Karada Vishwa

Article · March 22, 2026

ಯಾವೂರ ಚಿತ್ರಕಾರ

🖋️ಸೌಮ್ಯಾ ಭಟ್ ಅಂಗ್ರಾಜೆ


ಭಾವನೆಗಳ ದಿಬ್ಬಣವನು ಎದೆಯಲಿ ಕರೆವಂಥ
ಯಾವ ಊರ ಚಿತ್ರಕಾರ ಹೇಳು ನೀ ವಸಂತ

ವರುಷದುಳಿದ ತಿಂಗಳಲ್ಲಿ ಇರುವೆಯೆಲ್ಲಿ ಅವಿತು
ಕಲಿಕೆಯಲ್ಲಿ ನಿರತವೇನು ತರಲು ಕಲೆಯ ಹೊಸತು

ಬಣ್ಣವೆರಚಿ ಕೊಡುವೆಯಲ್ಲ ಬರುವ ದಾರಿ ಸುಳಿವು
ಮೊಗ್ಗು ಕಾಯಿ ಕುಕಿಲಕೆಂತು ಕಾಣೆಯಿದರ ಅರಿವು

ಅದೇನಂಥ ಬಂಧ ಗಂಧ ಚೈತ್ರದೊಡನೆ ಹೇಳು 
ಜೊತೆ ತರುವೆಯಲ್ಲ ಹೊಳೆಸಿ ತಬ್ಬುತವಳ ತೋಳು

ರಾಜನೆಂಬ ಬಿರುದು ಸಿಗಲು ಮಾಡಿದೇನು ಮೋಡಿ
ನೋವ ಮರೆತು ಮನವು ಹಿಗ್ಗಿ ನಲಿವ ಹಾಗೆ ಕೂಡಿ

ಬೋಳು ಮರಕೆ ಹಸಿರನುಡಿಸಿ ಹೇಗೆ ನಗುವೆ ಹಾಗೆ
ಚೇತನದ ಹೊನಲನ್ನು ಹರಿಸಿ ಮುಗ್ಧ ಮಗುವಾಗಿ

ತಿಳಿಯದಂತೆ ಹೋಗಿಬಿಡುವೆ ಚಂದ ನೆನೆಪು ನೀಡಿ
ಮರಳಿ ಬರುವ ಹಾದಿಗಾಗಿ ಕಾಯುವಂತೆ ಮಾಡಿ

❣️❣️❣️❣️❣️❣️
Creative Writings