
Article · October 20, 2026
ಶಾರದಾಂಬೆ
By ಗಾಯತ್ರಿ ಕೆ ನಾಗರಾಜ ಕೃಷ್ಣಗಾನಂ,
ಗಾಯತ್ರಿ ಕೆ ಅಡ್ಕತೊಟ್ಟಿ
ವೇದವಾಣಿ ಶಾರದಾಂಬೆ
ನಾದರೂಪಿಣಿ ಪೂಜಿತೆ
ಬುದ್ಧಿ ಜ್ಞಾನವ ನೀಡುವಂಥ
ವಿದ್ಯಾರೂಪಿಣಿ ಸಂಸ್ತುತೆ
ಕರದಿ ವೀಣಾ ಪುಸ್ತಕ ಹಿಡಿದು
ಹಂಸವಾಹನವೇರಿಹೆ
ಶ್ವೇತವಸನದಿ ಶೋಭಿಸುತಿಹೆ
ಪದಕ ಕಂಕಣ ರಂಜಿತೆ
ಕಂಠದಿ ಮಿಡಿವ ಸ್ವರವೇ ಮಂತ್ರ
ಮನಕೆ ಮುದವನು ನೀಡಿಹೆ
ಇಂಪಿನ ಕಂಧರದೊಳಗಿನಿಂದ
ಅಮೃತಧಾರೆಯ ಸುರಿಸಿಹೆ
ಶೃಂಗಗಿರಿಯಲಿ ನೆಲೆಸಿ ನಿಂತ
ಶಂಕರಾರ್ಚಿತ ಮೂರ್ತಿಯೆ
ತುಂಗಾ ತೀರದಿ ನಿಂತಿಹ
ಶಾಂತಮೂರ್ತಿ ಕೀರ್ತಿಯೆ
ನದಿಯ ನೀರಲಿ ಮಿಂದು ಬಂದೆ
ನಿನ್ನ ಚರಣವ ಪೂಜಿಸೆ
ಕರುಣಿಸು ತಾಯಿ ಶಾರದಾಂಬೆ
ಬುದ್ಧಿ ಜ್ಞಾನವ ನೀಡಿಸೆ
ನಿನ್ನ ಸೇವೆಯೆ ಭಾಗ್ಯವೆಂದು
ನಿತ್ಯ ನಾಮವ ಭಜಿಸುವೆ
ನಿನ್ನ ದಾಸಗೆ ವರವ ನೀಡು
ದೇವಿ ಶಾರದಾಂಬೆಯೆ
Creative Writings
