
News · September 22, 2026
ಅಗಲ್ಪಾಡಿಯಲ್ಲಿ ಕರಾಡ ಸುವರ್ಣ ಸಂಭ್ರಮ ಉದ್ಘಾಟನೆ
ಕರಾಡ ಬ್ರಾಹ್ಮಣ ಅಭ್ಯುದಯ ಸಂಘ (ರಿ.) ಅಗಲ್ಪಾಡಿ ಸ್ಥಾಪನೆಯಾಗಿ 50 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಆಯೋಜಿಸಿರುವ ‘ಕರಾಡ ಸುವರ್ಣ ಸಂಭ್ರಮ 2026’ ಕಾರ್ಯಕ್ರಮಗಳ ಉದ್ಘಾಟನೆ ಸೆ. 20ರಂದು ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಸನ್ನಿಧಿಯಲ್ಲಿ ವೈಭವದಿಂದ ನಡೆಯಿತು.
ಬೆಳಗ್ಗೆ ಗಣಪತಿ ಹವನ, ಏಕಾದಶ ರುದ್ರಾಭಿಷೇಕ, ವೇದಘೋಷ, ಸೌಂದರ್ಯಲಹರಿ ಹಾಗೂ ಲಲಿತಾ ಸಹಸ್ರನಾಮ ಪಾರಾಯಣ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಬಳಿಕ ನಡೆದ ಉದ್ಘಾಟನಾ ಸಮಾರಂಭದಲ್ಲಿ ಸಂಘದ ಹಿರಿಯ ಕಾರ್ಯಕರ್ತ ಕೊಟ್ಟಂಗುಳಿ ಮಾಧವ ಭಟ್ ದೀಪಪ್ರಜ್ವಲನೆ ನೆರವೇರಿಸಿದರು. ಗೌರವಾಧ್ಯಕ್ಷ ಪಿಲಿಂಗಲ್ಲು ಕೃಷ್ಣ ಭಟ್ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ತಂತ್ರಿವರ್ಯ ಶಂಕರನಾರಾಯಣ ಶರ್ಮ ಗೋಸಾಡ ಹಾಗೂ ಆಡಳಿತ ಮುಕ್ತೇಸರ ವಿಶ್ವನಾಥ ಭಟ್ ಬೇಂದ್ರೋಡು ಶುಭ ಹಾರೈಸಿದರು.
ಸಮಾರಂಭದಲ್ಲಿ ಇತ್ತೀಚೆಗೆ ನಿಧನರಾದ ಪದ್ಮಶ್ರೀ ಗಿರೀಶ್ ಭಾರದ್ವಾಜ್, ಸುಬ್ರಹ್ಮಣ್ಯ ಭಟ್ ಕಜಂಪಾಡಿ ಹಾಗೂ ಸೂರ್ಯನಾರಾಯಣ ಭಟ್ ಪಾರ್ತಕೊಚ್ಚಿ ಅವರಿಗೆ ನುಡಿನಮನ ಸಲ್ಲಿಸಿ ಮೌನ ಪ್ರಾರ್ಥನೆ ನಡೆಸಲಾಯಿತು. ಸಂಘದ ಅಧ್ಯಕ್ಷ ರಮಾನಂದ ಎಡಮಲೆ ಅವರು ‘ಕರಾಡ ಕನಕ ಕೋಶ’ ನಿಧಿ ಸಂಗ್ರಹ ಹಾಗೂ ಬಹುಮಾನ ಯೋಜನೆಯನ್ನು ಪರಿಚಯಿಸಿದರು.
ಬಳಿಕ ಸೂರ್ಯನಾರಾಯಣ ಭಟ್ ಕಶೆಕೋಡಿ ಅವರು ಕರಾಡ ಸಮಾಜದ ಸಂಸ್ಕೃತಿ ಮತ್ತು ಜೀವನಕ್ರಮದ ಕುರಿತು ಉಪನ್ಯಾಸ ನೀಡಿದರು. ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಪ್ರಸಾದ ಭೋಜನ ನಡೆಯಿತು.
ಮಧ್ಯಾಹ್ನದಿಂದ ರಾತ್ರಿ ವರೆಗೆ ಕರಾಡ ಮಕ್ಕಳ ಗಾನಮಂಜರಿ, ಸಂಗೀತ, ವಯೊಲಿನ್ ವಾದನ, ಸಮೂಹಗಾಯನ, ‘ಜಂಬಾವತಿ ಕಲ್ಯಾಣ’ ಯಕ್ಷಗಾನ ತಾಳಮದ್ದಳೆ ಹಾಗೂ ಶ್ರೀ ಮೂಕಾಂಬಿಕ ಕಲ್ಚರಲ್ ಅಕಾಡೆಮಿ, ಪುತ್ತೂರು ಇವರಿಂದ ಭರತನಾಟ್ಯ ಸೇರಿದಂತೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರನ್ನು ರಂಜಿಸಿದವು.
ಸುವರ್ಣ ಸಂಭ್ರಮ ಸಮಿತಿ ಹಾಗೂ ವಿವಿಧ ವಲಯಗಳ ಪದಾಧಿಕಾರಿಗಳು, ಸದಸ್ಯರು ಮತ್ತು ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.




