Karada Vishwa

Article · July 18, 2026

ಭಗವಂತನಿಗಿರದ ಮೇಲು-ಕೀಳು ನಮ್ಮೊಳಗ್ಯಾಕೆ?!

✍️ ರವೀ ಸಜಂಗದ್ದೆ

ಶ್ರೇಷ್ಠ ಸನಾತನ ಧರ್ಮವು ಉತ್ಕೃಷ್ಟ, ವಿಶಾಲವಾದ, ಬಹುಮುಖಿ ಚಿಂತನೆಗಳಿಂದ ತುಂಬಿರುವ ಬೃಹತ್ ಆಲದ ಮರ. ಈ ಮರದಡಿಯಲ್ಲಿ ಅನೇಕ ದಾರ್ಶನಿಕರು, ತತ್ವಜ್ಞಾನಿಗಳು, ಆಚಾರ್ಯ ವರೇಣ್ಯರು ತಮ್ಮದೇ ಸಿದ್ಧಾಂತಗಳನ್ನು ಪ್ರತಿಪಾದಿಸಿದ್ದಾರೆ. ಇವುಗಳಲ್ಲಿ ಶ್ರೀ ಶಂಕರಾಚಾರ್ಯರ 'ಅದ್ವೈತ', ಶ್ರೀ ಮಧ್ವಾಚಾರ್ಯರ 'ದ್ವೈತ' ಮತ್ತು ಶ್ರೀ ರಾಮಾನುಜಾಚಾರ್ಯರ 'ವಿಶಿಷ್ಟಾದ್ವೈತ' ಸಿದ್ಧಾಂತಗಳು ಪ್ರಮುಖವಾದವು. 'ದ್ವೈತ' ಮತ್ತು 'ಅದ್ವೈತ' ತತ್ವಗಳ ಅನುಯಾಯಿಗಳ ನಡುವಿನ ವಾದ-ವಿವಾದಗಳಿಗೆ ಶತಮಾನಗಳ ಇತಿಹಾಸವಿದೆ. ಉಡುಪಿಯ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆದ ಘಟನೆಯೊಂದು ಈ 'ಹಳೆ ಗಾಯ'ವನ್ನು ಮತ್ತೆ-ಮತ್ತಷ್ಟು ಕೆದಕಿದೆ. ಎರಡು ಪಂಗಡಗಳ ಮಧ್ಯದ ಪರಸ್ಪರ ದ್ವೇಷಕ್ಕೆ ತುಪ್ಪ ಸುರಿಯುವ ಕೆಲಸವಾಗಿದೆ. ಸಿದ್ಧಾಂತಗಳ ತಿಕ್ಕಾಟದಲ್ಲಿ ಸನಾತನ ಧರ್ಮ ಬಡವಾಗಿಸುವ ಪ್ರಯತ್ನಗಳ ಸಾಲಿಗೆ ಇದು ನೂತನ ಸೇರ್ಪಡೆ!

ಶ್ರೀ ಶಂಕರಾಚಾರ್ಯರು ಕ್ರಿ.ಶ. 8ನೆಯ ಶತಮಾನದಲ್ಲಿ 'ಅದ್ವೈತ' ಸಿದ್ಧಾಂತವನ್ನು ಪ್ರತಿಪಾದಿಸಿದರು. ಅವರ ಪ್ರಕಾರ 'ಬ್ರಹ್ಮ ಸತ್ಯ, ಜಗನ್ಮಿಥ್ಯೆ, ಜೀವೋ ಬ್ರಹ್ಮೈವ ನಾಪರಃ' ಅಂದರೆ ಪರಬ್ರಹ್ಮವೊಂದೇ ಸತ್ಯ, ಕಣ್ಣಿಗೆ ಕಾಣುವ ಜಗತ್ತು ಮಾಯೆ, ಜೀವಾತ್ಮ-ಪರಮಾತ್ಮರ ನಡುವೆ ಯಾವುದೇ ಭೇದವಿಲ್ಲ. ಸುಮಾರು ನಾಲ್ಕೈದು ಶತಮಾನಗಳ ನಂತರ, ಅಂದರೆ ಕ್ರಿ.ಶ. 13ನೆಯ ಶತಮಾನದಲ್ಲಿ ಬಂದ ಮಧ್ವಾಚಾರ್ಯರು 'ದ್ವೈತ' ಸಿದ್ಧಾಂತವನ್ನು ಮಂಡಿಸಿದರು. ಅವರ ಪ್ರಕಾರ ಜಗತ್ತು ಸತ್ಯ (ಮಾಯೆಯಲ್ಲ!), ಪರಮಾತ್ಮ (ಹರಿ) ಸರ್ವೋತ್ತಮ, ಜೀವಾತ್ಮ-ಪರಮಾತ್ಮರ ನಡುವೆ ಶಾಶ್ವತವಾದ ಭೇದವಿದೆ. ಶಂಕರಾಚಾರ್ಯರ 'ಮಾಯಾವಾದ'ವನ್ನು ಮಧ್ವರು ಖಂಡಿಸುತ್ತಾ ಅದನ್ನು 'ಪ್ರಚ್ಛನ್ನ ಬೌದ್ಧ' (ವೇಷ ಮರೆಸಿಕೊಂಡ ಬೌದ್ಧ ಧರ್ಮ) ಎಂದು ಕರೆದರು ಎಂಬುದಾಗಿ ಇತಿಹಾಸ ಹೇಳುತ್ತದೆ. ಆರಂಭದ ಶತಮಾನಗಳಲ್ಲಿ ಈ ವಾದ-ವಿವಾದಗಳು ಕೇವಲ ತಾತ್ವಿಕ ಮತ್ತು ಬೌದ್ಧಿಕ ಮಟ್ಟದಲ್ಲಿದ್ದವು. ಕಾಲಾಂತರದಲ್ಲಿ, ಎರಡೂ ಪಂಥಗಳ ಅನುಯಾಯಿಗಳ ನಡುವೆ ಇದು ವೈಯುಕ್ತಿಕ ನಿಂದನೆ, ಪಂಥೀಯ ದ್ವೇಷ, ಪರಸ್ಪರ ಕೆಸರೆರಚಾಟ, ಮೇಲು-ಕೀಳು ಎನ್ನುವ ವಿಚಾರದ ಪ್ರತಿಷ್ಠೆಯ ಸಂಕೇತದ ಕದನ-ರಣಾಂಗಣವಾಗಿ ಮಾರ್ಪಟ್ಟಿತು.

ಇತ್ತೀಚೆಗೆ ಉಡುಪಿಯ ರಾಜಾಂಗಣದ ಕಾರ್ಯಕ್ರಮವೊಂದರಲ್ಲಿ ಇಬ್ಬರು ಎಳೆವಯಸ್ಸಿನ ಬಾಲಕಿಯರು ವಾಚನ ಕಾರ್ಯಕ್ರಮ ಮಾಡುತ್ತಾ ಶ್ರೀ ಶಂಕರಾಚಾರ್ಯರನ್ನು ಅವಹೇಳನ ಮಾಡುವ, ಅವರ ತೇಜೋವಧೆ ಮಾಡುವ ಪ್ರಸಂಗವನ್ನು 'ಮಣಿಮಂಜರಿ' ಗ್ರಂಥದಿಂದ ಉಲ್ಲೇಖಿಸಿದರು. ಇದು ಸಹಜವಾಗಿ ಸ್ಮಾರ್ತ (ಅದ್ವೈತ) ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಯಿತು. 'ಮಣಿಮಂಜರಿ'ಯಲ್ಲಿ ಶಂಕರಾಚಾರ್ಯರನ್ನು ಅತ್ಯಂತ ತುಚ್ಛವಾಗಿ ಚಿತ್ರಿಸಲಾಗಿದೆ, ಅದು ಸತ್ಯಕ್ಕೆ ದೂರವಾದ ವಿಚಾರ ಮತ್ತು ಆ ಗ್ರಂಥವನ್ನು ಬಹುತೇಕರು ಅಂದಿಗೂ ಇಂದಿಗೂ ಒಪ್ಪಲಿಲ್ಲ ಎನ್ನುವುದೂ ದಿಟ. ತಟಸ್ಥ/ಸ್ವತಂತ್ರ ಇತಿಹಾಸಕಾರರು ಮತ್ತು ಸಂಶೋಧಕರು ಈ ಕೃತಿಯನ್ನು ಕೇವಲ ಒಂದು 'ಪಂಥ ನಿಂದನಾ ಗ್ರಂಥ' ಎಂದಷ್ಟೇ ಪರಿಗಣಿಸುತ್ತಾರೆ. ಇದೊಂದು ಐತಿಹಾಸಿಕ ಅಥವಾ ಪ್ರಾಮಾಣಿಕ ಚಾರಿತ್ರಿಕ ದಾಖಲೆಯಲ್ಲ.

ಮಧ್ಯಯುಗದಲ್ಲಿ ತಮ್ಮ ಸಿದ್ಧಾಂತದ ಶ್ರೇಷ್ಠತೆಯನ್ನು ಸ್ಥಾಪಿಸಲು ಮತ್ತು ತಮ್ಮ ಅನುಯಾಯಿಗಳು ಬೇರೆ ಪಂಥದತ್ತ ಆಕರ್ಷಿತರಾಗುವುದನ್ನು ತಡೆಯಲು, ಇತರ ತತ್ಸಮಾನ ಪಂಗಡದ ಸಿದ್ಧಾಂತಿಗಳನ್ನು 'ರಾಕ್ಷಸರ ಅವತಾರ' ಎಂದು ಕರೆಯುವುದು ಒಂದು ಸಾಮಾನ್ಯ ತಂತ್ರವಾಗಿತ್ತು. ಬೌದ್ಧರು, ಜೈನರು, ಶೈವರು, ವೈಷ್ಣವರ ನಡುವೆಯೂ ಇಂತಹ ನಿಂದನಾತ್ಮಕ ಕೃತಿಗಳು ರಚನೆಯಾಗಿರುವ ಉದಾಹರಣೆಗಳಿವೆ. ಮಣಿಮಂಜರಿಯು ಶಂಕರರ ಬದುಕಿನ ನೈಜ ಚಿತ್ರಣವಲ್ಲ, ಅದು ಕೇವಲ ದ್ವೈತ ಪಂಥದ ಅತಿಯಾದ ಅಂಧಾಭಿಮಾನ ಮತ್ತು ವೈಷಮ್ಯದ ಪ್ರತೀಕ ಎಂಬುದು ಅದಾಗಲೇ ಸಾಬೀತಾಗಿರುವ ವಿಚಾರ.

ಇತಿಹಾಸ ನೋಡಿದರೆ, ಆಗಿನ ಕಾಲದಲ್ಲಿ ಇದು ದ್ವೈತ ಸಿದ್ಧಾಂತದ ಅಸ್ತಿತ್ವದ ಹೋರಾಟದಂತೆಯೂ ಭಾಸವಾಗುತ್ತದೆ! ದ್ವೈತ ಸಿದ್ಧಾಂತ ಹುಟ್ಟುವ ಹೊತ್ತಿಗೆ ಅದ್ವೈತ ಸಿದ್ಧಾಂತವು ಅದಾಗಲೇ ದೇಶದೆಲ್ಲೆಡೆ ಬಲವಾಗಿ-ಆಳವಾಗಿ ಬೇರೂರಿತ್ತು. ಹೊಸದಾಗಿ ಹುಟ್ಟಿದ ಪಂಥವೊಂದು ತನ್ನನ್ನು ತಾನು ಸ್ಥಾಪಿಸಿಕೊಳ್ಳಬೇಕಾದರೆ, ಅಸ್ತಿತ್ವದಲ್ಲಿರುವ ಪ್ರಬಲ ಪಂಥವನ್ನು ಹೀಯಾಳಿಸುವುದು ಅಂದಿನ ಅನಿವಾರ್ಯತೆಯಾಗಿತ್ತು. ಈಗಲೂ ಎಲ್ಲಾ ಕ್ಷೇತ್ರಗಳಲ್ಲಿ ಇಂತಹುದೇ ತಂತ್ರಗಾರಿಕೆ ಬಳಕೆಯಲ್ಲಿದೆ. ಇದು ತಂತಮ್ಮ ಅನುಯಾಯಿಗಳನ್ನು ಹಿಡಿದಿಟ್ಟುಕೊಳ್ಳುವ ಜಾಣನಡೆಯೂ ಹೌದು! 'ಎದುರಾಳಿ ದಾರ್ಶನಿಕರನ್ನು ಮಹಾಜ್ಞಾನಿ ಎಂದು ಒಪ್ಪಿಕೊಂಡರೆ, ಸಾಮಾನ್ಯ ಜನರು ಆ ಪಂಥದ ಕಡೆಗೆ ಆಕರ್ಷಿತರಾಗಿ ವಾಲಬಹುದು' ಎಂಬ ಸಾಮಾನ್ಯ ಭಯ. ಹಾಗಾಗಿ, ಎದುರಾಳಿಯನ್ನು 'ರಾಕ್ಷಸ', 'ಪಾಷಂಡಿ' ಎಂದೆಲ್ಲಾ ಬಿಂಬಿಸುವ ಮೂಲಕ ಸಾಮಾನ್ಯರಲ್ಲಿ ಗೊಂದಲ ಹುಟ್ಟಿಸುವ ತಂತ್ರಗಳನ್ನು ಅಂದಿನ ಅನುಯಾಯಿಗಳು ಬಳಸಿದರು. ಅನಂತರ ಅನೇಕ ಶತಮಾನಗಳು ಕಳೆದು, ಹಲವಾರು ಸುಧಾರಣೆಗಳು ಮತ್ತು ಸ್ಮಾರ್ತ-ಮಾಧ್ವರು ಪರಸ್ಪರರು ಒಪ್ಪಿಕೊಂಡು-ಅಪ್ಪಿಕೊಂಡು ಮುನ್ನಡೆಯುವ ಒಳ್ಳೆಯ ಕೆಲಸ-ಕಾರ್ಯಗಳು ಆಗಿವೆಯಾದರೂ ಆಗೀಗ ಕೆಲವು 'ಅತೃಪ್ತ ಆತ್ಮಗಳು' ಇಂಥಾ ನೀಚ ಕೆಲಸ ಮಾಡುತ್ತಲೇ ಬಂದಿದ್ದಾರೆ! ಹಾಗೆ ನೋಡಿದರೆ ಸ್ಮಾರ್ತ ಮತ್ತು ಮಾಧ್ವ ಪಂಗಡಗಳ ನಡುವೆ ಲೆಕ್ಕವಿಲ್ಲದಷ್ಟು ಬಂಧ, ಸಂಬಂಧ, ಅನುಬಂಧ, ಗೆಳೆತನ, ವ್ಯವಹಾರ ನಡೆದಿದೆ, ನಡೆಯುತ್ತಲೇ ಇದೆ!

ಹೀಗಿರುವ-ಈಗಿರುವ ವಿವಾದಕ್ಕೆ ಸಂಬಂಧಿಸಿದಂತೆ ಎರಡೂ ಪಂಗಡಗಳು ತಪ್ಪುಗಳನ್ನು ಮತ್ತು ಪರಸ್ಪರ ಆರೋಪಗಳನ್ನು ಮಾಡುವ ಕೆಲಸಗಳು ನಿರಂತರ ಆಗಿವೆ.

ಮೊದಲಿಗೆ ಮಾಧ್ವ ಪಂಗಡದ ತಪ್ಪುಗಳು, ಆರೋಪಗಳ ಕುರಿತು ನೋಡುವಾಗ 'ಕಾಲಬಾಹಿರ ಗ್ರಂಥಗಳ ಅಂಧಾನುಕರಣೆ' ಅತ್ಯಂತ ಸ್ಪಷ್ಟವಾಗಿ ಗೋಚರಿಸುತ್ತದೆ! ಬೌದ್ಧಿಕ ಚರ್ಚೆಗಳು ಮುಕ್ತಾಯವಾಗಿ ನೂರಾರು ವರ್ಷಗಳೇ ಕಳೆದಿದ್ದರೂ, ಇಂದಿಗೂ 'ಮಣಿಮಂಜರಿ'ಯಂತಹ ನಿಂದನಾತ್ಮಕ ಗ್ರಂಥಗಳನ್ನು ಸತ್ಯವೆಂದು ನಂಬುತ್ತಾ ಈಗಿನ ಜನಾಂಗಕ್ಕೆ ಕಲಿಸುವುದು ಒಳ್ಳೆಯ ಸಂಪ್ರದಾಯವಲ್ಲ. ಎಳೆಯ ಮಕ್ಕಳಿಗೆ ಭಗವಂತನ ಭಕ್ತಿ-ಶಕ್ತಿಯ ವಿಚಾರಗಳನ್ನು ಬೋಧಿಸುವ ಬದಲಿಗೆ, ಇತರ ಸಿದ್ಧಾಂತಿಗಳ ಬಗ್ಗೆ ದ್ವೇಷ ಕಾರುವ, ತೇಜೋವಧೆ ಮಾಡುವ ಪಾಠಗಳನ್ನು ಹೇಳಿಕೊಡುವುದು ಯಾರಿಗೂ ಶೋಭೆಯಲ್ಲ. ತಮಗಿಂತ ಭಿನ್ನವಾದ ತತ್ವವನ್ನು ಒಪ್ಪಿಕೊಳ್ಳದಿರುವುದು ಅವರವರ ವೈಯಕ್ತಿಕ ವಿಚಾರ. ಹಾಗೆಂದು ಅಂತಹಾ ಇತರ ತತ್ವಗಳ ಸ್ಥಾಪಕರನ್ನು-ಪ್ರವರ್ತಕರನ್ನು ತುಚ್ಛವಾಗಿ ಕಾಣುವುದು-ಮಾತನಾಡುವುದು ಯಾವುದೇ ಪಂಗಡ, ಜಾತಿ, ಧರ್ಮಕ್ಕೆ ಖಂಡಿತಾ ಗೌರವ ತರಲಾರದು!

ಇನ್ನು ಸ್ಮಾರ್ತ ಪಂಗಡದವರು ಮಾಡುತ್ತಿರುವ ತಪ್ಪು-ಆರೋಪಗಳು. ಮಾಧ್ವರಿಗೆ ಹೋಲಿಸಿದಾಗ ಸ್ಮಾರ್ತರು ಬಹುಸಂಖ್ಯಾಕರಾಗಿರುವುದರಿಂದ ಮತ್ತು ಬೌದ್ಧಿಕ ವಲಯದಲ್ಲಿ ಒಂದಷ್ಟು ಪ್ರಾಬಲ್ಯ ಹೊಂದಿರುವುದರಿಂದ, ಅನೇಕ ಬಾರಿ ಇತರ ಪಂಗಡ-ಸಿದ್ಧಾಂತಗಳನ್ನು ಕಡೆಗಣಿಸಿದ ಅಥವಾ ಅಗೌರವದಿಂದ ನೋಡಿದ ಅನೇಕ ಉದಾಹರಣೆಗಳು ಉಂಟು ಮತ್ತದು ಸಲ್ಲದು. ಇಂಥಾ ನಡೆಗಳು ಸಹಜವಾಗಿಯೇ ಅಲ್ಪಸಂಖ್ಯಾಕ ಪಂಥಗಳಲ್ಲಿ ಅಸಮಾಧಾನ ಮೂಡಿಸಿವೆ. ಇಂತಹ ಘಟನೆಗಳು ನಡೆದಾಗ ಸಂಯಮ ಕಳೆದುಕೊಂಡು ಪರಸ್ಪರರ ನಿಂದನೆ, ಜಾಲತಾಣಗಳಲ್ಲಿ ಬೈಗುಳಗಳ ಸುರಿಮಳೆ ಸಮಸ್ಯೆಯನ್ನು ಮತ್ತಷ್ಟು ಉಲ್ಬಣ-ಜಟಿಲಗೊಳಿಸಿದೆ, ಅಷ್ಟೇ!

'ಯಾವ ಪಂಥ ಮೇಲು, ಯಾವುದು ಕೀಳು' ಎಂಬಿತ್ಯಾದಿ ಅಸಂಬದ್ಧ ವಿವಾದಗಳ ಕುರಿತು ಡಾ. ಎಸ್. ರಾಧಾಕೃಷ್ಣನ್, ಪ್ರೊ. ಎಂ. ಹಿರಿಯಣ್ಣ, ಡಾ. ಬಿ.ಎನ್.ಕೆ. ಶರ್ಮಾ ಅವರಂತಹ ದಿಗ್ಗಜ ವಿದ್ವಾಂಸರ ನಿಲುವುಗಳು ಈ ವಿಚಾರಗಳಲ್ಲಿ ಅತ್ಯಂತ ಸ್ಪಷ್ಟವಾಗಿವೆ. ಅವರೆಲ್ಲರ ಒಟ್ಟಭಿಪ್ರಾಯದ ಪ್ರಕಾರ, ಶಂಕರಾಚಾರ್ಯರು ಮತ್ತು ಮಧ್ವಾಚಾರ್ಯರು ಭಾರತೀಯ ತತ್ವಶಾಸ್ತ್ರದ ಹಿಮಾಲಯಗಳು! ಒಬ್ಬರು 'ಜ್ಞಾನಮಾರ್ಗ'ದ ಶಿಖರವಾದರೆ, ಇನ್ನೊಬ್ಬರು 'ಭಕ್ತಿಮಾರ್ಗ'ದ ಮೇರು ಪರ್ವತ. ಅದ್ವೈತ ಮತ್ತು ದ್ವೈತ ಸಿದ್ಧಾಂತಗಳು ವೇದಾಂತದ ವಿಭಿನ್ನ ಮಜಲುಗಳು - ಇದು ಸನಾತನ ಧರ್ಮದ ವೈಶಾಲ್ಯ ಮತ್ತು ವೈಶಿಷ್ಟ್ಯ! ಇದನ್ನು ಎಲ್ಲರೂ ಸಮರ್ಪಕವಾಗಿ ನೆನಪಿಟ್ಟುಕೊಂಡು ಅನುಸರಿಸಿದರೆ ಯಾವುದೇ ವಿವಾದ ಇರದೆನ್ನಿ!

ಇನ್ನು ಈ ವಿವಾದದ ಕುರಿತು ಒಂದಿಷ್ಟು ಸಾದೃಶ ದೃಷ್ಟಾಂತಗಳನ್ನೂ ಪರಿಶೀಲಿಸೋಣ. ಅತ್ಯಂತ ಸರಳವಾಗಿ ಇದನ್ನು 'ಅಂಧರು ಮತ್ತು ಆನೆಯ ಕಥೆ'ಗೆ ಹೋಲಿಸಬಹುದೇನೋ! ಆನೆಯ ಕಾಲನ್ನು ಮುಟ್ಟಿದ ಅಂಧರಲ್ಲಿ ಒಬ್ಬನು 'ಆನೆಯು ಕಂಬದಂತಿದೆ ಎಂದ, ಕಿವಿಯನ್ನು ಮುಟ್ಟಿದ ಇನ್ನೊಬ್ಬನು ಅದು ಮೊರದಂತಿದೆ ಎಂದ'! ಇಬ್ಬರ ಅನುಭವ-ಅನುಭಾವ ಅವರವರ ಮಟ್ಟಿಗೆ ಸತ್ಯ ಮತ್ತು ಸರಿ. ಆದರೆ ಆನೆ ಕೇವಲ ಕಂಬ ಅಲ್ಲ, ಮೊರವೂ ಅಲ್ಲ; ಅದು ಇದೆರಡಕ್ಕಿಂತಲೂ ಮಿಗಿಲಾದದ್ದು, ದೊಡ್ಡದಾದದ್ದು! ಅಂತೆಯೇ, ಅನಂತವಾದ ಪರಮಾತ್ಮನನ್ನು ಶಂಕರರು ತಮ್ಮ ನಿಲುವಿಗೆ ಒಳಪಟ್ಟ ದೃಷ್ಟಿಕೋನದಿಂದ ವಿವರಿಸಿದರೆ, ಮಧ್ವರು ಭಕ್ತಿಯ ಮಗದೊಂದು ದೃಷ್ಟಿಕೋನದಿಂದ ವಿವರಿಸಿದರು. ಇವೆರಡೂ 'ಭಗವಂತ' ಎನ್ನುವ ಬೃಹತ್ ಪರ್ವತವನ್ನು ಏರಲು ಇರುವ ಎರಡು ವಿಭಿನ್ನ ಭಕ್ತಿಮಾರ್ಗಗಳಷ್ಟೇ ಹೊರತಾಗಿ, 'ಒಂದು ಸರಿ, ಇನ್ನೊಂದು ತಪ್ಪು' ಎನ್ನಲಾಗದು!

ಇದಿನ್ನು ಸಾಕು! ಈ ದ್ವೇಷ ಮತ್ತು ವೈಷಮ್ಯಕ್ಕೆ ಈಗ ತಾರ್ಕಿಕ ಅಂತ್ಯ ಹಾಡಿ ಫುಲ್‌ಸ್ಟಾಪ್ ಹಾಕಲೇಬೇಕಾದ ಸಮಯ ಬಂದಿದೆ. ಇಂದಿನ ಜಾಗತೀಕರಣದ ಯುಗದಲ್ಲಿ ಸನಾತನ ಧರ್ಮವು ಅನೇಕ ಬಾಹ್ಯ ಸವಾಲುಗಳನ್ನು ಎದುರಿಸುತ್ತಿದೆ. ಇಂತಹ ಸಂದರ್ಭದಲ್ಲಿ ಈ ರೀತಿಯ ಒಳಜಗಳಗಳು ಧರ್ಮದ ಬೇರನ್ನೇ ಅಲುಗಾಡಿಸುತ್ತವೆ.

ಮಧ್ವಾಚಾರ್ಯರ 'ಹರಿ ಸರ್ವೋತ್ತಮ, ವಾಯು ಜೀವೋತ್ತಮ' ತತ್ವದ ಸೌಂದರ್ಯವನ್ನು, ದಾಸ ಸಾಹಿತ್ಯದ ಭಕ್ತಿ ರಸವನ್ನು ಜಗತ್ತಿಗೆ ಪಸರಿಸೋಣ. ಇನ್ನೊಂದು ಮತ,‌ ಪಂಥದ ಎಲ್ಲ ನಿಂದನಾತ್ಮಕ ಕೃತಿಗಳನ್ನು ಸಾರ್ವಜನಿಕ ವೇದಿಕೆಗಳಿಂದ ಶಾಶ್ವತವಾಗಿ ಕೈಬಿಡಬೇಕು. ಇತರ ಪಂಥಗಳನ್ನು-ಪಂಗಡಗಳನ್ನು ನಿಂದಿಸುವುದರಿಂದ ಯಾವುದೇ ಸಿದ್ಧಾಂತ ದೊಡ್ಡದಾಗುವುದಿಲ್ಲ, ನೆನಪಿರಲಿ.

ಯುವ ಪೀಳಿಗೆಗೆ ಕೃಷ್ಣನ ಮೇಲಿನ ಪ್ರೀತಿಯನ್ನು ಕಲಿಸೋಣ, ಕಪೋಲಕಲ್ಪಿತ ಶಂಕರರ ಮೇಲಿನ ನಿಂದನೆ-ದ್ವೇಷವನ್ನಲ್ಲ! ವಿವಾದಗಳು ಎದುರಾದಾಗ 'ವಿದ್ಯಾವಿನಯ ಸಂಪನ್ನೇ' ಎನ್ನುವ ಗೀತೆಯ ವಾಕ್ಯದಂತೆ ನಾವೆಲ್ಲರೂ ಸಂಯಮದಿಂದ ವರ್ತಿಸಬೇಕು. ಯಾರೋ ಕೆಲವೇ ಕೆಲವರು ಮಾಡಿದ ತಪ್ಪಿಗೆ ಇಡೀ ಮಾಧ್ವ ಸಮಾಜವನ್ನು ಅಥವಾ ಮಧ್ವಾಚಾರ್ಯರನ್ನು ದೂಷಿಸುವ ಕೆಲಸವೂ ಅಷ್ಟೇ ತುಚ್ಛ. ಅದ್ವೈತದ ಮೂಲ ತತ್ವವಾದ 'ಸರ್ವಭೂತೇಷು ಏನೈಕಂ ಭಾವಮವ್ಯಯಮೀಕ್ಷತೇ' ಎಂದರೆ 'ಎಲ್ಲದರಲ್ಲೂ ಒಂದೇ ಚೈತನ್ಯವನ್ನು ಕಾಣುವುದು' ಎಂಬುದನ್ನು ಕೇವಲ ವೇದಿಕೆಯಲ್ಲಿ ಭಾಷಣಕ್ಕೆ ಸೀಮಿತಗೊಳಿಸದೆ, ಆಚರಣೆಯಲ್ಲೂ ತರಬೇಕಿದೆ.

'ಏಕಂ ಸತ್ ವಿಪ್ರಾಃ ಬಹುಧಾ ವದಂತಿ' ಅಂದರೆ 'ಪರಮ ಸತ್ಯ ಒಂದೇ, ಜ್ಞಾನಿಗಳು ಅದನ್ನು ವಿವಿಧ ಆಯಾಮ-ನಾಮವಿಶೇಷಣಗಳಿಂದ ವಿವರಿಸುತ್ತಾರೆ' ಎಂಬುದು ಋಗ್ವೇದದ ವಾಕ್ಯ. ಶಂಕರರು ಮತ್ತು ಮಧ್ವರು ಆ ಸತ್ಯವನ್ನು ಹುಡುಕುವ ಮಾರ್ಗಗಳನ್ನು ನಮಗೆ ತೋರಿದ ಮಾರ್ಗದರ್ಶಕರು! 'ತತ್ವಾದರ್ಶಗಳ ಮೂಲಕ ಸಮಾಜದ ಉದ್ಧಾರ' ಮಾತ್ರವೇ ಅವರಿಬ್ಬರ ಏಕೈಕ ಗುರಿಯಾಗಿತ್ತು. ನಾವು ಅವರ ತತ್ವಾದರ್ಶಗಳ ಹಿಂದಿರುವ ಬೆಳಕು, ಮೌಲ್ಯ, ಉದಾತ್ತ ಚಿಂತನೆಗಳನ್ನು ಗ್ರಹಿಸಬೇಕೇ ಹೊರತು, 'ಅಂಧಾಭಿಮಾನ'ವೆಂಬ ಕತ್ತಲ ಕಡಲಿನಲ್ಲಿ ಈಜಲು ಹೋಗಿ ಕಳೆದುಹೋಗಬಾರದು! ಭಿನ್ನಾಭಿಪ್ರಾಯಗಳು ಬೌದ್ಧಿಕ ಮಟ್ಟದಲ್ಲಿರಲಿ, ವೈಯಕ್ತಿಕ ದ್ವೇಷದ ಮಟ್ಟಕ್ಕೆ ಇಳಿಯದಿರಲಿ. ಇದುವೇ ಇಂದಿನ ತುರ್ತು.

ವಿವಾದ ಭುಗಿಲೆಬ್ಬಿಸಿದ ವಾಚನ ಕಾರ್ಯಕ್ರಮ ನಡೆದ ಅದೇ ವೇದಿಕೆಯಲ್ಲೇ 'ಶಂಕರಾಚಾರ್ಯರ ಸಂಕೀರ್ತನೆ ಕಾರ್ಯಕ್ರಮ' ನಡೆದಿರುವ ಶುಭ ಸುದ್ದಿಯೊಂದು ಉಡುಪಿಯ ರಾಜಾಂಗಣದಿಂದ ಬಂದಿದೆ. ಒಳ್ಳೆಯ ಮತ್ತು ಸ್ವಾಗತಾರ್ಹ ಬೆಳವಣಿಗೆ! ಶಂಕರಾಚಾರ್ಯರು ಸ್ಥಾಪಿಸಿದ ನಾಲ್ಕು ಮಠಗಳಲ್ಲಿ ಒಂದಾದ ಪುರಿ ಜಗನ್ನಾಥ ದೇವಾಲಯದಲ್ಲಿ ವಾರ್ಷಿಕ ಜಾತ್ರೆ-ರಥಯಾತ್ರೆಯ ಸಂಭ್ರಮ-ಸಡಗರ. ಆ ಜಗದೋದ್ಧಾರಕ ಜಗನ್ನಾಥನು ಮಾಧ್ವರಿಗೆ, ಸ್ಮಾರ್ತರಿಗೆ ಮತ್ತು ಜಗದ ಎಲ್ಲ ಜೀವ ಸಂಕುಲಕ್ಕೆ ಸದ್ಬುದ್ಧಿ, ಸನ್ಮಂಗಲ ಕರುಣಿಸಿ ಸನ್ಮಾರ್ಗದಲ್ಲಿ ಸಾಗುವಂತೆ ಪ್ರೇರೇಪಿಸಿ ಅನುಗ್ರಹಿಸಲಿ. 'ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪಾ, ಮತದಲ್ಲಿ ಮೇಲ್ಯಾವುದೋ?' ಅಲ್ವಾ? ಲೋಕಾ ಸಮಸ್ತಾ ಸುಖಿನೋ ಭವಂತು.

✍️ ರವೀ ಸಜಂಗದ್ದೆ

(18/07/2026)

Creative WritingsHeritage