
News · November 27, 2026
ಆವಳಮಠದಲ್ಲಿ ಕಾರ್ತಿಕ ದೀಪೋತ್ಸವ ಸಂಪನ್ನ
ವರದಿ ಕೃಪೆ : ಲಕ್ಷ್ಮೀನಾರಾಯಣ ಭಟ್ ಆವಳಮಠ
ಕಾರ್ತೀಕ ಮಾಸದಲ್ಲಿ ಎಲ್ಲೆಡೆ ದೀಪೋತ್ಸವ. ಆವಳಮಠದಲ್ಲಿ ಪಾಡ್ಯದಿಂದ ಚತುರ್ದಶಿ ತನಕ ದೇವಸ್ಥಾನದ ಕಡೆಯಿಂದ ದೀಪಾರಾಧನೆ. ಕಾರ್ತೀಕ ಹುಣ್ಣಿಮೆ ದಿನ ದೀಪೋತ್ಸವದೊಂದಿಗೆ ವಿಶೇಷ ಪೂಜೆ.
ಈ ವರ್ಷ 24ರಂದು ಕಾರ್ತೀಕ ದೀಪೋತ್ಸವ ವಿಜೃಂಭಣೆಯಿಂದ ಸಂಪನ್ನವಾಯಿತು. ಬೆಳಿಗ್ಗೆ 7.00ಗಂಟೆಗೆ ಚಂಡಿಕಾಹೋಮ ಆರಂಭವಾಯಿತು. ಶ್ರೀಮತಿ ಸೌಮ್ಯ ಯಸ್ ಭಟ್, "ಅನುಗ್ರಹ", ಕೊಯಿಲ ಇವರು ಸೇವಾಕರ್ತರಾಗಿದ್ದರು. ಬೆಳಿಗ್ಗೆ 8.00 ಗಂಟೆಗೆ ಸಾರ್ವಜನಿಕರು ಕೊಡುಗೆಯಾಗಿ ನೀಡಿದ ವಿದ್ಯುತ್ ಉತ್ಪಾದಕವನ್ನು ದೇವಸ್ಥಾನದ ಉಪಯೋಗಕ್ಕೆ ಸಮರ್ಪಣೆ ಮಾಡಲಾಯಿತು. 10.00 ಗಂಟೆಗೆ ಶ್ರೀ ಜಿ.ಕೆ.ನಾವಡ ಅವರ ಸಾರಥ್ಯದಲ್ಲಿ ಶ್ರೀ ಮಹಾಮಾಯೇ ಯಕ್ಷಗಾನ ಕಲಾ ಸಂಘ, ಬಾಯಾರುಪದವು ಇವರಿಂದ 'ದ್ರೌಪದಿಯ ಗರ್ವ ಭಂಗ' ಯಕ್ಷಗಾನ ತಾಳಮದ್ದಳೆ ಜರುಗಿತು. ಮಧ್ಯಾಹ್ನದ ವಿಶೇಷ ಪೂಜೆಗೆ ಶತಸ್ವ ಪಾಯಸ ಸಮರ್ಪಿಸಲಾಯಿತು. ಸಂಜೆ 7.00ರಿಂದ ವಿಶೇಷ ಕಾರ್ತೀಕ ದೀಪೋತ್ಸವ ಜರುಗಿತು. ಸ್ವಯಂಸೇವಕರು ಹಾಗೂ ಸೇವಾಕರ್ತರು ಹೆಚ್ಚಿನ ಮುತುವರ್ಜಿ ವಹಿಸಿ ದುಡಿದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.





