
Article · June 9, 2026
ಅಂದು ಬಿಎಸ್‌ವೈ, ಇಂದು ಸಿದ್ದು: ಹೋದರು ಅಧಿಕಾರದಿಂದ ಎದ್ದು!
ಈ ಬಾರಿಯ ನ್ಯೂ ಮಂಗಳೂರು ಟೈಮ್ಸ್ ಆನ್‌ಲೈನ್ ಪಾಕ್ಷಿಕದಲ್ಲಿ... ರವೀ ಸಜಂಗದ್ದೆ ಅಂಕಣ ಬರಹ
ಕರ್ನಾಟಕದ ರಾಜಕಾರಣದಲ್ಲಿ ಮತ್ತೊಂದು ಹೊಸ ಮನ್ವಂತರ! ಅಧಿಕಾರ ಹಸ್ತಾಂತರ, ಅಧಿಕಾರ ಬದಲಾವಣೆ, ಹೊಸ ನಾಯಕತ್ವ/ಮುಖ್ಯಮಂತ್ರಿ ಅಧಿಕಾರಕ್ಕೆ ಏರುವ ಹಂತಕ್ಕೆ ರಾಜ್ಯ ರಾಜಕಾರಣ ಬಂದು ನಿಂತಿದೆ! ಐದು ದಶಕಗಳ ಕಾಲ ಜನತಾದಳ ಮತ್ತು ಕಾಂಗ್ರೆಸ್ ಪಕ್ಷದಲ್ಲಿ ಇದ್ದುಕೊಂಡು ಚಳುವಳಿ-ಹೋರಾಟದ ರಾಜಕಾರಣ ಮಾಡಿಕೊಂಡು ಬಂದ, ಸಮಾಜವಾದಿ ಸಿದ್ಧಾಂತದ ಅನುಯಾಯಿ ಸಿದ್ದರಾಮಯ್ಯ ಶಸ್ತ್ರತ್ಯಾಗ ಮಾಡಿದ್ದಾರೆ. ಕಳೆದ ಆರು ತಿಂಗಳಿನಿಂದ ಆಗೀಗ ಮುನ್ನೆಲೆಗೆ ಬರುತ್ತಿದ್ದ ಅಧಿಕಾರ ಹಸ್ತಾಂತರ, ಮುಖ್ಯಮಂತ್ರಿ ಬದಲಾವಣೆ, ಅಧಿಕಾರ ಹಂಚಿಕೆ ಒಪ್ಪಂದ ಈಗ ಚಾಲ್ತಿಗೆ ಬಂದಿದೆ! ಎಲ್ಲವೂ ಕಾಂಗ್ರೆಸ್ ಹೈಕಮಾಂಡ್ ನಿರ್ದೇಶನದಂತೆ, ಅಂದುಕೊಂಡಿದ್ದಕ್ಕಿಂತ ಸುಲಲಿತವಾಗಿ ನಡೆದಿದೆ. ಅನುಭವಸಂಪನ್ನ ಸಿದ್ದರಾಮಯ್ಯ ಮಾಜಿ ಮುಖ್ಯಮಂತ್ರಿಯಾಗಿ ಅಧಿಕಾರದ ರಾಜಕಾರಣದಿಂದ ವಿರಮಿಸಿದ್ದಾರೆ. ಯಾವುದೇ ಬಂಡಾಯ, ಪಕ್ಷಾಂತರ, ಅವಧಿಪೂರ್ವ ಚುನಾವಣೆ ನಡೆಯದಿದ್ದರೆ ಕರ್ನಾಟಕಕ್ಕೆ ಇನ್ನೆರಡು ವರ್ಷ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ.
ಪಕ್ಷದ ಆಂತರಿಕ ಕಲಹ, ಅಧಿಕಾರಕ್ಕಾಗಿ ಮೇಲುಗೈ ಸಾಧಿಸುವ ಯತ್ನ, ಬಣ ಬಡಿದಾಟ, ಪಕ್ಷದ ಇತರ ಹಿರಿಯರ ಪರಿಶ್ರಮಕ್ಕೆ ಕೂಲಿ ಸಂದಾಯ, 75ಕ್ಕೆ ಸ್ವಯಂ ನಿವೃತ್ತಿ ಮತ್ತು ತನಗಿಂತ ಕಿರಿಯರಿಗೆ ದಾರಿ ಮಾಡಿ ಕೊಡುವ ತಂತ್ರಗಾರಿಕೆಯ ಭಾಗವಾಗಿ 2011ರ ಆಗಸ್ಟ್‌ನಲ್ಲಿ ಅಂದಿನ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಮತ್ತು 2026ರ ಮೇ ತಿಂಗಳಲ್ಲಿ ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರ ತ್ಯಜಿಸಿ, 'ನುಡಿದಂತೆ ನಡೆದುಕೊಂಡಿದ್ದಾರೆ'! ಎರಡೂ ಸಂದರ್ಭಗಳಲ್ಲಿ ಇಬ್ಬರೂ ನಡೆದುಕೊಂಡ ರೀತಿ, ಯಾವುದೇ ಪ್ರತಿರೋಧ ತೋರದೆ ಅಧಿಕಾರ ಬಿಟ್ಟುಕೊಟ್ಟದ್ದು ಅಪರೂಪ ಮತ್ತು ಯಾವುದೇ ಕಾಲಕ್ಕೂ ಮಾದರಿ ನಡೆ. ಸ್ವಇಚ್ಛೆ ಏನೇ ಆಗಿದ್ದರೂ ಇವರಿಬ್ಬರೂ ಅಧಿಕಾರ, ಅದರಲ್ಲೂ ಮುಖ್ಯಮಂತ್ರಿ ಸ್ಥಾನ ಬಿಟ್ಟು ಕೊಡುವ ಗಟ್ಟಿ ನಿರ್ಧಾರ ಮಾಡಿ 'ನುಡಿದಂತೆ ನಡೆದಿದ್ದೇವೆ' ಎಂದು ಗರ್ವದಿಂದ ಹೇಳಿಕೊಳ್ಳಬಹುದು!
ಬಿ.ಎಸ್. ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ಇವರಿಬ್ಬರೂ ಕರ್ನಾಟಕದ ರಾಜಕಾರಣದ ಎರಡು ವಿಭಿನ್ನ ಧ್ರುವಗಳಾದರೂ, ಇಬ್ಬರ ನಡುವಿನ ರಾಜಕೀಯ ಮತ್ತು ಸಾಮಾಜಿಕ ಬದುಕಿನಲ್ಲಿ ಅಗಾಧವಾದ ಸಾಮ್ಯತೆಗಳಿವೆ! ಇಬ್ಬರೂ ಯಾವುದೇ ರಾಜಕೀಯ ಹಿನ್ನೆಲೆಯಿಲ್ಲದೆ, ತಳಮಟ್ಟದಿಂದ, ನಿರಂತರ ಹೋರಾಟಗಳ ಮೂಲಕವೇ ನಾಯಕರಾಗಿ ಬೆಳೆದವರು. ಬಿಎಸ್‌ವೈ ಲಿಂಗಾಯತ ಸಮುದಾಯ, ಜನರು ಧ್ವನಿ ಮತ್ತು ಹಿಂದುತ್ವದ ಆಧಾರದ ಮೇಲೆ ಪ್ರಬಲ ನಾಯಕರಾಗಿ ಹೊರಹೊಮ್ಮಿದರೆ, ಸಿದ್ದು 'ಅಹಿಂದ' (ಅಲ್ಪಸಂಖ್ಯಾತ, ಹಿಂದುಳಿದ, ದಲಿತ) ವರ್ಗಗಳ ಆಶಾಕಿರಣವಾಗಿ, ಸಾಮಾಜಿಕ ನ್ಯಾಯದ ಹರಿಕಾರರಾಗಿ, ನಿರಂತರ ಹೋರಾಟಗಳ ಮೂಲಕ ಹಂತ ಹಂತವಾಗಿ ಬೆಳೆದರು. 2021ರಲ್ಲಿ ಬಿಎಸ್‌ವೈ ಕಣ್ಣೀರಿನೊಂದಿಗೆ, ಪಕ್ಷದ ಶಿಸ್ತಿಗೆ-ಆದೇಶಕ್ಕೆ ತಲೆಬಾಗಿ ತನ್ನ ಸ್ಥಾನ ಬಿಟ್ಟುಕೊಟ್ಟರು. ಇಂದು ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದ ಆಂತರಿಕ ಒಪ್ಪಂದ ಮತ್ತು ಅಧಿಕಾರ ಹಂಚಿಕೆ ಸೂತ್ರದಡಿಯಲ್ಲಿ ಅದೇ ರೀತಿಯ ಪ್ರಬುದ್ಧತೆಯನ್ನು ಮೆರೆದು, ನೂತನ ನಾಯಕರಿಗೆ ಹಾದಿ ಸುಗಮ ಮಾಡಿ ಕೊಟ್ಟಿದ್ದಾರೆ. ಈ ಎರಡೂ ನಿರ್ಗಮನಗಳು ಅಧಿಕಾರದ ವ್ಯಾಮೋಹಕ್ಕಿಂತ, ಪಕ್ಷದ ಸಂಘಟನೆ ಮತ್ತು ಭವಿಷ್ಯದ ದೃಷ್ಟಿಯಿಂದ ಎರಡೂ ಪಕ್ಷಗಳು ತೆಗೆದುಕೊಂಡ ದಿಟ್ಟ ಹೆಜ್ಜೆಯಾಗಿ ಚರಿತ್ರೆಯಲ್ಲಿ ದಾಖಲಾಗಿವೆ.
ಸಿದ್ದರಾಮಯ್ಯನವರ ರಾಜಕೀಯ ಜೀವನ ಪಯಣ ಒಂದು ರೋಚಕ ಕಹಾನಿ! ಮೈಸೂರಿನ ಸಿದ್ದರಾಮನಹುಂಡಿಯೆಂಬ ಸಣ್ಣ ಹಳ್ಳಿಯ ಕುರುಬ ಸಮುದಾಯದ, ಹಠವಾದಿ, ಭಲವಾದಿ, ಬಿಸಿರಕ್ತದ ಯುವಕನೊಬ್ಬ ವಕೀಲ ವೃತ್ತಿ ಆರಂಭಿಸಿ, ಬಳಿಕ ಸಮಾಜವಾದಿ ಚಿಂತನೆಗಳಿಗೆ ಆಕರ್ಷಿತರಾಗಿ ರಾಜಕೀಯ ಪ್ರವೇಶಿಸಿದ್ದು ಈಗ ಇತಿಹಾಸ. ರಾಮಕೃಷ್ಣ ಹೆಗಡೆ, ಎಚ್.ಡಿ. ದೇವೇಗೌಡರಂತಹ ನಾಯಕರ ಗರಡಿಯಲ್ಲಿ ಪಳಗಿದ ಸಿದ್ದರಾಮಯ್ಯ, ಜನತಾ ದಳ ಸರ್ಕಾರದಲ್ಲಿ ಹಲವು ಪ್ರಮುಖ ಖಾತೆಗಳನ್ನು ನಿಭಾಯಿಸಿದರು. ಹಣಕಾಸು ಸಚಿವರಾಗಿ ಅವರ ಬಜೆಟ್ ಮಂಡನೆಯ ಶೈಲಿ, ಆರ್ಥಿಕ ಶಿಸ್ತು ಮೆಚ್ಚುಗೆಗೆ ಪಾತ್ರವಾಗಿತ್ತು. ಜೆಡಿಎಸ್‌ನಲ್ಲಿನ ಭಿನ್ನಾಭಿಪ್ರಾಯಗಳಿಂದ ಪಕ್ಷದಿಂದ ಹೊರಬಂದು, 2006ರಲ್ಲಿ ಕಾಂಗ್ರೆಸ್ ಸೇರಿದ್ದು ಅವರ ರಾಜಕೀಯ ಜೀವನದ ಬಹುದೊಡ್ಡ ತಿರುವು!
ಕಾಂಗ್ರೆಸ್ ಸೇರಿದ ಬಳಿಕ ಸಿದ್ದು ಸಾಂಪ್ರದಾಯಿಕ ಕಾಂಗ್ರೆಸ್ ನಾಯಕರಿಗಿಂತ ಭಿನ್ನವಾಗಿ ನಿಂತರು-ಕಂಡರು. ಅವರು ಕೇವಲ ಒಂದು ಜಾತಿಗೆ ಸೀಮಿತವಾಗದೆ, 'ಅಹಿಂದ' ವರ್ಗಗಳನ್ನು ಸಂಘಟಿಸಿದರು. ಇದು ಕಾಂಗ್ರೆಸ್‌ಗೆ ಹೊಸ ಚೈತನ್ಯ ತುಂಬಿತು. 2013ರಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಅವರು, ಬರೋಬ್ಬರಿ 40 ವರ್ಷಗಳ ಬಳಿಕ, ಐದು ವರ್ಷಗಳ ಪೂರ್ಣಾವಧಿ ಪೂರೈಸಿದ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅನ್ನಭಾಗ್ಯ, ಕ್ಷೀರಭಾಗ್ಯ, ಕೃಷಿಭಾಗ್ಯ, ಇಂದಿರಾ ಕ್ಯಾಂಟೀನ್‌ನಂತಹ ಯೋಜನೆಗಳು ಅವರ ಮೊದಲ ಅವಧಿಯ ಆಡಳಿತದ ಹೈಲೈಟ್ಸ್! 2023ರ ಚುನಾವಣೆಯಲ್ಲಿ 'ಪಂಚ ಗ್ಯಾರಂಟಿ'ಗಳ ಮೂಲಕ ಕಾಂಗ್ರೆಸ್‌ಗೆ ಪ್ರಚಂಡ ಬಹುಮತ ತಂದುಕೊಡುವಲ್ಲಿ ಅವರ ಕೊಡುಗೆ ಮತ್ತು ಪಾತ್ರ ನಿರ್ಣಾಯಕವಾಗಿತ್ತು. ಕರ್ನಾಟಕದ ಇತಿಹಾಸದಲ್ಲಿ 17 ಬಾರಿ ಬಜೆಟ್ ಮಂಡಿಸಿದ ಏಕೈಕ ನಾಯಕ ಸಿದ್ದು. ಅಂಕಿ-ಅಂಶಗಳು ಸದಾ ಅವರ ಬೆರಳ ತುದಿಯಲ್ಲಿರುತ್ತವೆ ಎನ್ನುವುದು ಅವರ ರಾಜಕೀಯ ವಿರೋಧಿಗಳೂ ಒಪ್ಪುವ ಸತ್ಯ.
ಆಹಾರ, ಶಿಕ್ಷಣ, ಸಾರಿಗೆ, ಬಾಡಿಗೆ, ಜೀನಸು, ಬದುಕಿನ ಇತರ ಅನಿವಾರ್ಯತೆಗಳ ಕಷ್ಟಗಳ ಅರಿವಿಲ್ಲದವರು ಈಗಿನ ಗ್ಯಾರಂಟಿ ಯೋಜನೆಗಳು, ಸಬ್ಸಿಡಿಗಳು, ಸಾಮಾಜಿಕ ನ್ಯಾಯದ ನೀತಿಗಳನ್ನು ಲೇವಡಿ ಮಾಡುವುದು ಸುಲಭ. ಹಾಗೆಂದು ಎಲ್ಲವನ್ನೂ ಉಚಿತ ನೀಡುವುದು ಖಂಡಿತಾ ಸಮರ್ಪಕ ಆಡಳಿತ ಕ್ರಮ ಅಲ್ಲವೆನ್ನಿ! ಉಚಿತ ಯೋಜನೆಗಳನ್ನು ಟೀಕಿಸುವ ಅನೇಕರಿಗೆ ಹಸಿವಿನಿಂದ ನರಳುವುದು, ಫೀಸು ಕಟ್ಟಲಾಗದೆ ಕಾಲೇಜು ಬಿಡುವುದು, ಬಸ್ಸು ಟಿಕೆಟಿಗೆ ದುಡ್ಡಿಲ್ಲದಿರುವ ದೀನ ಪರಿಸ್ಥಿತಿಯ ಅರಿವು ಇರಲಾರದು. ತೆರಿಗೆದಾರರ ಹಣವನ್ನು ಜವಾಬ್ದಾರಿಯುತವಾಗಿ ಬಳಸಬೇಕು ಎನ್ನುವುದು ನಿರ್ವಿವಾದ. ಕಲ್ಯಾಣ ರಾಜಕಾರಣವು ಕೇವಲ ಮತಬ್ಯಾಂಕ್‌ಗಾಗಿ, ಸಾರ್ವಜನಿಕರನ್ನು ಪರಾವಲಂಬಿಗಳನ್ನಾಗಿ ಮಾಡಲು, ಭ್ರಷ್ಟಾಚಾರಕ್ಕೆ ಅಥವಾ ಆರ್ಥಿಕ ಬೇಜವಾಬ್ದಾರಿತನಕ್ಕೆ ದಾರಿಯಾದರೆ ಅದು ಕೂಡ ಅಪಾಯಕಾರಿ. ಸಾಮಾಜಿಕ ನ್ಯಾಯ ಎಂದರೆ ಕೇವಲ ಹಣವನ್ನು ಸಮನಾಗಿ ಹಂಚುವುದಲ್ಲ! ಅಸಮಾನತೆಯಿರುವ ಸಮಾಜದಲ್ಲಿ ಎಲ್ಲರಿಗೂ ಅವಕಾಶಗಳು, ಗೌರವದಿಂದ ಬದುಕಲು ಬೇಕಾದ ಕನಿಷ್ಠ ಸವಲತ್ತುಗಳನ್ನು ಮರುಹಂಚಿಕೆ ಮಾಡುವ ಯೋಜನೆ. ಸಾರ್ವಜನಿಕರ ಹಣವನ್ನು ಬಡ ಕುಟುಂಬಗಳ ಆಹಾರ, ಶಿಕ್ಷಣ, ಆರೋಗ್ಯ, ಸಾರಿಗೆ ಮತ್ತಿತರ ಮೂಲಭೂತ ಸೌಕರ್ಯಗಳಿಗೆ ಒದಗಿಸುವುದು ಸರಿ. ಇಂಥಾ ಯೋಜನೆಗಳು ದುರುಪಯೋಗ ಆಗದಂತೆ ಸರ್ಕಾರಗಳು ಹದ್ದಿನ ಕಣ್ಣು ಇಡಲೇಬೇಕು ಮತ್ತದು ಆಗುತ್ತಿಲ್ಲ ಎನ್ನುವುದೂ ದಿಟ.
ಕರ್ನಾಟಕದ ರಾಜಕೀಯ ಮತ್ತು ಸಾಮಾಜಿಕ ಇತಿಹಾಸವನ್ನು ಗಮನಿಸಿದರೆ, ಸಿದ್ದರಾಮಯ್ಯನವರು ಒಬ್ಬ ರಾಜಕಾರಣಿಗಿಂತಲೂ ಹೆಚ್ಚಾಗಿ, ಜನಸಾಮಾನ್ಯರ ಬದುಕಿಗೆ ಆಸರೆಯಾದ ಅಪ್ಪಟ ಸಮಾಜವಾದಿ ಜನನಾಯಕನಾಗಿ ಗೋಚರಿಸುಸುತ್ತಾರೆ. ಅವರ ಮೂರು ವರ್ಷಗಳ ಈಗಿನ ಆಡಳಿತವನ್ನು ಆರ್ಥಿಕ ವಿಶ್ಲೇಷಕರ ದೃಷ್ಟಿಕೋನದಲ್ಲಿ ನೋಡುವುದಾದರೆ, ಪಂಚ ಗ್ಯಾರಂಟಿ ಯೋಜನೆಗಳು ಸಾಮಾಜಿಕ ಭದ್ರತೆಯನ್ನು ಒದಗಿಸಿ ಆಸರೆಯಾದರೂ ಬೊಕ್ಕಸಕ್ಕೆ ವಾರ್ಷಿಕ 51,000 ಕೋಟಿ ರೂಪಾಯಿ ಹೊರೆ ತಂದವು. ಪರಿಣಾಮ ರಾಜ್ಯದ ಸಾಲದ ಹೊರೆ ಇತಿಹಾಸದಲ್ಲೇ ಗರಿಷ್ಠ ಮಟ್ಟಕ್ಕೆ ಅಂದರೆ ಸುಮಾರು ಎಂಟು ಲಕ್ಷ ಕೋಟಿ ರೂಪಾಯಿ ತಲುಪಿತು. ವಿತ್ತೀಯ ಕೊರತೆ ಎದುರಾಗಲು ಗ್ಯಾರಂಟಿ ಯೋಜನೆಗಳು ಪ್ರಮುಖ ಕಾರಣ ಎಂಬುದೂ ಕಹಿ ವಾಸ್ತವ. ಜನಕಲ್ಯಾಣದ ಹಂಬಲ ಮತ್ತು ವಿತ್ತೀಯ ಶಿಸ್ತಿನ ನಡುವಿನ ಈ ಸೂಕ್ಷ್ಮ ಸಮತೋಲನದ ಪ್ರಯೋಗ ಮತ್ತು ಇದನ್ನು ಸಮರ್ಪಕವಾಗಿ ನಿರ್ವಹಿಸಲಾಗದೆ, ಕರ್ನಾಟಕದ ರಾಜಕಾರಣದಲ್ಲಿ ತಮ್ಮದೇ ವಿಶಿಷ್ಟ ಹೆಜ್ಜೆಗುರುತನ್ನು ಬಿಟ್ಟು ಅವರು ನಿರ್ಗಮಿಸಿದ್ದಾರೆ.
ಇಷ್ಟೊಂದು ಬೃಹತ್ ಪ್ರಮಾಣದ 'ಆರ್ಥಿಕ ಸಮಾಜವಾದ'ವನ್ನು ಆಡಳಿತದಲ್ಲಿ ಅನುಷ್ಠಾನಕ್ಕೆ ತರುವುದು ಯಾವುದೇ ರಾಜ್ಯದ ಮುಖ್ಯಮಂತ್ರಿಗೆ ಸಾಧ್ಯವಾಗದ ಮಾತು! ಇಂಥಾ ಯೋಜನೆಗಳನ್ನು ಗೇಲಿ ಮಾಡಿಯೂ 'ಸೇಮ್ ಟು ಸೇಮ್' ಯೋಜನೆಗಳಿಗೆ ಈಗ ಎಲ್ಲಾ ಪಕ್ಷಗಳು, ಎಲ್ಲಾ ರಾಜ್ಯಗಳಲ್ಲಿ ಜೋತು ಬಿದ್ದಿರುವುದು ಮತ್ತೊಂದು ವಿಪರ್ಯಾಸ! ಈಗಿರುವ ಈ ಯೋಜನೆಯನ್ನು ನಿಲ್ಲಿಸುವ ಯೋಚನೆಯನ್ನು ಮುಂದಿನ ಯಾವುದೇ ಪಕ್ಷದ ಸರ್ಕಾರಗಳು ಮಾಡಲಾರವು ಎನ್ನುವುದೂ 'ಹೌದು ಹುಲಿಯಾ'!
ಸಿದ್ದು ರಾಜೀನಾಮೆ ದಿಢೀರ್ ಬೆಳವಣಿಗೆ ಖಂಡಿತಾ ಅಲ್ಲ! 2023ರ ವಿಧಾನಸಭಾ ಚುನಾವಣೆಯ ಪ್ರಚಂಡ ಗೆಲುವಿನ ನಂತರ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟು, ಹೈಕಮಾಂಡ್ 'ಅಧಿಕಾರ ಹಂಚಿಕೆ ಸೂತ್ರ' ಜಾರಿಗೆ ತಂದದ್ದು ಓಪನ್ ಸೀಕ್ರೆಟ್. ತಮ್ಮ ಅವಧಿಯನ್ನು ಯಶಸ್ವಿಯಾಗಿ ಪೂರೈಸಿ, ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ ಸಂತೃಪ್ತಿಯೊಂದಿಗೆ ಸಿದ್ದರಾಮಯ್ಯ ನಿರ್ಗಮಿಸಿದ್ದಾರೆ. ಇದು ಪಕ್ಷದಲ್ಲಿ ಗುಂಪುಗಾರಿಕೆ ತಡೆಯಲು, ಮುಂಬರುವ ಚುನಾವಣೆಗಳಿಗೆ ಪಕ್ಷವನ್ನು ಒಗ್ಗಟ್ಟಿನಿಂದ ಕೊಂಡೊಯ್ಯಲು ಮತ್ತು ಯುವ-ಮುಂದಿನ ಪೀಳಿಗೆಯ ನಾಯಕರಿಗೆ ಅವಕಾಶ ನೀಡಲು ಹೈಕಮಾಂಡ್ ರೂಪಿಸಿದ ಕಾರ್ಯತಂತ್ರದ ಭಾಗ.
ಮುಖ್ಯಮಂತ್ರಿ ಸ್ಥಾನ ತ್ಯಜಿಸಿದ ಮಾತ್ರಕ್ಕೆ ಸಿದ್ದುರಂತಹ 'ಮಾಸ್ ಲೀಡರ್' ಸಕ್ರಿಯ ರಾಜಕಾರಣದಿಂದ ದೂರವಾತ್ತಾರೆ ಎಂದು ಭಾವಿಸುವುದು ಮೂರ್ಖತನ. ಆಡಳಿತದಿಂದ ದೂರ ಸರಿದರೂ, ಅವರ ರಾಜಕೀಯ ಪ್ರಭಾವ ಎಳ್ಳಷ್ಟೂ ಕಡಿಮೆಯಾಗಲಾರದು. ಬಿಎಸ್‌ವೈ ಅಧಿಕಾರ ತ್ಯಜಿಸಿದ ಬಳಿಕವೂ ಹೇಗೆ ಬಿಜೆಪಿಯ 'ಕೇಂದ್ರಬಿಂದು'ವಾಗಿ ಉಳಿದಿದ್ದಾರೋ, ಅದೇ ರೀತಿ ಸಿದ್ದು ಕೂಡ ಕಾಂಗ್ರೆಸ್‌ನ 'ಶಕ್ತಿಕೇಂದ್ರ'ವಾಗಿ ಉಳಿಯಲಿದ್ದಾರೆ. ಮುಂಬರುವ ಜಿಬಿಎ, ಪಂಚಾಯತ್, ಸ್ಥಳೀಯ ಸಂಸ್ಥೆ, ವಿಧಾನ ಸಭಾ ಮತ್ತು ಲೋಕಸಭಾ ಚುನಾವಣೆಗಳಲ್ಲಿ ಪಕ್ಷವನ್ನು ಮುನ್ನಡೆಸುವ ಹೊಣೆ ಅವರ ಮೇಲಿರುತ್ತದೆ. 'ರಾಷ್ಟ್ರ ರಾಜಕಾರಣಕ್ಕೆ ಹೋಗುವುದಿಲ್ಲ' ಎಂದು ಹೇಳಿದ್ದರೂ ಅವರ ಆಡಳಿತಾತ್ಮಕ ಅನುಭವ ಮತ್ತು ಸೈದ್ಧಾಂತಿಕ ಬದ್ಧತೆಯನ್ನು ಕಾಂಗ್ರೆಸ್ ಹೈಕಮಾಂಡ್ ರಾಷ್ಟ್ರೀಯ ಮಟ್ಟದಲ್ಲಿ ಬಳಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಎಐಸಿಸಿ ಮಟ್ಟದಲ್ಲಿ ಪ್ರಮುಖ ಹುದ್ದೆ ನೀಡಿ, ಕೇಂದ್ರದಲ್ಲಿ ವಿರೋಧ ಪಕ್ಷಗಳ ಒಕ್ಕೂಟವನ್ನು ಬಲಪಡಿಸಲು ಅವರ ಚಿಂತನೆಗಳನ್ನು ಬಳಸಿಕೊಳ್ಳಬಹುದು. ಅಧಿಕಾರದಲ್ಲಿ ಇರುವಾಗ ಕೆಲವೊಮ್ಮೆ ಹಲವು ವಿಚಾರಗಳಲ್ಲಿ ಒಂದಷ್ಟು ರಾಜಿಯಾಗಬೇಕಾದ ಅನಿವಾರ್ಯತೆ ಇರುತ್ತದೆ. ಈಗ ಆ ನಿರ್ಬಂಧಗಳಿಲ್ಲದೆ, ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ಅವರು ಇನ್ನಷ್ಟು ಕಟುವಾಗಿ ದ್ವನಿ ಎತ್ತಬಹುದು. ಲೋಹಿಯಾರ ಚಿಂತನೆಗಳಿಂದ ಪ್ರಭಾವಿತರಾಗಿರುವ ಅವರು, ತಮ್ಮ ಬಿಡುವಿನ ವೇಳೆಯನ್ನು ಆತ್ಮಕಥೆ ಬರೆಯಲು ಅಥವಾ ಕರ್ನಾಟಕದ ಆರ್ಥಿಕತೆ ಮತ್ತು ರಾಜಕೀಯ ಇತಿಹಾಸದ ಕುರಿತು ಪುಸ್ತಕ ರಚಿಸಲು ಮೀಸಲಿಟ್ಟರೆ ಆ ಪುಸ್ತಕಗಳು ಖಂಡಿತಾ ಎಲ್ಲಾ ಕಾಲಕ್ಕೂ reference guide! ದಶಕಗಳ ಕಾಲ ಅಧಿಕಾರದ ಒತ್ತಡದಲ್ಲಿದ್ದ ಅವರು, ಮೈಸೂರಿನಲ್ಲಿ ತಮ್ಮ ಆಪ್ತರು, ಬೆಂಬಲಿಗರು ಮತ್ತು ಪುಸ್ತಕಗಳೊಂದಿಗೆ ಹೆಚ್ಚು ಸಮಯ ಕಳೆಯಲು ಒಲವು ತೋರಬಹುದು. ಅವರು ಟಗರು. ಏನೇ ಆದರೂ ಮುಂದಿನ ಕೆಲವು ವರ್ಷಗಳ ಕಾಲ ಅವರ ಖದರು ಕಡಿಮೆಯಾಗಲಾರದು!
ಸಿದ್ದರಾಮಯ್ಯನವರ ರಾಜೀನಾಮೆ ಕರ್ನಾಟಕ ರಾಜಕಾರಣದ ವರ್ಣರಂಜಿತ ಅಧ್ಯಾಯ, ಹೋರಾಟದ ವ್ಯಕ್ತಿತ್ವದ ಯುಗಾಂತ್ಯ! ಜನತಾ ಪರಿವಾರದ ಸಮಾಜವಾದಿ ಹಿನ್ನೆಲೆಯಿಂದ ಬಂದು, ರಾಷ್ಟ್ರೀಯ ಪಕ್ಷವೊಂದನ್ನು ರಾಜ್ಯದಲ್ಲಿ ಸಂಪೂರ್ಣವಾಗಿ ಆವರಿಸಿಕೊಂಡ ಅವರ ಶೈಲಿ, ರಾಜಕಾರಣ ಅನನ್ಯ. ಬಿಎಸ್‌ವೈ ಮತ್ತು ಸಿದ್ದರಾಮಯ್ಯನವರಂತಹ ನಾಯಕರು ಜನ್ಮತಾಳಿದವರಲ್ಲ, ಬದಲಾಗಿ ಕಾಲಾಂತರದಲ್ಲಿ ಜನರಿಂದಲೇ ನಿರ್ಮಾಣವಾದವರು! ಜನಬೆಂಬಲ, ಆಡಳಿತದ ಮೇಲಿನ ಬಿಗಿ ಹಿಡಿತ ಮತ್ತು ನೇರ ನಡೆ-ನುಡಿಯ ಮೂಲಕ ಸಿದ್ದರಾಮಯ್ಯನವರು ರಾಜ್ಯದ ಜನಮಾನಸದಲ್ಲಿ ಅಚ್ಚಳಿಯದ ಛಾಪು ಮೂಡಿಸಿದ್ದಾರೆ. ಅವರು ಮುಖ್ಯಮಂತ್ರಿ ಕುರ್ಚಿಯಿಂದ ನಿರ್ಗಮಿಸಿರಬಹುದು, ಆದರೆ ಕರ್ನಾಟಕದ ಕಲರ್‌ಫುಲ್ ರಾಜಕೀಯ ರಂಗಭೂಮಿಯಿಂದಲ್ಲ! ಭವಿಷ್ಯದಲ್ಲಿ ರಾಜ್ಯದ ಪ್ರತಿಯೊಂದು ರಾಜಕೀಯ ಬೆಳವಣಿಗೆಯಲ್ಲೂ ಅವರ ಛಾಪು-ನೆರಳು ಇದ್ದೇ ಇರಲಿದೆ. ಅವರ ಆರ್ಥಿಕ ಜ್ಞಾನಾನುಭವ, ಹೋರಾಟದ ಬದುಕು, ವಿಶಿಷ್ಟ ಮಾತುಗಾರಿಕೆ, ಸಾಮಾಜಿಕ ನ್ಯಾಯದ ಪರ ನಿಲುವುಗಳು ಮುಂದಿನ ಸರ್ಕಾರಗಳಿಗೂ ಸ್ಪಷ್ಟ 'ಬೆಂಚ್‌ಮಾರ್ಕ್' ಆಗಿ ಉಳಿಯಲಿವೆ. ಬಿಎಸ್‌ವೈ ಮತ್ತು ಸಿದ್ದರಾಮಯ್ಯ ಎನ್ನುವ ಶಕ್ತಿಯುತ ಹೆಸರುಗಳ ಗೌರವಯುತ ನಿರ್ಗಮನದಂತಹ ವಿಚಾರಗಳು ಇತ್ತೀಚಿನ ರಾಜಕಾರಣದಲ್ಲಿ ಕಾಣಸಿಗುವುದು ತೀರಾ ವಿರಳ. ಅಧಿಕಾರ ಇಲ್ಲದ ನಿವೃತ್ತ ಜೀವನ ಹಸನಾಗಿರಲಿ ಹುಲಿಯಾ!
✒️ ರವೀ ಸಜಂಗದ್ದೆ, ಬೆಂಗಳೂರು
(ಲೇಖಕರು ಸಾಫ್ಟ್‌ವೇರ್ ಉದ್ಯೋಗಿ ಮತ್ತು ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು)
Published
