
Article · March 5, 2026
ಹೋಳಿಯ ರಂಗು (ಬಣ್ಣ)
ಕವಯಿತ್ರಿ : ಜಯಶ್ರೀ ಕೆ ಆರ್ ಭಟ್ ಪಳ್ಳತಡ್ಕ
☘️☘️☘️☘️
ಅಲ್ಲೊಂದು ವಿಧ ರಂಗು, ಇಲ್ಲೊಂದು ವಿಧ ರಂಗು,
ಎಲ್ಲಿ ನೋಡಿದರಲ್ಲಿ ರಂಗು ರಂಗು I
ರಂಗನಾಡುವ ರಂಗಭೂಮಿ ಈ ಜಗವೆಲ್ಲ
ಒಬ್ಬೊಬ್ಬರಾ ಮುಖಕು ಬಳಿದು ರಂಗು II
ಬಡತನದ ರಂಗೊಂದು ಸಿರಿತನದ ರಂಗೊಂದು
ಪ್ರೀತಿ ತುಂಬಿದ ಒಲವಿಗೊಂದು ರಂಗು I
ಬಾನ ನೀಲಿಯ ರಂಗು ಬೆಳಕು ಹೊಳೆಯುವ ರಂಗು,
ಕಾಮನಾ ಬಿಲ್ಲಿನಲಿ ಏಳು ರಂಗು II
ನೀಲ ಸಾಗರ ರಂಗು, ಕನಸ ಗೋಪುರ ರಂಗು,
ಪ್ರಕೃತಿಯೊಳಗಿನ ಬದುಕು ರಂಗುರಂಗು I
ಇಲ್ಲ ಯಾರದು ಹಂಗು ದೇವರಾಟದ ಗುಂಗು
ಮುಖವಾಡ ಕಳಚಿದರೆ 'ಬಯಲು' ರಂಗು II
ಎಲ್ಲೆಡೆಗು ಹಿತಗಾಳಿ ಗಾಳಿ ತುಂಬಿದೆ ಧೂಳಿ
ಕಾಮನನು ಸುಟ್ಟಾಗ ಅದುವೆ ಹೋಳಿ I
ಬಣ್ಣ ಬಣ್ಣಗಳೆರಚಿ ಸಂಭ್ರಮವನಾಚರಿಸಿ,
ಸಂತೋಷ ಪಟ್ಟಾಗ 'ಮನಕೆ ಲಾಲಿ ' II
💐💐💐💐
Creative Writings
