
Article · November 2, 2026
ಕಾಲದ ಗತಿಯೇ ವೇಗವಾಗಿದೆಯೇ?!
By ದಿವ್ಯಾ ಶಿರಂತಡ್ಕ
ದಿವ್ಯಾ ಬಿ ಶಿರಂತಡ್ಕ
ಮೊನ್ನೆ ಪರಿಚಿತರೊಬ್ಬರು ಮಾತನಾಡುತ್ತಾ 'ಈಗೀಗ ದಿನಗಳು ಗಂಟೆಗಳಂತೆ ಉರುಳುತ್ತಿದೆ, ವರುಷಗಳು ತಿಂಗಳುಗಳಂತೆ ಸರಿಯುತ್ತಿದೆ' ಎಂದಾಗ ಹೌದಲ್ಲ ಎಂದು ನಾನೂ ಒಂದಷ್ಟು ಹೊತ್ತು ಯೋಚಿಸಿದೆ. ಹಿಂದೆಯೂ ವರ್ಷಕ್ಕೆ 365 ಹಾಗೂ ದಿನಕ್ಕೆ 24 ಗಂಟೆಗಳಷ್ಟೇ ಇದ್ದವು. ಆದರೆ ಇಂದು ಈ ಪರಿಯ ವೇಗದ ಬದುಕು ಆಗಿದ್ದಾದರೂ ಹೇಗೆ, ಯಾವಾಗಿನಿಂದ ಎಂದು ಅಚ್ಚರಿಯಾಯಿತು.
ಬಾಲ್ಯದಲ್ಲಿ ನಮಗಿದ್ದ ಒಂದೇ ಒಂದು ಆಸೆ ಎಂದರೆ ಬಹು ಬೇಗ ದೊಡ್ಡವರಾಗುವುದು! ಗಂಡು ಮಕ್ಕಳಾದರೆ ಅಪ್ಪನಂತೆ ಮನೆಯ ಯಜಮಾನನಾಗುವುದು, ಹೆಣ್ಣು ಮಕ್ಕಳಾದರೆ ಅಮ್ಮನಂತೆ ಸೀರೆ ಉಟ್ಟು ಮನೆಗೆಲಸದಲ್ಲಿ ತೊಡಗಿಸಿಕೊಳ್ಳುವುದು. ಆದರೆ ದುರದೃಷ್ಟವಶಾತ್ ಆಗ ನಾವು ಬೆಳೆಯುತ್ತಲೇ ಇಲ್ಲ ಎಂದು ಅನಿಸುತ್ತಿತ್ತು. ಆದರೆ ಇಂದು?!
ಹಿಂದೆ ಕಾಲವು ಬಹಳ ನಿಧಾನಗತಿಯಲ್ಲಿ ಸಾಗುತ್ತಿತ್ತು. ರುಬ್ಬುವ ಕಲ್ಲಿಗೆ ಹಾಕಿದ ಅಕ್ಕಿ, ಗೋಧಿ, ರಾಗಿ ಮುಂತಾದವುಗಳು ಒಂದಿಷ್ಟೂ ಅವಸರಿಸದೇ ರುಬ್ಬುವ ಕೈಗಳ ಬಳೆಯ ನಾದಕ್ಕೆ ತಲೆದೂಗುವಂತೆ ಮೆಲ್ಲಗೆ ಸಣ್ಣದಾಗುತ್ತಿತ್ತು. ತಾಸುಗಟ್ಟಲೆ ಸಾಗುತ್ತಿದ್ದ ಈ ಕಾರ್ಯದಲ್ಲಿ ಕಾಲವೇ ಉದಾಸಿನ ಮಾಡಿ ಮಂಡಿ ಊರಿಕೊಳ್ಳುತ್ತಿದೆ ಎಂದು ಅನಿಸುತ್ತಿತ್ತು.
ಆಗ ಬಹುತೇಕ ಎಲ್ಲಾ ಮನೆಗಳೂ ಸೆಗಣಿ ಸಾರಿಸಿದ ನೆಲದ್ದು. ಹಟ್ಟಿಯಿಂದ ಸೆಗಣಿ ಸಂಗ್ರಹಿಸಿ, ಕಪ್ಪು ಬಣ್ಣ ಕಾಣಲು ಒಂದಷ್ಟು ಮಸಿಯೂ ಸೇರಿಸಿ ಕಲಸಿ ಹದ ಮಾಡಿ ಆಯತಾಕಾರವಾಗಿ ತುಂಡು ಮಾಡಿದ ಅಡಿಕೆ ಹಾಳೆಯಿಂದ ಲಾಲಿತ್ಯ ಪೂರ್ಣವಾಗಿ ಮನೆ ಸಾರಿಸುವುದೆಂದರೆ ಅದು ಕಾಲವನ್ನೇ ಸೋಲಿಸಿದಂತೆ! ಸೀರೆ ಎತ್ತಿ ಕಟ್ಟಿ, ಅತ್ತಿತ್ತ ಹೋಗದಂತೆ ಮನೆಯವರನ್ನು ನಿರ್ಬಂಧಿಸಿ, ಝರಿಯಂತೆ ಇಳಿಯುವ ಬೆವರನ್ನೂ, ಒಣಗಿದ ಗಂಟಲನ್ನೂ ಸಂತೈಸಿ, ಬಗ್ಗಿದ ಸೊಂಟ ನೇರ ಮಾಡುವಾಗ ಒಂದು ಆಯನವೇ ಕಳೆಯಿತು ಎನ್ನುವಷ್ಟು ನಿಧಾನವಾಗಿ ಕಾಲ ಸರಿಯುತ್ತಿತ್ತು!
ಇನ್ನು ಬಟ್ಟೆ ಒಗೆಯುವುದೆಂದರೆ ಅದು ಅರ್ಧ ದಿನದ ಕಾರ್ಯ... ಆದರೆ ದಿಗ್ವಿಜಯಕ್ಕೆ ಹೊರಟ ಅರಸನ ಪಡೆಯಂತೆ ಕಂಡು ಬರುತ್ತಿತ್ತು. ಒಂದಿಬ್ಬರು ಹೆಂಗಸರು ಮನೆಯವರೆಲ್ಲರ ಬಟ್ಟೆಯನ್ನು, ಜೊತೆಗೆ ಮಕ್ಕಳೆಂಬ ಕಪಿ ಸೈನ್ಯವನ್ನು, ಕರೆದುಕೊಂಡು ಕೆರೆಯತ್ತ ಹೊರಟರೆಂದರೆ ಅದುವೇ ಒಂದು ಮಹಾಯಾನ. ಯಾವುದೇ ಅವಸರಕ್ಕೆ ಎಡೆ ಇಲ್ಲದಂತೆ, ಸಾವಕಾಶದಿಂದ ನಯವಾಗಿ ಸೋಪು ಉಜ್ಜಿಸಿಕೊಂಡು ನೀರಿನಲ್ಲಿ ಮಿಂದೆದ್ದು ಬಟ್ಟೆಗಳು ಥಳಥಳಿಸುತ್ತಿತ್ತು. ಅಲ್ಲೇ ಸುತ್ತಮುತ್ತವಿರುವ ಮಕ್ಕಳ ಸೈನ್ಯಕ್ಕೆ ಮೀನು ಹಿಡಿದು ಮತ್ತೆ ನೀರಿಗೆ ಬಿಡುವುದು, ಸೋಪು ನೊರೆಯಲ್ಲಿ ಆಟ,
ಹೇಳಹೆಸರಿಲ್ಲದ ಹತ್ತಾರು ತುಂಟಾಟ... ಒಂದೇ ...ಎರಡೇ.. ಕಾಲವೂ ಇದನ್ನೆಲ್ಲಾ ಅಚ್ಚರಿಯಿಂದ ನೋಡುತ್ತಾ ಮೈಮರೆಯುತ್ತಿತ್ತು.
ಇನ್ನು ಮನೆಯವರ ಊಟ ;ಅದೊಂದು
ಸಮಾರಾಧನೆಯೇ ಸರಿ. ಮನೆಯ ಗೃಹಸ್ಥ ಅಥವಾ ಗೃಹಿಣಿಗೆ ಈ ನಿಟ್ಟಿನಲ್ಲಿ ಜವಾಬ್ದಾರಿ ಹೆಚ್ಚು. ಮೊದಲಿಗೆ ಚಿಕ್ಕ ಪುಟ್ಟ ಮಕ್ಕಳಿಗೆ ನಂತರ ವಯೋವೃದ್ಧರಿಗೆ, ಮನೆಗೆ ಬಂದ ಅತಿಥಿಗಳಿಗೆ, ನಂತರ ಮನೆಯ ಕೆಲಸದಾಳುಗಳಿಗೆ, ಕೊನೆಗೆ ತಮ್ಮ ಊಟವಾಗುವಾಗ ಕಾಲ ನಿಂತುಕೊಂಡೇ ಕಾಯುತ್ತಿದೆಯೇನೋ ಎನ್ನುವ ಭಾವ. ಕಡೆಯಲ್ಲಿ ಸಾಕು ಪ್ರಾಣಿಗಳಾದ ಬೆಕ್ಕು ನಾಯಿಗಳಿಗೂ ಊಟ ಹಾಕಿದಾಗ ಕಾಲ ಒಂದಷ್ಟು ಉಸ್ಸಪ್ಪ ಎಂಬ ನಿಟ್ಟುಸಿರು ಬಿಟ್ಟಂತಹ ಸಂತೃಪ್ತಿಯ ಧ್ವನಿ ಕೇಳಿದ ಪ್ರತ್ಯಕ್ಷ ಅನುಭವ!
ಮನೆಗೆ ಬಂದ ಅತಿಥಿಗಳಿಗೂ ಯಾವುದೇ ಅವಸರ ಇಲ್ಲ. ಬಂದವರು ಎರಡು ದಿನ ಪುರುಸೊತ್ತು ಮಾಡಿಯೇ ಬಂದವರಾಗಿರುತ್ತಿದ್ದರು. ಸಮಾರಂಭಗಳಿದ್ದರೆ ತಮ್ಮ ಒಂದು ವಾರ ಆ ಮನೆಗೇ ಮೀಸಲು. ಬಂದ ಮನೆಯಲ್ಲಿ ಯಾವ ಯಾವ ವಸ್ತುಗಳು ಎಲ್ಲೆಲ್ಲಿದೆಯೋ ಹೇಗೆ ಉಪಯೋಗಿಸಬೇಕೋ ಎಲ್ಲವೂ ಕರತಲಾಮಲಕ. ಮನೆಯವರ ಜೊತೆ ಮನೆಯವರಾಗಿ ಬೆರೆವ ವಿಶೇಷ ಕಲೆ. ಹೆಚ್ಚೇಕೆ ಮೈ ಉಜ್ಜುವ ಬಟ್ಟೆ ಕೂಡ ಕೇಳಬೇಕೆಂದಿರಲಿಲ್ಲ. ಅಲ್ಲೇ ಎಲ್ಲೋ ಕೈಗೆ ಸಿಕ್ಕಿದ ಬಟ್ಟೆ ಮೈ ಉಜ್ಜಲೂ, ಸೊಂಟಕ್ಕೆ ಕಟ್ಟಿ ಕೆಲಸಕ್ಕೆ ಕೈಜೋಡಿಸಲೂ ಜೊತೆಯಾಗುತ್ತಿತ್ತು. ಅವಸರಿಸದ ಇಂತಹ ಅತಿಥಿಗಳಿಗೆ ಸಿಗುತ್ತಿದ್ದುದು ಬೆಚ್ಚಗಿನ ಹಿತವಾದ ಅನುಭವ ಹಾಗೂ ಮನೆಯವರು ಕಳುಹಿಸುವಾಗ ಹರಿಸಿದ ನಾಲ್ಕು ಹನಿ ಕಣ್ಣೀರು! ಆಗ ಕಾಲಕ್ಕೂ ತನ್ನ ಬಗ್ಗೆ ಕೋಪ ಬರುತ್ತಿತ್ತೋ ಏನೋ.... ಇನ್ನೂ ಒಂದಷ್ಟು ನಿಧಾನಿಸಬೇಕಿತ್ತು ಎಂದು!
ಈಗ ಅದೇ 'ಕಾಲ'ಕ್ಕೆ ಏನೋ ಅವಸರ. ಎಲ್ಲವೂ ಪಟಾಪಟ್ ಎಂದು ಮುಗಿಸುವ ಧಾವಂತ. ಯಾವೊಂದು ಕೆಲಸದಲ್ಲೂ ಮಗ್ನತೆ ಬರುವ ಮೊದಲೇ ಅದನ್ನು ಮುಗಿಸಿ ಬಿಡುವ ಹುಚ್ಚು. ತಂತ್ರಜ್ಞಾನದ ಜೊತೆಗಾರಿಕೆ ಬೇರೆ. ಯಾರಲ್ಲೂ ಸಮಯವಿಲ್ಲ. ಮೊಬೈಲಿಗೆ ಸೆಕುಂಡಿಗೊಂದರಂತೆ ಬಂದು ಬೀಳುವ ಸಂದೇಶಗಳು, ನೋಟಿಫಿಕೇಶನ್ ಗಳು. ಮನೆಗೆ ಬಂದ ಅತಿಥಿಗಳನ್ನು ಸ್ವಾಗತಿಸುವುದಕ್ಕಿಂತ ಟಾಟಾ, ಬೈ ಹೇಳಲು ಉಮೇದು ಜಾಸ್ತಿ. ಒಂದು ಗಂಟೆ ಬಂದವರು ಮನೆಯಲ್ಲಿದ್ದರೆ ಅದೇ ಹೆಚ್ಚು. ನಾಲ್ಕಾರು ಕೆಲಸಗಳನ್ನು ಒಟ್ಟಿಗೆ ಮಾಡುವ ಸಾಮರ್ಥ್ಯ ಬೆಳೆಸಿಕೊಂಡ ಯಂತ್ರೋಪಯೋಗಿ ಮಂದಿ. 2 ಜಿ, 3ಜಿ, 4ಜಿ, 5ಜಿ .... ಹೀಗೆ ವೇಗವಾಗಿ ಅಂತರ್ಜಾಲ ಸಿಗುತ್ತಾ ಹೋಗುತ್ತಿದೆ. ಜೊತೆಗೆ ಕಾಲವು ಅದೇ ವೇಗದಲ್ಲಿ ಸಾಗುತ್ತಿದೆ. ಜೋಗುಳ ಹಾಡು, ಗದ್ದೆಗಳಲ್ಲಿ ಹಾಡುತ್ತಿದ್ದ ಪಾಡ್ದನ, ಮೂರ್ನಾಲ್ಕು ಗಂಟೆ ಒಲೆಯುರಿಯಲ್ಲಿ ನಿಧಾನವಾಗಿ ಬೇಯುತ್ತಿದ್ದ ಕುಚ್ಚಿಲಕ್ಕಿ, ನೇಜಿ ನಾಟಿ, ಕುಟ್ಟುತ್ತಿದ್ದ ಭತ್ತ... ಹೀಗೆ ಎಲ್ಲವೂ ಧಾವಂತದಲ್ಲಿದೆ... ಓಡುವುದೇ ಬದುಕಾಗಿದೆ... ಯಾಕೆಂದರೆ ಇಲ್ಲಿ ಸಮಯದ ಓಟದ ಜೊತೆ ಓಡಲೇಬೇಕಿದೆ..
