
Article · February 12, 2026
ಮುಕ್ತಕಗಳು
- ಜಯಶ್ರೀ ಕೆ ಆರ್ ಭಟ್ , ಪಳ್ಳತಡ್ಕ
ಸುಮ
☘️☘️☘️
ನಸುಕ ಮುಂಜಾವಿನಲಿ ವಿಕಸಿತದ ಸುಮವೊಂದು
ನಸುಗಂಪ ಬೀರುತಲಿ ಸೆಳೆಯಿತೆನ್ನ /
ವಿಕಸಿಸಿದ ಸುಮದಂತೆ ಭಾವವರಳಿತು ಮನದಿ
ನಸುಗಂಪ ಹರಡಿಸಿತು ಹೃದಯದಲ್ಲಿ/
********
ದೇವರು
🪻🪻🪻
ತನ್ನ ಬುದ್ಧಿಯ ಬಳಸಿ ಕೆತ್ತಿ ಶಿಲೆಯನು ಶಿಲ್ಪಿ
ರೂಪ ನೀಡಿದನದಕೆ ಶಿಲ್ಪವಾಗಿ /
ಗುಡಿಯ ಸೇರಲು ಶಿಲ್ಪ ಜೀವಕಳೆ ಬಂತದಕೆ
ಕೈಯ ಮುಗಿದನು ಶಿಲ್ಪಿ ಶಿರವ ಬಾಗಿ/
ಮನದಿ ನೆನೆದನು ಅದನೆ ದೇವರಾಗಿ !
********
ಪಶ್ಚಾತ್ತಾಪ
🪻🪻🪻🪻
ಹಸಿದ ಹಕ್ಕಿ ಹುಳವ ಹೆಕ್ಕಿ
ಕುಕ್ಕಿ ಕುಕ್ಕಿ ತಿಂದಿತು/
ಕೊಂದೆನಲ್ಲ... ಇದನು ಎಂದು
ಬಿಕ್ಕಿಬಿಕ್ಕಿ ಅತ್ತಿತು/
********
ಕದ
🪻🪻🪻
ಮನದ ಬಾಗಿಲ ತೆರೆದು ಕನಸುಗಳನೊಳ ಬಿಟ್ಟೆ,
ತುಂಬಿಕೊಂಡೆನು ಬಾಚಿ ಹೃದಯದೊಳಗೆ /
ಈಡೇರದಿರಲೊಂದೂ ಭಾರವಾಯಿತು ಹೃದಯ,
ಹೊರಹೋಗು ಕನಸೇ ಎಂದು ಹೊರದಬ್ಬಿದೆ,
ಮತ್ತೆಂದೂ ಬರದಂತೆ ಕದ ಮುಚ್ಚಿದೆ!
Creative Writings
