Karada Vishwa

News · September 22, 2026

ನಟನಂ ಭರತನಾಟ್ಯ ಕಿರೀಟ ಮುಡಿಗೇರಿಸಿದ ಶ್ರೀಮತಿ ಪನ್ನಗ ರಾಧಾಕೃಷ್ಣ

ಕರಾಡ ವಿಶ್ವದ ಅಭಿನಂದನೆಗಳು

ಡೈಜಿವರ್ಲ್ಡ್ ಟಿ.ವಿ ಮತ್ತು ಶ್ರೀದೇವಿನೃತ್ಯಾರಾಧನಾ ಕಲಾಕೇಂದ್ರ(ರಿ)ಪುತ್ತೂರು ಇವರ ನೇತೃತ್ವದಲ್ಲಿ ಕರ್ನಾಟಕದಲ್ಲಿ ನಡೆದ ಮೊಟ್ಟ ಮೊದಲ ಭರತನಾಟ್ಯ ರಿಯಾಲಿಟಿ ಷೋ "ನಟನಮ್" ಕಿರೀಟವನ್ನು ಉಡುಪಿಯ ಶ್ರೀಮತಿ ಪನ್ನಗ ರಾಧಾಕೃಷ್ಣ ಇವರು ಮುಡಿಗೇರಿಸಿದರು.

ಹದಿಮೂರು ತಿಂಗಳುಗಳ ಕಾಲ ಹಲವು ಸುತ್ತುಗಳಲ್ಲಿ ನಡೆದ ಈ ಭರತನಾಟ್ಯ ಸ್ಪರ್ಧೆಯಲ್ಲಿ ತೀರ್ಪುಗಾರರ ಮನ್ನಣೆಗೆ ಪಾತ್ರರಾಗಿ ತಮ್ಮ ಅದ್ಭುತ ನಾಟ್ಯ-ಅಭಿನಯದ ಜೊತೆಗೆ ಕಠಿಣ ಪರಿಶ್ರಮದ ಮೂಲಕ ಭರತನಾಟ್ಯ ಯೂತ್ ಐಕಾನ್ ಆಗಿ ಗುರುತಿಸಲ್ಪಟ್ಟು ನಟರಾಜನ ಮೂರ್ತಿಯ ಜೊತೆಗೆ ಐವತ್ತು ಸಾವಿರ ರೂ. ನಗದನ್ನು ತಮ್ಮ ಪಾಲಿಗೆ ಒಲಿಸಿಕೊಂಡರು.

ತೀರ್ಪುಗಾರರಾಗಿ ಶ್ರೀದೇವಿ ನೃತ್ಯಾರಾಧನ ಕಲಾ ಕೇಂದ್ರದ ಸ್ಥಾಪಕಿಯಾದ ಶ್ರೀಮತಿ ರೋಹಿಣಿ ಉದಯ್, ವಿ. ಪ್ರಮೋದ್ ಉಳ್ಳಾಲ್ ಮತ್ತು ವಿ. ವೀಣಾ ಸಾಮಗ ಉಡುಪಿ ಮತ್ತು ಇನ್ನಿತರರು ಭಾಗವಹಿಸಿದ್ದರು.

ಕರ್ನಾಟಕ ಸಂಗೀತ ನೃತ್ಯ ಅಕಾಡಮಿಯ ಅಧ್ಯಕ್ಷೆಯಾದ ವಿದುಷಿ ಶುಭ ಧನಂಜಯ್, ಬೆಂಗಳೂರು ಇವರು ಪ್ರಶಸ್ತಿಯನ್ನು ನೀಡಿ "ಈಕೆಯ ಸಾಧನೆಯನ್ನು ಈ ಹಿಂದೆಯೇ ಗಮನಿಸಿದ್ದು, ಸಹಸ್ರ ಸಂಖ್ಯೆಯ ಕಲಾಪ್ರೇಮಿಗಳ ಹೃದಯವನ್ನು ನಾಟ್ಯದಿಂದ ಗೆದ್ದಿದ್ದಾರೆ. ಜೊತೆಗೆ ಅವರ ಅಭೂತಪೂರ್ವವಾಗಿರುವ ಪ್ರದರ್ಶನಕ್ಕೆ ನಟರಾಜನ ಅನುಗ್ರಹ ಸದಾ ಇರುತ್ತದೆ" ಎಂದು ಶುಭಾಶಂಸನೆಯನ್ನು ನೀಡಿದರು.

ಡೈಜಿವರ್ಲ್ಡ್ ನ ಸ್ಥಾಪಕರಾದ ಶ್ರೀ ವಾಲ್ಟರ್ ನಂದಳಿಕೆ ಇವರು "ಇದು ಅದೃಷ್ಟದ ಫಲವಲ್ಲ. ಈಕೆಯ ಪರಿಶ್ರಮದ ಫಲ. ಮುಂದೆ ಉನ್ನತವಾಗಿರುವ ಜವಾಬ್ದಾರಿ ಇವರ ಮೇಲಿದೆ. ಅದನ್ನು ನಿಭಾಯಿಸಿ ನಾಟ್ಯದಲ್ಲಿ ಇನ್ನೂ ಉನ್ನತ ಸಾಧನೆಯನ್ನು ಮಾಡಲಿ" ಎಂದು ಆಶಂಸಿಸಿದರು.

ಈ ಕಾರ್ಯಕ್ರಮದ ಪ್ರಧಾನರಾದ ಶ್ರೀ ವಿಘ್ನೇಶ್, ಶ್ರೀ ಉದಯ್ ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಉಡುಪಿಯ ಗಣೇಶ ಭಟ್ ಮತ್ತು ಶ್ರೀಮತಿ ಸುಮಾ ಗಣೇಶ್ ಇವರ ಪುತ್ರಿಯಾದ ಈಕೆ ಡಾ. ರಾಧಾಕೃಷ್ಣ ಬೇಂಗ್ರೋಡಿ ಇವರ ಧರ್ಮಪತ್ನಿಯಾಗಿದ್ದಾರೆ.

ಪ್ರಸ್ತುತ ಇವರು ಉಡುಪಿಯ ಸೃಷ್ಟಿ ನೃತ್ಯಕಲಾ ಕುಟೀರದ ಡಾ. ಮಂಜರಿ ಚಂದ್ರ ಪುಷ್ಪರಾಜ್ ಇವರ ಶಿಷ್ಯೆಯಾಗಿದ್ದು ದೇಶ-ವಿದೇಶಗಳಲ್ಲಿ ಭರತನಾಟ್ಯ ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ.

AchieversArt
ನಟನಂ ಭರತನಾಟ್ಯ ಕಿರೀಟ ಮುಡಿಗೇರಿಸಿದ ಶ್ರೀಮತಿ ಪನ್ನಗ ರಾಧಾಕೃಷ್ಣ