
Article · June 23, 2026
ಹವ್ಯಾಸ
✍🏻ಜಯಶ್ರೀ ಕೆ ಆರ್ ಭಟ್ ಪಳ್ಳತ್ತಡ್ಕ
ಓದುವುದೆಂದರೆ ಕೆಲವರಿಗೆ ಬಹಳ ಇಷ್ಟದ ಕೆಲಸ. ಹಾಗೆಂದು ಪಠ್ಯ ಪುಸ್ತಕವಲ್ಲ. ಅಂಗಡಿಯಿಂದ ಏನಾದರೂ ಕಟ್ಟಿ ತಂದ ಪೇಪರ್ ತುಂಡುಗಳನ್ನು ಬಿಡದೆ ಓದುವುದು; ಪತ್ರಿಕೆಗಳು, ಕಥೆ ಕಾದಂಬರಿಗಳು ಇವೆಲ್ಲ. ಪತ್ತೇದಾರಿ ಕಾದಂಬರಿ 'ಮಂಗಳ, ಸುಧಾ, ಉದಯವಾಣಿ' ತರಂಗವಂತೂ ಅಲೆಗಳನ್ನೆ ಎಬ್ಬಿಸಿತ್ತು. ಪತ್ರಿಕೆ ಬರುವ ದಿನ ಬಾಗಿಲಲ್ಲೇ ಕಾದಿರುತ್ತಿದ್ದದ್ದು ಈಗ ನೆನೆದರೆ ನಗು ಬರುತ್ತಿದೆ. ಯಾರದೋ ಮನದಲ್ಲಿ ಮೂಡಿದ ವಿಷಯಗಳನ್ನು ಕಥೆಯಾಗಿ ಓದುವುದಕ್ಕೆ ಇಷ್ಟೊಂದು ಕಾತರ. ಅದರ ಬದಲು ನಾವೇ ಬರೆದರೆ ಹೇಗಿರುತ್ತದೆ ? ಎನಿಸುತ್ತಿತ್ತು. ಕೆಲವು ಮನೆಗಳಲ್ಲಿ ಇದಕ್ಕೆ ಆಸ್ಪದವಿಲ್ಲ. ಹೆಣ್ಮಕ್ಕಳು ಪತ್ರಿಕೆ ಓದುವುದೇ ತಪ್ಪು ಎನ್ನುವಂತೆ. ಅದನ್ನೂ ಬಚ್ಚಿಡುತ್ತಿದ್ದ ಕಾಲವೂ ಇತ್ತು. ಬರೀ ಕೆಲಸಗಳಿಗಷ್ಟೆ ಸೀಮಿತ ಬದುಕು. ಯಾವುದೇ ಸಂಭ್ರಮ, ಸಂತಸ ಪಡುವ ಹಾಗಿಲ್ಲ. ಜೀವನವೇ ಯಾಂತ್ರಿಕ. ದೂರದರ್ಶನ ವೀಕ್ಷಿಸುವಂತಿಲ್ಲ. ಮನೆಹಿರಿಯರು ಮಾತ್ರ ನೋಡುವುದು. ವಿಚಿತ್ರ ಸಂಪ್ರದಾಯಗಳು ಎನಿಸಿತ್ತು. ಆದರೆ ಈಗ ಎಲ್ಲಕ್ಕೂ ಸ್ವಾತಂತ್ರ್ಯವಿದ್ದರೂ ಬೇಕು ಎಂದೇ ಅನಿಸುವುದಿಲ್ಲ. ಮನೆಯಲ್ಲಿ ಜನರು ಕಡಿಮೆಯಾದಾಗ ಪತ್ರಿಕೆಗಳೇ ಸ್ನೇಹಿತರು.. ಈಗಂತೂ ಮೊಬೈಲ್ನಲ್ಲೇ ಎಲ್ಲವೂ ಓದಬಹುದು. ಪತ್ರಿಕೆಗಳು ಅದರಲ್ಲೆ ಸಿಗುತ್ತವೆ. ಕಾಲ ಕಳೆದಂತೆಲ್ಲಾ ಎಲ್ಲದರಲ್ಲೂ ಬದಲಾವಣೆ. ಯಾವುದಾದರೂ ಹಾಡು ಗುನುಗುತ್ತಾ ಇದ್ದರೆ ಯಾವ ಚಿಂತೆಗಳೂ ತಲೆಗೆ ಹತ್ತುವುದಿಲ್ಲ. ಜೊತೆಗೆ ಪ್ರಕೃತಿಯ ಒಡನಾಟವಿದ್ದರಂತೂ ಬೇರೇನೂ ಬೇಡ. ಹೂವಿನ ಗಿಡಗಳನ್ನು ನೆಡುವುದು, ನೀರು ಹಾಕುವುದು ಮುಂತಾದ್ದೆಲ್ಲ ಒಳ್ಳೆಯ ಹವ್ಯಾಸ. ಇದರಿಂದ ಯಾರಿಗೂ ತೊಂದರೆ ಇಲ್ಲ. ಮನಸ್ಸಿಗೂ ಕೂಡ ಸಂತೃಪ್ತಿ..ಒಬ್ಬೊಬ್ಬರಿಗೆ ಒಂದೊಂದು ಹವ್ಯಾಸ. ಒಳ್ಳೆಯ ಹವ್ಯಾಸಗಳಿದ್ದರೆ ಸಂತೋಷ. ಇಲ್ಲವಾದರೆ ಕಷ್ಟ. ಇತ್ತೀಚೆಗೆ ಮೊಬೈಲ್ ವೀಕ್ಷಣೆಯೇ ಹೆಚ್ಚಿನವರ ಹವ್ಯಾಸ. ವ್ಯಕ್ತಿಗಳ ನಡುವಿನ ಅಂತರ ಹೆಚ್ಚಿ, ಮಾತುಕತೆ ಕಡಿಮೆ. ಬದುಕೇ ಯಾಂತ್ರಿಕವಾಗಿದೆ.. ಒಬ್ಬೊಬ್ಬರೆ ಊಟಕ್ಕೆ ಬರುವುದು, ಬಂದಾಗ ಊಟ ಮುಗಿವವರೆಗೂ ಮೊಬೈಲ್ ವೀಕ್ಷಣೆ......ಏನು ತಿನ್ನುವುದೋ ದೇವರೇ ಬಲ್ಲ. ಹೆಗ್ಗಣ ತಟ್ಟೆಗೆ ಬಿದ್ರೂ ಗೊತ್ತಾಗದಷ್ಟು ತಲ್ಲೀನತೆ. ಮತ್ತೆಲ್ಲಿ ಸಂಬಂಧಗಳು? .. ಊಟವೂ ಹವ್ಯಾಸವಾಗಿ ಬಿಟ್ಟಿದೆ. ಮೊಬೈಲ್ನಂತೆ........
🪻🪻🪻🪻
