
Article · September 17, 2026
ಅಂತಃಕಲಹ
ವೀಣಾ ಎಂ ಭಟ್
ಮಾತಿಲ್ಲ ಮೌನದಲಿ ವ್ಯಥೆ ಮುಂದೆ ಬಂದಂತೆ
ಶ್ರುತಿ ಹರಿದ ಗಾನದಲಿ ಗಂಟಲೊಣಗಿ ನಿಂದಂತೆ
ಗರಿಗೆದರಿದ ಬಾನಾಡಿ ಹಾರಾಡಲು ಮರೆತಂತೆ
ಪುಕ್ಕ ಮುದುರಿ ಸುತ್ತ ನೋಡಿ ನೆಲಗಚ್ಚಿದಂತೆ
ಕೋಗಿಲೆಗೆ ಮರೆಯಿತೆ ಮಧುರ ಗಾನ ಪಲ್ಲವಿಯು
ಅಮೃತವರ್ಷದ ಗಾನರಸದ ಸಂಯೋಜನೆಯು
ಹಚ್ಚಹಸಿರಲಿ ಹೃದಯ ಕಲ್ಪನೆ ಭೀತಿ ಕಳವಳವು
ಎಲ್ಲಿ ಎಡವಿತೊ ಅರಿಯೆ ಕಾಡಿತು ತಳಮಳವು
ಆಗಸದಾಚೆಯ ನೋಟ ಮೈಮೇಲೆ ಪರದಾಟ
ತಾರೆಗಳ ನಡುವಲ್ಲಿ ರಸ ಭಾವನೆಗಳ ಚೆಲ್ಲಾಟ
ಚಂದ್ರಮನ ಶೂನ್ಯತೆಯು ತಾರೆಗಳ ನಡುವಲ್ಲಿ
ಬಂಧನವು ಕಳಚಿತೆ ಬಾಳಿಗಿನ್ನು ನೆಲೆ ಎಲ್ಲಿ
ಕಟ್ಟಿದೆನು ಗೋಪುರವ ಇಷ್ಟದಲಿ ಮೈಮರೆತು
ಸುಟ್ಟು ಹೋಯಿತೆ ಹುರುಪು ಮರೆಯಾಗಿ ಕಲೆತು
ಕಷ್ಟ ಕಾಲಗಳಿಗೆಲ್ಲ ಪರಿಹಾರವಿರಲೀ ದೊರೆಯೆ
ಬಿಟ್ಟು ಬಿಡಲಾರೆ ನಿನ್ನ ನಾಮ ಸ್ಮರಣೆ ಹರಿಯೇ
Creative Writings
