Karada Vishwa

Article · August 13, 2026

ಇಂದಿನ ಚಿಂತನಾ ವಿಷಯ

__ಬಿ ಕೆ ಶ್ರೀರಾಮ

ಹುಟ್ಟು ಸಾವು ಜಗದ ನಿಯಮ. ಕಾಲ ಚಕ್ರದಲ್ಲಿ ಅದು ಅನಿವಾರ್ಯ. ಕೆಲವರು ಉಲ್ಕೆ ಹಾಗೆ ಉರಿದು ಕೋಲ್ಮಿಂಚಾಗಿ ನೆನಪಾಗುತ್ತಾರೆ. ಕೆಲವರು ದೀರ್ಘವಾಗಿ ಹರಿದು ಕಡಲಿಗೆ ಸೇರುವಲ್ಲಿ ವಿಶಾಲವಾಗುತ್ತಾರೆ. ಆದರೆ ಒಬ್ಬೊಬ್ಬರೂ ವಿವಿಧ ರೀತಿಯ ಹಸ್ತಮುದ್ರೆಗಳನ್ನು ಜನರ ಮನಸ್ಸಿನಲ್ಲಿ ಮೂಡಿಸಿ ಅಮರರಾಗುತ್ತಾರೆ. ಅಂಥವರ ನೆನಪು ಜೀವನದಲ್ಲಿ ಒಂದು ರೀತಿಯ ಸಾಂತ್ವನದಂತೆ , ಪ್ರೇರಣೆಯಂತೆ ಕೆಲಸಮಾಡುತ್ತದೆ.

ಹಾಗೆ 99 ವರ್ಷಗಳ ಸಾರ್ಥಕ ಜೀವನ ಬದುಕಿ, ವಿಶಾಲವಾದ ನದಿಯಂತೆ ಹರಿದು ಮೊನ್ನೆ ದಿನ ನಮ್ಮೆಲ್ಲರನ್ನು ಬಿಟ್ಟು ಬಾರದೂರಿಗೆ ಪಯಣ ಬೆಳೆಸಿದ ಪುಣ್ಯಾತ್ಮರು ನಾವೆಲ್ಲ ಗೌರವಿಸಿದ ಕಜಂಪಾಡಿ ಸುಬ್ರಹ್ಮಣ್ಯ ಭಟ್ಟರು. ಆದರ್ಶಗಳನ್ನು ಮೈಗೂಡಿಸಿ ದೊಡ್ಡ ಆಲದ ಮರದಂತೆ ಬೆಳೆದು, ನೆರಳಾಗಿ ನಿಂತು ಒಂದು ದೊಡ್ಡ ಕುಟುಂಬದ ಮುಖ್ಯಸ್ಥನಾಗಿ ಹಲವು ದಶಕಗಳ ಕಾಲ ಅದನ್ನು ಯಶಸ್ವಿಯಾಗಿ ಮುನ್ನಡೆಸಿದ ನಿಜಗುಣ ಕರ್ಮಯೋಗಿ ಅವರು. ಸದಾ ಹಸನ್ಮುಖಿ,ಉಳಿದವರ ಮುಖದಲ್ಲೂ ಮುಗುಳ್ನಗು ತರಿಸುವಂತಹ ಸಿಹಿ ಸಿಹಿ ಮಾತುಗಳು,ಅವರು ಯಾವುದೇ ಸಮಾರಂಭಕ್ಕೆ ಬಂದರೆಂದರೆ ಅವರ ಪ್ರಭಾವಲಯದಲ್ಲಿಯೇ ಜನರು ಒಂದುಗೂಡಿ ಒಂದು ಆಪ್ತವಲಯವನ್ನೇ ಸೃಷ್ಟಿಸುತ್ತಿದ್ದರು.ಆರು ಶತ್ರುಗಳು ಅರ್ಥಾತ್ ಷಡ್ವೈರಿಗಳು ಅವರಿಂದ ಗಾವುದ ದೂರ ಓಡುತ್ತಿದ್ದುವು.ಬೆಳಕಿದ್ದಲ್ಲಿ ಕತ್ತಲೆ ಹೇಗೆ ಇಣುಕಿ ನೋಡೀತು?

ಅವರು ಶಾಲೆಗೇ ಹೋಗಿರಲಿಲ್ಲ ಎಂಬ ಮಾಹಿತಿ ಅವರೇ ಹೇಳಿ ತಿಳಿದದ್ದು. ಆದರೆ ಜೀವನ ಎಂಬ ಪಾಠಶಾಲೆಯಲ್ಲಿ ಅವರು ಡಾಕ್ಟರೇಟ್ ಪಡೆದಿದ್ದರು. ಎಲ್ಲರ ಬೆಳಗ್ಗೆ ಅಂದರೆ ಆರು ಘಂಟೆಗೆ ಪ್ರಾರಂಭವಾದರೆ ಅವರ ದಿನ ಆರೋಣೋದಯಕ್ಕೂ ಮೊದಲು ಪ್ರಾತಃಕಾಲ ನಾಲ್ಕಲ್ಕೇ ಆರಂಭವಾಗುತ್ತಿತ್ತು. ಕೃಷಿ ಅವರ ಉದ್ದಿಮೆಯಾಗಿತ್ತು. ಅವರಿಗೆ ಆರ್ಥಿಕ ಶಿಸ್ತು ಪಾರಂಪರ್ಯವಾಗಿ ಬಂದಂತಿತ್ತು. ಕೆಲಸದಾಳುಗಳಲ್ಲಿ ಹೇಗೆ ಕೆಲಸ ಮಾಡಿಸಬಹುದು ಮತ್ತು ಹೇಗೆ ಮಾಡಿಸಬೇಕು ಎಂಬ ಎರಡೂ ಮೇಖಲೆಗಳಲ್ಲಿ ಅವರು ನಿಷ್ಣಾತರಿದ್ದರು. ಮುಂದಾಗಿ ಚಿಂತಿಸುವ ಅವರ ಮೇಧಾ ಶಕ್ತಿ ಹಾಗೂ ಅದನ್ನು ಕಾರ್ಯಗತಗೊಳಿಸುವ ಧಾರಣಾ ಶಕ್ತಿ ಅದ್ಭುತವಾಗಿತ್ತು. ನಾವೆಲ್ಲ ದಿನಗಳ,ವಾರಗಳ ಯೋಜನೆ ಹಾಕಿದರೆ ಅವರು ವರ್ಷ, ದಶ,ರಜತ ವರ್ಷಗಳಿಗೆ ಯೋಜನೆ ಹಾಕಿ ಅವುಗಳನ್ನು ನಿರಾಯಾಸ ಸಾಧಿಸುತ್ತಿದ್ದರು.

ನಾನು ತಿಳಿದ ಮಾಹಿತಿ ಸರಿಯಿದ್ದರೆ,ಅವರ ಮೊದಲ ಮಗು ಶ್ರೀಪತಿಯವರನ್ನು ಡಾಕ್ಟರ್ ಮಾಡಬೇಕು ಎಂಬ ಉದ್ದೇಶದಲ್ಲಿ ಮಣಿಪಾಲ ಸಂಸ್ಥೆಗಳಲ್ಲಿ ರೂ 25000/= ವನ್ನು ಐವತ್ತರ ದಶಕಗಳಲ್ಲಿ ನಿಕ್ಷೇಪಿಸಿದ್ದರು. ಆ ಕಾಯ್ದಿರಿಸಿದ ಸೀಟು ಕೊಡುವಲ್ಲಿ ಆ ಸಂಸ್ಥೆ ತಕರಾರು ತೆಗೆದಾಗ ವಕೀಲ್ ನೋಟೀಸಿನ ಬಿಸಿ ತಾಗಿಸಿ ಆ ಸೀಟ್ ಪಡೆದಿದ್ದರು.

ಅವರಲ್ಲಿ ನಡೆದ ಕೆಲವು ಸಮಾರಂಭಗಳಲ್ಲಿ ಭಾಗವಹಿಸಿದ್ದೇನೆ. ನಿತ್ಯದಲ್ಲೂ ಭೇಟಿ ಕೊಟ್ಟು ಕಾಫಿ,ತಿಂಡಿ,ಊಟ ಮಾಡಿದ್ದೇನೆ. ಆದರೆ ಅವರ ಹಸನ್ಮುಖ ಮುದ್ರೆ, ಸಮಾರಂಭಗಳಲ್ಲಿ ಶಿಸ್ತು, ಅಚ್ಚುಕಟ್ಟುತನ,ಎಲ್ಲವನ್ನೂ ಮೊದಲೇ ಚಿಂತಿಸಿ,ಗ್ರಹಿಸಿ,ಪ್ರವೃತ್ತಿಯಲ್ಲಿ ತರುವ ಅವರ ಆಡಳಿತಾತ್ಮಕ ನಿಲುವು ಖಂಡಿತಾ ಎಲ್ಲರೂ ಅನುಸರಿಸಬೇಕಾದ ಪ್ರಾಮುಖ್ಯತೆ ಪಡೆದಿದೆ. ಕೊನೆಗಳಿಗೆ ಒದ್ದಾಟ ಎಂಬ ವಿಷಯವೇ ಅವರಲ್ಲಿ ನಾವು ಕಂಡದ್ದಿಲ್ಲ. ಆದರೆ ಬೆಣ್ಣೆಯಿಂದ ಕೂದಲೆಳೆದಷ್ಟು ಅರಾಮವಾಗಿ ಎಲ್ಲವನ್ನೂ ನಿಭಾಯಿಸುತ್ತಿದ್ದರು ಎಂಬುದನ್ನು ನಾನು ಚೆನ್ನಾಗಿ ಬಲ್ಲೆ.

ನಾನು ಪೆರ್ಲ ಸಿಂಡಿಕೇಟ್ ಬ್ಯಾಂಕಲ್ಲಿ ಗುಮಾಸ್ತನಾಗಿ 1973-1977 ಕಾಲಘಟ್ಟದಲ್ಲಿ ದುಡಿಯುತ್ತಿದ್ದಾಗ ನಮ್ಮ ಶಾಖೆಯ ಪ್ರತಿಷ್ಠಿತ ಗ್ರಾಹಕರಾಗಿದ್ದರು. ಆ ಕಾಲಘಟ್ಟದಲ್ಲಿ ದೊಡ್ಡ ದೊಡ್ಡ ಹವ್ಯಕ ಶ್ರೀಮಂತರ ಉಳಿತಾಯ ಖಾತೆಗಳಲ್ಲಿ ಹೆಚ್ಚೆಂದರೆ ಒಂದೋ ಎರಡೋ ಸಾವಿರ ಇರುತಿತ್ತು. ಆದರೆ ಶ್ರೀಯುತರ ಖಾತೆಯಲ್ಲಿ ಅದು ಕನಿಷ್ಠ ರೂ 25000/=ಯಾ ಅದರ ಗುಣಕದಲ್ಲೇ ಇರುತ್ತಿತ್ತು.ಅಷ್ಟೂ ಲೆಕ್ಕಾಚಾರದಲ್ಲಿ ಪಕ್ಕಾ ಅವರಾಗಿದ್ದರು. ಆಗ ಇದೆಲ್ಲವನ್ನೂ ಒಂದು ಅದ್ಬುತದಂತೆ ಅನುಭವಿಸಿದ್ದೇನೆ. ಅವರು ಬ್ಯಾಂಕಿಗೆ ಬಂದಾಗ ನಮ್ಮನ್ನು ಗೌರವಿಸಿ ಮಾತನಾಡುವ ಒಳ್ಳೆ ಗುಣವನ್ನು ಒಂದು ವಿಸ್ಮಯ ಎಂಬಂತೆ ಕಂಡಿದ್ದೇನೆ. ಒಂದು ದಿನವೂ ಅವರು ಸೀದಾ ಮ್ಯಾನೇಜರ್ ರಲ್ಲಿಗೆ ಹೋದದ್ದೇ ನಾನು ಕಂಡಿಲ್ಲ. ಅವರ ಹಣಕಟ್ಟುವ,ತೆಗೆಯುವ ಎಲ್ಲ ಕೆಲಸ ಮುಗಿಸಿ ಅನಂತರವೇ ಮ್ಯಾನೇಜರ್ ರನ್ನು ಕಂಡು ಕುಶಲೋಪರಿ ಮಾತನಾಡಿ ನಗುನಗುತ್ತಾ ಹೊರಟುಹೋಗುತ್ತಿದ್ದರು.

ಇನ್ನೂ ವೈಯಕ್ತಿಕ ಎಂಬ ಈ ತನಕ ಅವರ ಪುತ್ರ ಡಾ.ಶ್ರೀಪತಿ ಯವರಿಗೂ ಹೇಳದ ಒಂದು ರಹಸ್ಯವನ್ನು ಇಂದು ಬಿಚ್ಚಿಡುತ್ತೇನೆ. ಎಮರ್ಜೆನ್ಸಿ ಕಾಲ(1975-1976 ). ಮನುಷ್ಯ ಮನುಷ್ಯನನ್ನೇ ನುಂಗಿ ಹಾಕುವ ಕಾಲ. TRK ಮತ್ತು ಅವರ ಸಹೋದರ ಇಬ್ಬರನ್ನೂ ಕಣ್ಣೂರು ಸೆಂಟ್ರಲ್ ಜೈಲಲ್ಲಿ ಬಂಧಿಸಿಟ್ಟಿದ್ದರು. ಮನೆ ಯಜಮಾನರಿಬ್ಬರೂ ಜೈಲಲ್ಲಾದರೆ ಕುಟುಂಬಗಳು ಹೇಗೆ ಮುಂದುವರಿದಾವು? ಆಗ ಸದ್ದಿಲ್ಲದೆ,ಸಹಕಾರ ನೀಡಿದ್ದು ಶ್ರೀಯುತರು ಅಂತ ಹೇಳಿದ್ದು ಕೇಳಿದ್ದೇನೆ.

1976 ಜುಲೈ ತಿಂಗಳಲ್ಲಿ ಒಮ್ಮೆ ಅವರ ಮನೆಗೆ ಹೋಗಿದ್ದೆ. ಅದೇ ಮೊದಲು ಆ ಮನೆ ಕಂಡದ್ದು. ಅದರ ಭವ್ಯತೆ ಕಂಡೇ ಬೆರಗಾಗಿದ್ದೇನೆ. ನನ್ನ ಆ ದಿನದ ಭೇಟಿ ಉದ್ದೇಶ ಮಂಗಳೂರಿನ ಒಬ್ಬ ಅಡಿಕೆ ವ್ಯಾಪಾರಿ ಹತ್ರ ಒಂದೆರಡು ಸಾವಿರ ಮುಂಗಡ ತೆಗೆಯಲು ಅವರಿಂದ ಒಂದು ಶಿಫಾರಸು ಪತ್ರ ಬೇಕಿತ್ತು. ಅವರ ಪತ್ರ ಇದ್ದರೆ ಅದು ಖಂಡಿತ ಆಗುತ್ತದೆ ಎಂಬ ಭರವಸೆ ಇತ್ತು. ಸುಬ್ಬಣ್ಣ ಎಂತಹ ಜನ ಕೊಡುವರೇ, ಯಾ ಬೇರೇನಾದರೂ ಗ್ರಹಿಸಿಯಾರೇ,ಹೀಗೆಲ್ಲ ಚಿಂತಿಸುತ್ತಾ ಅವರಮನೆ ತಲುಪಿದ್ದೆ. ಹೇಗೆ ಮಾತು ಆರಂಭಿಸುವುದು ಅಂತ ಅಳುಕೂ ಇತ್ತು. ಅವರನ್ನು ಕಂಡಾಗ,ಅವರ ಹಾರ್ದಿಕ ಸ್ವಾಗತ ಕೇಳಿದಾಗ, ಆ ಮನೆಯ ಭವ್ಯತೆ ಅನುಭವಿಸಿದಾಗ ನನ್ನ ಲೆಕ್ಕಾಚಾರ ಎಲ್ಲ ತಪ್ಪಿತು. ಒಂದೇ ಉಸಿರಿನಲ್ಲಿ "ಮಂಗಳೂರಿನ ರಂಗನಾಥ ಕುಡ್ವರಿಗೆ ನೀವೊಂದು ಪತ್ರ ಕೊಟ್ಟರೆ ಒಂದೆರಡು ಸಾವಿರ ಮುಂಗಡ ಸಿಕ್ಕಿ ಈಗಿನ ಆರ್ಥಿಕ ಜಂಜಾಟಕ್ಕೆ ಒಂದು ಪರಿಹಾರ ಸಿಗುತ್ತಿತ್ತು" ಅಂದೆ. ಶ್ರೀಯುತರು ನೋಡೋಣ,ಕಾಫಿ ಕುಡಿದು ಸಾವಧಾನ ಮಾತನಾಡೋಣ ಅಂದರು. ಕಾಫಿ ತಿಂಡಿ ಸಮಾರಾಧನೆ ನಂತರ ಅವರು ಬಹಳ ಸಮಾಧಾನ ಚಿತ್ತದಲ್ಲಿ ಹೇಳಿದ್ದು ನಿಜವಾಗಿ ಸುವರ್ಣಾಕ್ಷರದಲ್ಲಿ ಬರೆದಿಡಬೇಕಾದ ಮಾತುಗಳು."ಪತ್ರ ಕೊಡೋಣ. ಆದರೆ ಅವರು ಕೊಡದಿದ್ದರೆ ನನ್ನ ಮಾತಿಗೆ ಬೆಲೆಯಿಲ್ಲ ಎಂದಾಗುತ್ತದೆ. ಕೊಟ್ಟರು ಅಂತ ತಿಳಿಯೋಣ. ನಾಳೆ ನೀವು ಮರುಪಾವತಿಸದಿದ್ದರೆ? ಕೊಡುವುದು ನನ್ನ ಜವಾಬ್ದಾರಿಯಾಗುತ್ತದೆ. ಆದ್ದರಿಂದ ಇದ್ದುದರಲ್ಲೇ ಸ್ವಲ್ಪ ಕೊಸರಾಡಿಕೊಂಡು ಖರ್ಚು ನಿಯಂತ್ರಿಸಿ ಕೊಂಡು ವ್ಯವಹಾರದಲ್ಲಿ ಸಾಲವಿಲ್ಲದೆ ಮುಂದುವರಿಯುವುದು ಜಾಣತನವಲ್ಲವೇ? ಒಂದು ವಾರ ಚಿಂತಿಸಿ ಹೇಳಿ. ಮತ್ತೂ ಬೇಕೇ ಎಂದಾದರೆ ನಾನೇ ಕೊಡುತ್ತೇನೆ. ಅವರ ಚಕ್ರಬಡ್ಡಿಯಾದರೂ ಉಳಿಯುತ್ತದಲ್ಲ?" ಬಹಳ ಚೆನ್ನಾಗಿ ನಗುನಗುತ್ತಾ ಹೇಳಿದ ಅವರ ಮಾತುಗಳಿಂದ ನನ್ನ ಮುಗ್ಗಟ್ಟು ಮಾನಸಿಕವಾಗಿ ಪರಿಹಾರ ಆಯ್ತು. ಅವರನ್ನು ಬೀಳ್ಕೊಂಡು ಮತ್ತೆ ಸಿಗೋಣ ಅಂತ ಹಿಂದಿರುಗಿದ್ದೆ.

ಆದರೆ ಈ ಸಾಲ ತೆಗೆಯಬೇಕು ಅಂತ ಮನಸ್ಸು ನಿರ್ಧರಿಸಿದರೆ ಅದೊಂದು ಗೀಳಿನ ಹಾಗೆ. ಅವರು ಹೇಳಿದ್ದನ್ನು ಕೇಳಿ ಸಮಾಧಾನವಾಗಿದ್ದರೂ ಒಂದು ವಾರದಲ್ಲಿ ಮಂಗಳೂರಿಗೆ ಹೋಗಿ ರಂಗನಾಥ ಕುಡ್ವರನ್ನು ಕಂಡು ಮುಂಗಡ ಕೇಳಿದೆ. ಆಗುವುದಿಲ್ಲಅಂದರು. ಸುಬ್ಬಣ್ಣನೊಡನೆ ಆದ ಮಾತುಕತೆ ನನಗೆ ಅನುಕೂಲವಾಗುವಂತೆ ಹೇಳಿದೆ. "ನೀವು ಇಲ್ಲ ಅಂದರೆ ಅವರೇ ಕೊಡುತ್ತಾರೆ" ಅಂದೆ ಧೈರ್ಯದಿಂದ. ಮುಂದೆ ಅವರಿಂದ ಮಾತಿಲ್ಲ. ಸೀದಾ ಎಷ್ಟು ಬೇಕು ಅಂತ ಕೇಳಿ ದಸ್ಕತು ಪಡೆದು ಹಣ ಎಣಿಸಿ ಕೊಟ್ಟರು. ಮುಂದೆ ಅಡಕೆ ಒಣಗುವಾಗ ಅವರಿಗೆ ಕಳುಹಿಸಿ ವ್ಯವಹಾರ ಸುಧಾರಿಸಿಕೊಂಡು ಮುಂದುವರಿದೆ. ಸಾಧ್ಯವಾದಷ್ಟು ಇದ್ದುದರಲ್ಲೇ ಖರ್ಚುಗಳನ್ನು ನಿಯಂತ್ರಿಸಿ ಆರ್ಥಿಕ ಶಿಸ್ತನ್ನು ಪಾಲಿಸಲು ಸಾಧ್ಯವಾದುದು ಶ್ರೀಯುತರ ಒಳ್ಳೆ ಮನಸ್ಸಿನ,ಒಳ್ಳೆ ಮಾತುಗಳಿಂದ ಎಂಬುದನ್ನು ನೆನಪಿಸುತ್ತಾ ಅವರ ದಿವ್ಯಾತ್ಮಕ್ಕೆ ಸದ್ಗತಿ ಸಿಗಲಿ ಅಂತ ಪ್ರಾರ್ಥಿಸುತ್ತೇನೆ.

ಅವರು ಯಾವರೀತಿಯ ದಾನಿಗಳು ಎಂಬುದನ್ನು ಊರಲ್ಲಿ ನಡೆದ ಎಲ್ಲ ಬ್ರಹ್ಮಕಲಶ ಸಮಿತಿಯ ಸದಸ್ಯರು ಬಲ್ಲರು. ಇಂದು ಶ್ರೀ ಶಂಕರ ಸದನ ಎಂಬ ಸತ್ಯ ನಮ್ಮ ಕಣ್ಣೆದುರು ಇದ್ದರೆ ಅದಕ್ಕೆ ಕಾರಣ ರಸೀತಿ ನಂಬ್ರ 39/26-11-1996.ಪ್ರಕಾರ ರೂ 1,00,000/- ಮೊತ್ತದ ದೇಣಿಗೆ. ಅದಕ್ಕೆ ಹಿಂದಿನ 38 ರಶೀತಿಗಳಲ್ಲಿ ಒಂದು ವರ್ಷ ಅವಧಿಯಲ್ಲಿ ಸಿಕ್ಕಿದ ಸಂಗ್ರಹ ರೂ 138,500/=ಯಾವುದೇ ಧಾರ್ಮಿಕ ಕಾರ್ಯಗಳಿಗೆ ಅವರು ಕೊಡುಗೈ ದಾನಿ. ಆದರೆ ಬಲಗೈಯಿಂದ ಕೊಟ್ಟುದು ಎಡಗೈಗೆ ತಿಳಿಯಬಾರದು ಎಂಬಂತಹ ಜ್ಞಾನಿ. ತಮ್ಮ ಬಾಲ್ಯದಲ್ಲಿ ವಿದ್ಯಾಭ್ಯಾಸದಿಂದ ವಂಚಿತರಾದರೂ ಪುತ್ರರನ್ನು ಡಾಕ್ಟರ್, ಇಂಜಿನಿಯರ್ ಮಾಡುವುದರಲ್ಲಿ ಆತ್ಮತೃಪ್ತಿ ಕಂಡವರು. ಕಲಿಯಲು ಮುಂದಿದ್ದು ಬಡತನ ಇರುವ ಆಸಕ್ತರಿಗೂ ವಿದ್ಯೆಗೆ ಲೋಪ ಬಾರದಿರುವಂತೆ ಆರ್ಥಿಕ ಸಹಕಾರ ಒದಗಿಸಿ ಒಳಗಿಂದೊಳಗೆ ಸಂತಸಪಟ್ಟವರು. ಧನಾತ್ಮಕವಾಗಿ ಚಿಂತಿಸುವ ಪ್ರವೃತ್ತಿಸುವ ಯಾರಿಗೂ ಅವರಿಂದ ಪ್ರೋತ್ಸಾಹ ಸದಾ ಸಿದ್ಧವಿತ್ತು. ಅಂದರೆ ಅವರ ಯಾವುದೇ ಕಾರ್ಯದಲ್ಲಿ ಪ್ರಬುದ್ಧತೆ ಇತ್ತು ಮತ್ತು ಎಲ್ಲರಿಂದ ಆ ಪ್ರಬುದ್ಧತೆಯನ್ನೇ ಅವರು ನಿರೀಕ್ಷಿಸುತ್ತಿದ್ದರು.

ಹೀಗೆ ಆದರ್ಶ ಬದುಕನ್ನು ಬದುಕಿ,ಸದಾ ಕ್ರಿಯಾಶೀಲರಾಗಿದ್ದ ಸುಬ್ಬಣ್ಣ ಮೊನ್ನೆ ತಮ್ಮ 99 ವರ್ಷಗಳ ಸಾರ್ಥಕ ಬದುಕಿಗೆ ವಿದಾಯ ಹೇಳಿದಾಗ ಕರಾಡ ಸಮಾಜದ ಅನರ್ಘ್ಯ ರತ್ನವನ್ನು ಕಳೆದುಕೊಂಡಂತಾಯಿತು. ಅವರ ಆದರ್ಶ ಬದುಕು ನಮಗೆಲ್ಲ ದಾರಿ ತೋರಿಸುತ್ತಿರಲಿ. ಮುಂದೆ ಮುಂದೆ ಸಾಗಲು ಪ್ರೇರಣೆ ಯಾಗಲಿ. ಆ ದಿವ್ಯಾತ್ಮಕ್ಕೆ ಸದ್ಗತಿ ಪ್ರಾಪ್ತಿಯಾಗಲಿ. ಅವರ ಆದರ್ಶಗಳನ್ನು ನಮ್ಮಲ್ಲಿ ಅಳವಡಿಸಿಕೊಳ್ಳಲು ಸರ್ವಶಕ್ತ ಅನುಗ್ರಹಿಸಲಿ ಎಂದು ಪ್ರಾರ್ಥಿಸುತ್ತಾ ಈ ಶ್ರದ್ಧಾಂಜಲಿಗೆ ಪೂರ್ಣ ವಿರಾಮ ಕೊಡುತ್ತೇನೆ.

ಓಂ ಶಾಂತಿ ಶಾಂತಿ ಶಾಂತಿಃ.

.

Obituary