
Article · October 29, 2026
ಹಾರಲೇತಕೆ ಮನುಜ?
By ಜಯಶ್ರೀ ಕೆ.ಆರ್ ಭಟ್. ಪಳ್ಳತಡ್ಕ .
ಜಯಶ್ರೀ ಐಲುಕುಂಜೆ
ನಾನು ನನ್ನದು ಎಂದು ಹಾರಲೇತಕೆ ಮನುಜ?
ನಿನ್ನದೆನಲೇನಿಹುದು ಭುವಿಯ ಒಳಗೆ ?
ಬಿಟ್ಟು ಬಿಟ್ಟೂ ಹಿಡಿದು ಎಳೆವಂಥ ಈ ಶ್ವಾಸ
ನಿನ್ನದಲ್ಲವು, ಕಾಣೊ ದೇಹದೊಳಗೆ /
ಸತ್ತರಳುವವರಿಲ್ಲ, ಉತ್ತರವು ಇದಕಿಲ್ಲ,
ಹೊತ್ತು ಒಯ್ಯುವರೆಲ್ಲ ಬೆಂಕಿ ಇಡಲು /
ಸುಟ್ಟು ಹೋಗಲು ಎಲ್ಲ ಒಂದಷ್ಟು ಹಿಡಿ ಬೂದಿ,
ಮತ್ತೆ ಉಳಿದಿಹುದೇನು ನನ್ನದೆನಲು?
ಬಂದಾಗ ತರಲಿಲ್ಲ ಹೋಗಲೊಯ್ಯಲೆ ಇಲ್ಲ
ಪಾಪ ಪುಣ್ಯದ ಹೊರೆಯು ಬೆನ್ನ ಮೇಲೆ /
ನೀ ದುಡಿದ ಹಣ, ನಗದು, ಆಸ್ತಿ ಉಳಿಯಿತು ಇಲ್ಲೇ
ಚಿನ್ನದೊಡವೆಗಳೆಲ್ಲ ಪರರ ಪಾಲೇ /
ಸುರಿಸುರಿದು ಹಣದ ಹೊಳೆ ಕಟ್ಟಿರುವ ಮನೆಯಲ್ಲಿ
ನಿನ್ನದೆನ್ನುವದೇನು ಉಳಿಯಲಿಲ್ಲ /
ಉಸಿರು ನಿನ್ನದು ಅಲ್ಲ ದೇಹ ನಿನ್ನದು ಅಲ್ಲ,
ತಿಳಿಯದಂತೆಯೆ ಹೊರಟು ಹೋಯಿತಲ್ಲ!
ಮೂರು ಘಳಿಗೆಯ ಬಾಳು ನಡುವೆ ಹಲವಿದೆ ಗೋಳು,
ಒಳಿತು ಕೆಲಸವ ಮಾಡಿ ಹೋಗು ,ತಾಳು/
ಕಣ್ಣು ಮುಚ್ಚಲು ಕೊನೆಗೆ ಪುಣ್ಯ ಬರುವುದು ಜೊತೆಗೆ
ಇದನರಿತು ಬಾಳಿದರೆ ಒಳಿತು ಕೊನೆಗೆ /
ಉಸಿರು ಹೋಗಲು ದೇಹ ಬಿದ್ದು ಹೋಯಿತು ಧರೆಗೆ
ನಿನಗರಿವು ಇಲ್ಲದೇ, ತಿಳಿಯಿತೇನು?
ಇದ್ದಾಗ ತಿಳಿಯದೂ ಹೋದಾಗ ತಿಳಿಯದು,
ನಡುವೆ ನಿನ್ನದು ಎನಲು ಉಳಿದುದೇನು?
