Karada Vishwa

Article · November 13, 2026

ಸುಮ್ಮನಿರುವನೆ?

By ಜಯಶ್ರೀ ಕೆ. ಆರ್ ಭಟ್. ಪಳ್ಳತಡ್ಕ

ಜಯಶ್ರೀ ಐಲುಕುಂಜೆ

ಇರುವನೊಬ್ಬನವನೆ ದೇವ ಇಲ್ಲ ಅವಗೆ ಬೇಧ ಭಾವ,
ಎಲ್ಲರಿಗೂ ಒಂದೇ ವಿಧದಿ ಜನುಮವಿತ್ತನೂ /

ಬದುಕಿ ಬಾಳಲೆಂದು ಇತ್ತ ನೀರು, ಗಾಳಿ, ಬೆಳಕು, ಬೆಂಕಿ,
ಮಣ್ಣಿನಲ್ಲಿ ಋಣವನಿಟ್ಟ ಸೃಷ್ಟಿಕರ್ತನೂ /

ಮೇಲೆ ಬಾನು, ಕೆಳಗೆ ಭೂಮಿ, ಇರಿಸಿ ಜಗದ ಸೂರು ಕಟ್ಟಿ
ಎಲ್ಲರಿಗೂ ಭವದ ಒಳಗೆ ಬದುಕ ಕೊಟ್ಟನು/

ಅವನ ಅಂಕೆಯೊಳಗೆ ಸಿಗದೆ ಜೀವ ಮೆರೆಯಬಾರದೆಂದು
ಎಲ್ಲರಿಗೂ ಉಸಿರ ಕೊಟ್ಟು ಹೃದಯವಿತ್ತನೂ /
ನಡುವೆ ತಂದು ಮರಣವೆಂಬ ಭಯವನಿಟ್ಟನೂ /

ಮನುಜನೇನು ಕಡಿಮೆಯಲ್ಲ ಮರಣ ಭಯವು ಅವನಿಗಿಲ್ಲ/
ಮತ್ತೆ ಹುಟ್ಟಿ ಬರುವೆನಲ್ಲ? ಎನ್ನುತಿರುವನೂ /

ಇದನು ನೋಡಿ ದೇವ ಕೂಡ ಸುಮ್ಮನೇನು ಕೂರಲಿಲ್ಲ,
ಪಾಪ,ಪುಣ್ಯ ಎಂಬ ಹೊರೆಯ ತಲೆಯಲಿಟ್ಟನೂ

ಕರ್ಮಫಲದ ಶೃಂಖಲೆಯೊಳು ಬಂಧಿಸಿಟ್ಟನು
ಮನುಜನನ್ನು ತನ್ನ ಅಂಕೆಯೊಳಗೆ ಇಟ್ಟನು!

Creative Writings