
Article · November 13, 2025
ಕಾಯಿ ಮೆಣಸು - ಉದ್ದಿನ ಬೇಳೆ ಸಂಡಿಗೆ
✍️ ಶೈಲಜಾ ಭಟ್
ಊಟದ ತಟ್ಟೆಯಲ್ಲಿ ಹಪ್ಪಳ, ಸಂಡಿಗೆ ಇದ್ದರೆ ಹಿರಿಯರೇ ಆಗಲಿ, ಕಿರಿಯರೇ ಆಗಲಿ ಬಾಯಿ ಚಪ್ಪರಿಸಿ ಊಟ ಮಾಡುತ್ತಾರೆ. ಬಾಯಿಗೆ ರುಚಿ ಇಲ್ಲದಂತಹ ಸಂದರ್ಭದಲ್ಲಿ ಖಾರವಾದಂತಹ ಸಂಡಿಗೆ ಇದ್ದರೆ ಊಟ ರುಚಿಯಾಗಿರುತ್ತದೆ.
ಕಾಯಿಮೆಣಸು-ಉದ್ದಿನಬೇಳೆ ಸಂಡಿಗೆ ಮಾಡಲು ಬೇಕಾದಂತಹ ಸಾಮಗ್ರಿಗಳು:
ಕಾಯಿ ಮೆಣಸು(ಹಸಿ ಮೆಣಸಿನಕಾಯಿ) :1 ಕೆಜಿ
ಉದ್ದಿನ ಬೇಳೆ: ಅರ್ಧ ಕೆಜಿ
ಉಪ್ಪು: 4 ಚಮಚದಷ್ಟು
ಮಾಡುವ ವಿಧಾನ:
ಮೊದಲು 1/2 ಕೆಜಿ ಉದ್ದಿನ ಬೆಳೆಯನ್ನು ತೊಳೆದು ನಾಲ್ಕು ಗಂಟೆಯಷ್ಟು ಹೊತ್ತು ನೆನೆಸಬೇಕು. ನಂತರ ಹಸಿಮೆಣಸಿನ ತೊಟ್ಟನ್ನು ತೆಗೆದು ನೀರಲ್ಲಿ ಚೆನ್ನಾಗಿ ತೊಳೆದು ಸಣ್ಣಕೆ ಕತ್ತರಿಸಬೇಕು. ನಂತರ ಕಾಯಿ ಮೆಣಸು ಮತ್ತು ಉದ್ದಿನ ಬೇಳೆಯನ್ನು ನೀರು ಹಾಕದೆ ಸ್ವಲ್ಪ ದೊರಗಾಗಿ ಮಿಕ್ಸಿಯಲ್ಲಿ ರುಬ್ಬಬೇಕು. ಇದಕ್ಕೆ ನಾಲ್ಕು ಚಮಚದಷ್ಟು ಉಪ್ಪನ್ನು ಸೇರಿಸಿ ಚೆನ್ನಾಗಿ ಕಲಸಬೇಕು. ನಂತರ ಬಾಳೆ ಎಲೆಯಲ್ಲಿ ರುಬ್ಬಿಟ್ಟಂತಹ ಸಂಡಿಗೆ ಹಿಟ್ಟನ್ನು ಚಮಚದಿಂದ ತೆಗೆದು ಇಡಬೇಕು. ಎರಡು ದಿನಗಳ ನಂತರ ಸೆಂಡಿಗೆಯನ್ನು ಬಾಳೆ ಎಲೆಯಿಂದ ತೆಗೆದು ನಂತರ ನಾಲ್ಕು- ಐದು ದಿನ ಅಥವಾ ಚೆನ್ನಾಗಿ ಒಣಗುವವರೆಗೆ ಬಿಸಿಲಿನಲ್ಲಿ ಇಡಬೇಕು.ಒಣಗಿದ ಸಂಡಿಗೆಯನ್ನು ಗಾಳಿಯಾಡದ ಡಬ್ಬದಲ್ಲಿ ಹಾಕಿಟ್ಟರೆ ವರ್ಷದವರೆಗೂ ಉಳಿಯುತ್ತದೆ.
ಸಂಡಿಗೆಯನ್ನು ಕರಿಯಲು ಎಣ್ಣೆಯನ್ನು ಮಧ್ಯಮ ಉರಿಯಲ್ಲಿಟ್ಟು ಕರಿದರಾಯಿತು.
ಲೇಖಕಿಯ ಕಿರುಪರಿಚಯ :

ಶೈಲಜಾ ಭಟ್ ಬಾಯಾರು ಗ್ರಾಮದ ಕನಿಯಾಲದವರು. ಪ್ರಸ್ತುತ ಮಣಿಪಾಲದಲ್ಲಿ ವಾಸ. ಬದಿ (ಪಡ್ರೆ) ಕುಟುಂಬದಲ್ಲಿ ಜನನ , ಸಮಾಜ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಬಿಡುವಿನ ವೇಳೆಯಲ್ಲಿ ಬರವಣಿಗೆ ಹಾಗು ಇನ್ನಿತರ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದು ಇವರ ಹವ್ಯಾಸ.
