
Article · October 16, 2026
ಉಸಿರು
By ಗಾಯತ್ರಿ ನಾಗರಾಜ ಅಡ್ಕತ್ತೊಟ್ಟಿ
ಗಾಯತ್ರಿ ಕೆ ಅಡ್ಕತೊಟ್ಟಿ
ನ್ಯಾನೋ ಕಥೆ
ಆ ಹೆಣ್ಣು ಮಗಳು ನೋವಿನ ದಡದಲ್ಲಿ ಕೂತಿದ್ದಳು. ಬದುಕು ಎಂದರೆ ಸಹಿಸಿಕೊಳ್ಳುವುದು ಎಂದುಕೊಂಡಿದ್ದವಳು.
ಅವನು ಬಂದ. ಕೇವಲ ಮೂರು ತಿಂಗಳ ಪರಿಚಯ
ಅವನು ಏನೂ ದೊಡ್ಡದಾಗಿ ಮಾಡಲಿಲ್ಲ. ಸುಮ್ಮನೆ ಮಾತಾಡಿಸಿದ. ಅವಳು ನಕ್ಕಳು. ಎಷ್ಟೋ ವರ್ಷಗಳ ನಂತರ ನಕ್ಕಳು. ಆ ನಗುವಿನಲ್ಲೇ ಅವಳು ತನ್ನ ನೋವನ್ನೆಲ್ಲ ಮರೆತಳು.
ನಂತರ ಲೋಕವೇ ಬದಲಾಯಿತು.
ಅವನ ಜೊತೆ ಬಸ್ ಹತ್ತಿದರೆ ಊರೇ ಹೊಸದು. ಅವನ ಜೊತೆ ಗುಡಿಯ ಮೆಟ್ಟಿಲು ಹತ್ತಿದರೆ ದೇವರೇ ಹೊಸದು. ಕಲ್ಲಿನ ದೇವರ ಮುಂದೆ ಕೈ ಮುಗಿಯುವಾಗ ಅವಳು ಅವನನ್ನೇ ನೆನೆಯುತ್ತಿದ್ದಳು. ಭಕ್ತಿ ಅಂದರೆ ಗುಡಿಯಲ್ಲಿಲ್ಲ, ಪಕ್ಕದಲ್ಲಿ ನಿಂತಿರುವವರಲ್ಲಿದೆ ಎಂದು ಅವಳಿಗೆ ಅರ್ಥವಾಯಿತು.
ಅವಳಿಗೆ ಅದು ಸ್ನೇಹದಂತೆ ಕಾಣಲಿಲ್ಲ. ಅದು ಅನುಬಂಧದಂತೆ ಕಂಡಿತು. ಹಿಂದಿನ ಜನ್ಮದಲ್ಲಿ ಅರ್ಧಕ್ಕೆ ನಿಂತು ಹೋದ ಕಥೆ, ಈ ಜನ್ಮದಲ್ಲಿ ಮತ್ತೆ ಆರಂಭವಾದಂತೆ.
ಅವನೇ ಸ್ಫೂರ್ತಿ. ಅವನೇ ಉಸಿರು.
ಒಂದು ದಿನ ಅವನ ಫೋನ್ ಸ್ವಿಚ್ ಆಫ್ ಆಗಿತ್ತು. ಕೇವಲ ಕಲವೇ ಗಂಟೆಗಳು. ಅವಳಿಗೆ ಉಸಿರು ಗಟ್ಟಿದಂತೆ ಆಯಿತು. ಜೀವನವೇ ಮುಗಿದು ಹೋಯಿತೇನೋ ಅನ್ನಿಸಿತು. ಮತ್ತೆ ಫೋನ್ ರಿಂಗಾಯಿತು.
"ಎಲ್ಲಿದ್ದೆ?"
ಅವನು ನಕ್ಕ - "ಇಲ್ಲೇ ಇದ್ದೆ, ಚಾರ್ಜ್ ಮುಗಿದಿತ್ತು."
ಆ ಹೆಣ್ಣು ಮಗಳು ಅಳುತ್ತಲೇ ನಕ್ಕಳು. ಆಗ ಅರ್ಥವಾಯಿತು - ಪ್ರೀತಿ ಎಂದರೆ ಜೊತೆಯಾಗಿ ಸುತ್ತಾಡುವುದಲ್ಲ, ಒಬ್ಬರಿಲ್ಲದೆ ಇನ್ನೊಬ್ಬರಿಗೆ ಉಸಿರಾಡಲು ಕಷ್ಟವಾಗುವುದು.
