Karada Vishwa

Article · February 24, 2026

ಒರಾಯನ್ ನಿಹಾರಿಕೆ ಎಂಬ ಅಚ್ಚರಿ ಲೋಕ

- ಪದ್ಮಶ್ರೀ ಮಾದೆರಿ , ಬೆಂಗಳೂರು

ರಾತ್ರಿಯ ಆಕಾಶದಲ್ಲಿ “ಬೇಟೆಗಾರ” ಕಾಣಿಸಿದರೆ ಚಳಿಗಾಲ ಬಂದಿದೆ ಎನ್ನಬಹುದು. ಈ ಬೇಟೆಗಾರನೇ Orion ತಾರಾಮಂಡಲ – ಸಂಸ್ಕೃತದಲ್ಲಿ ಮಹಾವ್ಯಾಧ. ಖಡ್ಗ ಹಿಡಿದ ಬೇಟೆಗಾರನಂತೆ ಕಾಣುವ ನಕ್ಷತ್ರಗಳ ವಿನ್ಯಾಸದಿಂದ ಇದಕ್ಕೆ “ದ ಹಂಟರ್” ಎಂದು ಹೆಸರು ಬಂದಿದೆ.
ಈ ತಾರಾಮಂಡಲದಲ್ಲೇ ಅಡಗಿರುವ ಒಂದು ಅಚ್ಚರಿ ಎಂದರೆ Orion ನಿಹಾರಿಕೆ ಅಥವಾ Orion Nebula.

ನಿಹಾರಿಕೆ ಎಂದರೆ ಏನು?
ನಿಹಾರಿಕೆ ಎಂದರೆ ಅನಿಲ ಮತ್ತು ಧೂಳಿನಿಂದ ಕೂಡಿದ ಮಹತ್ತರ ಮೋಡ. ಮುಖ್ಯವಾಗಿ ಹೈಡ್ರೋಜನ್ ಅನಿಲದಿಂದ ನಿರ್ಮಿತವಾಗಿರುವ ಇವು ನಕ್ಷತ್ರಗಳ ಜನ್ಮಸ್ಥಳಗಳು. ಅನಿಲದ ಮೋಡಗಳು ಆಕರ್ಷಣಾಶಕ್ತಿಯಿಂದ ಕುಗ್ಗುತ್ತಾ ಬಿಸಿ ಹೆಚ್ಚಾಗಿ ಕೊನೆಗೆ ಹೊಸ ನಕ್ಷತ್ರಗಳು ಹುಟ್ಟುತ್ತವೆ.

ಒರಾಯನ್ ನಿಹಾರಿಕೆಯನ್ನು ಹೇಗೆ ಗುರುತಿಸುವುದು?
ಒರಾಯನ್ ತಾರಾಮಂಡಲದ ಮಧ್ಯದಲ್ಲಿ ಸರಿಯಾಗಿ ಸಾಲಾಗಿ ಕಾಣುವ ಮೂರು ನಕ್ಷತ್ರಗಳು “ಒರಾಯನ್ ಬೆಲ್ಟ್”. ಅದರ ಕೆಳಭಾಗದಲ್ಲಿ ಮಸುಕಾದ ಮೋಡದಂತೆ ಕಾಣುವುದೇ ಒರಾಯನ್ ನಿಹಾರಿಕೆ. ಬರಿ ಕಣ್ಣಿಗೂ ಕಾಣುತ್ತದೆ; ದೂರದರ್ಶಕ ಅಥವಾ ಕ್ಯಾಮೆರಾದಲ್ಲಿ ಇನ್ನೂ ಅದ್ಭುತವಾಗಿ ಕಾಣಿಸುತ್ತದೆ.
ಇದರ ಮಧ್ಯದಲ್ಲಿ “ಟ್ರಪೇಜಿಯಂ” ಎನ್ನುವ ನಾಲ್ಕು ಬೃಹತ್ ನಕ್ಷತ್ರಗಳಿವೆ. ಇವು ಹೊರಸೂಸುವ ಅಲ್ಟ್ರಾವೈಲೆಟ್ ಬೆಳಕಿನಿಂದ ನಿಹಾರಿಕೆ ಪ್ರಕಾಶಮಾನವಾಗಿ ಹೊಳೆಯುತ್ತದೆ.
ಈ ನಿಹಾರಿಕೆಯ ವ್ಯಾಸ ಸುಮಾರು 30 ಜ್ಯೋತಿ ವರ್ಷಗಳು. ಇದು ಭೂಮಿಯಿಂದ ಸುಮಾರು 1300–1500 ಜ್ಯೋತಿರ್ವರ್ಷಗಳಷ್ಟು ದೂರದಲ್ಲಿದೆ. ಅಂದರೆ ನಾವು ಇಂದು ನೋಡುವ ಬೆಳಕು ಸಾವಿರಾರು ವರ್ಷಗಳ ಹಿಂದೆ ಹೊರಟದ್ದು!
ಒಟ್ಟಿನಲ್ಲಿ, ಒರಾಯನ್ ನಿಹಾರಿಕೆ ಕೇವಲ ಸುಂದರ ದೃಶ್ಯವಲ್ಲ; ನಕ್ಷತ್ರಗಳ ಜನನ ರಹಸ್ಯವನ್ನು ತಿಳಿಯಲು ವಿಜ್ಞಾನಿಗಳಿಗೆ ಅಮೂಲ್ಯವಾದ ಪ್ರಕೃತಿ ಪ್ರಯೋಗಾಲಯವಾಗಿದೆ.
 
Creative Writings
ಒರಾಯನ್ ನಿಹಾರಿಕೆ ಎಂಬ ಅಚ್ಚರಿ ಲೋಕ