Karada Vishwa

Article · October 30, 2025

‘ಇನ್ನಿಲ್ಲ’ ದ ಸುತ್ತ

ಲೇಖಕರು : ಎಸ್.ಎನ್ . ಭಟ್. ಸೈಪಂಗಲ್ಲು

ಸಿಹಿಯಾದ ಮಿಠಾಯಿಯನ್ನು ಚೀಪುತ್ತಿದ್ದ ಮಗು ತಾನು ಚೀಪುತ್ತಿದ್ದ ಮಿಠಾಯಿ ಕರಗುತ್ತಿದ್ದುದನ್ನು ನೋಡಿ ಚೀಪುವಿಕೆಯನ್ನು ನಿಧಾನ ಮಾಡುತ್ತದೆ. ತಾನು ಚೀಪುತ್ತಿದ್ದ ಮಿಠಾಯಿ ಕರಗಿ 'ಇನ್ನಿಲ್ಲವಾಗುತ್ತದೆ' ಎಂಬ ಆತಂಕ ಮಗುವಿಗೆ. ಅದು ಹಾಗಾಗಬಾರದು. ಅದಕ್ಕಾಗಿ ಮಗು ಮಿಠಾಯಿ ಚೀಪುವುದನ್ನು ನಿಧಾನ ಮಾಡುತ್ತದೆ. ಕೆಲವೊಮ್ಮೆ ನಾವು ಬಯಸುವುದು ಅದನ್ನೇ. ನೋವು, ಅಸಮಾಧಾನ, ಮಾನಸಿಕ ಒತ್ತಡವೇ ಮೊದಲಾದವುಗಳಿಂದ ಮುಕ್ತವಾಗಿ ಜೀವಿಸುವುದು ಎಷ್ಟೊಂದು ಖುಷಿ ಅಲ್ಲವೇ. ನೋವುಗಳು 'ಇನ್ನಿಲ್ಲ' ವಾಗುವುದು ನಮ್ಮ ಬದುಕನ್ನು ಹಸನುಗೊಳಿಸುತ್ತದೆ. ಅಪರೂಪಕ್ಕೊಮ್ಮೆ ಬರುವ ಬಡಾವಣೆಯ ನಳ್ಳಿ ನೀರು ಅಂದು ಬೇಗನೆ ಬಂದಾಗ, ನೀರು ತುಂಬಿಡಲು ಮನೆಯೊಳಗಿನ ಪಾತ್ರೆಗಳನ್ನು ಅಣಿಗೊಳಿಸಿ  ನಳ್ಳಿ ಬಳಿಬಂದಾಗ ತನ್ನಿಂದ ಈ ಮೊದಲೇ ಬಂದು ನಿಂತಿರುವ ಹತ್ತಾರು ಮಂದಿ! ನೀರು ಸಿಗಬಹುದೆಂಬ  ಅತ್ಯುತ್ಸಾಹದ ಮನಸ್ಸು, ಇನ್ನಿಲ್ಲವಾಗುತ್ತಿರುವ ನೀರಿನ ಬಗ್ಗೆ ಚಿಂತಿಸುತ್ತ ಕದಡಿ ಹೋಗುತ್ತದೆ.

ಆತ ವಯೋವೃದ್ಧ. ರೋಗಿಷ್ಟನಾಗಿ ಹಾಸಿಗೆ ಹಿಡಿದಿದ್ದಾನೆ. ಆತನ ಶುಶ್ರೂಷೆಗಾಗಿ ಹೋಂ ನರ್ಸ್ ಇದ್ದಾಳೆ. ಸುಮಾರು ಮೂರು ವರ್ಷಗಳಿಂದ ಆತ ಜೀವಚ್ಛವವಾಗಿದ್ದಾನೆ. ಈ ಲೋಕದ ಪರಿವೆ ಇಲ್ಲ. ಮಕ್ಕಳು, ಮರಿಮಕ್ಕಳು ಅಂತ ದೊಡ್ಡ ಸಂಸಾರ. ಮಗ, ಸೊಸೆ ಉದ್ಯೋಗದಲ್ಲಿದ್ದಾರೆ. ಮನೆಯ ಮಾಮೂಲು ಖರ್ಚು ವೆಚ್ಚಗಳೊಂದಿಗೆ ಆತನ ವೈದ್ಯಕೀಯ ವೆಚ್ಚ ಬೇರೆ. ಹಾಸಿಗೆ ಹಿಡಿದವ ಇಂದೋ - ನಾಳೆಯೋ ಜೀವ ಬಿಡಬಹುದೆಂಬ ನಂಬಿಕೆ ಈಗಿಲ್ಲ. ಇಂತಹ ಕಷ್ಟಗಳು ಆತನಿಗೂ, ಇತರರಿಗೂ ಬರಬಾರದೆಂಬ ಬಯಕೆಯಲ್ಲಿ ಹಲವಾರು ತಿಂಗಳುಗಳೇ ಕಳೆದಿವೆ. ಆದಷ್ಟು ಬೇಗ ಆತ ಇನ್ನಿಲ್ಲವಾಗಲಿ ಅಂತ ಒಳಗೊಳಗೇ ಬಯಸುವುದು ಲೋಕ ರೂಢಿ. ಆದರೆ ಆ ಜೀವ ಇನ್ನಿಲ್ಲದಂತಾಗಲು ಸೂಕ್ತ ಸಮಯ ಬರಲೇಬೇಕಿದೆ. ಕಾಯುವಷ್ಟು  ವ್ಯವಧಾನ ಬದುಕಿರುವ ಮನೆಮಂದಿಗೆ ಬೇಕಿದೆ. 

"ನಾನಿವನ  ಮತ್ತೆ ಕಾಣುವೆನೇ?"- ಇದು ಅವಳ ಮನಸ್ಸಲ್ಲಿ ರಾತ್ರಿಯಿಡೀ ಸುತ್ತಿದ ಆತಂಕ. ಒಂದು ತಿಂಗಳ ಹಿಂದೆ ಅಮ್ಮನ ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಲು ಬಂದವನು ಮತ್ತೆ ನಾಳೆ ಸಾವಿರ ಮೈಲು ದೂರದ ಸೇನಾ ಪಡೆಯಲ್ಲಿ ತನ್ನ ಕರ್ತವ್ಯನಿರ್ವಹಿಸಲು ಹೋಗುವವನಿದ್ದಾನೆ. "ಈ ಭೇಟಿ ಮತ್ತೆ ಕೂಡಿಬರಲಿ. ವಿಯೋಗದ ಕ್ಷಣಗಳು ಮತ್ತೆಂದಿಗೂ ಬಾರದಿರಲಿ " ಅಂತ ಮನದೊಳಗೆ ಮಾತನಾಡುವ ಆಕೆಗೆ...ಆತ ಮುಂದೆ ಇನ್ನಿಲ್ಲವಾಗುವ ಭಯ, ಆತಂಕ.

ಸಹಸ್ರಾರು ವರ್ಷಗಳ ಶ್ರೀಮಂತ ಪರಂಪರೆ ಹೊಂದಿರುವ ಭಾರತೀಯ ಸಂಸ್ಕೃತಿ, ಆಚಾರ ವಿಚಾರ, ಹೋಮ ಹವನ, ಪೂಜೆ ಪುನಸ್ಕಾರವೇ ಮೊದಲಾದ ಮೌಲ್ಯಯುತ  ಅಂಶಗಳನ್ನು  ನಮ್ಮೀ ಜೀವನದ ಅವಿಭಾಜ್ಯ ಅಂಗವಾಗಿರಿಸಿದ ನಮ್ಮ ಪೂರ್ವಜರು- ಅಂದಿನಿಂದ ಸರಿತೋಪಾಧಿಯಲ್ಲಿ ಹರಿದು ಬಂದಿರುವ ಸಂಸ್ಕಾರ ರೀತಿ -ಇವೆಲ್ಲ ಇತ್ತೀಚೆಗಿನ ದಿನಗಳಲ್ಲಿ ಇನ್ನಿಲ್ಲವಾಗುತ್ತಾ, ಕೇವಲ 'ಭೌತಿಕ ಸುಖವೇ ಪರಮೋಚ್ಚ' ಎನ್ನುವ ಭಾವದಲ್ಲಿರುವ ಹೊಸ ಪೀಳಿಗೆ- ಈ ಸಂಕೀರ್ಣ ಘಳಿಗೆಯಲ್ಲಿ ನಮ್ಮ ಹಳೆಯ  ಅತ್ಯಮೂಲ್ಯ ಜೀವನ ರೀತಿಯನ್ನು ಮತ್ತೆ ಜೀವಂತ ಉಳಿಸುವ ಹಿರಿಯರ ಪ್ರಯತ್ನ, ಕೈತಪ್ಪಿ ಮರೆಯಾಗುವ ಮುನ್ನ ನಮ್ಮತನವನ್ನು ಉಳಿಸಿ, ಜನಾಂಗದಲ್ಲಿ ಜಾಗೃತಿ ತರಿಸುವ ‘ಉಳಿಸಿ ಬೆಳೆಸಿ’ ಎನ್ನುವ ಕರೆ ನಮ್ಮದಾಗಬೇಕಲ್ಲವೇ? ನಮ್ಮ ಸಂಸ್ಕೃತಿ ಇನ್ನೂ ಜೀವಂತವಾಗಿರಬೇಕಲ್ಲ?

ಇತ್ತೀಚಿಗಿನ ದಿನಗಳಲ್ಲಿ ಪರಮ ಪವಿತ್ರವಾಗಿರುವ ಧಾರ್ಮಿಕ ಕ್ಷೇತ್ರಗಳಲ್ಲಿನ  ದುರವಸ್ಥೆ, ನಿರಂಕುಶ ಪ್ರವೃತ್ತಿ, ವ್ಯಾವಹಾರಿಕ ಪ್ರವೃತ್ತಿ  ದುರ್ಮಾರ್ಗದ  ಹಾದಿ ಹಿಡಿದರೆ,ಜನರಲ್ಲಿನ ನಂಬಿಕೆ, ವಿಶ್ವಾಸಗಳು ಇನ್ನಿಲ್ಲವಾಗಿ ಜನಾಂಗವೇ ದಿಕ್ಕು ತಪ್ಪಿ ನಮ್ಮ ಭವಿಷ್ಯವೇ ಅಯೋಮಯ ವಾಗುವುದನ್ನು ಸಹಿಸಲಾದೀತೆ? ನೂರಾರು ಕಾರಣಗಳಿಂದ ಅತ್ಯಾಚಾರಗಳಿಗೆ ಬಲಿಯಾಗುತ್ತಿರುವ ನಮ್ಮ ಭೂ ಸಂಪತ್ತು, ನಮ್ಮ ಕಣ್ಣೆದುರಲ್ಲೇ ಇನ್ನಿಲ್ಲವಾಗುತ್ತಿದೆ. ಇದು ಕೊಡಮಾಡುವ ಮುಂದಿನ ದುರಂತ ಗಳಿಗೆ ನಮ್ಮ ಮುಂದಿನ ಜನಾಂಗ ಬಲಿಯಾಗಬೇಕೇ?

ಹುಟ್ಟು ಎಂಬುದು ಎಷ್ಟು ಸ್ವಾಭಾವಿಕವೋ ಸಾವು ಎಂಬುದು ಅಷ್ಟೇ ಸಹಜ ಮತ್ತು ಸತ್ಯ. ವಿಶೇಷವೆಂದರೆ ಹುಟ್ಟುವಾತನಿಗೆ ಹುಟ್ಟಿನ ಬಗ್ಗೆ ಭಯವಿದೆಯೋ ಅಥವಾ ಸಂತಸವಿರುವುದೋ ತಿಳಿದಿಲ್ಲ. ಆದರೆ ಹುಟ್ಟಿದವನಿಗೆ ಬದುಕಿನ ಖುಷಿಯ ಕನಸಿದ್ದರೂ ಸಾವಿನ ಕುರಿತಾದ ಅಳುಕು ಇದ್ದೇ ಇರುತ್ತದೆ. ಆತ ಬದುಕುತ್ತ ಸಾವಿನ ಬಗ್ಗೆ ತಿಳಿದೂ ತಿಳಿಯದವನಂತಿದ್ದು ವ್ಯವಹರಿಸುವ ರೀತಿ ವಿಸ್ಮಯಗೊಳಿಸುತ್ತದೆಹುಟ್ಟಿದವನಿಗೆ ಸಾವಿದೆಎಂಬ ಮಾತನ್ನು ತಿಳಿಯಲು ಯಾವುದೇ ಗ್ರಂಥ, ಪುರಾಣಗಳನ್ನು ಓದಬೇಕೆಂದಿಲ್ಲ. ಯಾಕೆಂದರೆ ಬಗ್ಗೆ ನಾವೆಲ್ಲ ಯಾವಾಗಲೂ ಕೇಳುತ್ತಲೇ ಬಂದವರು.ಸಾವಿನ ಕುರಿತಾದ ಒಂದು ಸತ್ಯವೆಂದರೆ ಅದು ಬದುಕಿದವರಿಗೆ ಯಾವಾಗ ಎಲ್ಲಿ ಸಂಭವಿಸುತ್ತದೆ ಎಂದು ಮೊದಲೇ ತಿಳಿಯದಿರುವುದು. ಮರಣ ಎಂಬುದು ನಮ್ಮ ಇಹಲೋಕದ ಜೀವಿತ ಇನ್ನಿಲ್ಲ ವಾಗುವ ಒಂದು ಘಟ್ಟ. ಆದರೆ ಮರಣದ ಸುತ್ತಲಿನ ಮನುಷ್ಯ ಸಂಬಂಧಗಳು ಮೃತವಾಗುವುದಿಲ್ಲ.

 ಸಂಬಂಧಗಳೇ ಹಾಗೆ; ವಿದ್ಯುತ್ ಶಕ್ತಿಯಂತೆ, ಮುಟ್ಟಿದವರನ್ನು ತಮ್ಮೊಂದಿಗೆ ಸೆಳೆಯುವ ಸಾಮರ್ಥ್ಯ ಅವಕ್ಕಿದೆ. ಆದುದರಿಂದ ಅವುಗಳಿಂದ ಹೊರಗೆ ಬರಲು ನಮ್ಮ ಮನಸ್ಥಿತಿ, ನಮ್ಮ ವ್ಯವಹಾರಗಳು, ಅವರೊಂದಿಗಿರಿಸಿದ ಸಂಬಂಧಗಳು, ಅವುಗಳ ಸಾಮಿಪ್ಯ, ತೀವ್ರತೆ -ಇವೆಲ್ಲ ಕಾರಣವಾಗಬಹುದು. ಸಂಬಂಧಗಳ ತೀವ್ರತೆ ಎಂಬುದುನಾವೆಷ್ಟು ಅವರೊಂದಿಗೆ ಮಾನಸಿಕವಾಗಿ ಹತ್ತಿರವಾಗಿದ್ದೆವು’ ಎಂಬುದನ್ನುಅವಲಂಬಿಸುತ್ತದೆ.

 ಒಬ್ಬನ ಇನ್ನಿಲ್ಲವಾಗುವಿಕೆ ಒಂದೇ ಮನೆಯ ಎಲ್ಲಾ ಮಂದಿಗಳಿಗೆ ಬೇಸರವನ್ನು ಕೊಟ್ಟರೂ ಅವುಗಳ ತೀವ್ರತೆ ಎಲ್ಲರಲ್ಲೂ ಏಕಪ್ರಕಾರವಾಗಿರುವುದಿಲ್ಲ. ಅದು ಅವನ ಆಪ್ತಬಂಧುಗಳಲ್ಲಿ ಮಿಶ್ರ ಭಾವವನ್ನುವ್ಯಕ್ತಪಡಿಸುವುದು. ಕೆಲವರು ಇದರಿಂದ ಸಮಾಧಾನಗೊಂಡರೆ ಇನ್ನು ಕೆಲವರಿಗೆ ಇಂತಹ ವಿಯೋಗ ತಡೆಯಲಾಗದ ನೋವನ್ನು ಕೊಡುತ್ತದೆ. ಕೆಲವೊಮ್ಮೆ ಅತಿ ಹತ್ತಿರದ ಸಂಬಂಧಿಗಳು ಅಂತಹ ದುಃಖವನ್ನುಎದುರಿಸುವ ರೀತಿಯಲ್ಲೂ ವ್ಯತ್ಯಾಸಗಳಿರುತ್ತವೆ. ಆದರೆ ಇನ್ನಿಲ್ಲವಾಗುವುದನ್ನು ಒಪ್ಪಿಕೊಂಡು ಅದನ್ನು ಬದಲಾಯಿಸಲಾಗದ ಸತ್ಯವೆಂದು ಸ್ವೀಕರಿಸಿ ತಮ್ಮ ಮುಂದಿನ ಜೀವನವನ್ನು ಹೊಸ ರೀತಿಯಲ್ಲಿ ಎದುರಿಸುವವರು ನಮ್ಮೊಂದಿಗೆ ಹಲವಾರು ಮಂದಿ ಇದ್ದಾರೆ. ನಾವು ಅಂಥವರ ಬಗ್ಗೆ ಯೋಚಿಸಿದಾಗ ಬದಲಿಸಲಾಗದ ಅವರ ಅಚಲ ಹೋರಾಟದ ಬಗ್ಗೆ ದಿಗ್ಭ್ರಮೆಯಾಗುತ್ತದೆ. ಅಂತವರು ತಮ್ಮ ಚಟುವಟಿಕೆಗಳ ಮೂಲಕ ಸದಾ ಲವಲವಿಕೆಯಿಂದ ವ್ಯವಹರಿಸುವುದನ್ನು ನೋಡಿದಾಗ ನಮ್ಮ ಕಣ್ಣುಗಳಲ್ಲಿ ನಾವು ತೀರಾ ಚಿಕ್ಕವರಾಗಿ ಭಾಸ ವಾಗುವುದಿದೆ.

ಜೀವನ ಎಂಬುದು ಫಲಿತಾಂಶವಲ್ಲ, ಅದು ಪ್ರತಿಯೊಂದು ಹೆಜ್ಜೆಯಲ್ಲಿಯೂ ನಮಗೆ ಕೊಡುವ ವಿಶೇಷ ಅವಕಾಶ, ಪಾಠ ಅಥವಾ ಅನುಭವ. ಅಂತಹ ಸನ್ನಿವೇಶಗಳನ್ನು ನಾವು ಹೇಗೆ ಎದುರಿಸುತ್ತೇವೆ- ಎಂಬುದರಲ್ಲಿ ಅಡಗಿದೆ ನಮ್ಮ ಜೀವನದ ಗುಟ್ಟು. ಪೆಹಲ್ಗಾವಿನ ಹೋದೋಟದಲ್ಲಿ ವಿಹರಿಸುತ್ತಿದ್ದ ಪ್ರಣಯಿಗಳ ಸುಮಧುರ ಕ್ಷಣಗಳಲ್ಲಿ ಅಡಗಿ ಕೂತಿತ್ತು ಕಾಲಚಕ್ರನ ವಕ್ರದ್ರಷ್ಠಿ. ಇಡೀ ವಿಶ್ವವನ್ನೇ ಮರೆತ ಅವರೆದುರು ಧುತ್ತನೆ ಬಡಿದದ್ದು ಸಿಂಧೂರ ಅಳಿಸಿದ ಸಿಡಿಲು, ಕ್ಷಣಾರ್ಧದಲ್ಲಿ ಕಣ್ಣೆದುರ ಸಾವು. ಸಾಲದುದಕ್ಕೆ ಪ್ರಿಯ ಜೋಡಿಯಲ್ಲೊಂದನ್ನು ಕೊಂದು ಬದುಕುಳಿದ ಭಗ್ನ ಹೃದಯಿಇನ್ನಿಲ್ಲ’ ದಂತಾಗುವ (ಸಾಯುವ) ತನಕ ನರಳುವಂತೆ ಮಾಡಿದ ಘೋರ ಕೃತ್ಯ. ಅಂತಹ ಊಹನಾತೀತ ಅನುಭವವನ್ನು ಸ್ವಯಂ ಅನುಭವಿಸಿದ ಒಂಟಿ ಪ್ರೇಮಿಯ ವಿರಹ ವೇದನೆಗೆ ಕರಗದಿರುವ ಕಲ್ಲು ಇರಬಹುದೇ?- ಎಂದ ಮಾತ್ರಕ್ಕೆ ಸಿಂಧೂರ ಕಳಕೊಂಡ ಆಕೆಯಾಡಿದ ದಿಟ್ಟ ಮಾತುಗಳಲ್ಲಿ ಸಿಡಿದ ಬಾಂಬುಗಳಿಗಿಂತ ಅಧಿಕ ಸಾಮರ್ಥ್ಯದ ಶಕ್ತಿ ಇತ್ತು-ಎಂಬುದನ್ನು ಯಾರೂ  ಊಹಿಸಿರಲಾರರು.  "ಕ್ರೂರಿ ಹಂತಕನೇ- ನೀನು ಗೆದ್ದಿರಬಹುದು ಎಂಬ ಭ್ರಮೆ ನಿನಗಿರಬಹುದು, ಆದರೆ ನಾನು, ನನ್ನ ಪತಿ ಎಂದೂ ಸೋತವರಲ್ಲ, ನನ್ನ ಪತಿ ಸದಾ ನನ್ನೊಂದಿಗೆ ಇದ್ದಾರೆ, ಆತ ಅಮರ, ಚಿರಂಜೀವಿ, ಬದುಕಲ್ಲಿ ನಾವೆಂದಿಗೂ ಸೋಲಲಾರೆವು" ಎಂದು ಕಣ್ಣೀರ ಮುಖದಲ್ಲಿ ನಗು ತುಂಬಿ ಆತ್ಮವಿಶ್ವಾಸ ತೋರಿದ ಮಹಾಮಾತೆಗೆ  ನಾವು ಏನನ್ನಬೇಕು? ಅವಳ ಇನಿಯ ಅವಳೊಂದಿಗೆ "ಇನ್ನೂ ಇದ್ದಾನೆ"-ಎಂಬವಳ ಮಾತಿನ ಸಂದೇಶ- ಆಕೆ ಜೇವನದಲ್ಲಿಟ್ಟ ವಿಶ್ವಾಸ, ಬಲವಾದ ನಂಬಿಕೆಗೆ ಆಧಾರವಲ್ಲವೇ?

 ಮಾನವನು ಇನ್ನಿಲ್ಲವಾಗುವ ಬಳಿಕ, ಆತನ ಇರವನ್ನು ತೋರಿಸಲು ಉಳಿದವರು ಶಾಂತಿ ಸಾಧನೆ ಮಾಡಬೇಕು. "ಅಗಲಿದವರ ನೆನಪುಗಳೊಂದಿಗೆ ಉಳಿದವರು ಬದುಕಲು ಕಲಿಯಬೇಕಾಗಿದೆ" ಎಂಬುದನ್ನು ಬದುಕಿದವರು ಅರ್ಥೈಸಿದಾಗ ಮಾತ್ರ ಅವರ ಬದುಕು ಅರ್ಥವತ್ತಾಗುವುದು. ‘ಇನ್ನಿಲ್ಲವಾಗುವುದು ಎಂಬ ಪ್ರಕ್ರಿಯೆ ಎಲ್ಲೆಡೆ ಅನಿವಾರ್ಯ. ಅದನ್ನು ಅರ್ಥೈಸಿದಾಗ ಬದುಕು ಮೌಲ್ಯ ಪಡೆಯುತ್ತದೆ. ಎಲ್ಲವೂ ಕ್ಷಣಿಕ ಎಂಬ ಅರಿವನ್ನು ನೀಡುವುದೇ ಮರಣ. ಪಾಠವನ್ನು ಎಲ್ಲರೂ ತಿಳಿಯಬೇಕಿದೆ. ಕ್ಷಣಿಕವಾದ ಬದುಕನ್ನು ದೀರ್ಘವಾಗಿ ಅನುಭವಿಸುವ ಎದೆಗಾರಿಕೆ ನಮ್ಮದಾಗಬೇಕು. ಒಂದು ರೀತಿಯಲ್ಲಿ ಮರಣ ಭಯದ ನಿವಾರಣೆಯಿಂದಲೇ ಪ್ರಾಮಾಣಿಕ ಮತ್ತು ಪ್ರಾಯೋಗಿಕ ಬದುಕು ಆರಂಭವಾಗುವುದು.

ಇನ್ನಿಲ್ಲದಿರುವುದು ಎಂಬುದು ಕೇವಲ ದೇಹದ ಅಸ್ತಿತ್ವವಿಲ್ಲದ ಸ್ಥಿತಿ ಅಲ್ಲ. ಅದು ಅಹಂ ನಾಶವಾದ ಸ್ಥಿತಿಯೂ ಹೌದು. ಅಹಂವಿಲ್ಲದ ಸ್ಥಿತಿ ಎಂದರೆ ಎಲ್ಲಕ್ಕೂ ಸಮಭಾವದಿಂದ ನೋಟವಿಡುವ ಸಾಮರ್ಥ್ಯ. ಇಲ್ಲಿ, ಯಾವುದೇ ವಿಷಯವನ್ನು ನಾನು ಎನ್ನುವ ಭಾವನೆಯಿಲ್ಲದೆ ನೋಡುವ ಅವಕಾಶ ಸಿಗುತ್ತದೆ. ಅಲ್ಲಿ ಸ್ವಾರ್ಥವಿಲ್ಲ, ಹಕ್ಕುಗಳಿಲ್ಲ, ಸೀಮೆಗಳಿಲ್ಲ. ಇಂತಹ ನಿರ್ಲಿಪ್ತ ಮನೋಭಾವವೇ ಮನಸ್ಥೆರ್ಯವನ್ನು ಬೆಳೆಸುವ ತಂತ್ರ.

ಧರ್ಮ, ತತ್ವಶಾಸ್ತ್ರ ಮತ್ತು ಅಧ್ಯಾತ್ಮಿಕ ಪರಂಪರೆಗಳು "ಇನ್ನಿಲ್ಲ" ಎಂಬ ಸ್ಥಿತಿಯನ್ನು ಶೂನ್ಯತೆ ಎಂದು ತಿರಸ್ಕರಿಸುವ ಬದಲು, ಅದನ್ನು ಪರಿಪೂರ್ಣತೆ ಎಂದು ವರ್ಣಿಸುತ್ತವೆ. ಶೂನ್ಯವೆಂದರೆ ಏನೂ ಇಲ್ಲ ಎಂಬ ಅರ್ಥವಲ್ಲ; ಅದು ಎಲ್ಲವನ್ನೂ ಒಳಗೊಂಡ ಸಂಪೂರ್ಣ ಶಾಂತಿಯ ಸ್ಥಿತಿ. ಬುದ್ಧ, ಶಂಕರಾಚಾರ್ಯರು, ಮಹಾವೀರರು ತಮ್ಮ ಜೀವನದಲ್ಲಿ ತತ್ವವನ್ನು ಅನುಭವಿಸಿ, ಇತರರಿಗೂ ತೋರಿಸಿದರು.

ವ್ಯಕ್ತಿ ಇನ್ನಿಲ್ಲವಾಗಿದ್ದಾನೆ ಎಂಬುದು ಭ್ರಮೆಯಲ್ಲ ಅದು ವಾಸ್ತವ. ಆದರೆ ಆತ ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ನಮ್ಮ ವ್ಯವಹಾರಗಳಲ್ಲಿ ಆಗಾಗ ನೆನಪಾಗಿಸುವ ಭ್ರಮೆ ಸ್ವಲ್ಪ ಸಮಯದ ತನಕ ಎಲ್ಲ ಆಪ್ತರನ್ನು ಆವರಿಸುತ್ತದೆ. ಯಾಕೆಂದರೆ ವ್ಯಕ್ತಿಯು ಇಲ್ಲದಿರುವುದನ್ನು ನಮ್ಮ ಯಾವ ಜ್ಞಾನೇಂದ್ರಿಯಗಳು ಒಮ್ಮೆಲೇ ಒಪ್ಪುವುದಿಲ್ಲ ಹಲವಾರು ವರ್ಷಗಳುದ್ದಕ್ಕೂ  ಜೊತೆಯಲ್ಲಿ ಇದ್ದ ವ್ಯಕ್ತಿ ನಮ್ಮ ಕಣ್ಣುಗಳಿಗೆ  ಗೋಚರಿಸದೆ ಇರುವುದು ಮಾತ್ರವಲ್ಲ, ಆತನ ಎಲ್ಲಾ ನಡೆ ನುಡಿ ಹಾವ, ಭಾವ ಬದುಕಿನ ರೀತಿಯ ಬಗ್ಗೆ, ಆತನೊಂದಿಗಿನ ನಮ್ಮ ಅನುಭವಗಳ ಗಂಟುಗಳನ್ನು  ಮೆದುಳಲ್ಲಿ ಅಚ್ಚು ಹಾಕಿದೆ. ಅವುಗಳಿಂದ ಹೊರಬರುವುದು ಬಹಳ ಕಷ್ಟ.  ಇನ್ನಿಲ್ಲದವನ ಬಗೆಗಿನ ನೆನಪುಗಳು ಇನ್ನಿಲ್ಲದಂತಾಗಲು ಹಲವು ವರ್ಷಗಳೇ ಬೇಕಾಗಬಹುದು. ಅಥವಾ ಅವೆಂದೂ ನಮ್ಮ ಮನಪಟಲದಿಂದ ಅಳಿಯಲಾರವು. ಅಂತಹ ನೆನಪುಗಳ ಪ್ರಬಲವಾದ ಪ್ರವಾಹವೇ ನಮ್ಮ ವ್ಯವಹಾರವನ್ನು ನಿಯಂತ್ರಿಸುವುದು. ಇದರಿಂದಾಗಿ ನಾವು ನೆನಪುಗಳಿಗೆ ಬಲಿಯಾಗಿ ಅಥವಾ ಅಂತಹ ವಿಸ್ಮೃತಿಗಳಿಗೆ ಅಡಿಯಾಗಿ ನಮ್ಮ ಮುಂದಿರುವ ನಿಜವಾದ ಜೀವನವನ್ನುಅ ಶಾಂತಿ, ಅಸಮಾಧಾನಗಳಿಂದ ಹಾಳು ಮಾಡಿದಂತಾಗುತ್ತದೆಹೋದವ ಮತ್ತೆ ಹಿಂತಿರುಗಿ ಬರಲಾರ, ಹೀಗಿದ್ದರೂ ಅವನ ಬಗ್ಗೆ ನಾವು ಯೋಚಿಸುತ್ತಾ ಕುಳಿತರೆ ಏನನ್ನು ಸಾಧಿಸಿದಂತಾಗುತ್ತದೆ? ನಾವೂ ಹೋದವನ ಹಾದಿ ಬೇಗನೆ ಹಿಡಿಯ ಬೇಕಾದೀತು! ಎಂಬ  ಯಾತಾರ್ಥ್ಯ ತಿಳಿವು ನಮಗಿರಬೇಕು. ಅತಿಯಾದ ಭಾವುಕತೆಯ ಮೌಢ್ಯದಲ್ಲಿ ಮುಳುಗಿದವರಿಗೆ ತಮ್ಮ ಮುಂದಿರುವ ಹೊಸ ಸುಪ್ರಭಾತಗಳು ಕರಿಮೋಡ ತುಂಬಿದ ದಿಗಂತಗಳಾಗಬಹುದು.

ಯಾವುದೇ ಸ್ಥಿತಿ ಹಾಗೆಯೇ ಇರುವುದಿಲ್ಲ. 'ಇದಂ ಕ್ಷಣಂ ಕ್ಷಯತಿ' ಎಂಬಂತೆ 'ಇನ್ನಿಲ್ಲವಾಗಿ ಕೊಡುವ ದುಃಖವೊ, ವೇದನೆಯೋ ಶಾಶ್ವತವಲ್ಲ. ಅದೊಂದು ಸಮಯ. (ಎಲ್ಲರ ಬಾಳಲ್ಲಿಯೂ ಬರುವ ಕ್ಷಣ, ಗೌತಮ ಬುದ್ಧ ಕಿಸಾ ಗೌತಮಿಗೆ ಹೇಳಿದ ‘ಸಾವಿಲ್ಲದ ಮನೆಯ ಸಾಸಿವೆಕಾಳಿನ ಕಥೆಯಂತೆ’). ಇನ್ನಿಲ್ಲ ಎಂಬುದೂ ಶಾಶ್ವತವಲ್ಲ. ಅದನ್ನು ಇನ್ನಿಲ್ಲದಂತೆ ಮಾಡುವುದು ನಮ್ಮ ಕೈಯಲ್ಲಿದೆ. ಭರವಸೆಗಳನ್ನು ಕೊಡುವ ನಾಳೆಗಳು, ಬದಲಾವಣೆ ತರುವ ಭವಿಷ್ಯ, ಮುಂದೆ ಬದಲಾಗುವ ಹೊಸತನಗಳಿಗೆ ಹೊಂದಿಕೊಳ್ಳುವ   ನಮ್ಮ ಮನಸ್ಥಿತಿಯಿಂದಾಗಿಇನ್ನಿಲ್ಲ’ದವರು ಮತ್ತೆ ಜೀವಂತಿಕೆ ಪಡೆಯುತ್ತಾರೆ. ನಮ್ಮ ಬದುಕಿನಲ್ಲಿ ಚಿರಂಜೀವಿಗಳಾಗಿ ಭಾಸವಾಗುವಇನ್ನಿಲ್ಲ’ದವರು  ನಮ್ಮೊಂದಿಗಿಲ್ಲ ಎಂಬ ಕಟು ಸತ್ಯದ ತಿಳಿವಿದ್ದರೂ ಈ ವಾಸ್ತವ ಪ್ರಪಂಚದಲ್ಲಿ ಅವರಿನ್ನೂ ಸದಾ ನಮ್ಮೊಂದಿಗಿರುತ್ತಾರೆಂಬ ನಂಬಿಕೆಯೇ ನಮ್ಮ ಬದುಕನ್ನು ಚಿಗುರೊಡಿಸುವುದು, ಮುನ್ನಡೆಸಿ ಬೆಳಗಿಸುವುದು.

********************************

 ಲೇಖಕರು : ಎಸ್. ಎನ್. ಭಟ್ ಸೈಪಂಗಲ್ಲು , ನಿವೃತ್ತ ಮುಖ್ಯೋಪಾಧ್ಯಾಯರು - ಕೇಂದ್ರೀಯ ವಿದ್ಯಾಲಯ, ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರು. 

 

Published
‘ಇನ್ನಿಲ್ಲ’ ದ ಸುತ್ತ