಿ ಮೂರು ದಿನಗಳಲ್ಲಿ ಸುಮಾರು 100ರಷ್ಟು ಮಂದಿ ಕರಾಡ ಬಂಧುಗಳು ಆಗಮಿಸಿ, ಇದರಲ್ಲಿ ಒಂದೇ ಮನೆಯವರಂತೆ ಪಾಲ್ಗೊಂಡು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ವರದಿ ಕೃಪೆ : ಶ್ರೀಮತಿ ಜಯಶ್ರೀ ಭಟ್ ಮೈಕಾನ. ಛಾಯಾಚಿತ್ರಗಳು : ಶ್ರೀಮತಿ ವಿದ್ಯಾ ಎಡಮಲೆ ಹಾಗೂ ಸಹ ಸಂಯೋಜಕರು
ಹಳೆಬೇರು ಹೊಸಚಿಗುರು ಕೂಡಿರಲು ಮರಸೊಗಸು ಎಂಬುದರ ಅರ್ಥವು ಪ್ರತ್ಯಕ್ಷ ದರ್ಶಿಗಳಿಗೆ ಮನನವಾಗುವಂತಿದ್ದ ಈ ಶಿಬಿರ ನಿಜಕ್ಕೂ ಇಂದಿನ ಆದರ್ಶಕ್ಕೆ, ಅವಶ್ಯಕಗತೆಗಳಿಗೆ ಹಿಡಿದ ಕೈಗನ್ನಡಿಯಂತೆ ಎಂಬುದು ಹಲವರ ಅಭಿಪ್ರಾಯ.
ಕರಾಡ ಬ್ರಾಹ್ಮಣ ಅಭ್ಯುದಯ ಸಂಘ ಮತ್ತು ಕರಾಡ ಮಹಿಳಾ ವೇದಿಕೆ ಇವುಗಳ ಜಂಟಿ ಆಶ್ರಯದಲ್ಲಿ ಹಲವು ಸಮಾನ ಮನಸ್ಕ ಸುಮನಸರಿಂದ ಸುಸಂಸ್ಕೃತ ಬಂಧುಗಳ ಅಡ್ಕತೊಟ್ಟಿ ಮನೆಯಲ್ಲಿ ಇದೇ ಮೇ ತಿಂಗಳ 14ರಿಂದ 16ನೇ ತಾರೀಖಿನವರೆಗೆ ನಡೆಯಿತು.
ಮೂರು ದಿನದ ಶಿಬಿರದಲ್ಲಿ ಮಕ್ಕಳಿಗೆ ನೈತಿಕ, ಮೌಲಿಕ, ಸಾಮಾಜಿಕ,ಸಾಂಸ್ಕೃತಿಕ, ಬೌದ್ಧಿಕ, ಶಾರೀರಿಕ ಮಟ್ಟದ ಉತ್ಕೃಷ್ಟತೆಯ ಚಿಂತನೆಯನ್ನು ಉದ್ದೀಪನೆಗೊಳಿಸುವ ಶುಭ ಆಶಯಗಳೊಂದಿಗೆ ಆಯೋಜಿಸಿದ ಈ ಕಾರ್ಯಾಗಾರವು ಶ್ರೀಯುತ ಕಶಕೋಡಿ ಸೂರ್ಯನಾರಾಯಣ ಭಟ್ಟರ ಪ್ರಾರ್ಥನೆಯೊಂದಿಗೆ ವಿದ್ಧ್ಯುಕ್ತವಾಗಿ ಆರಂಭವಾಯಿತು. ಪ್ರಥಮ ಉಪನಿಷದ್ವಾಕ್ಯವಾದ ಮಾತೃದೇವೋ ಭವ ಎಂಬುದನ್ನು ಆಧಾರವಾಗಿಟ್ಟುಕೊಂಡು ಮಾತೃಪೂಜನದ ಔಚಿತ್ಯವನ್ನು ಶಂಕರಾಚಾರ್ಯರ ಮಾತೃಪಂಚಕದ ಅರ್ಥವಿವರಣೆಗಳೊಂದಿಗೆ ಪ್ರತಿಯೊಬ್ಬ ಶಿಬಿರಾರ್ಥಿಗೂ ಹೃದ್ಯವಾಗುವಂತೆ ನಡೆಸಿದಂತಹ ಕಶೆಕೋಡಿ ಸೂರ್ಯನಾರಾಯಣರು ತಮ್ಮ ಅನುಭವದ ಪರಿಪಾಕವನ್ನು ಅಲ್ಲಿದ್ದ ಎಲ್ಲರಿಗೂ ಉಣ ಬಡಿಸಿದರು.
ಧಾರ್ಮಿಕ ಬೆಳವಣಿಗೆಗೆ ಭಜನೆ, ಶ್ಲೋಕ ಪಠಣ, ಭಗವದ್ಗೀತಾ ವಾಚನ, ಮೌಲ್ಯಾಧಾರಿತ ಶಿಕ್ಷಣವಾದ ಯೋಗ, ಪಂಚಾಂಗ ನೋಡುವುದು, ಅದನ್ನು ಅರಿಯುವುದು, ದೇಶಭಕ್ತಿ ಗೀತಗಾಯನ, ಸಾಂಪ್ರದಾಯಿಕವಾದ ಮಡಲು ಹೆಣೆಯುವುದು, ಊದುಬತ್ತಿ ತಯಾರಿ, ವಿಭೂತಿ ತಯಾರಿ, ಹಾಲು ಕರೆಯುವುದು, ಹಿಡಿಸೂಡಿ ತಯಾರಿಸುವುದು, ಕಾಲೊರಸು ತಯಾರಿ, ಧಾನ್ಯಗಳ ಪರಿಚಯ, ದೈಹಿಕ ಕ್ರೀಡೆಗಳು,ಚಿತ್ರಕಲೆ, ಮರೆಯಾಗುತ್ತಿರುವ ಕ್ರೀಡೆಗಳು ಮತ್ತು ಕಸೂತಿ ಕೆಲಸಗಳು ಹಾಗೂ ಸಾಹಿತ್ಯಿಕವಾಗಿ ಭಾವಾಭಿವ್ಯಕ್ತಿಗೆ ಕವನ ರಚನೆ ಇವೇ ಮೊದಲಾದ ವಿಷಯಗಳನ್ನು ಶಿಬಿರದಲ್ಲಿ ಕಲಿಸಲಾಯಿತು. ಹಲವಾರು ಹಿರಿಯರು ಸೇರಿದ ಸಂದರ್ಭದಲ್ಲಿ, ದೊರಕಿದ ನೈತಿಕ - ಸಂಸ್ಕಾರ ಶಿಕ್ಷಣವನ್ನು ಮಕ್ಕಳಲ್ಲಿ ಉಳಿಸಿ ಬೆಳೆಸುವಲ್ಲಿ ಹಿರಿಯರ ಪಾತ್ರ ಹಾಗೂ ಜವಾಬ್ದಾರಿಯ ಕುರಿತಾಗಿ ಚಿಂತನ ಮಂಥನ ನಡೆಸಲಾಯಿತು.
ಕಾಲ್ದಾರಿಯಾಗಿ ಪುತ್ತಿಗೆ ದೇವಸ್ಥಾನಕ್ಕೆ ತೆರಳಿ ಭಜನೆಯನ್ನು ಮಾಡಿ ಹಿಂತಿರುಗಿದ್ದು ಒಂದು ಅದ್ಭುತವಾದಂತಹ ಮನರಂಜನೆಯಾಗಿತ್ತು. ಇದಲ್ಲದೆ ವಿವಿಧ ರೀತಿಯ ಆಟೋಟಗಳು ಶಿಬಿರಾರ್ಥಿಗಳ ಆನಂದವನ್ನು ಹೆಚ್ಚಿಸಿತು. ಇದರೊಂದಿಗೆ ನಡೆದಂತಹ ಮೊಸರು ಕುಡಿಕೆ ಹಾಗೂ ಹೊಳೆಯ ಹೊಯ್ಗೆಯಲ್ಲಿ ನಡೆಸಿದಂತಹ ಹಗ್ಗ ಜಗ್ಗಾಟ ಆಬಾಲ ವೃದ್ಧರ ಉತ್ಸಾಹಕ್ಕೆ ಕಾರಣವಾಯಿತು.
ಒಟ್ಟಿನಲ್ಲಿ ಹೇಳುವುದಾದರೆ ಮಕ್ಕಳಿಗೆ ಇದೊಂದು ಕುತೂಹಲಕಾರಿಯಾದಂತಹ ಶಿಬಿರವಾದರೆ ಹಿರಿಯರಿಗೆ ಗತಕಾಲದ ವೈಭವವನ್ನು ಇನ್ನೊಮ್ಮೆ ನೋಡಿ ಅನುಭವಿಸಿದಂತಾಯಿತು. ಸ್ಥಾನೀಯ ಹಾಗೂ ಸಮಾಜದ ಅನೇಕ ಮಕ್ಕಳು ಪಾಲ್ಗೊಂಡು ಇದರ ಪ್ರಯೋಜನ ಪಡೆದಿದ್ದರು.
ಮಕ್ಕಳನ್ನು ಮೊಬೈಲ್ ಟಿವಿ ಲೋಕದಿಂದ ಕ್ಷಣ ಹೊತ್ತು ದೂರ ಮಾಡಿ ಪಾಲಕರೂ ಇದರೊಂದಿಗೆ ಸೇರಿಕೊಂಡು ಅಡ್ಕತೊಟ್ಟಿಯ ಹಚ್ಚಹಸುರಿನ ಸುಂದರ, ಪ್ರಶಾಂತವಾದ ಪರಿಸರದಲ್ಲಿ ಮೂರು ದಿನಗಳಲ್ಲಿ ಸುಮಾರು 100ರಷ್ಟು ಮಂದಿ ಕರಾಡ ಬಂಧುಗಳು ಆಗಮಿಸಿ, ಇದರಲ್ಲಿ ಒಂದೇ ಮನೆಯವರಂತೆ ಪಾಲ್ಗೊಂಡು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಅದರಲ್ಲೂ ಅಡ್ಕತೊಟ್ಟಿಯ ಮನೆಯವರ ಆತಿಥ್ಯವಂತೂ ಅವಿಸ್ಮರಣೀಯ. ಸಣ್ಣ ಕೊರತೆಯೂ ಆಗದಂತೆ ನೋಡಿಕೊಳ್ಳುವ ಈ ಮನೆಯವರಿಗೆ ನಮ್ಮ ವೇದಿಕೆ ನಿಜಕ್ಕೂ ಆಭಾರಿ. ಮುಂದೆಯೂ ಇಂತಹ ಸಮಾಜ ಪರ ಕಾರ್ಯಕ್ರಮಗಳನ್ನು ಆಯೋಜಿಸುವ ಮನಸ್ಸಿನ ಕರಾಡ ಮಹಿಳಾ ವೇದಿಕೆಯ ಸುಮನಸರಿಗೆ ಎಲ್ಲ ಕರಾಡ ಬಂಧುಗಳೂ ತಮ್ಮ ತಮ್ಮ ಮನೆಯ ಮಕ್ಕಳನ್ನು ಕಳುಹಿಸಿಕೊಟ್ಟು ಸಹಕರಿಸಿದಲ್ಲಿ ಮಕ್ಕಳಲ್ಲಿ ಸಾಂಘಿಕಶಕ್ತಿಯು ಬೆಳೆದು ನಮ್ಮ ಸಂಸ್ಕೃತಿಯನ್ನು ಉಳಿಸುವ ಕಾರ್ಯಗಳು ಮುಂದುವರಿಯುವ ಸದಾಶಯಗಳು ನಮ್ಮೆಲ್ಲರದು.
