
Article · November 14, 2026
ಮನಮಂದಿರ ಈ ಸ್ನಾನಗೃಹ
By ಶಾರದಾ ಕಜೆಗದ್ದೆ
ಶಾರದಾ ಕಜಕದ್ದೆ
ಮನೆಮಂದಿ ಎಲ್ಲರ ಸುಖದುಃಖಗಳ ಮನದಾಳದ ಪಿಸುಮಾತಿಗೆ ಕಿವಿಯಾಗಿ ಸಾಂತ್ವನ ನೀಡುವ ಜಗತ್ತಿನ ಏಕೈಕ ಜಾಗವಾಗಿರುವ ಸ್ನಾನಗೃಹವೆಂಬ ಮನಮಂದಿರಕ್ಕೆ ಅಕ್ಷರಾರ್ಪಣೆ.
ಶರತ್ಕಾಲದ ದೀಪಾವಳಿಯು ಎಲ್ಲರ ಅಚ್ಚುಮೆಚ್ಚಿನ ಹಬ್ಬ. ಶರದೃತು ಚಳಿಗಾಲವನ್ನು ಆಹ್ವಾನಿಸುವ ಮಾಸ. ಹಾಗಾಗಿ ದೀಪಾವಳಿಗೂ ಎಣ್ಣೆಸ್ನಾನಕ್ಕೂ, ಸಾಲು ಸಾಲು ದೀಪಗಳಿಗೂ ಬೆಚ್ಚನೆಯ ಸಂಬಂಧ.
ದೀಪಾವಳಿಗೂ ಸ್ನಾನದ ಕೋಣೆಗೂ ಪ್ರೀತಿಯ ಆರೋಗ್ಯಕರ ನಂಟು. ಯಾಕೆಂದರೆ ಬೆಚ್ಚಗಿನ ಎಣ್ಣೆಸ್ನಾನ. ಈ ತೈಲಾಭ್ಯಂಜನ ಶರೀರದ ಸ್ವಚ್ಛತೆ, ದೈಹಿಕ ಆರೋಗ್ಯ ಮತ್ತು ಮನಸ್ಸಿಗೊಂದು ಮುದವಾದ ಅವ್ಯಕ್ತ ಸಂತಸವನ್ನು ನೀಡುತ್ತದೆ. ಈ ಜಳಕದ ಮನೆಗೂ ಮನಸ್ಸಿಗೂ ಖಂಡಿತವಾಗಿಯೂ ಒಂದು ನಿಕಟ ಸಂಬಂಧವಿದೆ. ಬಚ್ಚಲುಮನೆ ಕೇವಲ ಶರೀರದ ಕಶ್ಮಲವನ್ನು ಮಾತ್ರ ತೊಡೆಯುವುದಲ್ಲದೆ ಮನಸ್ಸಿನ ಕಲ್ಮಶವನ್ನೂ ನಿವಾರಿಸುತ್ತದೆ.
ಸ್ನಾನಗೃಹದಲ್ಲಿ ಹೆಚ್ಚಿನ ಸಲ ದೈಹಿಕ ಸ್ನಾನ ಯಾಂತ್ರಿಕವಾಗಿ ಅದರಷ್ಟಕ್ಕೆ ನಡೆಯುತ್ತದೆ. ಆದರೆ ಮನಸ್ಸು ಏಕಾಗ್ರತೆಯಿಂದ ಕೆಲಸ ಮಾಡುವುದು ಕೇವಲ ಈ ಕೋಣೆಯಲ್ಲಿ ಮಾತ್ರ. ದೇವರ ಕೋಣೆಯಲ್ಲೂ ಇಷ್ಟೊಂದು ಪ್ರಾರ್ಥನೆಗಳು, ಕೋರಿಕೆಗಳು, ನಿರ್ಧಾರಗಳು ಮನಃಪೂರ್ವಕವಾಗಿ ನಡೆಯಲು ಸಾಧ್ಯವಿಲ್ಲ. ಅಷ್ಟೊಂದು ಏಕಾಂತತೆ, ಅಂತರಾತ್ಮತೆ ಸಿಗುವುದು ಸ್ನಾನಗೃಹದಲ್ಲಿ. ಮಕ್ಕಳಿಂದ ಶುರುಗೊಂಡು ಪ್ರಾಯಸ್ಥರ ತನಕ ಎಲ್ಲರೂ ತಮ್ಮ ಮನಸ್ಸಿನ ಜೊತೆ ಏಕಾಂತದಲ್ಲಿ ಮಾತನಾಡುವುದು ಜಳಕ ಮಾಡುವಾಗಲೇ.
ಅಷ್ಟು ದಿನ ಸ್ನಾನ ಎಂದರೆ ರಚ್ಚೆ ಹಿಡಿಯುತ್ತಿದ್ದ ಮಕ್ಕಳಿಗೆ ನಡೆದಾಡಲು ಶುರು ಮಾಡಿದ ದಿನದಿಂದ ಸ್ನಾನ ಇಷ್ಟವಾಗತೊಡಗುತ್ತದೆ. ಯಾಕೆಂದರೆ ಮನಸೋ ಇಚ್ಛೆ ನೀರಿನಲ್ಲಿ ಆಡಬಹುದೆಂದು. ಶಾಲೆಗೆ ಹೋಗಲು ತೊಡಗಿದಂದಿನಿಂದ ಬಾತ್ರೂಂ ಮಗ್ಗಿ, ಪದ್ಯ, ಪ್ರಶ್ನೋತ್ತರಗಳ by heart ಕೋಣೆಯಾಗುತ್ತದೆ. ಇನ್ನು ಬೆಳೆದು ದೊಡ್ಡವರಾದಂತೆ ಈ ಬಚ್ಚಲು ಮನೆ ಪರೀಕ್ಷೆಯಲ್ಲಿ ಪಾಸು ಮಾಡಿಸಲು ಯಾ ಒಳ್ಳೆ ಕೆಲಸ ಸಿಗುವಂತೆ ಕೇಳಿಕೊಳ್ಳುವ ಪ್ರಾರ್ಥನಾ ಮಂದಿರ. ಪ್ರೇಮಿಗಳಿಗೆ ತಮ್ಮ ಪ್ರೀತಿಯನ್ನು ಹೆತ್ತವರಲ್ಲಿ ಮತ್ತು ಪ್ರಿಯಕರನಲ್ಲಿ ಯಾವ ರೀತಿ ನಿವೇದಿಸಿಕೊಂಡು ಒಪ್ಪಿಸುವುದೆಂಬ ಚಿಂತನಾಗೃಹ. ಇನ್ನು ಮದುವೆ ಪ್ರಾಯದ ಹೆಣ್ಣು ಮಕ್ಕಳಿಗೆ ಹೆತ್ತವರಿಂದ ಮದುವೆಯಾಗೆಂಬ ಒತ್ತಡದ ದುಃಖವನ್ನು ವ್ಯಕ್ತಪಡಿಸಲಿರುವ ಒಂದೇ ಒಂದು ಏಕಾಂತ ಸ್ಥಳ ಇದುವೇ. ತಾಯಂದಿರು ತಮ್ಮ ಮಕ್ಕಳನ್ನು, ಗಂಡನನ್ನು ಬೈಯ್ಯಲು, ಇಡೀ ದಿನದ ಸುಸ್ತು ನೋವುಗಳನ್ನೆಲ್ಲಾ ಮಾನಸಿಕವಾಗಿ ಹೊರಹಾಕಲು, ನಾಳೆಯ ಅಡುಗೆ ಸಂಬಂಧಿತ ಅಥವಾ ಇನ್ನಾವುದೇ ನಿರ್ಧಾರಗಳನ್ನು ತೆಗೆದುಕೊಂಡು ಹಗುರಾಗುವುದು ಇಲ್ಲೇ ಅಲ್ಲವೇ.
ಇನ್ನು ಗಂಡುಮಕ್ಕಳಿಗೆ ಉದ್ಯೋಗಸಂಬಂಧಿ ಯಾವುದೇ ತೊಂದರೆತಕರಾರುಗಳನ್ನು ತೊಡೆದು ಮನೆಮಂದಿಯ ಜೊತೆ ಸಂತೋಷದಿಂದ ಬೆರೆಯಲು ಈ ಬಾತ್ರೂಂ ಒಬ್ಬೊಳ್ಳೆ ಅವ್ಯಕ್ತ ಸ್ನೇಹಿತ. ಕೃಷಿ ಆಧಾರಿತ ಕೂಡು ಕುಟುಂಬದ ಅಪ್ಪಂದಿರ ಹವಾಮಾನ ವೈಪರೀತ್ಯದಿಂದ ಉಂಟಾದ ನಷ್ಟಕಷ್ಟಗಳ ಲೆಕ್ಕಾಚಾರ ಹಾಕಿ ಮುಂಬರುವ ದಿನಗಳಲ್ಲಿ ಇಡೀ ಮನೆಯನ್ನು ಹೇಗಪ್ಪಾ ಮುನ್ನಡೆಸುವುದೆಂಬ ಯೋಚನೆ, ಯೋಜನೆಯ ತಲೆನೋವು ಇಲ್ಲೇ ಅರ್ಧವಾಸಿಯಾಗುವುದು .
ಅಂತೆಯೇ ಬಾತ್ರೂಂ ಎಂಬ ಈ ಸ್ನಾನಮಂದಿರದಲ್ಲಿ ಸ್ನಾನದ ಜೊತೆಜೊತೆಗೆ ಎಲ್ಲ ರೀತಿಯ ಹತಾಶೆ, ಸಿಟ್ಟು, ಕೋಪ, ಅವಮಾನ, ಅಸಹಾಯತೆ, ದುಃಖದುಮ್ಮಾನಗಳನ್ನು ಮನಸ್ಸಿನಾಳದಿಂದ ಕಣ್ಣೀರಾಗಿಯೋ, ಪಿಸುಮಾತುಗಳಲ್ಲೋ ಹೊರಹಾಕಿ,ಸ್ನಾನ ಮುಗಿಸಿ ನಿರುಮ್ಮಳ(ನಿರ್ಮಲ)ರಾಗಿ ಬಂದು ದೇವರಮುಂದೆ ಕುಳಿತು ಒಂದೊಳ್ಳೆ ನಿರ್ಧಾರ ತಳೆದು, ತಲೆಬಾಗಿ ವಂದಿಸಿ, ನಿಟ್ಟುಸಿರುಬಿಟ್ಟು ಎದ್ದುಬಿಟ್ಟರೆ ಅಂತರಾತ್ಮಕ್ಕೆ ಏನೋ ಒಂದು ಅನಿರ್ವಚನೀಯ ಭಾವ. ಇಷ್ಟೆಲ್ಲಾ ಪಿಸುಮಾತುಗಳಿಗೆ, ಅಳು ಬೈಗುಳಗಳಿಗೆ ಕಿವಿಯಾದ ಆ ನಾಲ್ಕು ಗೋಡೆಗಳು ಯಾವತ್ತೂ ಯಾರಲ್ಲಿಯೂ ಒಂದಕ್ಷರ ಬಾಯಿಬಿಡದೆ ಎಲ್ಲವನ್ನೂ ಗುಟ್ಟಾಗಿ ತನ್ನಲ್ಲೇ ಬಚ್ಚಿಟ್ಟುಕೊಂಡ ಬಚ್ಚಲು ಮನೆ. ಇಂಥ ಮನಮಂದಿರಕ್ಕೆ ವರುಷದಲ್ಲಿ ಒಂದು ದಿನ ಪೂಜೆ ಸಲ್ಲಿಸಲು ಚುಮುಚುಮು ಚಳಿಯ ದೀಪಾವಳಿಯೇ ಹೆಚ್ಚು ಪ್ರಶಸ್ತವಲ್ಲವೇ!!
