Karada Vishwa

Article · November 5, 2026

ಭಜನೆ

ವೀಣಾ ಎಂ ಭಟ್

ಗೋವರ್ಧನ ಗಿರಿಧಾರಿ ಮುರಾರಿ

ಗೋಪಾಲಕನೇ ಅಸುರ ಸಂಹಾರಿ

ಕೌಸ್ತುಭ ಮಣಿಪ್ರಿಯ ಶ್ಯಾಮಲ ರೂಪನೇ

ಮರಕತ ವರ್ಣನೇ ಮಾಣಿಕ್ಯ ಧರನೇ

ಮಂಜುಳ ನಾದಪ್ರಿಯ ಮುರಳೀಲೋಲನೇ

ಮುನಿಜನ ವಂದಿತ ನಂದ ಮುಕುಂದನೇ

ನಿನ್ನೀ ಜೀವನದ ನಾಟಕ ರಂಗದಲಿ

ಸೂತ್ರಧಾರನು ನೀನೆ ಪಾತ್ರಧಾರಿಯು ನೀನೇ

ಭಕ್ತ ವತ್ಸಲ ನಿನ್ನ ನಾಮದ ಮಹಿಮೆಯು

ಮುಕ್ತಿದಾಯಕ ಕಂಡೆ ಅಸುರ ನಿಗ್ರಹದಲ್ಲಿ

ಮಧ್ಯಮ ಪಾಂಡವಗೆ ಗೀತೆಯ ಬೋಧಿಸಿದೆ

ಕೌರವ ನಿಗ್ರಹಕೆ ಕಾರಣ ನೀನಾದೆ

ಕೃಷ್ಣ ನೀ ಗೀತೆಯ ನೀತಿಯನು ಸಾರಿದೆ

ನಾವೆಂತು ಅರಿಯಲಿ ನಿನ್ನ ಲೀಲೆಯನು ದೇವಾ

ದುಷ್ಟ ನಿಗ್ರಹಕಾಗಿ ಯುಗ ಯುಗದಲಿ ಬಂದೆ

ಶಿಷ್ಟರ ರಕ್ಷಣೆಗಾಗಿ ಓಡೋಡಿ ಬಂದೆ

ಇನ್ನೊಮ್ಮೆ ಬಾ ದೇವಾ ಕಲಿಯುಗದಿ ಅವತರಿಸಿ

ದುಷ್ಟರ ಅಟ್ಟಹಾಸ ಮಟ್ಟ ಹಾಕಲು ದೇವಾ

Creative Writings