
Article · November 22, 2026
ಹೊರಗೆ ಬರದ ಹಾಡು
By ಗಾಯತ್ರಿ ನಾಗರಾಜ
ಗಾಯತ್ರಿ ಕೆ ಅಡ್ಕತ್ತೊಟ್ಟಿ
ಎದೆಯ ಒಳಗೊಂದು ದನಿ
ಮುಗ್ಧ ಮಗುವಿನಂತೆ ಅಳುತಲಿದೆ
ಬಾಯಿ ತೆರೆದರೆ ಕಣ್ಣೀರಾಗುವ ಭಯಕೆ
ತುಟಿಯಂಚಲ್ಲೇ ಅದು ನಿಂತಿದೆ
ನನ್ನ ಒಳಗಿನ ಕಥೆಯ ಯಾರಿಗೆ ಹೇಳಲಿ
ಕೇಳುವವರಿಲ್ಲದ ಈ ಮೌನದ ಬೀದಿಯಲಿ
ನದಿಯು ಹರಿಯುವಾಗಲೇ ಸುಂದರವು
ಕಟ್ಟಿ ಹಾಕಿದರೆ ಅದು ಕೆಸರಾಗುವುದು
ಹಾಗೆಯೇ ನನ್ನೊಳಗಿನ ಪ್ರೀತಿಯೂ
ಹೇಳಲಾಗದೆ, ಹಂಚಲಾಗದೆ
ಕಲ್ಲಿನಡಿ ಸಿಲುಕಿದ ಚಿಲುಮೆಯಂತೆ
ಒಳಗೊಳಗೇ ಇಂಗಿ ಹೋಗುತಿಹುದು
ಮುರಿದು ಹೋದ ತಂಬೂರಿಯ ತಂತಿಯಂತೆ
ನಾನು ಇಂದು ಮಿಡಿಯಲು ಆಗದೆ ಕುಳಿತಿರುವೆ
ಯಾರೋ ಬಂದು ತಂತಿ ಜೋಡಿಸಿದರೆ ಸಾಕು
ಮತ್ತೆ ನನ್ನೊಳಗಿನ ರಾಗವೆಲ್ಲ ಹೊರಹೊಮ್ಮುವುದು
ಅಳಬೇಡ ಎಂದು ನನ್ನ ಮನಸ್ಸೇ ಹೇಳುತ್ತಿದೆ
ಈ ಮೌನವೇ ಕೊನೆಯಲ್ಲ,
ಈ ರಾತ್ರಿಯೇ ಕೊನೆಯಲ್ಲ
ಬೆಳಗಿನ ಸೂರ್ಯ ಬರುವ ಮೊದಲು
ಕತ್ತಲು ಅತ್ಯಂತ ದಟ್ಟವಾಗಿರುವುದು
ಒಂದು ದಿನ ನನ್ನ ಹಾಡು ಹೊರಬರುವುದು
ಅಂದು ಜಗತ್ತು ಕಿವಿಗೊಟ್ಟು ಕೇಳುವುದು
Creative Writings
