Karada Vishwa

Article · August 26, 2026

ಕೊನೆಯಿಲ್ಲದ ದಣಿವಿನ ಯಾತ್ರೆ

By ಗಾಯತ್ರಿ ನಾಗರಾಜ ಅಡ್ಕತ್ತೊಟ್ಟಿ

ಗಾಯತ್ರಿ ಕೆ ಅಡ್ಕತೊಟ್ಟಿ


ಅಂತಃಕರಣದ ಸುಂಟರಗಾಳಿಯಲಿ
ಗಿರಿ ಗಾತ್ರದ ಶಿಲೆ ಉರುಳಿದೆ
ಬಂಡೆಗಳ ನಡುವೆ ಸಿಕ್ಕಿ ಬಾಳು
ನಲುಗಿ ಕರಗುತಿದೆ

ದಟ್ಟ ತಮಸಿನ ಮುಸುಕಿನಡಿಯಲಿ
ಆಸೆಯ ದೀಪ ಆರಿಹುದು
ಬಾಳೆಂಬ ಕತ್ತಿ ಕನಸುಗಳ
ಪಕ್ಷವನು ಚುಚ್ಚಿ ಕಡಿದಿಹುದು

ಅದೇ ಪರಿಧಿಯಲಿ ಸುತ್ತಿ ಸುತ್ತಿ
ಜೀವನಕೆ ಜುಗುಪ್ಸೆ ಮೂಡಿಹುದು
ಶ್ವಾಸವ ಬಿಗಿದು ನಿಧಾನಕೆ ಕೊಲ್ಲುವ
ಲಲಾಟದ ಲಿಪಿ ಉಳಿದಿಹುದು

ಬಿಡಿಸಲಾಗದ ಮುಗಿಸಲಾಗದ
ಪ್ರಶ್ನೆ ಗಂಟಲೊಳು ಸಿಲುಕಿಹುದು
ನುಂಗದ ಅಗಿಯಲಾಗದ
ಪ್ರಶ್ನೆ ಪ್ರಾಣವ ಹಿಂಡುತಿಹುದು

ಸಾಗಬೇಕೆಂಬ ಹಂಬಲ ಮೂಡಿದರೂ
ಸಾಗಲೇಬೇಕೆಂಬ ವಿಧಿ ಇಹುದು
ಅಂತ್ಯವಿಲ್ಲದ ವ್ಯಥೆಯ ಹೊರಿಸಿದ
ಜೀವಕೆ ನಡೆವ ಅನಿವಾರ್ಯತೆ ಇಹುದು

Creative Writings