
Article · August 17, 2026
ಬಂದುದಾಯಿತು ಶ್ರಾವಣ.
By ಜಯಶ್ರೀ ಕೆ.ಆರ್ ಭಟ್. ಪಳ್ಳತಡ್ಕ .
- ಜಯಶ್ರೀ ಕೆ ಆರ್ ಭಟ್ ಪಳ್ಳತಡ್ಕ
ಶ್ರಾವಣ ಮತ್ತು ತದನಂತರದ ಎರಡು ಮೂರು ಮಾಸಗಳಲ್ಲಿ ಹಿಂದೂಗಳ ಹಬ್ಬಗಳು ಹೆಚ್ಚು. ಶ್ರಾವಣ ಮಾಸದ ಕುರಿತು ನಾಲ್ಕು ಸಾಲುಗಳು.
ಬಂತು ಶ್ರಾವಣ ಬಂತು ಶ್ರಾವಣ
ಬಂತು ಶ್ರಾವಣ ಶುಭದಿನ /
ಎಂದಿನಂತೆಯೆ ಬಂತು ಶ್ರಾವಣ
ಕೂಡಿ ಹಬ್ಬವು ಹರಿದಿನ/
ಪ್ರಕೃತಿಯೋ ಸುರಸುಂದರಿ,
ನವ ಯುವತಿಯು, ಚಿರನೂತನ /
ಅಷ್ಟಮಿಯ ದಿನಕವತರಿಸಿ
ಬಂದವನು ಆ ನಾರಾಯಣ /
ಇಷ್ಟವಾಗಿಹ ಸಿಹಿಯು ತಿಂಡೀ
ಸಿಹಿಯು ಸವಿಸವಿ ಹೂರಣಾ /
ಶುಭದ ಮಾಸಾ ಶುಭದಿನಾಶುಭ
ಘಳಿಗೆ ಇರುವಾ ಕಾರಣಾ /
ಮನೆಬಾಗಿಲಿಗೆ ರಂಗೋಲಿ ಇರಿಸಿ
ಕಟ್ಟಿ ತಳಿರು ತೋರಣಾ /
ಶೃಂಗರಿಸಿ ಆ ದೇವರಿಗೆ
ಪೂಜೆಯನು ಮಾಡುವ ಲಕ್ಷಣಾ /
ನಾಗಪಂಚಮಿ ನಾಳೆಯಾ ದಿನ
ನಾಗ ದೋಷವ ಕಳೆಯಲಿ
ದೇಹದಾರೋಗ್ಯವು ಸುಧಾರಿಸಿ
ಮನ ಸಮೃದ್ಧಿಯ ಪಡೆಯಲೀ /
ಹೊಸತು ಜನಿವಾರವನು ಧರಿಸುವ
ಶುಭದಿನವು ಆ ಶ್ರಾವಣಾ /
ಅರಶಿಣದೊಳದ್ದಿರುವ ನೂಲೂ
ಯಜ್ಞೋಪವೀತದ ಧಾರಣ /
ಮನದ ಶಕ್ತಿಯ ದ್ವಿಗುಣಗೊಳಿಸುವ
ಇದನು ಧರಿಸುವ ಬ್ರಾಹ್ಮಣ /
ನಿತ್ಯಸಂಧ್ಯಾವಂದನೆಯಲಿ
ತೊಡಗಿ ಶುದ್ಧವು ಆ ಮನ/
ಸಿರಿಯು ಸೌಭಾಗ್ಯವನು ತರುವಾ
ವರಮಹಾಲಕ್ಷ್ಮೀ ವ್ರತ /
ಇದನು ಮಾಡಲು ಮಹಿಳೆ ಮಾಡಿದ
ಪೂರ್ವಜನ್ಮದ ಸುಕೃತ /
ಶ್ರಾವಣವು ಕಳೆದಾಗಲೂ
ಆಮೇಲೆ ಇರುವುದು ಭಾದ್ರಪದ,
ಭಕ್ತರಿಷ್ಟಾರ್ಥಗಳು ಈಡೇರುತಲಿ
ಸೌಖ್ಯವು ಸಂಪದ/
ಲಯಕೆ ಕಾರಣಕರ್ತನಾಗಿಹ
ಶಿವನಿಗೂ ಪ್ರಿಯ ಮಾಸವೂ/
ಗಣಪ ,ಪಾರ್ವತಿ ,ಶಿವನ ಸಹಿತ
ತದಿಗೆ, ಚೌತಿಯ ಪೂಜೆಯು /
ದೇಶ, ಭಾಷೆಯು ಸದೃಢವಾಗಲಿ
ಶುಭ್ರವಾಗಲಿ ಈ ಮನ, /
ಎಲ್ಲ ಕೆಡುಕನು ದೂರ ಮಾಡೀ
ಶುಭವ ತರಲೀ ಶ್ರಾವಣ /
ಜನರ ಮನೆಮನ ಬಂಧದೊಳಗೆ
ಮೂಡಿಬರಲಿ ಸುಧಾರಣ /
ಶುಭದ ಸಂಸ್ಕಾರಗಳು,ಸಂಸ್ಕೃತಿ
ಎಲ್ಲದಕ್ಕೂ ಕಾರಣ /.
