
Article · November 13, 2026
ಗೆಳೆಯರಿರಲಿ ಈ ಬಾಳಿನಲಿ
By ದಿವ್ಯಾ ಶಿರಂತಡ್ಕ
ದಿವ್ಯಾ ಬಿ ಶಿರಂತಡ್ಕ
ಕವಿ ಬಿ. ಆರ್ ಲಕ್ಷ್ಮಣ್ ರಾವ್ ಅವರ ಕವನವೊಂದು ಈ ಕೆಳಗಿನ ಸಾಲುಗಳಿಂದ ಪ್ರಾರಂಭವಾಗುತ್ತದೆ ...
ಗೆಳೆಯರಿರಲಿ ಈ ಬಾಳಿನಲಿ,
ಗೆಳೆಯರಿರಲಿ ಕೊನೆ ತನಕ;
ಹಗುರ ಹೃದಯ, ತಿಳಿ ಮನಸಿರಲಿ,
ನೀಗಿ ಎಲ್ಲ ತವಕ...
ಹೌದು, ಸಂಘಜೀವಿಯಾದ ನಮಗೆಲ್ಲ ಬೆಳೆಯುತ್ತಲೇ ಗೆಳೆಯರ ಬಳಗವೂ ವಿಸ್ತಾರವಾಗುತ್ತದೆ. ನಮ್ಮ ಸಂತೋಷವನ್ನು ಮನಸಾ ಆಸ್ವಾದಿಸಿ ದುಃಖದಲ್ಲಿ ಸಹಭಾಗಿಯಾಗುವ ಜೀವಗಳೇ ಗೆಳೆಯ/ ಗೆಳತಿಯರು. ಅಪ್ಪ ಅಮ್ಮನನ್ನು ಬಿಟ್ಟು ಒಲ್ಲದ ಮನಸ್ಸಿನಿಂದ ಶಾಲೆಗೆ ಸೇರುವ ಮಗು ಒಂದೆರಡು ದಿನದಲ್ಲೇ ಹೊಸ ವಾತಾವರಣಕ್ಕೆ ಹೊಂದಿಕೊಳ್ಳುವುದು ಇದೇ ಗೆಳೆತನದಿಂದ. ಒಂದು ನಿಷ್ಕಲ್ಮಶ ನಗು, ಮಾತು, ಕೈಹಿಡಿದು ಜೊತೆಯಾಗಿ ಹೋಗುವ ಬೆಚ್ಚನೆಯ ಭಾವ, ಒಂದೇ ಅಭಿರುಚಿ ಹೀಗೆ ಒಂದೊಂದೇ ಕಾರಣದಿಂದ ಹತ್ತಿರವಾಗುತ್ತೇವೆ. ಗೆಳೆತನ ಹುಟ್ಟುತ್ತದೆ. ಒಂದೇ ಕಡೆ ಓದುವ, ವಾರಗೆಯವರು, ಸಮಾನ ವಯಸ್ಕರ ಸಮಾನ ಮಸ್ಕರ ನಡುವೆ ಗೆಳೆತನ ಹುಟ್ಟುವುದು ತೀರಾ ಸಾಮಾನ್ಯ. ಮೊದಮೊದಲಿಗೆ ಇರುವ ಅಂತರ, ಸಂಕೋಚ ಸ್ವಭಾವ ದಿನ ಕಳೆಯುತ್ತಲೇ ಮಾಯವಾಗಿ ಅತ್ಯಂತ ಆತ್ಮೀಯ ಭಾವ ಮೂಡುತ್ತದೆ. ಮನೆಯಲ್ಲಿ ಹೆತ್ತವರ, ಒಡಹುಟ್ಟಿದವರ ಮುಂದೆ ಹೇಳಲಾಗದುದನ್ನು ಗೆಳೆಯರ ಜೊತೆ ಹಂಚಿಕೊಳ್ಳಲು ಸಾಧ್ಯವಾಗುತ್ತದೆ.
ಸಮಾನ ವಯಸ್ಕರಲ್ಲದೆ ವಯಸ್ಸಿನಲ್ಲಿ ಅಜಗಜಾಂತರ ವ್ಯತ್ಯಾಸವಿದ್ದರೂ ಕೆಲವೊಮ್ಮೆ ಸ್ನೇಹ ಬೆಳೆಯುತ್ತದೆ. ಕೆಲವರಿಗೆ ಸೀಮಿತ ಸಂಖ್ಯೆಯ ಗೆಳೆಯರಿದ್ದರೆ, ಕೆಲವರ ಗೆಳೆಯರ ಬಳಗವು ಬಲು ದೊಡ್ಡದಿರುತ್ತದೆ. ಶಾಲೆಯಲ್ಲಿದ್ದ ಗೆಳೆಯರು ಕಾಲೇಜಿಗೆ ಸೇರಿದಾಗ ಮರೆತು ಹೋದಂತೆ, ಉದ್ಯೋಗಕ್ಕೆ ಸೇರಿದಾಗ ಕಾಲೇಜಿನ ಗೆಳೆಯರು ಸದ್ದಿಲ್ಲದೆ ಮನದಿಂದ ಮರೆಯಾಗುವುದು ಕೂಡ ಸಾಮಾನ್ಯ.
ಜೊತೆಯಲ್ಲಿದ್ದಾಗಲಷ್ಟೇ ಇರುವ ಗೆಳೆತನವನ್ನು 'ಸೀಮಿತ ಅವಧಿಯ ಗೆಳೆತನ' ಎನ್ನಬಹುದೇನೋ. ಆದರೆ ಕೆಲವು ಮಂದಿ ದೀರ್ಘಕಾಲದವರೆಗೆ ಅಥವಾ ಜೀವನ ಪರ್ಯಂತ ಗೆಳೆತನವನ್ನು ಹಸಿರಾಗಿರಿಸುತ್ತಲೇ ಇರುತ್ತಾರೆ. ಇಂಥ ಗೆಳೆತನ ಸತ್ಯ, ನಿಷ್ಠೆ, ನಿಸ್ವಾರ್ಥತೆ, ಅದ್ಭುತ ಬಾಂಧವ್ಯದ ತಳಹದಿಯಲ್ಲಿ ಕೆಲಸ ಮಾಡುತ್ತದೆ.
ಎರಡು ಮೂರು ದಶಕಗಳ ಹಿಂದೆ ಗೆಳೆತನ ಹುಡುಗಿಯರ ಮಧ್ಯೆ ಅಥವಾ ಹುಡುಗರ ಮಧ್ಯೆ ಮಾತ್ರ ಸೀಮಿತ ಇರುತ್ತಿತ್ತು. 'ಈತ ತನ್ನ ಗೆಳೆಯ' ಎಂದು ಯುವತಿಯೊಬ್ಬಳು ಹೇಳಿದರೆ ಅದು ಅಪಾರ್ಥಕ್ಕೆ ದಾರಿ ಮಾಡಿಕೊಡುತ್ತಿತ್ತು. ಜನರು ಇಲ್ಲಸಲ್ಲದ ಮಾತುಗಳನ್ನಾಡಿ 'ಹೊಸ ಸಂಬಂಧ' ಸೃಷ್ಟಿಸುತ್ತಿದ್ದರು. ಆದರೆ ಇಂದು ಕಾಲ ಬದಲಾಗಿದೆ. ನೈಜ ಗೆಳೆತನವನ್ನು ಒಪ್ಪುವವರ ಸಂಖ್ಯೆಯೂ ಬಹಳಷ್ಟು ಹೆಚ್ಚಾಗಿದೆ.
ಒಂದೇ ಕ್ಷೇತ್ರದಲ್ಲಿ ತೊಡಗಿರುವ ಕಲಾವಿದರು, ವ್ಯಾಪಾರಿಗಳು, ವೃತ್ತಿಪರರು ತಮ್ಮ ವೃತ್ತಿ ವೈಷಮ್ಯವನ್ನು ಪಕ್ಕಕ್ಕಿಟ್ಟು ಗೆಳೆಯರಾದಲ್ಲಿ ಪರಸ್ಪರ ಒಳ್ಳೆಯ ಮಾತು, ಹಾರೈಕೆ ಅದ್ಭುತ ಪರಿಣಾಮವನ್ನು ಉಂಟುಮಾಡುತ್ತದೆ. ಪುರಾಣದಲ್ಲಿ ಕೃಷ್ಣ ಸುಧಾಮರು ಒಳ್ಳೆಯ ಗೆಳೆತನಕ್ಕೆ ತಾಜಾ ಉದಾಹರಣೆಯಾದರೆ, ದ್ರುಪದ-ದ್ರೋಣರು ನೈಜ ಗೆಳೆತನಕ್ಕೊಂದು ಕಪ್ಪು ಚುಕ್ಕೆಯಾಗಿ ನಿಲ್ಲುತ್ತಾರೆ.
ನಾವೇನಾದರೂ ಸಾಧನೆ ಮಾಡಿದಲ್ಲಿ ನಿಸ್ವಾರ್ಥತೆಯಿಂದ ನಮ್ಮ ಬೆನ್ನು ತಟ್ಟುವವರೆಂದರೆ ಗೆಳೆಯರು. ಕುಗ್ಗಿದಾಗ ಧೈರ್ಯದ ಮಾತುಗಳನ್ನಾಡುವವರೂ ಅವರೇ.
ರಕ್ತ ಸಂಬಂಧಿಕರಲ್ಲಿ ಅನೇಕರು ಒಳಿತಾದಾಗ ಹೊಟ್ಟೆಕಿಚ್ಚು ಪಟ್ಟು, ಸತ್ತಾಗ ಸೂತಕವನಷ್ಟೇ ಆಚರಿಸುತ್ತಾರೆ.
ಸಂಸಾರ ಸಾಗರಕ್ಕೆ ಹೊಕ್ಕ ನಂತರ ಹಲವರು ಅದಕ್ಕಷ್ಟೇ ಪ್ರಾಮುಖ್ಯತೆಯನ್ನು ನೀಡಿ ಗೆಳೆತನವನ್ನು ಮರೆತುಬಿಡುತ್ತಾರೆ. ಆದರೆ ವಯಸ್ಸಾದಂತೆ ಮಕ್ಕಳೆಲ್ಲ ಬೆಳೆದು ಅವರ ಲೋಕವೇ ಬೇರೆಯಾಗಿ ಒಂಟಿತನ ಕಾಡಲಾರಂಭಿಸುತ್ತದೆ. ಅದೇ ಮುಂದೆ ಖಿನ್ನತೆಗೂ ಕಾರಣವಾಗುತ್ತದೆ. ವಯಸ್ಸು ಹೆಚ್ಚಾದಂತೆ ನಮ್ಮನ್ನು ಅರ್ಥ ಮಾಡಿಕೊಳ್ಳುವ ಗೆಳೆಯರಿರುವುದು ತುಂಬಾ ಅವಶ್ಯಕ. ಮಕ್ಕಳೊಂದಿಗೆ ಅವರ ವೇಗಕ್ಕೆ ಹೋಗಲು 'ಜನರೇಶನ್ ಗ್ಯಾಪ್' ಅಡ್ಡ ಬಂದಾಗ ಸಮಾನ ವಯಸ್ಕ, ಸಮಾನ ಮನಸ್ಕ ಗೆಳೆಯರೇ ಸಂಜೀವಿನಿ ಆಗಿರುತ್ತಾರೆ. ಕವಿತೆಯ ಕೊನೆಯಲ್ಲಿ ಕವಿಗಳು
ಶ್ರಮದ ಸಾಧನೆಗೆ ಬೆನ್ನ ಚಪ್ಪರಿಸಲು,
ತೊಡಿಸಲು ಹಿಗ್ಗಿನ ಮಾಲೆ;
ಬೀಗಿ ಉಬ್ಬಿದರೆ ಚುಚ್ಚಿ ಎಚ್ಚರಿಸಲು,
ಬಿದ್ದರೆ ಎತ್ತಲು ಮೇಲೆ...
ಹೀಗೆ ಬರೆಯುತ್ತಾರೆ. ಅಂದರೆ ಒಬ್ಬ ಒಳ್ಳೆಯ ಗೆಳೆಯ ಸಕಾರಾತ್ಮಕತೆಯನ್ನು ತುಂಬಬೇಕು, ಸಾಧನೆಯನ್ನು ಮೆಚ್ಚಬೇಕು, ಜೊತೆಗೆ ಅಹಂಕಾರ ಪಟ್ಟಾಗ ಎಚ್ಚರಿಸಬೇಕು, ಸೋತರೆ ಕೈಹಿಡಿದು ಎತ್ತಬೇಕು... ಎನ್ನುತ್ತಾರೆ. ಇಂಥ ಗೆಳೆಯರ ಬಳಗವನ್ನು ಹೆಚ್ಚಿಸೋಣ ಮಾತ್ರವಲ್ಲ ನಾವೇ ಇಂತಹ ಗೆಳೆಯರಾಗೋಣ ಅಲ್ಲವೇ....
