
Article · August 30, 2026
ಪ್ರಶಸ್ತಿಯ ಹೊಳಪು ಮತ್ತು ಅನಾಮಧೇಯ ಬದುಕಿನ ಸಾತ್ವಿಕತೆ !
ಕಾರವಲ್ ಪತ್ರಿಕೆಯಲ್ಲಿ ಪ್ರಕಟವಾದ ಎಸ್ . ಎನ್ . ಭಟ್ ಸೈಪಂಗಲ್ಲು ಅವರ ಲೇಖನ (29-08-2026). ನಮ್ಮವರೇ ಆದ ನಾಗರಾಜ ಕೋಟೆ ಇವರ ಬಗ್ಗೆ .
ಕೇಂದ್ರೀಯ ವಿದ್ಯಾಲಯಗಳಲ್ಲಿ ಮುಖ್ಯೋಪಾಧ್ಯಾಯನಾಗಿ ದಶಕಗಳ ಕಾಲ ಸೇವೆ ಸಲ್ಲಿಸಿ, ಶಿಕ್ಷಣ, ಸಾಹಿತ್ಯ ಮತ್ತು ತರಬೇತಿ ಕಾರ್ಯಕ್ರಮಗಳು ಹೀಗೆ ಬದುಕಿನ ಬಹುಪಾಲು ಸಮಯವನ್ನು ಸಮಾಜಕ್ಕಾಗಿ ಸವೆಸಿದ ನನಗೆ, ೨೦೧೦ರ ಕೇಂದ್ರೀಯ ವಿದ್ಯಾಲಯ ವಲಯ ಪ್ರಶಸ್ತಿ, 2016 ರ ರಾಷ್ಟ್ರ ಪ್ರಶಸ್ತಿ ಸಿಕ್ಕಾಗ ನಾನು ಇನ್ನೂ ಕಣ್ಣೂರಿನಲ್ಲಿ ವೃತ್ತಿನಿರತನಾಗಿದ್ದೆ. ಆದರೆ ಕಳೆದ ದಿನಗಳಲ್ಲಷ್ಟೇ "ಕನ್ನಡಪಯಸ್ವಿನಿ ಸಾಧನಾ ಪ್ರಶಸ್ತಿ -2026" ಘೋಷಣೆಯಾದಾಗ ನನಗೆ ಅತೀವ ಸಂತಸ ತಂದಿತ್ತು. ಬದುಕಿನ ವೃತ್ತಿ ಮತ್ತು ಪ್ರವೃತ್ತಿ ಎರಡನ್ನೂ ಸಮನಾಗಿ ತೂಗಿ ನಡೆಸಿದ್ದಕ್ಕೆ ಸಿಕ್ಕ ಪ್ರತಿಫಲವಿದು ಎಂದು ನನ್ನೊಳಗಿನ ಸಾಮಾನ್ಯ ಮನುಷ್ಯ ಬೀಗುತ್ತಿದ್ದ.
ಡಿಜಿಟಲ್ ಮಾಧ್ಯಮಗಳಲ್ಲಿ ಮಿತ್ರರು, ಹಿತೈಷಿಗಳು ಶುಭ ಹಾರೈಸಿದಾಗ ಹೆಮ್ಮೆಯ ಜೊತೆಗೆ, ಮನಸ್ಸಿನ ಯಾವುದೋ ಮೂಲೆಯಲ್ಲಿ ಸಣ್ಣದೊಂದು ಅಹಂಕಾರದ ಗಾಳಿಯೂ ತುಂಬಿಕೊಳ್ಳಲಾರಂಭಿಸಿತ್ತು. ನೆರೆಹೊರೆಯವರ ಮನೆಯ ಪೂಜೆಗೆ ಹೋದಾಗಲೂ ಎಲ್ಲರ ಬಾಯಲ್ಲಿ ನನ್ನದೇ ಪ್ರಶಸ್ತಿಯ ಗುಣಗಾನ. ಕಿವಿಯಲ್ಲಿ ಹೊಗಳಿಕೆಯ ಮಾತುಗಳು ತುಂಬಿ, ಆಕಾಶವೇ ಕೈಗೆಟುಕುವಷ್ಟು ಉತ್ಸಾಹ, ನಾನೇನೋ ದೊಡ್ಡದನ್ನು ಸಾಧಿಸಿಬಿಟ್ಟೆ ಎನ್ನುವ ಆತ್ಮರತಿ ನನ್ನನ್ನು ಆವರಿಸಿತ್ತು. ಲೋಕವೆಲ್ಲ ನನ್ನನ್ನೇ ನೋಡುತ್ತಿದೆ ಎನ್ನುವ ಭ್ರಮೆಯಲ್ಲಿದ್ದ ಕ್ಷಣಗಳವು. ಆದರೆ, ವಿಧಿಯ ಆಟ ವಿಚಿತ್ರವಾದುದು. ನಮ್ಮ ಅಹಂಕಾರದ ಬಲೂನಿಗೆ ಸೂಜಿ ಚುಚ್ಚಲು ಅದಕ್ಕೆ ಬಹಳ ಸಮಯ ಬೇಕಾಗುವುದಿಲ್ಲ. ಅಂತಹದ್ದೇ ಒಂದು ಘಟನೆ ನನ್ನ ಮನೆಯಿಂದ ಬಂದ ಫೋನ್ ಕರೆಯ ಮೂಲಕ ಎದುರಾಯಿತು. “ಬೆಂಗಳೂರಿನಲ್ಲಿದ್ದ ಸಹೃದಯಿ ಇನ್ನಿಲ್ಲ” ಎನ್ನುವ ಸುದ್ದಿ ಅದು.
ಇಪ್ಪತ್ತರ ಹರೆಯದಲ್ಲೇ ಬೆಂಗಳೂರಿನ ಕಂಪನಿಯೊಂದಕ್ಕೆ ಸೇರಿ, ಅಲ್ಲೇ ಸಂಸಾರ ಹೂಡಿ, ಬದುಕು ಕಟ್ಟಿಕೊಂಡಿದ್ದ ಸಹೃದಯಿಯಾಗಿದ್ದಒಬ್ಬರ ಸಾವಿನ ಕಥೆಯಿದು. ಅವರು ತೀರಾ ಸಾತ್ವಿಕ ವ್ಯಕ್ತಿ. ಅತಿಯಾಗಿ ಮಾತನಾಡದ, ಅಹಂಕಾರದ ಲೇಶವೂ ಇಲ್ಲದ ನಿಗರ್ವಿ ಅವರು. ಅವರ ಪಾರ್ಥಿವ ಶರೀರ ಹುಟ್ಟೂರಿಗೆ ಬಂದಾಗ ವಿಚಿತ್ರ ಪರಿಸ್ಥಿತಿಯೊಂದು ಎದುರಾಯಿತು. ಬಿಡುವಿಲ್ಲದ ವಿವಿಧ ವೈದಿಕ ಕಾರ್ಯಕ್ರಮಗಳಲ್ಲಿ ಊರ ಪರಊರಿನ ವೈದಿಕರು ವಿವಿಧೆಡೆ ನಿರತರಾಗಿದ್ದರು . ಆ ಸಮಯದಲ್ಲಿ ಸಂಸ್ಕಾರ ಮಾಡಲು ಯಾವುದೇ ವೈದಿಕರು ಲಭ್ಯರಿರಲಿಲ್ಲ. ಅಂತಿಮ ಸಂಸ್ಕಾರದ ವಿಧಿವಿಧಾನಗಳು ಹೇಗೆ ನಡೆಯಬೇಕು ಎಂಬ ಗೊಂದಲದಲ್ಲಿದ್ದಾಗ, ಆ ಕತ್ತಲಿಗೆ ಬೆಳಕಾಗಿ ಬಂದವನೇ ನಾಗರಾಜ ಕೋಟೆ.
ನಾಗರಾಜ ಕೋಟೆ ನಮ್ಮೂರಿನ ಎಲ್ಲರ ಸ್ನೇಹಬಂಧು. ನಾನು ಊರು ಬಿಟ್ಟು ನಾಲ್ವತ್ತು ವರ್ಷಗಳೇ ಕಳೆದಿದ್ದರೂ, ನಾಗನ ಬದುಕು ಮಾತ್ರ ಊರಿನ ಸೇವೆಯಲ್ಲೇ ಸವೆದಿತ್ತು. ಏಳೆಂಟು ಮಂದಿ ಅಣ್ಣ-ತಮ್ಮಂದಿರಿರುವ ದೊಡ್ಡ ಜಂಟಿ ಕುಟುಂಬ ಅವನದು. ತನ್ನ ಕೆಲವು ಸಹೋದರರು ತಮ್ಮ ಪರಿಶ್ರಮ, ಓದು, ಪ್ರಾಪಂಚಿಕ ಜ್ಞಾನ ಬೆಳೆಸಿ ಸ್ವತಂತ್ರರಾಗಿ ತಮ್ಮದೇ ಬದುಕು ಕಟ್ಟಿ ಬೇರೆ ಬೇರೆ ಕಡೆ ನೆಲೆಸಿದರು. ಆದರೆ ನಾಗ ಮಾತ್ರ ತನ್ನ ಮನೆಯೆಂಬ ವಿಶೇಷ ಒಲವಿನ ಕೋಟೆಯಿಂದ ಮನೆಯೊಳಗಿದ್ದು ವಿಶ್ವ ವ್ಯಾಪಿಯಾದ. ಊರಲ್ಲೇ ಉಳಿದು ಅಪ್ಪಟ ಸಮಾಜಸೇವಕನಾದ. ಅವನ ಸೇವೆ ಇಂದಿನ ಜಗತ್ತಿಗೆ ಅಚ್ಚರಿ ತರಿಸುತ್ತದೆ. ಯಾವುದೇ ಸಭೆ-ಸಮಾರಂಭ, ಫೋಟೋಗಳಿಗೆ ಅವನು ಸಿಗುವವನಲ್ಲ. ಯಾರದ್ದೋ ಮನೆಯಲ್ಲಿ ಕಾರ್ಯಕ್ರಮವಿದೆ ಎಂದು ತಿಳಿದರೆ ಸಾಕು. ಬೆಳಗ್ಗೆ ಐದು-ಐದೂವರೆಗೇ ಎದ್ದು ಆ ಮನೆಗೆ ಹೋಗಿ ತರಕಾರಿ ಹೆಚ್ಚುವ ಕೆಲಸಕ್ಕೆ ಕುಳಿತುಬಿಡುತ್ತಿದ್ದ.
ನಾಗರಾಜನ ಕ್ಯಾರೆಕ್ಟರೇ ವಿಚಿತ್ರ. ಅವನು ಎಲ್ಲರೊಂದಿಗೂ ಬೆರೆಯುತ್ತಾನೆ, ಇಡೀ ಊರಿಗೆ ಅವನೆಂದರೆ ಇಷ್ಟ. ಆತನ ಬಗ್ಗೆ ತಿಳಿಯದವರೇ ಇಲ್ಲ ಎನ್ನಬಹುದು. ಎಂತಹದ್ದೇ ಕಷ್ಟದ ದೈಹಿಕ ಕೆಲಸ ಕೊಟ್ಟರೂ ಮುಖ ಸಿಂಡರಿಸದೆ ಮಾಡಿ ಮುಗಿಸುವ ತಾಕತ್ತು ಅವನದು. ನಾಲ್ಕೈದು ಜನರ ಸಭೆ-ಸಮಾರಂಭಗಳ ಮುಂದೆ ಬಂದು ಬೀಗುವ ಜಾಯಮಾನ ಅವನದಲ್ಲ. ವೇದಿಕೆಯ ಮುಂದೆ ಕಾಣಿಸಿಕೊಳ್ಳುವುದಕ್ಕಿಂತ ವೇದಿಕೆಯ ಹಿಂದೆ ನಿಂತು ಕೆಲಸ ಮಾಡುವುದರಲ್ಲೇ ಅವನಿಗೆ ಆನಂದ. ತನ್ನದೇ ಆದ ಆ ಆಪ್ತ ಗೆಳೆಯರ ಸಣ್ಣ ಗುಂಪಿನಲ್ಲಿ ಸಿಕ್ಕಾಗ ಮಾತ್ರ ಅವನು ಎಲ್ಲ ವಿಷಯಗಳನ್ನು ಮುಕ್ತವಾಗಿ ಮಾತನಾಡುತ್ತಾನೆ. ಅವನು ಯಾವುದನ್ನೂ ಮನಸ್ಸಿಗೆ ಹಚ್ಚಿಕೊಳ್ಳುವವನಲ್ಲ, ಯಾರ ಪ್ರಶಂಸೆಗೂ ಕಿವಿಗೊಡುವವನೂ ಅಲ್ಲ.
ಶಿಸ್ತು, ಸರಳತೆ ಮತ್ತು ಹಳ್ಳಿ ಮದ್ದಿನ ಜ್ಞಾನ : ನಾಗರಾಜನ ದಿನಚರಿ ಇಂದಿನ ಕಾರ್ಪೊರೇಟ್ ಜಗತ್ತಿನ "ಲೈಫ್ ಸ್ಟೈಲ್" ತಜ್ಞರಿಗೂ ಸವಾಲು ಹಾಕುವಂತದ್ದು. ರಾತ್ರಿ 9 ಗಂಟೆಯಾಗುತ್ತಲೇ ಇಡೀ ಜಗತ್ತು ಟಿವಿಯ ಮುಂದೆ ಕುಳಿತು ಕಾಲಹರಣ ಮಾಡಿದರೆ, ನಾಗನಿಗೆ ಟಿವಿ ಜೀವಿಗಳ ಸಹವಾಸವೇ ಬೇಡ. ಅವನು ರಾತ್ರಿ ಬೇಗನೇ ನಿದ್ರೆಗೆ ಜಾರುತ್ತಾನೆ. ಆದರೆ ಮುಂಜಾನೆಯೇ ಎದ್ದು ಯೋಗಾಸನದಲ್ಲಿ ಮಗ್ನನಾಗಿರುತ್ತಾನೆ. ಅವನ ಆಹಾರ ಶೈಲಿಯೂ ತೀರಾ ಸರಳ. ಮನೆಯಲ್ಲಿ ಯಾವುದೇ ತರಹದ ಅದ್ದೂರಿ ತಿನಿಸುಗಳಾಗಲಿ, ಜಿಡ್ಡಿನ ಅಡುಗೆಗಳಾಗಲಿ ಅವನಿಗೆ ಇಷ್ಟವಿಲ್ಲ. ತಿನಿಸುಗಳ ಬಗ್ಗೆ, ಅಡುಗೆಯ ಬಗ್ಗೆ ಅವನಿಗೆ ಯಾವುದೇ ಹಪಾಹಪಿಯಾಗಲಿ, ದುರಾಸೆಯಾಗಲಿ ಇಲ್ಲ.
ಅವನಿಗೆ ಹಳ್ಳಿ ಮದ್ದುಗಳ ಬಗ್ಗೆ ಇರುವ ಜ್ಞಾನ ನಿಜಕ್ಕೂ ಬೆರಗು ಹುಟ್ಟಿಸುವಂತದ್ದು. ಒಮ್ಮೆ ಸಮಾರಂಭವೊಂದರಲ್ಲಿ ಸುವರ್ಣಗೆಡ್ಡೆಯನ್ನು ಕತ್ತರಿಸುವ ಗಡಿಬಿಡಿಯಲ್ಲಿ ಸಹವರ್ತಿಯೊಬ್ಬರ ಕೈಗೆ ಮೊಟ್ಟಕತ್ತಿ ತಗುಲಿ ದೊಡ್ಡದೊಂದು ಗಾಯವಾಗಿ, ರಕ್ತ ಪ್ರವಾಹದಂತೆ ಹರಿಯಲಾರಂಭಿಸಿದಾಗ ನಾವೆಲ್ಲ ದಿಗ್ಬ್ರಾಂತರಾಗಿದ್ದೆವು. ಆದರೆ ನಾಗ ತಕ್ಷಣ ಎದ್ದವನೇ ಬಟ್ಟೆಯ ತುಂಡಿನಿಂದ ರಕ್ತದ ಸ್ರಾವವನ್ನು ತಡೆದು ಗಟ್ಟಿಯಾಗಿ ಕಟ್ಟು ಕಟ್ಟಿದ. ಅಷ್ಟಕ್ಕೇ ನಿಲ್ಲಿಸದೆ, ಒಡೋಡಿ ಹೋಗಿ ತುಳಸಿ, ಚಾಹುಡಿ ಅಂತಸೊಪ್ಪು, ಹುಡಿಗಳನ್ನು ಜಜ್ಜಿ ಪೇಸ್ಟ್ ಮಾಡಿ ಹಚ್ಚಿ ರಕ್ತಸ್ರಾವವನ್ನು ನಿಲ್ಲಿಸಿಬಿಟ್ಟಿದ್ದ. ಅವನ ಸಮಯಪ್ರಜ್ಞೆ ಒಬ್ಬ ನುರಿತ ವೈದ್ಯನಿಗಿಂತ ಕಮ್ಮಿಯಿರಲಿಲ್ಲ.
ಸಾಹಿತ್ಯ ಕೃಷಿ ಮತ್ತು ಕಲಾತ್ಮಕ ಪ್ರತಿಭೆಯ ಧೀಮಂತ ಲೋಕ : ನಾಗರಾಜ ಕೋಟೆ ಕೇವಲ ಶ್ರಮಜೀವಿ ಮಾತ್ರವಲ್ಲ; ಅವನ ಆಳದಲ್ಲಿ ಒಬ್ಬ ಪ್ರಖರ ಸಾಹಿತ್ಯಾಭಿಮಾನಿ ಮತ್ತು ಅಪ್ರತಿಮ ಕಲಾವಿದ ಅಡಗಿದ್ದಾನೆ. ಯಕ್ಷಗಾನದ ಮೇಲವನಿಗಿರುವ ಪ್ರೀತಿ ಮತ್ತು ಜ್ಞಾನ ಸಾಮಾನ್ಯವಾದದ್ದಲ್ಲ. ಯಕ್ಷಗಾನದ ತೆಂಕುತಿಟ್ಟಿನ ಭಾಗವತಿಕೆಯ ಪರಂಪರೆಯಲ್ಲಿ 'ಬಲಿಪರ ದಾಟಿ' ಎನ್ನುವುದು ಅತ್ಯಂತ ವಿಶಿಷ್ಟ ಹಾಗೂ ತೂಕಬದ್ಧ ಶೈಲಿ. ನಾಗ ಆ ಬಲಿಪರ ಧಾಟಿಯನ್ನು ಅದೆಷ್ಟು ಅದ್ಭುತವಾಗಿ ಅನುಕರಿಸಿ ಹಾಡುತ್ತಾನೆಂದರೆ, ಕೇಳುಗರು ಮೈಮರೆಯಬೇಕು!ಅಷ್ಟೇ ಅಲ್ಲ, ಯಕ್ಷಗಾನ ರಂಗದ ಪ್ರಗಲ್ಭ ಅರ್ಥಧಾರಿಗಳಾದ ಕುಂಬಳೆ ಸುಂದರರಾವ್ ಅವರಂತಹ ದೈತ್ಯ ಪ್ರತಿಭೆಗಳು ವೇದಿಕೆಯ ಮೇಲೆ ಪುರಾಣದ ಪಾತ್ರಗಳಿಗೆ ವಾಕ್ಚಾತುರ್ಯದಿಂದ ಅರ್ಥ ಹೇಳುವ ಆ ಗಂಭೀರ ಶೈಲಿಯನ್ನು ನಾಗರಾಜ ಅಷ್ಟೇ ತನ್ಮಯತೆಯಿಂದ, ಒಂದು ರೀತಿಯ ಅನುಕರಣೆಯಿಂದ ಮರುಸೃಷ್ಟಿಸಬಲ್ಲ! ಮುಖ್ಯವಾಗಿ, ರಾಜಸೂಯ ಯಾಗದ ಹಿನ್ನೆಲೆಯಲ್ಲಿ ಬರುವ ಮಾಗಧ ವಧೆ ಪ್ರಸಂಗದ ಸಂದರ್ಭದಲ್ಲಿ, ಮಾಗಧನು ತನ್ನ ಯಾಗದ ಸಂದರ್ಭದಲ್ಲಿ ಪರಿಸ್ಥಿತಿಗೆ ತಕ್ಕಂತೆ ಆಡುವ ಅತ್ಯಂತ ಔಚಿತ್ಯಪೂರ್ಣವಾದ, ಸಾಹಿತ್ಯಿಕ ಮೌಲ್ಯವಿರುವ ಮಾತುಗಳನ್ನು ನಾಗರಾಜ ಅತ್ಯಂತ ಶೈಲಿಬದ್ಧವಾಗಿ ಉದ್ಧರಿಸುವಾಗ ಅವನ ಪ್ರತಿಭೆಗೆ ತಲೆಬಾಗಲೇಬೇಕು. ಈ ರೀತಿಯ ಸಾಹಿತ್ಯಿಕ ಒಳನೋಟ ಮತ್ತು ರಂಗ ಪ್ರತಿಭೆ ಇದ್ದರೂ ಅವನು ಅದನ್ನು ಎಂದೂ ದೊಡ್ಡ ವೇದಿಕೆಗಳಲ್ಲಿ ಪ್ರದರ್ಶಿಸಿ ಪ್ರಚಾರ ಪಡೆಯಲು ಹೋಗಿಲ್ಲ.
ಕೈಚಳಕದ ಜಟ್ಪಟ್ ಅಡುಗೆ ಭಟ್ಟ ಮತ್ತು ಮ್ಯಾನೇಜರ್ : ನಾಗರಾಜ ಕೇವಲ ತರಕಾರಿ ಹೆಚ್ಚುವವನು ಮಾತ್ರವಲ್ಲ. ಅವನು ನೈಪುಣ್ಯತೆ ಹೊಂದಿದ ಜಟ್ಪಟ್ ಅಡುಗೆಯವನೂ ಹೌದು. ಹತ್ತೋ ಐವತ್ತೋ ಜನರ ಸಮಾರಂಭಕ್ಕೆ ದಿಢೀರನೆ ಅಡುಗೆಯ ಅವಶ್ಯಕತೆ ಬಂದರೆ ನಾಗರಾಜ ತಾನೇ ಕೈಜೋಡಿಸಿ ನಿಲ್ಲುತ್ತಾನೆ. ಪಲ್ಯ, ಸಾಂಬಾರು, ಅವಿಲು, ತೋವೆ ಹಾಗೂ ಅತ್ಯಂತ ರುಚಿಕರವಾದ ಪಾಯಸ... ಹೀಗೆ ಭಕ್ಷ್ಯ ಭೋಜ್ಯಗಳನ್ನು ಕ್ಷಣಾರ್ಧದಲ್ಲಿ ಸಿದ್ಧಪಡಿಸಿ ಉಣಬಡಿಸುವ ಅವನ ಪಾಕ ಕೌಶಲ್ಯಕ್ಕೆ ಇಡೀ ಊರೇ ಸಾಕ್ಷಿ. ದೇವಸ್ಥಾನವಿರಲಿ, ಶಾಲೆಯಿರಲಿ ಊರಿನ ಯಾವುದೇ ಕಟ್ಟಡ ನಿರ್ಮಾಣದ ಕೆಲಸ ನಡೆಯುತ್ತಿದ್ದರೂ ನಾಗ ಅಲ್ಲಿ ಸ್ವಯಂಸೇವಕನಾಗಿ ಹಾಜರ್. ಕೇವಲ ಕೆಲಸ ಮಾಡುವುದಷ್ಟೇ ಅಲ್ಲ, ತನ್ನ ವಿಶಿಷ್ಟ ಜೋಲಿ-ಜೋಕುಗಳಿಂದ ಇಡೀ ಸಮೂಹಕ್ಕೆ ಹೊಸ ಚೈತನ್ಯ ತುಂಬುವ ಅದ್ಭುತ ಪ್ರೇರಕ ಶಕ್ತಿ ಅವನು.
ಅವನಲ್ಲೊಬ್ಬ ಅದ್ಭುತ ಜ್ಞಾನಿಯಿದ್ದಾನೆ. ದೇಶದ ರಾಜಕೀಯ ಸ್ಥಿತ್ಯಂತರಗಳಿರಲಿ, ಅಂತರರಾಷ್ಟ್ರ ಕ್ರೀಡಾಕೂಟಗಳಿರಲಿ ಅಥವಾ ಊರಿನಲ್ಲಿರುವ ಸಮಾಜದ ಪ್ರತಿಯೊಂದು ಕುಟುಂಬದ ಆಳ-ಅಗಲಗಳಿರಲಿ, ನಾಗರಾಜನಿಗೆ ಎಲ್ಲವೂ ಕರಗತ. ಅವನು ವೇದಿಕೆಯ ಮೇಲೆ ನಿಂತು ಭಾಷಣ ಮಾಡುವವನಲ್ಲ. ಆದರೆ ವೇದಿಕೆಯ ಮೇಲಿರುವ ಅತಿಥಿಗಳು ಮಾಡುವ ಭಾಷಣವನ್ನು ತನ್ನದೇ ಆದ ತೀಕ್ಷ್ಣ ಮಾನದಂಡಗಳಲ್ಲಿ ವಿಮರ್ಶಿಸುವ ಸಾಮರ್ಥ್ಯ ಅವನಲ್ಲಿದೆ. ಅವನ ಬಾಯಿಗೆ ಯಾರಾದರೂ ಕೋಲು ಹಾಕಿದರೆ ಸಾಕು, ಊರಿನ ಜಾತಿ ಸಮಸ್ಯೆಗಳಿರಲಿ ಅಥವಾ ವಿವಾದಾತ್ಮಕ ವಿಷಯಗಳಿರಲಿ, ಅವುಗಳ ಆಳವಾದ ಹಿನ್ನೆಲೆಯನ್ನು ಅರಿತುಕೊಂಡು ನಿಖರವಾಗಿ ಮಾತನಾಡುವ ನಾಗ ಒಬ್ಬ "ಸಂಪನ್ಮೂಲ ವ್ಯಕ್ತಿ". ಕೂಡು ಕುಟುಂಬದ ವ್ಯವಹಾರಗಳಲ್ಲಿ ಎಂದೂ ಮೂಗು ತೂರಿಸದ ನಾಗ, "ನನ್ನದೇ" ಆದ ಆಸ್ತಿ-ಪಾಸ್ತಿ ಮಾಡಬೇಕು ಎಂಬ ಸ್ವಾರ್ಥದಿಂದ ಮನೆಯಿಂದ ದೂರ ಸರಿದವನೂ ಅಲ್ಲ. ತನ್ನ ಇಡೀ ಸಂಸಾರದೊಂದಿಗೆ ಅವಿನಾಭಾವ ಸಂಬಂಧ ಹೊಂದುತ್ತಾ ಬೆರೆತು ನಿಂತಿದ್ದಾನೆ. ಎಲ್ಲ ವಿಷಯಗಳಲ್ಲೂ ಸೈ ಎನಿಸಿಕೊಂಡರೂ, ತನ್ನ ಬದುಕಿನ ವೈಯಕ್ತಿಕ ದುಃಖ, ಬೇಜಾರನ್ನು ಎಂದೂ ಇನ್ನೊಬ್ಬರ ಮುಂದೆ ಹಂಚಿಕೊಂಡವನಲ್ಲ.
ಅಂತಿಮ ಸಂಸ್ಕಾರದ ದಾರ್ಶನಿಕ: ಇದುವರೆಗೆ ತನ್ನ ಜೀವಿತಾವಧಿಯಲ್ಲಿ ನೂರಕ್ಕೂ ಹೆಚ್ಚು ಜನರ ಶವಸಂಸ್ಕಾರವನ್ನು ಹತ್ತಿರ ನಿಂತು ಮಾಡಿಸಿರುವ ಮಹಾನ್ ಅನುಭವ ನಾಗರಾಜನದು. ಅವನಿಗೆ ದೊಡ್ಡ ವೈದಿಕ ಮಂತ್ರಗಳು ಬರದೇ ಇರಬಹುದು, ಆದರೆ ಅಂತಿಮ ಸಂಸ್ಕಾರದ ಆರಂಭದಿಂದ ಕೊನೆಯವರೆಗಿನ ಎಲ್ಲಾ ಆಚರಣೆಗಳ ಸೂಕ್ಷ್ಮ ಜ್ಞಾನ ಅವನಿಗೆ ಕರಗತವಾಗಿದೆ. ಕಾರ್ಯಕ್ಕೆ ಇಳಿದಾಗ ನಾಗನ ಆ ಅಪಾರ ಅನುಭವದ ಮುಂದೆ ಇಡೀ ಊರು ತಲೆಬಾಗಬೇಕು. ನಾಗರಾಜನ ಬದುಕಿಗೊಂದು ಗಹನವಾದ ತತ್ವವಿದೆ. ಅವನು ಯಾವಾಗಲೂ ಹೇಳುತ್ತಾನೆ: "ಮನುಷ್ಯ ಸತ್ತ ನಂತರ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಈ ಶರೀರವನ್ನು ಪವಿತ್ರವಾದ ಅಗ್ನಿದೇವನಿಗೆ ಅರ್ಪಿಸಬೇಕು. ಅದಕ್ಕಿಂತ ದೊಡ್ಡ ಪುಣ್ಯದ ಕೆಲಸ ಬೇರೊಂದಿಲ್ಲ." ಯಾಕೆಂದರೆ, ಸಾವು ಸಂಭವಿಸಿದಾಗ ಆ ಮನೆಯಲ್ಲಿ ಆವರಿಸುವ ಸೀರಿಯಸ್ ವಾತಾವರಣ, ದುಃಖದ ಭಾರ ಹೆಪ್ಪುಗಟ್ಟಿರುತ್ತದೆ. ಆ ಮಡಿದ ಜೀವ ಅಗ್ನಿಗೆ ಅರ್ಪಣೆಯಾದ ತಕ್ಷಣವೇ ಆ ಮನೆಯ ವಾತಾವರಣ ತಿಳಿಯಾಗುತ್ತದೆ, ದುಃಖ ಹಗುರಾಗುತ್ತದೆ ಎಂಬುದು ನಾಗನ ನಂಬಿಕೆ. ಅದಕ್ಕಾಗಿಯೇ ಬೆಂಗಳೂರಿನ ಸಹೃದಯಿಯ ಸಾವಿನ ಸಂದರ್ಭದಲ್ಲೂ ವೈದಿಕರು ಸಿಗದಿದ್ದಾಗ ಅಂತ್ಯ ಸಂಸ್ಕಾರದವಿಧಿ ವಿಧಾನಗಳನ್ನು ಆಚಾರ-ಸಂಪ್ರದಾಯಗಳಿಗೆ ಚ್ಯುತಿಯಾಗದಂತೆ ನಾಗರಾಜನೇ ಮುಂಚೂಣಿಯಲ್ಲಿ ನಿಂತು ಸೂಕ್ತವಾಗಿ ನಡೆಸಿಕೊಟ್ಟ .
ಕಣ್ಣು ತೆರೆಸಿದ ಸತ್ಯ: ಸಹೃದಯಿಯ ಪಾರ್ಥಿವ ಶರೀರ ಅಗ್ನಿಗೆ ಅರ್ಪಣೆಯಾಗಿ, ಅಲ್ಲಿನ ವಾತಾವರಣ ತಿಳಿಯಾಗುತ್ತಾ ಬಂದಂತೆ ನನ್ನೊಳಗಿನ ಅಹಂಕಾರವೂ ಕರಗಿ ನೀರಾಯಿತು. ನನಗೆ " ಪ್ರಶಸ್ತಿ -ಬಂದಿದ್ದಕ್ಕೇ ಡಿಜಿಟಲ್ ಮಾಧ್ಯಮಗಳಲ್ಲಿ ಫೋಟೋ ಹಂಚಿಕೊಂಡು, ಜನರ ಚಪ್ಪಾಳೆಗೆ ಕಿವಿಕೊಟ್ಟು ಬೀಗುತ್ತಿದ್ದ ನನ್ನ ಬದುಕೆಲ್ಲಿ? ಯಕ್ಷಗಾನದ ಭಾಗವತಿಕೆ, ಬಲಿಪರ ಧಾಟಿ, ಕುಂಬಳೆ ಸುಂದರರಾವ್ ಅವರಂತಹ ಪ್ರಗಲ್ಭರ ಅರ್ಥಗಾರಿಕೆಯ ಅಪ್ರತಿಮ ಸಾಹಿತ್ಯ ಜ್ಞಾನವಿದ್ದರೂ, ನೂರಾರು ಜೀವಗಳ ಕೊನೆಯ ಪಯಣಕ್ಕೆ ಹೆಗಲು ಕೊಟ್ಟು, ಇಡೀ ಊರಿನ ನೋವುಗಳಿಗೆ ಮಿಡಿದೂ ಯಾವುದೇ ಫೋಟೋ, ಸನ್ಮಾನ, ಪ್ರಚಾರ ಬಯಸದೆ ವೇದಿಕೆಯ ಹಿಂದೆ ಉಳಿಯುವ ನಾಗರಾಜನ ಬಹುಮುಖಿ ಕರ್ಮಯೋಗವೆಲ್ಲಿ?
ಪ್ರಶಸ್ತಿಯ ಹೊಳಪು ಕೇವಲ ಕಣ್ಣು ಕೋರೈಸುವ ಭ್ರಮೆ. ಆದರೆ ನಾಗರಾಜನಂತಹವರ ಬದುಕಿನ ಸಾತ್ವಿಕತೆ, ಕಲಾ ನೈಪುಣ್ಯತೆ, ನಿಸ್ವಾರ್ಥ ಸೇವೆ ಮತ್ತು ಬದುಕಿನ ನಶ್ವರತೆಯನ್ನು ಅರಿತ ಆಚರಣೆಗಳೇ ಸಮಾಜದ ನಿಜವಾದ ಅಸ್ತಿತ್ವ. ಸಹೃದಯಿಯ ನಿಶ್ಶಬ್ದ ಸಾವು ಮತ್ತು ನಾಗರಾಜನ ನಿರಹಂಕಾರದ ಸೇವೆ ನನಗೆ ಬದುಕಿನ ನಿಜವಾದ ಪ್ರಶಸ್ತಿ ಯಾವುದು ಎಂಬುದನ್ನು ಮನವರಿಕೆ ಮಾಡಿಕೊಟ್ಟಿತು.
******
(ಸ್ವತಂತ್ರ ಅಂಕಣಕಾರ, ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕ, ಜೇಸೀಸ್ ರಾಜ್ಯ ಮಟ್ಟದ ತರಬೇತುದಾರ)
