Karada Vishwa

Article · March 18, 2026

ಕರುನಾಡ ಮಾಣಿಕ್ಯ

- ಸೌಮ್ಯಾ ಭಟ್ ಅಂಗ್ರಾಜೆ

( ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕರ್ನಾಟಕ, ಬೆಂಗಳೂರು ಇವರು ನಡೆಸಿದ ನಾಕುತಂತಿ ಷಷ್ಟಿಪೂರ್ತಿ ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಂಗವಾಗಿ ನಡೆಸಿದ ಸ್ಪರ್ಧೆಯಲ್ಲಿ ಮೆಚ್ಚುಗೆ ಪಡೆದ ಕವನ)

ಶಿವಶಕ್ತಿಯನ್ನು ಪ್ರಕೃತಿಯೊಳು ಕಂಡ
ಮೇರುಗಿರಿ ಸದೃಶ ಬೇಂದ್ರೆ
ಜೀವನವು ಬೆರಗಾಗುವಂಥ ಕೃತಿಯು
ತೆರೆದಿಟ್ಟರೆಮ್ಮ ಮುಂದೆ//

ಪದಪದವ ಕುಣಿಸಿ ದಣಿವಂತೆ ಮಣಿಸಿ
ಕಟ್ಟಿದರು ಕಾವ್ಯ ಮಾಲೆ
ಅಧ್ಯಾತ್ಮ ಒಲವು ಸಮರಸದಿ ಬೆರೆಸಿ
ಮುಟ್ಟಿದರು ಹೃದಯ ಶಾಲೆ//

ಭಾವನೆಗಳ ಎರಕ ಹೊಯ್ಯುವ ನಿಪುಣ
ವರಕವಿಗೆ ಅವರೇ ಸಾಟಿ
ಅಮೋಘ ಕವನ ಕುಸುಮಕಿಹ ಘಮವು
ಅರ್ಥಲಯ ಅನನ್ಯ ಧಾಟಿ//

ಬದುಕಿನೊಳ ಸತ್ಯ ದರ್ಶಿಸಿದರಲ್ಲಿ
ನಾಕುತಂತಿಯನು ಮೀಟಿ
ಘನತೆಯದು ತೂಕ ತಲೆಬಾಗುವಂತೆ 
ದುಃಖಕಡಲನ್ನು ಬಂದರು ದಾಟಿ//

ಗರಿ ಕಟ್ಟಿ ತೂಗಿದರು ಬಾಳಿನುಯ್ಯಾಲೆ
ಕರೆದು ಚೇತನ ಜೀವಲಹರಿ
ಯುಗಾದಿ ಶ್ರಾವಣಕೆ ನಗುತ ನಿಲುವಂತೆ
ತರುಲತೆಗಳು ಮರಳಿ ಚಿಗುರಿ//

ನಾಡುನುಡಿ  ಪ್ರೀತಿ ಸೃಷ್ಟಿ ಶಿವಶರಣರು
ಹೃದ್ಯ ರಚನೆಗವರ ಸ್ಫೂರ್ತಿ
ಅಕ್ಷರದ ಮಾಂತ್ರಿಕ ಕರುನಾಡ ಮಾಣಿಕ್ಯ 
ಕವಿವರ್ಯ ಕನ್ನಡದ ಕೀರ್ತಿ//

ಜ್ಞಾನಪೀಠ ಪದ್ಮಶ್ರೀ ಮುಡಿಗೇರಿಸಿದ
ಭುವನೇಶ್ವರಿಯ ಹೆಮ್ಮೆ ಕುವರ
ಗೀತೆ ಸಾಹಿತ್ಯದಿ ಕಲಿನಲಿಯೆ ಕದತೆರೆದ
ಧಾರವಾಡದ ಅಜ್ಜ ಅಮರ//


- ಸೌಮ್ಯಾ ಭಟ್ ಅಂಗ್ರಾಜೆ
W/O ಪ್ರಕಾಶ್ ಅಂಗ್ರಾಜೆ
ಬೆಂಗಳೂರು 



Creative Writings
ಕರುನಾಡ ಮಾಣಿಕ್ಯ