
Article · November 20, 2026
ಹವ್ಯಾಸ - ಬದುಕಿನ ಸುಂದರ ಸಂಗಾತಿ
By Shylaja Bhat
ಶೈಲಜಾ ಭಟ್
ಬದುಕು ಎನ್ನುವುದು ನೂರಾರು ಕೆಲಸಗಳು, ಜವಾಬ್ದಾರಿಗಳು, ಸಂಬಂಧಗಳು ಮತ್ತು ಕನಸುಗಳ ಸುಂದರ ಪಯಣ. ಈ ಪಯಣದಲ್ಲಿ ನಮ್ಮ ಸಂತೋಷಕ್ಕಾಗಿ, ನಮ್ಮ ಮನಸ್ಸಿನ ನೆಮ್ಮದಿಗಾಗಿ ನಾವು ಮಾಡಿಕೊಳ್ಳುವ ಒಂದು ಪುಟ್ಟ ಲೋಕವೇ ಹವ್ಯಾಸ. ಕೆಲವರಿಗೆ ಪುಸ್ತಕ ಓದುವುದು, ಹಾಡುವುದು, ಬರೆಯುವುದು, ಚಿತ್ರ ಬಿಡಿಸುವುದು ಇಷ್ಟವಾದರೆ, ಇನ್ನು ಕೆಲವರಿಗೆ ತೋಟಗಾರಿಕೆ, ಅಡುಗೆ, ಪ್ರವಾಸ, ಛಾಯಾಗ್ರಹಣ ಹೀಗೆ ಹಲವು ಆಸಕ್ತಿಗಳಿರುತ್ತವೆ. ಹವ್ಯಾಸಗಳು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿದ್ದರೂ ಅವು ನೀಡುವ ಸಂತೋಷ ಮಾತ್ರ ಎಲ್ಲರಿಗೂ ಒಂದೇ.
ನಾವು ಶಾಲೆಯಲ್ಲಿ ಓದುತ್ತಿದ್ದ ದಿನಗಳಲ್ಲಿ ಅಧ್ಯಾಪಕರು ಹವ್ಯಾಸದ ಬಗ್ಗೆ ಕೇಳಿದಾಗ, ನಮಗೆ ನಿಜವಾಗಿಯೂ ಯಾವುದೇ ನಿರ್ದಿಷ್ಟ ಹವ್ಯಾಸ ಇಲ್ಲದಿದ್ದರೂ, ಪಕ್ಕದ ಮಕ್ಕಳು ಪುಸ್ತಕ ಓದುವುದು, ಹಾಡುವುದು, ಚಿತ್ರ ಬಿಡಿಸುವುದು ಎಂದು ಹೇಳುವುದನ್ನು ಕೇಳಿ ನಾವೂ ಅದನ್ನೇ ನಮ್ಮ ಹವ್ಯಾಸವೆಂದು ಹೇಳುತ್ತಿದ್ದೆವು. ಆಗ ಹವ್ಯಾಸವೆಂದರೆ ಶಾಲೆಯಲ್ಲಿ ಕೇಳುವ ಒಂದು ಸಾಮಾನ್ಯ ಪ್ರಶ್ನೆ ಅಷ್ಟೇ ಎಂದುಕೊಂಡಿದ್ದೆವು ಆಗ ಆ ಪ್ರಶ್ನೆಗೆ ಉತ್ತರಿಸುವುದಷ್ಟೇ ನಮ್ಮ ಉದ್ದೇಶವಾಗಿರುತ್ತಿತ್ತು. ಆದರೆ ಇಂದು, ನಮ್ಮ ನೆಚ್ಚಿನ ಆಸಕ್ತಿಯೊಂದು ದಿನಚರಿಯ ಭಾಗವಾಗಿ ಅದರಲ್ಲಿ ಎಷ್ಟು ತಲ್ಲೀನರಾಗುತ್ತೇವೆಂದರೆ ಸಮಯ ಕಳೆದುಹೋಗುವುದೇ ತಿಳಿಯುವುದಿಲ್ಲ.
ಹವ್ಯಾಸವೆಂದರೆ ಕೇವಲ ಬಿಡುವಿನ ವೇಳೆಯಲ್ಲಿ ಮಾಡುವ ಕೆಲಸವಲ್ಲ. ಅದು ನಮ್ಮೊಳಗಿನ ಪ್ರತಿಭೆಯನ್ನು ಹೊರತರುವ ಸುಂದರ ಅವಕಾಶ. ಕೆಲವೊಮ್ಮೆ ಮನಸ್ಸಿನಲ್ಲಿ ಸಾವಿರ ಆಲೋಚನೆಗಳು ತುಂಬಿಕೊಂಡಿರುತ್ತವೆ. ಅಂತಹ ಸಮಯದಲ್ಲಿ ನಮಗೆ ಇಷ್ಟವಾದ ಹವ್ಯಾಸದಲ್ಲಿ ತೊಡಗಿಸಿಕೊಂಡರೆ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಗಿಡಗಳಿಗೆ ನೀರುಣಿಸುವುದರಿಂದ ಹಿಡಿದು ಒಂದು ಸುಂದರ ಕವನ ಬರೆಯುವವರೆಗೆ ಪ್ರತಿಯೊಂದು ಸಣ್ಣ ಕೆಲಸದಲ್ಲೂ ಸಂತೋಷ ಕಂಡುಕೊಳ್ಳಬಹುದು.
ಎಲ್ಲ ಸಮಯದಲ್ಲೂ ನಮ್ಮೊಂದಿಗೆ ಮಾತನಾಡಲು, ನಮ್ಮ ಆಸಕ್ತಿಗಳಿಗೆ ಜೊತೆಯಾಗಲು ಯಾರಾದರೂ ಇರಬೇಕೆಂದಿಲ್ಲ. ಅಂತಹ ಸಮಯದಲ್ಲಿ ಪುಸ್ತಕಗಳು ನಮ್ಮ ಸ್ನೇಹಿತರಾಗಬಹುದು, ಗಿಡಗಳು ನಮ್ಮ ಮಾತು ಕೇಳುವ ಸಂಗಾತಿಗಳಾಗಬಹುದು, ಹಾಡುಗಳು ಮನಸ್ಸಿಗೆ ಮುದ ನೀಡಬಹುದು, ಬರವಣಿಗೆ ನಮ್ಮ ಭಾವನೆಗಳಿಗೆ ಅಕ್ಷರ ರೂಪ ನೀಡಬಹುದು. ಹೀಗೆ ಹವ್ಯಾಸಗಳು ಒಂಟಿತನದ ಭಾವವನ್ನು ಕಡಿಮೆ ಮಾಡಿ, ನಮ್ಮದೇ ಆದ ಒಂದು ಸುಂದರ ಲೋಕವನ್ನು ಸೃಷ್ಟಿಸುತ್ತವೆ. ವಯಸ್ಸು ಹೆಚ್ಚಾದರೂ ಮನಸ್ಸು ಉತ್ಸಾಹದಿಂದ ಇರಲು ಸಹಾಯ ಮಾಡುತ್ತವೆ.
ಹವ್ಯಾಸವೆಂಬುದು ಬದುಕಿನ ಉದ್ದಕ್ಕೂ ನಮ್ಮೊಂದಿಗೆ ಪಯಣಿಸುವ ಸಂಗಾತಿ. ಬಾಲ್ಯದಲ್ಲಿ ಆಟದಷ್ಟೇ ಖುಷಿ ನೀಡುವ ಹವ್ಯಾಸಗಳು, ಯೌವನದಲ್ಲಿ ನಮ್ಮ ಪ್ರತಿಭೆಗೆ ವೇದಿಕೆಯಾಗಿ; ವೃದ್ಧಾಪ್ಯದಲ್ಲಿ ಒಂಟಿತನವನ್ನು ಮರೆಸುವ ಆಪ್ತ ಗೆಳೆಯನಾಗಬಹುದು. ಕಾಲ ಬದಲಾದರೂ, ವಯಸ್ಸು ಕಳೆದರೂ ನಮ್ಮ ಆಸಕ್ತಿಗಳು ಮಾತ್ರ ಮನಸ್ಸನ್ನು ಸದಾ ಉತ್ಸಾಹದಿಂದ ಇರಿಸಬಲ್ಲವು. ಹಾಗಾಗಿ ಹವ್ಯಾಸಕ್ಕೆ ವಯಸ್ಸಿನ ಹಂಗಿಲ್ಲ, ಸಮಯದ ಮಿತಿಯಿಲ್ಲ. ಇದು ಬದುಕಿನ ಪ್ರತಿಯೊಂದು ಹಂತದಲ್ಲೂ ನಮಗಾಗಿ ನಾವು ಮೀಸಲಿಟ್ಟ ಒಂದಿಷ್ಟು ಸಮಯ. ಹಾಗಾಗಿ ಜೀವನದ ಪಯಣದಲ್ಲಿ ಯಾರೂ ನಮ್ಮ ಜೊತೆಯಿರದಿದ್ದರೂ, ಹವ್ಯಾಸಗಳು ಮಾತ್ರ ಕೊನೆಯವರೆಗೂ ನಮ್ಮೊಂದಿಗೆ ಹೆಜ್ಜೆ ಹಾಕುತ್ತಿರಬಹುದು.
